ಪ್ಲಾಸ್ಟಿಕ್ ಬಳಕೆ ಇಡೀ ಭೂಮಂಡಲಕ್ಕೆ ಅಪಾಯ ತಂದೊಡ್ಡುವ ಅಣ್ವಸ್ತ್ರವಾಗಿದೆ- ಬ್ರಿಜೇಶ ಶರ್ಮಾ

ವಿಜಯಪುರ: ಪ್ಲಾಸ್ಟಿಕ್ ಬಳಕೆ ಕೇವಲ ಮನುಕುಲಕ್ಕೆ ಮಾತ್ರವಲ್ಲ. ಇಡೀ ಭೂಮಂಡಲದ ಅಸ್ತಿತ್ವಕ್ಕೆ ಅಪಾಯ ತಂದೊಡ್ಡುವ ಅಣ್ವಸ್ತ್ರವಾಗಿದೆ. ಇದನ್ನು ನಿಲ್ಲಿಸದಿದ್ದರೆ, ಎಲ್ಲವು ನಾಶವಾಗಲಿದೆ ಅದಕ್ಕೆ ಪ್ಲಾಸ್ಟಿಕ್ ಬಳಕೆ ಬೇಡ ಎಂದು ಕಳೆದ ಮೂರು ವರ್ಷಗಳಿಂದ ಸೈಕಲ್ ಜಾಗೃತಿ ಜಾಥಾ ನಡೆಸುತ್ತಿರುವ ಮಧ್ಯಪ್ರದೇಶದ ಬ್ರಿಜೇಶ ಶರ್ಮಾ ಹೇಳಿದರು.

ಬಿ. ಎಲ್. ಡಿ. ಇ ಶ್ರೀ ಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಏರ್ಪಡಿಸಿದ ಸಂವಾದದಲ್ಲಿ ಮಾತನಾಡಿದ ಅವರು, ಹಿಂದಿನಿಂದ ಹಿರಿಯರು ವಿವಿಧ ಮಣ್ಣಿನ ನಂತರದಲ್ಲಿ ಲೋಹದ ಪಾತ್ರೆ, ಸರಂಜಾಮುಗಳನ್ನು ಬಳಸುತ್ತಿದ್ದರು. ಇತ್ತೀಚಿನ ದಶಕಗಳಲ್ಲಿ ಪ್ಲಾಸ್ಟಿಕ್ ಬಳಕೆ ಆರಂಭಗೊಂಡ ನಂತರ ರೋಗಗಳ ಸಂಖ್ಯೆ ಹೆಚ್ಚಾಗಿದೆ. ಇದು ಕೇವಲ ಮನುಷ್ಯರನ್ನು ಅಷ್ಟೆ ಬಾದಿಸದೇ, ಇಡೀ ವಿಶ್ವವನ್ನೇ ನುಂಗಿ ಹಾಕಲಿದೆ. ಪ್ಲಾಸ್ಟಿಕ್ ಮುಕ್ತ ಭಾರತ ಕನಸು ಹೊತ್ತು, ನಾನು ಸೈಕಲ್ ಮೇಲೆ ಜಾಗೃತಿ ನಡೆಸಿದ್ದೇನೆ. ನಾವು ನಮ್ಮ ಮನೆಯನ್ನು ಹೇಗೆ ಸ್ವಚ್ಚವಾಗಿಟ್ಟುಕೊಳ್ಳುತ್ತೇವೆಯೂ ಹಾಗೆಯೆ ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು, ನಮ್ಮ ನಗರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಭಾರತದಲ್ಲಿ ಇಂದೋರ್ ನಗರ ಪ್ಲಾಸ್ಟಿಕ್ ಮುಕ್ತ ಸ್ವಚ್ಚತೆಗೆ ಮಾದರಿಯಾಗಿದೆ ಎಂದು ಹೇಳಿದರು.

ಸೈಕಲ್ ಮೇಲೆ ವಿಶ್ವ ಪರ್ಯಟನೆ ಮಾಡುತ್ತಿರುವ ಐರ್ಲೈಂಡ್ ಪ್ರಜೆ ಕೋಫಿ ಸಶಕ್ತ ಅಭಿವೃದ್ಧಿ ನಮ್ಮ ಆದ್ಯತೆ ಆಗಬೇಕು ಎಂದು ಕಳೆದ ಎಂಟು ತಿಂಗಳ ಹಿಂದೆ ನನ್ನ ಯಾತ್ರೆ ಆರಂಭಿಸಿರುವೆ. ಭಾರತ ಮೂಲಕ ಬಾಂಗ್ಲಾ, ಮಯನ್ಮಾರ್, ಸಿಂಗಪುರ, ಮಲೇಷಿಯಾ, ಥೈಲ್ಯಾಂಡ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ವರೆಗೆ 17 ದೇಶಗಳಲ್ಲಿ ನಾನು ಸಂಚರಿಸಿ, ಸರಳ ಬದುಕು, ಸಾಮಾನ್ಯ ಅವಶ್ಯಕತೆಗಳು, ಸಶಕ್ತ ಅಭಿವೃದ್ಧಿ ಕುರಿತು ಜಾಗೃತಿ ಮೂಡಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.

ವಿಜಯಪುರ ಸೈಕ್ಲಿಂಗ್ ಗ್ರುಪ್ ಅಧ್ಯಕ್ಷ ಡಾ. ಮಹಾಂತೇಶ ಬಿರಾದಾರ ಮಾತನಾಡಿ, ಯುವಕರು ಜೀವನವನ್ನು ಸಂಭ್ರಮಿಸಬೇಕು. ಸಂಭ್ರಮ ಎಂದರೆ ಮೋಜು, ಮಸ್ತಿ ಅಲ್ಲ. ಅದು ಜವಾಬ್ದಾರಿಯುತ ಜೀವನ ಸಂಭ್ರಮ. ನಾವು ಬದುಕಬೇಕು. ಇತರರೊಂದಿಗೆ ಬದುಕಬೇಕು. ನಿಸರ್ಗ ನಮಗೆ ನೀಡಿರುವ ಸಂಪನ್ಮೂಲವನ್ನು ದಕ್ಕೆಯಾಗದಂತೆ ಮುಂದಿನ ಪೀಳಿಗೆಗೆ ತಲುಪಿಸಬೇಕು. ಈ ನಿಟ್ಟಿನಲ್ಲಿ ಈ ಸೈಕಲ್ ಜಾಗೃತಿ ಸವಾರರು ನಿಮಗೆ ಮಾದರಿಯಾಗಬೇಕು ಎಂದು ಹೇಳಿದರು.

ಆಡಳಿತಾಧಿಕಾರಿ ಐ. ಎಸ್. ಕಾಳಪ್ಪನವರ, ಸೈಕ್ಲಿಂಗ್ ಗ್ರುಪ್‍ನ ಸಚಿನ ಪಾಟೀಲ, ರಾಕೇಶ ಗುತ್ತೇದಾರ, ಪುಂಡಲಿಕ ಡೊಕಳೆ ಉಪಸ್ಥಿತರಿದ್ದರು.

ಪ್ರಾಚಾರ್ಯ ಜಿ. ಡಿ. ಅಕಮಂಚಿ ಸ್ವಾಗತಿಸಿದರು.  ಜೆ. ಎ. ಬಿರಾದಾರ ನಿರೂಪಿಸಿದರು.  ಟಿ. ಎಂ. ಪವಾರ ವಂದಿಸಿದರು.

Leave a Reply

ಹೊಸ ಪೋಸ್ಟ್‌