ಬಸವನಾಡಿನಲ್ಲಿ ಜಿಲ್ಲಾಧಿಕಾರಿಯಿಂದ ಗಣರಾಜ್ಯೋತ್ಸವ ಧ್ವಜಾರೋಹಣ- ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗೋಣ- ಡಾ. ದಾನಮ್ಮನವರ

ವಿಜಯಪುರ: ಸಂವಿಧಾನದ ಆಶಯದಂತೆ ಸಂಪೂರ್ಣ ಸಮಾನತೆಯನ್ನು ಸಾಧಿಸಲು ನಾವು ನಡೆಸುತ್ತಿರುವ ಪ್ರಯತ್ನವನ್ನು ಇನ್ನಷ್ಟು ಹೆಚ್ಚಿಸಿ, ಪ್ರಜಾಪ್ರಭುತ್ವದ ಬೆನ್ನಲುಬಾಗಿರುವ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಿ, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗೋಣ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದ ನಂತರ ಅವರು ಮಾತನಾಡಿ, ದೇಶದ ಸಮಗ್ರತೆ ಮತ್ತು ಐಕ್ಯತೆಯನ್ನು ಕಾಪಾಡುವ ಕಾರ್ಯದಲ್ಲಿ ನಾವೆಲ್ಲರೂ ಇಂದು ಪ್ರಮುಖ ಪಾತ್ರವನ್ನು ವಹಿಸಬೇಕಾಗಿದೆ. ಭಾರತವನ್ನು ಜಗತ್ತಿನ ಅತ್ಯಂತ ಪ್ರಬುಧ್ಧ, ಪ್ರಗತಿಪರ, ಸುಭದ್ರ ಮತ್ತು ಬಲಿಷ್ ರಾಷ್ಟ್ರವನ್ನಾಗಿಸಲು ನಾವೆಲ್ಲರೂ ಪ್ರಯತ್ನಿಸೋಣ ಎಂದು ಹೇಳಿದರು.

ಗಣರಾಜ್ಯೋತ್ಸವ ಧ್ವಜಾರೋಹಣದ ನಂತರ ಡಾ. ದಾನಮ್ಮನವರ ನಾನಾ ಪದಾತಿ ದಳಗಳನ್ನು ವೀಕ್ಷಿಸಿದರು

ಹರಿದು ಹಂಚಿಹೋಗಿದ್ದ ವಿವಿಧ ಸಂಸ್ಥಾನಗಳು ಒಂದುಗೂಡಿ ಅಖಂಡ ಭಾರತ ನಿರ್ಮಾಣವಾದ ಸುದಿನವಾಗಿದೆ. ಭಾರತೀಯರೆಲ್ಲರೂ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ದಿನ. ಸುಭದ್ರ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣಕ್ಕಾಗಿ ಹಾಗೂ ಸಂವಿಧಾನದ ರಚನೆಗೆ ಶ್ರಮಿಸಿದವರನ್ನು ಸ್ಮರಿಸುವ ದಿನವಾಗಿದೆ.  ಸಮಾನತೆಯ ಹರಿಕಾರ, ಭಾರತರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಮುಂದಾಳತ್ವದಲ್ಲಿ ಮೂಡಿ ಬಂದ ನಮ್ಮ `ಘನ ಸಂವಿಧಾನ’ವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವ ಮೂಲಕ ದೇಶಾದ್ಯಂತ ಪ್ರಜಾಪ್ರಭುತ್ವದ ಆಡಳಿತ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಸಹಕಾರ, ಸಹಬಾಳ್ವೆ ಮತ್ತು ಸ್ನೇಹಪೂರ್ಣ ಹಸ್ತದೊಂದಿಗೆ ಬೇರೆ ರಾಷ್ಟ್ರಗಳೊಂದಿಗೆ ಉತ್ತಮ ಸಹ-ಸಂಬಂಧವನ್ನು ಹೊಂದಿ ಜಾಗತಿಕ ಮಟ್ಟದಲ್ಲಿ ಭಾರತ ತನ್ನದೇ ಆದ ಛಾಪು ಮೂಡಿಸಿದೆ. ಯಾವುದೇ ದೇಶಕ್ಕೆ ಆಗಲೀ, ಸ್ವಾತಂತ್ರ್ಯ ಸಿಕ್ಕ ಕೆಲವೇ ದಿನಗಳಲ್ಲಿ ಯುದ್ಧ ಮಾಡಬೇಕಾದಂತಹ ಪ್ರಖರ ಸನ್ನಿವೇಶ ಮತ್ತು ಅನಿವಾರ್ಯತೆ ಎದುರಾದಾಗ ಅಂತಹ ರಾಷ್ಟ್ರದ ಪ್ರಗತಿಗೆ ತೊಡಕು ಉಂಟಾಗುತ್ತದೆ. ಆದಾಗ್ಯೂ ಕೂಡ ನಮ್ಮ ರಾಷ್ಟ್ರವು 1962, 1965, 1971 ಹಾಗೂ ಇತ್ತೀಚಿನ 1999 ರ ಕಾರ್ಗಿಲ್ ಯುದ್ಧಗಳಲ್ಲಿ ತನ್ನ ಬಲಾಡ್ಯತನವನ್ನು ಪ್ರದರ್ಶಿಸಿ ವಿಜಯ ಸಾಧಿಸಿದ್ದು ಸ್ಮರಣಾರ್ಹ ಎಂದು ಅವರು ಹೇಳಿದರು.

ವಿಜಯಪುರ ಜಿಲ್ಲೆಯನ್ನು ಎಲ್ಲ ಕ್ಷೆತ್ರಗಳಲ್ಲಿ ಅಭಿವೃದ್ದಿ ಪಥದಲ್ಲಿ ಕೊಂಡೊಯ್ಯಲು ಸತತ ಪ್ರಯತ್ನಗಳು ಸಾಗುತ್ತಿದ್ದು, ಸುಪ್ರಸಿದ್ದ ಐತಿಹಾಸಿಕ ಸ್ಮಾರಕಗಳು, ಎಲ್ಲ ಧರ್ಮೀಯರ ಪವಿತ್ರ ಮಠ, ಮಂದಿರ, ಮಸೀದಿಗಳು ಹಾಗೂ ಚರ್ಚಗಳು ಜಿಲ್ಲೆಯ ಜನತೆಯಲ್ಲಿ ದೈವೀ ಭಾವನೆಗಳನ್ನು ಸ್ಫುರಿಸಿ ಸಾಮರಸ್ಯ, ಪರಸ್ಪರ ಪ್ರೀತಿ ವಿಶ್ವಾಸ ಮತ್ತು ಬಂಧುತ್ವವನ್ನು ಪೋಷಿಸುತ್ತಿವೆ ಎಂದು ಡಾ. ದಾನಮ್ಮನವರ ಹೇಳಿದರು.

ಗ್ರಾಮ ಒನ್ ಯೋಜನೆಯು ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು,  ಈ ಯೋಜನೆಯಡಿ ಗ್ರಾಮೀಣ ಭಾಗದ ಜನರಿಗೆ ವಿವಿಧ ಸೇವೆಗಳನ್ನು ಒದಗಿಸಲಾಗುತ್ತಿದ್ದು, ಜಿಲ್ಲೆಯಲ್ಲಿ 211 ಗ್ರಾಮ ಪಂಚಾಯತಿಗಳಲ್ಲಿ ಸ್ಥಾಪಿಸಲಾದ 292 ಗ್ರಾಮ ಒನ್ ಕೇಂದ್ರಗಳ ಮೂಲಕ ಈವರೆಗೆ 12,60,699 ಅರ್ಜಿಗಳನ್ನು ವಿಲೇವಾರಿ ಮಾಡುವುದರ ಮೂಲಕ ರಾಜ್ಯದಲ್ಲಿಯೇ ವಿಜಯಪುರ ಜಿಲ್ಲೆ ದ್ವೀತಿಯ ಸ್ಥಾನದಲ್ಲಿದೆ.  ಜಿಲ್ಲೆಯ 173 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗುತ್ತಿದ್ದು, ಈಗಾಗಲೇ 76 ತಾಂಡಾಗಳಿಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಈ ಪೈಕಿ 13 ತಾಂಡಾಗಳ 1783 ಫಲಾನುಭವಿಗಳಿಗೆ ಮಾನ್ಯ ಪ್ರಧಾನ ಮಂತ್ರಿಗಳ ಅಮೃತ ಹಸ್ತದಿಮದ ಹಕ್ಕು ಪತ್ರಗಳನ್ನು ಸಹ ವಿತರಿಸಲಾಗಿದೆ ಎಂದು ಅವರು ಹೇಳಿದರು.

ವಿಜಯಪುರ ವಿಮಾನ ನಿಲ್ದಾಣವನ್ನು ಎಟಿಆರ್-72 ರಿಂದ ಏರ್‍ಬಸ್-320ಕ್ಕೆ ಮೇಲ್ದರ್ಜೆಗೇರಿಸಲಾಗಿದೆ.  ನಿಮಾಣ ಕಾರ್ಯದ ಹಂತ-1 ಮತ್ತು 2ರ ಕಾಮಗಾರಿಗಳಿಗೆ 348 ಕೋಟಿ ರೂ. ಮೊತ್ತದ ಟೆಂಡರ್ ನೀಡಲಾಗಿದೆ. ರನ್‍ವೇ, ಎಪ್ರಾನ್, ಟ್ಯಾಕ್ಸಿವೇ, ಐಸೋಲೇಶನ್, ಅಪ್ರೋಚ್ ರಸ್ತೆ, ಪೆರಿಪೆರಲ್ ರಸ್ತೆ, ಒಳರಸ್ತೆ ಮತ್ತು ಕಾರ್ ಪಾರ್ಕಿಂಗ್ ಕಾರ್ಯ ಪೂರ್ಣಗೊಂಡಿದೆ ಎಂದು ಅವರು ಹೇಳಿದರು.

ನಗರದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 94.93 ಕೋಟಿ ರೂ. ವೆಚ್ಚದಲ್ಲಿ 1493 ಮನೆಗಳನ್ನು ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ, ವಿಜಯಪುರ ನಗರ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು 5 ಕೋಟಿ ರೂ. ಅನುದಾನ ಪ್ರವಾಸೋದ್ಯಮ ಇಲಾಖೆಯಿಂದ ಮಂಜೂರಾಗಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ 109.70 ಕೋಟಿ ರೂ. ವೆಚ್ಚದಲ್ಲಿ 33 ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ, 196 ಕೋಟಿ ರೂ. ವೆಚ್ಚದಲ್ಲಿ 2.62 ಲಕ್ಷ ಮನೆಗಳಿಗೆ ಜಲಜೀವನ್ ಮಿಷನ್ ಅಡಿಯಲ್ಲಿ ಕಾರ್ಯಾತ್ಮಕ ನಳ ಸಂಪರ್ಕಗಳನ್ನು ಕಲ್ಪಿಸಲಾಗುತ್ತಿದೆ. ದ್ರಾಕ್ಷಿ ಬೆಳೆಗಾರರ ಅನುಕೂಲಕ್ಕಾಗಿ ವೈನ್ ಟೂರಿಸಂ ಕೈಗೊಳ್ಳಲು ಈಗಾಗಲೇ ಪ್ರವಾಸೋದ್ಯಮ ಇಲಾಖೆಯೊಂದೊಂದಿಗೆ ಕರಡು ಪ್ರಸ್ತಾವನೆಯನ್ನು ತಯಾರಿಸಲಾಗಿದೆ ಎಂದು ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಹೇಳಿದರು.

ಈ ಸಂದರ್ಭದಲ್ಲಿ ಅಪಘಾತ ರಹಿತ ವಾಹನ ಚಾಲನೆ  ಮಾಡಿದ 39 ಜನ ಕೆಎಸ್‍ಆರ್‍ಟಿಸಿ ಬಸ್ ಚಾಲಕರಿಗೆ ಬೆಳ್ಳಿ ಪದಕ ಪ್ರಧಾನ ಮಾಡಿ ಗೌರವಿಸಲಾಯಿತು. ಸಹಸ್ರಮಾನದ ಸಂತ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳ ಅಂತಿಮಯಾತ್ರೆಯ ಸಂದರ್ಭದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಅಧಿಕಾರಿ, ಗುತ್ತಿಗೆದಾರರು ಹಾಗೂ ಪ್ರತಿನಿಧಿಗಳಿಗೆ ಮತ್ತು ವಿವಿಧ ಕ್ರೀಡೆಗಳಲ್ಲಿ ಸಾಧನೆಗೈದ ಸಾಧಕರಿಗೆ, ಕ್ರೀಡಾಪಟು ಹಾಗೂ ತರಬೇತಿದಾರರಿಗೆ ಸನ್ಮಾನಿಸಲಾಯಿತು.

ವಿಜಯಪುರ ನಗರ ಶಾಸಕ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷತೆ ವಹಿಸಿದ್ದರು.  ಈ ಸಂದರ್ಭದಲ್ಲಿ  ಸಂಸದ ರಮೇಶ ಜಿಗಜಿಣಗಿ, ಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ, ಎಸ್ಪಿ ಎಚ್. ಡಿ. ಆನಂದಕುಮಾರ, ಎಎಸ್ಪಿ ಶಂಕರ ಮಾರಿಹಾಳ ಸೇರಿದಂತೆ ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು, ನಾನಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌