ವಿಜಯಪುರ: ಮಹಿಳೆಯರು ಮೌಢ್ಯಗಳ ಬಗ್ಗೆ ಜಾಗೃತರಾಗಿರಬೇಕು ಎಂದು ಬಿ. ಎಲ್. ಡಿ. ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ ಹೇಳಿದ್ದಾರೆ.
ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜು ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಲೈಬ್ರರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳಾ ಸಬಲೀಕರಣ ಕುರಿತ ಒಂದು ದಿನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಆರೋಗ್ಯ ಕುಟುಂಬ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಮಹಿಳೆಯರು ಆರೋಗ್ಯವಾಗಿದ್ದರೆ ಕುಟುಂಬವೂ ಆರೋಗ್ಯವಾಗಿರುತ್ತದೆ. ಅಲ್ಲದೇ, ಇದರಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು.
ಇಂದಿನ ದಿನಗಳಲ್ಲಿ ಮಹಿಳೆಯರು ಸೇವೆ ಸಲ್ಲಿಸದ ಕ್ಷೇತ್ರಗಳಿಲ್ಲ. ಅಡುಗೆ ಮನೆಯಿಂದ ಗಡಿ ಕಾಯುವ ಸೇನಿಕರವರೆಗೆ ಸೇವೆ ಸಲ್ಲಿಸುತ್ತಿದ್ದಾರೆ. ಲಿಂ. ಸ್ವಾಮಿ ಸಿದ್ಧೇಶ್ವರರ ಆಶಯದಂತೆ ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿಯಾಗಲು ಎಂ. ಬಿ. ಪಾಟೀಲರು ನೀರಾವರಿ ಮೂಲಕ ಅವಕಾಶ ಕಲ್ಪಿಸಿದ್ದಾರೆ. ಹಳ್ಳಿಗಳು ಶ್ರೀಮಂತವಾಗುತ್ತಿವೆ. ಇದರಿಂದ ಮಹಿಳೆಯರು ಸ್ವಾವಲಂಬಿಯಾಗುತ್ತಿದ್ದಾರೆ. ಜಲ, ವೃಕ್ಷ ಮತ್ತು ಶಿಕ್ಷಣದ ಮೂಲಕ ಜನತೆ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಔದ್ಯೋಗಿಕ ಕ್ಷೇತ್ರದಲ್ಲಿ ಸಬಲರಾಗಲು ಪೂರಕ ವಾತಾವರಣ ಕಲ್ಪಿಸಿದ್ದಾರೆ ಎಂದು ಅವರು ಹೇಳಿದರು.
ಬಿ. ಎಲ್. ಡಿ. ಇ ಸಂಸ್ಥೆಯ 85 ನಾನಾ ವಿದ್ಯಾ ಸಂಸ್ಥೆಗಳಲ್ಲಿ 50 ಸಾವಿರ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಇವರಲ್ಲಿ ಸುಮಾರು 30 ಸಾವಿರ ವಿದ್ಯಾರ್ಥಿನಿಯರು ಓದುತ್ತಿರುವುದು ಗಮನಾರ್ಹವಾಗಿದೆ. ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಬಿ. ಎಲ್. ಡಿ. ಇ ಸಂಸ್ಥೆ 1983ರಲ್ಲಿಯೇ ಮಹಿಳೆಯರಿಗಾಗಿ ಪ್ರತ್ಯೇಕ ಕಾಲೇಜು ಆರಂಭಿಸುವ ಮೂಲಕ ಮಹಿಳೆಯರ ಸಬಲೀಕರಣಕ್ಕೆ ನಾಂದಿ ಹಾಡಿದೆ. ಅಷ್ಟೇ ಅಲ್ಲ, ವಿದ್ಯಾರ್ಥಿಗಳ ಪಾಲಿಗೆ ಸುರಕ್ಷಿತ ಶೈಕ್ಷಣಿಕ ಸಂಸ್ಥೆಯಾಗಿದೆ. ಹೀಗಾಗಿಯೇ ಬೇರೆ ರಾಜ್ಯಗಳ ವಿದ್ಯಾರ್ಥಿಗಳೂ ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಇದು ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ಅವರ ಜನಪರ ಕಾಳಜಿಗೆ ಸಾಕ್ಷಿಯಿಂದ ಸಾಧ್ಯವಾಗಿದೆ ಎಂದು ಡಾ. ಆರ್. ಬಿ. ಕೊಟ್ನಾಳ ಹೇಳಿದರು.
ಬಿ. ಎಲ್. ಡಿ. ಇ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ ಮಾತನಾಡಿ, ಸಬಲೀಕರಣದ ಬೇರೆ ಬೇರೆ ಆಯಾಮಗಳ ಬಗ್ಗೆ ಈ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುತ್ತಿದೆ. ಡಿಜಿಟಲ್ ಸಬಲೀಕರಣ, ಡಿಜಿಟಲ್ ತಂತ್ರಜ್ಞಾನ ಬಳಸಿ ಕುಟುಂಬ ಮತ್ತು ಸಮಾಜದ ಒಳಿತಿಗೆ ಹೇಗೆ ಶ್ರಮಿಸಬಹುದು ಎಂಬುದರ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಎಂ. ಬಿ. ಪಾಟೀಲ ಅವರು ಕೈಗೊಂಡಿರುವ ನೀರಾವರಿ ಯೋಜನೆಗಳಿಂದಾಗಿ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ವಿಜಯಪುರ ಜಿಲ್ಲೆಯ ತಲಾವಾರು ಆದಾಯ ದೇಶದಲ್ಲಿಯೇ ಅತ್ಯುತ್ತಮವಾಗಿರಲಿದೆ ಎಂದು ಹೇಳಿದರು.
ಸ್ಟೂಡೆಂಟ್ಸ್ ಸಪೋರ್ಟ್ ಗ್ರುಪ್ ಕೋ- ಆರ್ಡಿನೇಟರ್ ಸೂರ್ಯಕಾಂತ ಬಿರಾದಾರ ಮಾತನಾಡಿ, ಎಂ. ಬಿ. ಪಾಟೀಲ ಅವರ ಆಶಯದಂತೆ ಮಹಿಳೆಯರನ್ನು ಸರ್ವ ಕ್ಷೇತ್ರಗಳಲ್ಲಿ ಸಬಲರನ್ನಾಗಿ ಮಾಡಲು ಈ ಕಾರ್ಯಾಗಾರ ಆಯೋಜಿಸಲಾಗಿದೆ. ಇದಕ್ಕೆ ಬೇಕಾದ ಪೂರಕ ವಾತಾವರಣವನ್ನು ಜಲ, ವೃಕ್ಷ ಮತ್ತು ಶಿಕ್ಷಣದ ಮೂಲಕ ಅವರು ಒದಗಿಸುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವ ಗುರಿ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ ಎಂದು ಹೇಳಿದರು.
ಕಮ್ಯೂನಿಟಿ ಮೆಡಿಷೀನ್ ವೈದ್ಯರಾದ ಡಾ. ಶೈಲಜಾ ಪಾಟೀಲ ಮತ್ತು ಸ್ತ್ರೀ ರೋಗ ಹಾಗೂ ಪ್ರಸೂತಿ ವಿಭಾಗದ ಡಾ. ರಾಜಶ್ರೀ ಯಲಿವಾಲ ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನಡೆಸಿದರು. ಅಲ್ಲದೇ, ಈ ಶಿಬಿರದಲ್ಲಿ ಪಾಲ್ಗೋಂಡ ಸುಮಾರು 500 ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು.
ಡಾ. ಎಂ. ಎಂ. ಬನ್ನೂರ ಉಪಸ್ಥಿತರಿದ್ದರು. ಪ್ರೊ. ನೀತಾ ಮಠಪತಿ ಸ್ವಾಗತಿಸಿದರು. ಡಾ. ಜಿ. ವಿ. ಪಾಟೀಲ ವಂದಿಸಿದರು.