ಹೈಕಮಾಂಡ್ ಸೂಚನೆ ಹಿನ್ನೆಲೆ ಬಿ ಎಸ್ ವೈ ವಿರುದ್ಧ ಸಾಫ್ಟ್ ಆಗಿದ್ದೇನೆ- ಸಿಎಂ ಬದಲಾವಣೆ ಇಲ್ಲ- ಚುನಾವಣೆಗೆ ಸಾಮೂಹಿಕ ನೇತೃತ್ವ- ಯತ್ನಾಳ

ವಿಜಯಪುರ: ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಯಡಿಯೂರಪ್ಪ ವಿರುದ್ಧ ಮಾತನಾಡದೇ ಸಾಫ್ಟ್ ಆಗಿ ಇರುತ್ತೇನೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಹೇಳಿದ ಮೇಲೆ ಸಾಫ್ಟ್ ಆಗಲೇ ಬೇಕಲ್ವಾ? ಎಲ್ಲದಕ್ಕೂ ಗುರ್ ಎನ್ನಲು ಬರುತ್ತಾ? ಕಾಂಪ್ರೈಮೈಸ್ ಎನ್ನಲು ಅವರ ಆಸ್ತಿ ನಾನು ಕಸಿದುಕೊಂಡಿಲ್ಲ.  ಏನೋ ರಾಜಕೀಯ ಸಂಘರ್ಷಗಳಿುತ್ತವೆ.  ಈಗ ಅವೆಲ್ಲದಕ್ಕೂ ವಿರಾಮ ಹೇಳಿದ್ದೇನೆ.  ಮಾಧ್ಯಮದವರೂ ಇನ್ನು ಮುಂದೆ ಯಡಿಯೂರಪ್ಪ ಅವರ ಬಗ್ಗೆ ಯಾವುದೇ ಪ್ರಶ್ನೆ ಕೇಳಬೇಡಿ.  ಅವರ ಬಗ್ಗೆ ಅಪಾರ ಗೌರವವಿದೆ.  ನಾನೇನೂ ಹೇಳುವುದಿಲ್ಲ.  ಪಕ್ಷದಲ್ಲಿ ನಿನ್ನದೇ ಆದ ಒಂದು ಗೌರವವಿದೆ.  ನಿನ್ನ ಬಗ್ಗೆ ಎಲ್ಲವೂ ನನ್ನ ಗಮನದಲ್ಲಿದೆ.  ನಿನಗೆ ಒಳ್ಳೆಯ ಕೆಲಸವಾಗಲಿದೆ.  ಮುಂದಿನಗಳಲ್ಲಿ ಯಡಿಯೂರಪ್ಪ ಅವರಿಗೆ ಬೈಯ್ಯಬೇಡ.   ಪಾಪ ಅವರು ಹಿರಿಯರಿದ್ದಾರೆ.  ಅವರ ಬಗ್ಗೆ ಮಾತನಾಡಬೇಡ ಎಂದು ಹೇಳಿದ್ದಾರೆ.  ನಾನು ಹೂಂ ಎಂದು ಹೇಳಿದ್ದೇನೆ ಎಂದು ತಿಳಿಸಿದರು.

ನೊಟೀಸ್ ನೀಡಿರುವ ಬಗ್ಗೆ ಮಾಹಿತಿ ಇಲ್ಲ, ಅನುಮತಿ ಪಡೆದು ನಡ್ಡಾ ಕಾರ್ಯಕ್ರಮಕ್ಕೆ ಗೈರಾಗಿದ್ದೆ

ನೋಟೀಸ್ ಕುರಿತು ನನಗೆ ಮಾಹಿತಿಯಿಲ್ಲ.  ನಿಮ್ಮ ಚಾನೆಲ್ ಗಳಲ್ಲಿಯಾದರೂ ಹಾಕಿ.  ನಾನೂ ಅದು ಹೇಗಿರುತ್ತೆ ಎಂದು ನೋಡುತ್ತೇನೆ.  ರಾಜ್ಯಾಧ್ಯಕ್ಷರು ಕೇಂದ್ರ ಶಿಸ್ತು ಸಮಿತಿ ಗಮನಿಸುತ್ತಿದೆ ಎಂದು ಹೇಳಿದ್ದಾರೆ.  ಆದರೆ, ಮಾಧ್ಯಮದವರು ನಿಮಗೆ ಬೇಕಾದಂತೆ ಟ್ವಿಸ್ಟ್ ಮಾಡಿದರೆ ನಾವೇನೂ ಮಾಡಕ್ಕಾಗೊಲ್ಲ.  ನೊಟೀಸ್ ಕೊಟ್ಟಿರುವುದಾಗಿ ಅವರು ಎಲ್ಲೂ ಹೇಳಿಲ್ಲ.  ನಾನು ಎಂಎಲ್ಎ ಆಗಿರುವುದರಿಂದ, ಎಂಎಲ್‌ಎ ಗಳಿಗೆ ರಾಜ್ಯ ಸಮಿತಿಯಿಂದ ನೊಟೀಸ್ ನೀಡಲು ಅಧಿಕಾರವಿಲ್ಲ.   ಕೇಂದ್ರ ಶಿಸ್ತು ಸಮಿತಿ ಮಾತ್ರ ನೊಟೀಸ್ ನೀಡಬಹುದು.  ಅಲ್ಲಿಂದ ನನಗೆ ಈವರೆಗೆ ಯಾವುದೇ ನೊಟೀಸ್ ಬಂದಿಲ್ಲ.  ನನ್ನ ಬಗ್ಗೆ ಬಹಳಷ್ಟು ಪ್ರೀತಿ ಮತ್ತು ಗೌರವ ಪಕ್ಷದಲ್ಲಿದೆ.   ಇಷ್ಟರ ಮೇಲೆ ನೀವೇ ತಿಳಿದುಕೊಳ್ಳಿ.  ನನ್ನ ಮೇಲೆ ಹೈಕಮಾಂಡ್ ಆಶೀರ್ವಾದವಿದೆ.  ಚಿಲ್ಲರೆ, ಪಲ್ಲರೆ ಜನರಿಗೆ ಯಾವುದೇ ಉತ್ತರ ಕೊಡಬೇಡ ಎಂದು ಹೇಳಿದ್ದಾರೆ.  ಹೈಕಮಾಂಡ್ ಸೂಚನೆಯಂತೆ ನನ್ನ ವಿರುದ್ಧ ಮಾತನಾಡುವ ಯಾವುದೇ ಚಿಲ್ಲರೆ ವ್ಯಕ್ತಿಗಳ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಅವರು ಹೇಳಿದರು.

ನನಗೆ ಬಿಜೆಪಿ ಹೈಕಮಾಂಡ್ ನೋಟೀಸ್ ಕೊಟ್ಟಿರುವ ಬಗ್ಗೆ ನನಗೇನೂ ಮಾಹಿತಿ ಇಲ್ಲ.  ಮಾಧ್ಯಮಗಳಲ್ಲಿ ಮಾತ್ರ ಅದು ಬರುತ್ತಿದೆ.  ಯಾರು ಮತ್ತು ಯಾಕೆ ಇದನ್ನು ಹರಡುತ್ತಿದ್ದಾರೆ? ಯಾವ ಚಾನೆಲ್ ನವರಿಗೆ ಏನೇನೂ ಫೀಡ್ ಮಾಡುತ್ತಿದ್ದಾರೆ ನನಗೆ ಗೊತ್ತಿಲ್ಲ.  ವಿಜಯಪುರದಲ್ಲಿ ನಡೆದ ನಡ್ಡಾ ಅವರ ಕಾರ್ಯಕ್ರಮಕ್ಕೆ ಗೈರಾಗುವ ಕುರಿತು ನಡ್ಡಾ ಅವರಿಂದಲೇ ಅನುಮತಿ ಪಡೆದಿದ್ದೆ.  ಅವರ ಜೊತೆ ಮಾತನಾಡಿದ್ದೆ.  ಅವರು ಅನುಮತಿ ನೀಡಿದ್ದರು ಎಂದು ಅವರು ತಿಳಿಸಿದರು.

ಮೀಸಲಾತಿ ಬೇಡಿಕೆಗೆ ಹೈಕಮಾಂಡ್ ಸ್ಪಂದಿಸಲಿದೆ

ಮೀಸಲಾತಿ ವಿಚಾರದಲ್ಲಿ ಹೈಕಮಾಂಡ ಬಹಳ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಹೇಳಿದ್ದಾರೆ.  ಸಂಕ್ರಮಣ ಸಂದರ್ಭದಲ್ಲಿಯೇ ನಾನು ಕೇಂದ್ರ ನಾಯಕರ ಮಧ್ಯಸ್ಥಿಕೆ ವಹಿಸಬೇಕು ಎಂಬ ಬೇಡಿಕೆಯನ್ನು ಹೈಕಮಾಂಡ ಒಪ್ಪಿದೆ.  ಸೂಕ್ತ ಕಾಲದಲ್ಲಿ ಎಲ್ಲ ಸಮಾಜಗಳಿಗೂ ಸಾಮಾಜಿಕ ನ್ಯಾಯ ಕೊಡಬೇಕು ಕೆಲಸ ಮಾಡುವುದಾಗಿ ಅವರು ಹೇಳಿದ್ದಾರೆ.  ಕೇಂದ್ರದ ನಮ್ಮ ನಾಯಕರ ಮೇಲೆ ವಿಶ್ವಾಸವಿದೆ.  ಆದಷ್ಟು ಬೇಗ ಎಲ್ಲ ಸಮುದಾಯಗಳಿಗೆ ಸಿಹಿ ಸುದ್ದಿ ಬರಲಿದೆ ಎಂದು ಅವರು ತಿಳಿಸಿದರು.

ನಾಯಕತ್ವ ಬದಲಾವಣೆ ಇಲ್ಲ ಸಾಮೂಹಿಕ ನಾಯಕತ್ವ ಮೋದಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ

ಯಾವುದೇ ರೀತಿಯಿಂದ ನಾಯಕತ್ವ ಬದಲಾವಣೆ ಮಾಡಬೇಕೆಂದು ಚರ್ಚೆಯಾಗಿಲ್ಲ.  ಕೆಲವು ಮಾಧ್ಯಮಗಳಲ್ಲಿ 70 ಜನ ಸಹಿ ಮಾಡಿದ್ದಾರೆ ಎಂದು ಬಂದಿರುವುದು ಸುಳ್ಳು.  ಯಾವುದೇ ಶಾಸಕರು ಬೊಮ್ಮಾಯಿ ಅವರನ್ನು ಬದಲಾವಣೆ ಮಾಡುವ ಕುರಿತು ಯಾರೂ ಚರ್ಚೆ ಮಾಡಿಲ್ಲ.  ಚುನಾವಣೆ ಕೇವಲ ಎರಡು ತಿಂಗಳು ಇರುವಾಗ ಬದಲಾವಣೆಯ ಮೂಡಿನಲ್ಲಿ ಯಾರೂ ಇಲ್ಲ.  ಯಾರೂ ಗೊಂದಲಕ್ಕೆ ಅವಕಾಶ ನೀಡಿಲ್ಲ.  ಅದೆಲ್ಲ ಸುಳ್ಳು ಸುದ್ದಿ ಇದೆ.  ಮುಂದಿನ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವ, ನರೇಂದ್ರ ಮೋದಿ ನೇತೃತ್ವದಲ್ಲಿ ಚುನಾವಣೆ ನಡೆಯಬೇಕು ಎಂಬುದು ಬಹುತೇಕರ ಅಭಿಪ್ರಾಯವಾಗಿದೆ.  ಈ ನಿಟ್ಟಿನಲ್ಲಿ ಹೈಕಮಾಂಡ್ ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಸಿದ್ಧರಾಮಯ್ಯ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ರಾಜ್ಯ ಭೇಟಿಯ ಕುರಿತು ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಟೀಕೆಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಿದ್ಧರಾಮಯ್ಯನವರು ಚುನಾವಣೆ ಸ್ಪರ್ಧೆಯ ಕುರಿತು ಯಾಕೇ ಪದೇ ಪದೇ ಕ್ಷೇತ್ರಗಳನ್ನು ಬದಲಾಯಿಸುತ್ತಿದ್ದಾರೆ? ಐದು ವರ್ಷ ಸಂಪೂರ್ಣವಾಗಿ ಸಿಎಂ ಆಗಿ ಅಧಿಕಾರಾವಧಿ ಪೂರ್ಣಗೊಳಿಸಿರುವ ಹಿರಿಯ ನಾಯಕರಾಗಿ ಯಾಕೆ ಹೀಗೆ ತಿರುಗಾಡುತ್ತಿದ್ದಾರೆ? ಒಮ್ಮೆ ಕೋಲಾರದಲ್ಲಿ ನಿಲ್ಲುತ್ತೇನೆ ಎಂದು ಹೇಳುತ್ತಾರೆ.  ಮತ್ತೋಂದು ಸಲ ತಮ್ಮ ಮಗನ ಕ್ಷೇತ್ರಕ್ಕೆ ಹೋಗುತ್ತೇನೆ ಎಂದು ಹೇಳುತ್ತಾರೆ.  ಅವರಿಗೆ ಯಾವುದೇ ನೆಲೆಯಿಲ್ಲ.  ಪ್ರಧಾನಿ ಬಗ್ಗೆ ಮಾತನಾಡುವ ನೈತಿಕತೆ ಸಿದ್ಧರಾಮಯ್ಯ ಅವರಿಗಿಲ್ಲ.  ನಿಮ್ಮ ಮತಕ್ಷೇತ್ರವನ್ನು ಮೊದಲು ಗಟ್ಟಿಯಾಗಿ ಮಾಡಿಕೊಳ್ಳಿ.  ನಿಮ್ಮನ್ನು ಕೆಡವಲು ಡಿಕೆಶಿ ಆ್ಯಂಡ್ ಕಂಪನಿ ರೆಡಿಯಾಗಿದೆ.  ನಾನು ಮುಖ್ಯಮಂತ್ರಿಯಾಗಬೇಕು, ನಾನು ಮುಖ್ಯಮಂತ್ರಿಯಾಗಬೇಕು ಎಂದು ಡಿ. ಕೆ. ಶಿವಕುಮಾರ ಮತ್ತು ಎಸ್. ಸಿದ್ಧರಾಮಯಯ್ ಮಧ್ಯೆ ಜಿದ್ದು ನಡೆಯುತ್ತಿದೆ.  ಅವರ ತಾಟಿನಲ್ಲಿ ದೊಡ್ಡ ಕತ್ತೆ ಬಿದ್ದಿದೆ.  ಮತ್ತೋಂದು ಪಕ್ಷದ ಬಗ್ಗೆ ಮತ್ತು ಪ್ರಧಾನಿ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿನವರಿಗಿಲ್ಲಎಂದು ಅವರು ವಾಗ್ದಾಳಿ ನಡೆಸಿದರು.

ಎಚ್. ಡಿ. ಕುಮಾರಸ್ವಾಮಿ ಹತಾಶರಾಗಿದ್ದಾರೆ 

ಕುಮಾರಸ್ವಾಮಿ ಹತಾಶರಾಗಿದ್ದಾರೆ.  ಉತ್ತರ ಕರ್ನಾಟಕದಲ್ಲಿ ಅವರದು ಏನೂ ನಡೆಯುವುದಿಲ್ಲ.  ಅವರದೇನಿದ್ದರೂ ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮೀಣ, ಹಾಸನ ಜಿಲ್ಲೆಗಳಲ್ಲಿ ಮಾತ್ರ ನಡೆಯಲಿದೆ.  ನಮ್ಮ ಕಡೆ ಏನೂ ನಡೆಯದ ಕಾರಣ ಹತಾಶರಾಗಿ ಅವರು ಮಾತನಾಡಿದ್ದಾರೆ ಎಂದು ಅವರು ಹೇಳಿದರು.

ಅತೀಕ್ರಮಣ ತೆರವು ಅಧಿಕಾರಿಗಳಿಗೆ ರಕ್ಷಣೆ ನೀಡುತ್ತೇವೆ

ಅಧಿಕಾರಿಗಳಿಗೆ ರಕ್ಷಣೆ ನೀಡುತ್ತೇವೆ.  ನಾನೇ ಅತೀಕ್ರಮಣ ಮಾಡಿದ್ದರೂ ಆ ಕಟ್ಟಡವನ್ನು ಕೆಡವಲು ಸೂಚನೆ ನೀಡಿದ್ದೇನೆ.  ಎಲ್ಲಿಯವರೆಗೆ ನಾವು ಸ್ವಯಂ ಶಿಸ್ತು ಪಾಲಿಸುವುದಿಲ್ಲವೋ ಅಲ್ಲಿಯವರೆಗೂ ಅಭಿವೃದ್ಧಿಯಾಗುವುದಿಲ್ಲ.  ನಮ್ಮ ಮನೆ ಉಳಿಯಬೇಕು.  ಮತ್ತೋಬ್ಬರ ಮನೆ ಕೆಡವಬೇಕು ಎಂಬ ಭಾವನೆ ನಮಗಿಲ್ಲ.  ಸಾಕಷ್ಟು ಜನ ಗಣ್ಯರ ಆಪ್ತರು ಹಾಗೂ ಪ್ರಭಾವಿಗಳ ಮನೆಗಳನ್ನು ಕೆಡವಿದ್ದೇವೆ.  ನನ್ನ ಮೇಲೂ ಅತೀಕ್ರಮಣ ತೆರವು ಮಾಡದಂತೆ ಸಾಕಷ್ಟು ಒತ್ತಡವಿತ್ತು.  ಆದರೂ, ನಾನು ಅದಾವುದಕ್ಕೂ ಬಗ್ಗಿಲ್ಲ.  ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ನಮ್ಮ ಅಧಿಕಾರಿಗಳಿಗೆ ಹೇಳಿದ್ದೇನೆ.  ಪೊಲೀಸ್ ಇಲಾಖೆ ಎಲ್ಲ ರಕ್ಷಣೆ ನೀಡಲಿದೆ.  ವಿಜಯಪುರ ನಗರದಲ್ಲಿ ಒಂದು ಸಲ ಶಾಶ್ವತವಾದ ವ್ಯವಸ್ಥೆ ಮಾಡಬೇಕಾಗಿದೆ.  ಇಲ್ಲದಿದ್ದರೆ ವಿಜಯಪುರ ಯಾವಾಗ ಸುಧಾರಣೆಯಾಗಬೇಕು? ಈ ಎಲ್ಲ ಅಭಿವೃದ್ಧಿಯಿಂದಾಗಿಯೇ ರಾಜ್ಯದಲ್ಲಿ ವಿಜಯಪುರ ನಗರಕ್ಕೆ ಉತ್ತಮ ಹೆಸರು ಬರುತ್ತಿದೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Leave a Reply

ಹೊಸ ಪೋಸ್ಟ್‌