ಆಶ್ರಯ ಮನೆಗಳ ಹಂಚಿಕೆ ಪತ್ರ ವಿತರಣಿ- ಅಂಬೇಡ್ಕರರ ಸಮಾನತೆ ಕನಸು ನನಸಾಗುತ್ತಿದೆ ಎಂದ ಯತ್ನಾಳ

ವಿಜಯಪುರ: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಅವರು ಕಂಡ ಸ್ವಾಭಿಮಾನ, ಸಮಾನತೆ ಜೀವನದ ಕನಸು ನನಸಾಗಿಸುವ ಕೆಲಸ ವಿಜಯಪುರದಲ್ಲಿ ಆಗಿದೆ ಎಂದು ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದ್ದಾರೆ.

ನಗರದ ಅಥಣಿ ರಸ್ತೆಯ ಅಲ್ ಅಮೀನ್ ಹಿಂದೆ ಇರುವ ನಮೋ ನಗರದಲ್ಲಿ ಪ್ರಧಾನ ಮಂತ್ರಿ ಅವಾಸ ಯೋಜನೆಯಡಿ ನಿರ್ಮಿಸಲಾದ ಆಶ್ರಯ ಮನೆಗಳ ಹಂಚಿಕೆ ಪತ್ರ ವಿತರಣೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಲ್ಲಿ ನಿರ್ಮಿಸಲಾದ ಗುಣಮಟ್ಟದ ಮನೆಗಳನ್ನು ಅತ್ಯಂತ ಪಾರದರ್ಶಕವಾಗಿ ಚೀಟಿ ಎತ್ತುವ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಎಲ್ಲ ಸಮುದಾಯದ ಜನರು ಇಲ್ಲಿ ಒಟ್ಟಾಗಿ ಜೀವನ ನಡೆಸುವಂತೆ ಮಾಡಲಾಗಿದೆ. ಈ ಮೂಲಕ ಅಂಬೇಡ್ಕರ್ ಅವರ ಕನಸು ನನಸಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಯತ್ನಾಳ ನಾನಾ ದೇವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು

 

ನಾನು ಬಡವರ ಸಲುವಾಗಿ ಕೆಲಸ ಮಾಡುತ್ತಿರುವೆ. ‌ಒಂದು ನಯಾ ಪೈಸೆ ಹಣ ಪಡೆಯದೆ, ಸರಕಾರಿ ವಂತಿಗೆಯನ್ನು ಮಹಾನಗರ ಪಾಲಿಕೆಗೆ ತುಂಬಿಸಿ ಅರ್ಹ ಫಲಾನುಭವಿಗಳಿಗೆ ಮನೆ ನೀಡುತ್ತಿದ್ದೇವೆ. ‌ ಈ ಹಿಂದಿನವರು ಮನೆ ಕಟ್ಟಿಸದೆ ಅರ್ಜಿ ಪಡೆಯಲೇ ರೂ. 5 ರಿಂದ ರೂ.‌10 ಸಾವಿರ ಪಡೆದುಕೊಳ್ಳುತ್ತಿದ್ದರು. ವಂತಿಗೆ ಹಣ ತುಂಬಲಾಗದ ಜನರಿಗೆ ಸಿದ್ದಸಿರಿಯಿಂದ ಸಾಲ ಸಹ ನೀಡಲಾಗುತ್ತದೆ. ಅಲ್ಲದೇ, ತೀರಾ ಬಡವರಿಗಾಗಿರುವ 100 ಜನರಿಗೆ ವೈಯಕ್ತಿಕವಾಗಿ ತಲಾ ರೂ. 50 ಸಾವಿರ ಹಣವನ್ನು ತಾವು ನೀಡಿರುವುದಾಗಿ ಅವರು ಎಂದು ತಿಳಿಸಿದರು.

ವಿಶ್ವದಲ್ಲಿಯೇ ಭಾರತವನ್ನು ಯಶಸ್ಸಿನತ್ತ ಕೊಂಡ್ಯೊಯ್ಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ವಿಜಯಪುರದಲ್ಲಿ ಈ ಬಡಾವಣೆಗೆ ನಮೋ ಎಂದು ನಾಮಕರಣ ಮಾಡಲಾಗಿದೆ. ಇಲ್ಲಿಗೆ ಬಸ್ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ಶಾಸಕರು ತಿಳಿಸಿದರು.

 

 

ಇಲ್ಲಿ ನಿರ್ಮಾಣವಾಗಿರುವ ಆಶ್ರಯ ಮನೆಗಳ ಎಲ್ಲ ಫಲಾನುಭವಿಗಳು ತಮ್ಮ ವಂತಿಗೆ ಹಣ ಪಾವತಿಸಿದರೆ, ಹಕ್ಕುಪತ್ರ ವಿತರಣೆ ಹಾಗೂ ಮತ್ತೆ 2000 ಮನೆಗಳ ನಿರ್ಮಾಣಕ್ಕೆ ಭೂಮಿಪೂಜೆ ಒಮ್ಮೆಯೇ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಾಂಗ, ಶಾಸಕಾಂಗ ಒಳ್ಳೆಯ ಕೆಲಸ ಮಾಡಿದರೆ ದೇಶದಲ್ಲಿ ಮಾದರಿ ಕಾರ್ಯಗಳು ಆಗುತ್ತದೆ. ನಮ್ಮ ಅಧಿಕಾರಿಗಳ ಸಹಕಾರದಿಂದ ನಗರದ ಅಭಿವೃದ್ಧಿ ಹಾಗೂ ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆ ದಾಖಲೆ ರೀತಿಯಲ್ಲಿ ಯಶಸ್ವಿಯಾಗಿರುವುದು ಇದಕ್ಕೆ ಸಾಕ್ಷಿ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯ ಸ್ವಂತ ಮನೆ ಹೊಂದಬೇಕು ಎಂಬ ಕನಸು ಕಾಣುತ್ತಿದ್ದಾರೆ. ಅಂಥವರ ಕನಸು ನನಸಾಗಿಸಲು ನಗರದಲ್ಲಿ ಪ್ರಧಾನಮಂತ್ರಿ ಅವಾಸ ಯೋಜನೆಯಡಿ ಗುಣಮಟ್ಟದ ಆಶ್ರಯ ಮನೆಗಳು ನಿರ್ಮಾಣಗೊಂಡಿವೆ. ಈಗಾಗಲೇ ಮನೆ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು, ಮೊದಲ ಹಂತದಲ್ಲಿ 300 ಮನೆಗಳ ಹಂಚಿಕೆ ಮಾಡಲಾಗಿದೆ. ಉಳಿದವರು ತಮ್ಮ ಪಾಲಿನ ವಂತಿಕೆ ತುಂಬಿದ ಬಳಿಕ ಅವರಿಗೂ ಹಕ್ಕುಪತ್ರ ನೀಡಲಾಗುತ್ತದೆ. ಹೀಗಾಗಿ ಎಲ್ಲರೂ ಬೇಗ ಹಣ ತುಂಬಬೇಕು ಎಂದು ಸಲಹೆ ನೀಡಿದರು.

 

ಎಸ್ಪಿ ಎಚ್. ಡಿ. ಆನಂದಕುಮಾರ‌ ಮಾತನಾಡಿ ಕಷ್ಟದಲ್ಲಿರುವ ಜನರಿಗೆ ಅವರ ಜೀವನದ ಕನಸಾದ ಸೂರು ಕಲ್ಪಿಸುವ ಮಹತ್ತರ ಕಾರ್ಯವನ್ನು ನಗರ ಶಾಸಕರು ಹಾಗೂ ಅಧಿಕಾರಿಗಳು ಮಾಡಿದ್ದಾರೆ. ನಾನು ಕೂಡ ಸಿವಿಲ್ ಎಂಜಿನಿಯರ್ ಆಗಿದ್ದು, ಇಲ್ಲಿನ ಮನೆಗಳನ್ನು ವೀಕ್ಷಿಸಿದಾಗ ಉತ್ತಮ ಗುಣಮಟ್ಟದ ಮನೆಗಳು ನಿರ್ಮಾಣವಾಗಿರುವುದು ಗೊತ್ತಾಗಿದೆ. ಇಂಥ ಗುಣಮಟ್ಟದ ಕಾಮಗಾರಿ ಬೇರೆ ಎಲ್ಲೂ ನೋಡಿಲ್ಲ. ನಮ್ಮೆಲ್ಲೆ ನೆಚ್ಚಿನ ನಾಯಕರಾದ ನಗರ ಶಾಸಕರು ಬಡವರ ಬಗ್ಗೆ ಅತ್ಯಂತ ಕಾಳಜಿ ಹೊಂದಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಮಾತನಾಡಿದರು. ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಪ್ರಾಸ್ತಾವಿಕ ಮಾತನಾಡಿದರು.

ಈ ಸಂದರ್ಭದಲ್ಲಿ ಯತ್ನಾಳ ಆಶ್ರಯ ಮನೆ ಬಡ ಫಲಾನುಭವಿಗಳಿಗೆ ವೈಯಕ್ತಿಕವಾಗಿ ರೂ. 50 ಸಾವಿರ ಚೆಕ್ ವಿತರಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರು, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರು, ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌