ವಿಜಯಪುರ: ಬಸವನಾಡು ವಿಜಯಪುರ ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಫೆ. 4 ಮತ್ತು 5 ರಂದು ನಡೆಯಲಿರುವ 37ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ವರ್ಣರಂಜಿತ ಆಕರ್ಷಕ ಆಮಂತ್ರಣ ಪತ್ರಿಕೆಗಳನ್ನು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮತ್ತು ಎಸ್ಪಿ ಎಚ್. ಡಿ. ಆನಂದಕುಮಾರ ಪ್ರತ್ಯೇಕವಾಗಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಮಾತನಾಡಿ, ಐತಿಹಾಸಿಕ ವಿಜಯಪುರ ನಗರದಲ್ಲಿ ನಡೆಯುವ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಯಶಸ್ವಿಯಾಗಲಿ ಎಂದು ಶುಭ ಕೋರಿದರು.
ಸಮ್ಮೇಳನದ ಯಶಸ್ವಿಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಆಶ್ವಾಸನೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಮಾತನಾಡಿ, ವಿಜಯಪುರದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ನಡೆಯಲಿದ್ದು, ಸಮ್ಮೇಳನಕ್ಕೆ ರಾಜ್ಯದ ನಾನಾ ಜಿಲ್ಲೆಗಳಿಂದ ಐದು ಸಾವಿರಕ್ಕೂ ಹೆಚ್ಚು ಪತ್ರಕರ್ತರು ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ ಎರಡೂವರೆ ಸಾವಿರ ಪತ್ರಕರ್ತರು ನೊಂದಣಿ ಮಾಡಿಸಿದ್ದಾರೆ. ಸಮ್ಮೇಳನಕ್ಕೆ ದೂರದ ಊರುಗಳಿಂದ ಆಗಮಿಸುವ ಪತ್ರಕರ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕಾಗಿದ್ದು, ಜಿಲ್ಲಾಡಳಿತ ಎಲ್ಲ ರೀತಿಯ ಸಹಕಾರ ನೀಡಬೇಕ ಎಂದು ಕೋರಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಕಾರ್ಯದರ್ಶಿ ಅವಿನಾಶ ಬಿದರಿ, ಖಜಾಂಚಿ ರಾಹುಲ ಆಪ್ಟೆ, ಸಹ ಖಜಾಂಚಿ ದೀಪಕ ಶಿಂತ್ರೆ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಸುರೇಶ ತೇರದಾಳ, ಸಮೀರ ಇನಾಮದಾರ, ಸಂಘದ ಸದಸ್ಯರಾದ ಸೀತಾರಾಮ ಕುಲಕರ್ಣಿ, ದೇವೇಂದ್ರ ಹೆಳವರ, ನಿಂಗಪ್ಪ ನಾವಿ, ಪ್ರದೀಪ ಕುಲಕರ್ಣಿ, ಶ್ರೀನಿವಾಸ ಸೂರಗೊಂಡ, ಇಸ್ಮಾಯಿಲ್ ಮುಲ್ಲಾ, ವಿಠ್ಠಲ ಲಂಗೋಟಿ, ವಾರ್ತಾ ಇಲಾಖೆಯ ಸುರೇಶ ಅಂಬಿಗೇರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.