ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ವತಿಯಿಂದ ತಿಕೋಟಾ ತಾಲೂಕಿನ ಅಳಗಿನಾಳ ಗ್ರಾಮದಲ್ಲಿ ಮಹಿಳೆಯರು ಮತ್ತು ಮಕ್ಕಳ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಬೃಹತ್ ಶಿಬಿರ ನಡೆಯಿತು.
ಗ್ರಾಮದ ವಿಠ್ಠಲ ರುಕ್ಮಿಣಿ ಮಂದಿರದ ಆವರಣದಲ್ಲಿ ನಡೆದ ಈ ಶಿಬಿರದಲ್ಲಿ ಸ್ತ್ರೀರೋಗ ಮತ್ತು ಪ್ರಸೂತಿ ಹಾಗೂ ಮಕ್ಕಳ ತಜ್ಞ ವೈದ್ಯರು ರೋಗಿಗಳ ಆರೋಗ್ಯ ತಪಾಸಣೆ ನಡೆಸಿದರು.
ಅಲ್ಲದೇ, ಉಚಿತವಾಗಿ ಔಷಧಿ ವಿತರಣೆ ಮಾಡಿದರು. ಅಷ್ಟೇ ಅಲ್ಲ, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ವಿಜಯಪುರ ಬಿ. ಎಲ್. ಡಿ. ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಶಿಫಾರಸು ಮಾಡಿದರು. ಈ ಸಂದರ್ಭದಲ್ಲಿ 69 ಮಕ್ಕಳು ಸೇರಿದಂತೆ ಒಟ್ಟು 230 ಜನರ ಆರೋಗ್ಯ ತಪಾಸಣೆ ನಡೆಸಲಾಯಿತು.
ಬಿ ಎಲ್ ಡಿ ಇ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ವೈದ್ಯರಾದ ಡಾ. ಬಸವರಾಜ ಪಾಟೀಲ, ಡಾ. ಲಾವಣ್ಯ, ಡಾ. ಶ್ರವಂತಿ, ಚಿಕ್ಕಮಕ್ಕಳ ವೈದ್ಯರಾದ ಡಾ. ವಿಜಯಲಕ್ಷ್ಮಿ ಬೂದಿಹಾಳ, ಡಾ. ಗಾಯತ್ರಿ ರೆಡ್ಡಿ, ಡಾ. ಮಹಿಮಾಶ್ರೀ ಸೋನಿ ಆರೋಗ್ಯ ತಪಾಸಣೆ ನಡೆಸಿದರು. ಆಸ್ಪತ್ರೆಯ ಔಷಧ ವಿಭಾಗದ ಸಿಬ್ಬಂದಿ ಚಿಕಿತ್ಸೆ ಪಡೆದ ರೋಗಿಗಳಿಗೆ ಉಚಿತವಾಗಿ ಔಷಧಿ ವಿತರಿಸಿದರು.
ತಮ್ಮ ಗ್ರಾಮಕ್ಕೆ ಆಗಮಿಸಿದ ವೈದ್ಯರಿಗೆ ಈ ಸಂದರ್ಭದಲ್ಲಿ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದರು. ಅಲ್ಲದೇ, ಗ್ರಾಮೀಣ ಭಾಗಕ್ಕೆ ವೈದ್ಯರ ಸೇವೆ ಒದಗಿಸುತ್ತಿರುವ ಬಿ ಎಲ್ ಡಿ ಇ ಆಸ್ಪತ್ರೆ ಮತ್ತು ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ಅವರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.