ರೈತನ ಬೆನ್ನೆಲುಬು ಹೋರಿಯ ಅದ್ಧೂರಿ ಬರ್ತಡೆ ಆಚರಿಸಿ ಸಂಭ್ರಮಿಸಿದ ಬಸವನಾಡಿನ ಅನ್ನದಾತ

ವಿಜಯಪುರ: ಬಸವನಾಡು ವಿಜಯಪುರ ನಾನಾ ಆಚರಣೆಗಳಿಗೆ ಹೆಸರುವಾಸಿ.  ಈ ನಾಡಿನಲ್ಲಿ ಪ್ರತಿದಿನ ಒಂದಿಲ್ಲೊಂದು ಊರಿನಲ್ಲಿ ಜಾತ್ರೆ, ಆಚರಣೆಗಳು ನಡೆಯುವುದು ವಿಶೇಷ.  ಇನ್ನು ಹುಟ್ಟು ಹಬ್ಬಗಳೆಂದರೆ ಈಗ ಅವುಗಳ ಕ್ರೇಜ್ ಹೆಚ್ಚಾಗುತ್ತಿದೆ.  ಮನೆಗಳಲ್ಲಿ ಮಕ್ಕಳು, ಮತ್ತು ಹಿರಿಯ ಬರ್ತಡೆ ಆಚರಿಸಿದರೆ, ಮನೆಯಾಚೆ ಸ್ನೇಹಿತರು, ಅಭಿಮಾನಿಗಳು ತಂತಮ್ಮ ಗೆಳೆಯರು, ನಾಯಕರು, ಮಾಲೀಕರ ಜನ್ಮದಿನಗಳನ್ನು ಆಚರಿಸಿ ಸಂಭ್ರಮಿಸುತ್ತಾರೆ.  ಇದೆಲ್ಲಕ್ಕಿಂತ ಅಪರೂಪದ ಜನ್ಮದಿನಾಚರಣೆ ಬಸವಣ್ಣನವರ ತವರು ಬಸವನ ಬಾಗೇವಾಡಿ ತಾಲೂಕಿನಲ್ಲಿ ನಡೆದಿದೆ. 

ಹೋರಿಯ ಜನ್ಮದಿನಕ್ಕಾಗಿ ತಯಾರಿಸಲಾದ ಕೇಕ್

ರಾಸುಗಳು ಅನ್ನದಾತರ ಕುಟುಂಬ ಸದಸ್ಯರಿದ್ದಂತೆ.  ರೈತರೂ ಕೂಡ ಅವುಗಳನ್ನು ತಮ್ಮ ಮನೆಯ ಸದಸ್ಯರಂತೆ ಅಕ್ಕರೆಯಿಂದ ಆರೈಕೆ ಮಾಡುತ್ತಾರೆ.  ಕಾರ ಹುಣ್ಣಿಮೆ ಸೇರಿದಂತೆ ಪ್ರಮುಖ ಸಂದರ್ಭದಲ್ಲಿ ಅವುಗಳ ಮೈತೊಳೆದು ಸಿಂಗರಿಸಿ ಪೂಜಿಸುತ್ತಾರೆ.  ಅಲ್ಲದೇ, ಅವುಗಳಿಗೆ ವಿಶಿಷ್ಠ್ಯ ಖಾದ್ಯಗಳನ್ನೂ ತಿನ್ನಿಸಿ ಸಂಭ್ರಮಿಸುತ್ತಾರೆ.

ಆದರೆ, ಇದೆಲ್ಲಕ್ಕಿಂತಲೂ ವಿಶೇಷ ಮತ್ತು ಗಮನ ಸೆಳೆಯುವ ಪ್ರಕರಣ ಬಸವನಾಡು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ನಡೆದಿದೆ.

ಹೋರಿಯ ಹುಟ್ಟುಹಬ್ಬ ಆಚರಿಸಿದ ರೈತ

ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಎತ್ತು ಮತ್ತು ಹೋರಿಗಳನ್ನು ಬಸವಣ್ಣನಿಗೆ ಹೋಲಿಸುತ್ತಾರೆ.  ಕಾಯಕ ತತ್ವ ಸಾರಿದ 12ನೇ ಶತಮಾನದ ಸಾಮಾಜಿಕ ಕ್ರಾಂತಿಕಾರ ಬಸವಣ್ಣನವರ ಹೆಸರಿನಲ್ಲಿಯೇ ಇವುಗಳನ್ನು ಬಸವಣ್ಣ ಎಂದು ಪೂಜಿಸುವ ಸಂಪ್ರದಾಯವಿದೆ.  ಇದಕ್ಕೆ ಪೂರಕ ಎಂಬಂತೆ ಮಸಬಿನಾಳ ಗ್ರಾಮದ ರೈತ ಮಲ್ಲಪ್ಪ ಗಾಜರೆ ತಮ್ಮ ಎತ್ತಿನ ಜನ್ಮದಿನ ಆಚರಿಸಿದ್ದಾರೆ.

ಗ್ರಾಮಸ್ಥರನ್ನು ಸೇರಿಸಿ 5ನೇ ಬರ್ತಡೆ ಆಚರಿಸಿದ ರೈತ

ಮಲ್ಲಪ್ಪ ಗಾಜರೆ ಅವರ ಬಳಿ ಜೋಡೆತ್ತುಗಳಿವೆ.  ಅವುಗಳಲ್ಲಿ ಒಂದು ಹೋರಿ ಈಗ ಐದು ವರ್ಷ ಪೂರೈಸಿದೆ.  ಈ ಸಂಭ್ರಮವನ್ನು ಇಮ್ಮಡಿಗೊಳಿಸಲು ನಿರ್ಧರಿಸಿದ ರೈತ ಗ್ರಾಮದಲ್ಲಿ ಜನರನ್ನು ಸೇರಿಸಿ ಅದ್ದೂರಿಯಾಗಿ ತಮ್ಮ ನೆಚ್ಚಿನ ರಾಜಾ ಹೆಸರಿನ ಹೋರಿಯ ಬರ್ತಡೆ ಆಚರಿಸಿದ್ದಾರೆ.  ಈ ಹೋರಿಯ ಹುಟ್ಟುಹಬ್ಬದ ಅಂಗವಾಗಿ ಭರ್ಜರಿ ಕೇಕ್ ತರಿಸಿ ಕೇಕ್ ಕತ್ತರಿಸಿ ಹೋರಿಗೆ ತಿನ್ನಿಸಿ, ಜೊತೆಯಲ್ಲಿದ್ದ ರೈತ ಬಾಂಧವರಿಗೂ ನೀಡಿ ಸಂಭ್ರಮಿಸಿದ್ದಾರೆ.

ಜಾನುವಾರುಗಳೊಂದಿಗೆ ವಿಶೇಷ ಪ್ರೀತಿ ಹೊಂದಿರುವ ಗಾಜರೆ ಕುಟುಂಬ

ಗಾಜರೆ ಕುಟುಂಬಕ್ಕೂ ಜಾನುವಾರುಗಳಿಗೂ ಅವಿನಾಭಾವ ಸಂಬಂಧವಿದೆ.  ಹೀಗಾಗಿ ಇವರ ಮನೆಯಲ್ಲಿ ಹೋರಿ ಜನಿಸಿದ ತಕ್ಷಣ ಅವರು ಅದಕ್ಕೆ ರಾಜಾ ಹೋರಿ ಎಂದೇ ಹೆಸರಿಟ್ಟಿದ್ದಾರೆ.  ಅಲ್ಲದೇ, ಪ್ರತಿ ವರ್ಷ ಅದರ ಬರ್ತಡೆ ಆಚರಿಸುತ್ತ ಬಂದಿದ್ದಾರೆ.

ಗಣರಾಜ್ಯೋತ್ಸವದ ದಿನ ಜನಿಸಿರುವ ಹೋರಿ

ಈ ಹೋರಿ ಜನೇವರಿ 26 ರಂದು ಜನಿಸಿದೆ.  ಹೀಗಾಗಿ ಆ ದಿನ ಎಲ್ಲ ಭಾರತೀಯರಿಗೂ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ವಿಶೇಷವಾಗಿದೆ.  ಹೀಗಾಗಿ ಪ್ರತಿ ವರ್ಷ ಈ ಹೋರಿಯ ಜನ್ಮದಿನ ಆಚರಿಸುವಾಗ ಸ್ನೇಹಿತರನ್ನು ಮತ್ತು ಸಂಬಂಧಿಕರನ್ನು ಕರೆಯಿಸಿ ಊಟ ಹಾಕಿಸುತ್ತಿದ್ದಾರೆ.  ಅಲ್ಲದೇ, ಡಿಜೆ ಹಚ್ಚಿ ಯುವಕರೊಂದಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಿದ್ದಾರೆ.

ರಾಜಾ ಹೋರಿಯ 5ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಲ್ಲಪ್ಪ ಗಾಜರೆ 5 ಕೆ ಜಿ ತೂಕದ ಕೇಕ್ ರೆಡಿ ಮಾಡಿಸಿದ್ದಾರೆ.  ಊರ ಜನರನ್ನ ಸೇರಿಸಿ ಬರ್ಥಡೇ ಆಚರಿಸಿದ್ದಾರೆ.  ಒಂದನೇ ವರ್ಷದ ಬರ್ಥಡೇಗೆ ಒಂದು ಕೆಜಿ, ಎರಡನೇ ವರ್ಷದ ಬರ್ಥಡೇಗೆ ಎರಡು, ಮೂರನೇ ವರ್ಷಕ್ಕೆ‌ ಮೂರು ಮತ್ತು ನಾಲ್ಕನೇ ವರ್ಷಕ್ಕೆ ನಾಲ್ಕು ಕೆಜಿ ಹೀಗೆ ಪ್ರತಿ ವರ್ಷ ಒಂದೊಂದು ಕೆಜಿ ಹೆಚ್ಚಿನ ತೂಕದ ಕೇಕ್ ತಯಾರಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

 

ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಬಸವಣ್ಣ ಎಂದೇ ರೈತರು ಕರೆಯುವ ಹೋರಿಯ ಬರ್ತಡೆ ಆಚರಿಸುವ ಮೂಲಕ ಮಣ್ಣಿನ ಮಗ ಗಮನ ಸೆಳೆದಿದ್ದಾನೆ.

Leave a Reply

ಹೊಸ ಪೋಸ್ಟ್‌