ವಿಜಯಪುರ: ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಫೆ. 7 ರಂದು ವಿಧಾನಸೌಧ ಚಲೋ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕರ್ನಾಟಕ ಸರಕಾರಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಜೈಕುಮಾರ ಎಚ್. ಎಸ್. ತಿಳಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ 7ನೇ ವೇತನ ಆಯೋಗವನ್ನು ವಿಳಂಬವಾಗಿ ರಚನೆ ಮಾಡಿದೆ. ಈವರೆಗೂ ಆಯೋಗ ಸರಕಾರಕ್ಕೆ ಶಿಫಾರಸ್ಸುಗಳನ್ನು ಸಲ್ಲಿಸುವ ಮತ್ತು ರಾಜ್ಯ ಸರಕಾರವು ಬಜೆಟ್ ನಲ್ಲಿ ಇದನ್ನು ಜಾರಿಗೊಳಿಸುವ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ಆರೋಪಿಸಿದರು.
ಇದರಿಂದ ಸರಕಾರಿ ನೌಕರರ ವಲಯದಲ್ಲಿ ಅಸಮಾಧಾನ ಹೆಚ್ಚಾಗುತ್ತಿದೆ. ಅಲ್ಲದೇ, ನೌಕರರಿಗೆ ವಾರ್ಷಿಕವಾಗಿ ರೂ. 15000 ಕೋ. ನಷ್ಟ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎನ್ ಪಿ ಎಸ್ ಪದ್ದತಿಯನ್ನು ರದ್ದುಪಡಿಸಿ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಒತ್ತಾಯಿಸಿ ರಾಜ್ಯ ಸರಕಾರಿ ಎನ್ ಪಿ ಎಸ್ ನೌಕರರು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ 14 ದಿನಗಳ ಕಾಲ ಬೃಹತ್ ಮಟ್ಟದಲ್ಲಿ ಮಾಡು ಇಲ್ಲವೇ ಮಡಿ ಹೆಸರಿನಲ್ಲಿ ರಾಜ್ಯ ಮಟ್ಟದ ಧರಣಿ ನಡೆಸಿತ್ತು. ಆದರೆ, ರಾಜ್ಯ ಸರಕಾರವು ನೌಕರರ ಹೋರಾಟವನ್ನುಗಂಭೀರವಾಗಿ ಪರಿಗಣಿಸಲಿಲ್ಲ. ಮಾತುಕತೆಗೂ ಆಹ್ವಾನಿಸಲಿಲ್ಲ. ಈ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಈಗ ಮತ್ತೆ ಹೋರಾಟ ನಡೆಸಲು ಮುಂದಾಗಿರುವುದಾಗಿ ಅವರು ತಿಳಿಸಿದರು.
ಕೇಂದ್ರ ಮತ್ತುರಾಜ್ಯ ಸರ್ಕಾರಗಳು 18 ತಿಂಗಳ ಬಾಕಿ ತುಟ್ಟಿಭತ್ಯೆಯನ್ನುಇದುವರೆಗೂ ಬಿಡುಗಡೆ ಮಾಡಿರುವುದಿಲ್ಲ. ಶಿಕ್ಷಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಇನ್ನಿತರ ಹಲವು ಇಲಾಖೆಗಳಲ್ಲಿ ಶಿಕ್ಷಕರ ವರ್ಗಾವಣೆ ಸಮಸ್ಯೆಗಳು ತಾಂಡವವಾಡುತ್ತಿವೆ. ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಶಿಕ್ಷಕರಿಗೆ ಪ್ರಾತಿನಿಧ್ಯ ನೀಡದಿರುವುದರಿಂದ ಅವರಿಗೆ ಮುಂಬಡ್ತಿಯೇ ಇಲ್ಲವಾಗಿದೆ. ಇವೆಲ್ಲ ಸಮಸ್ಯೆಗಳ ಬಗ್ಗೆ ಶಿಕ್ಷಕರು ಹಲವು ಮನವಿಗಳನ್ನು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ರಾಜ್ಯದ ಏಳು ಕೋಟಿ ಜನತೆಗೆ ಜಾರಿಯಾಗುವ ನಾನಾ ಯೋಜನೆಗಳನ್ನು ಜಾರಿಗೊಳಿಸಲು 7.73 ಲಕ್ಷ ಮಂಜೂರಾದ ಹುದ್ದೆಗಳ ಪೈಕಿ ಕೇವಲ 5.20 ಲಕ್ಷ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. ಇನ್ನೂ 2.80 ಲಕ್ಷ ಸರಕಾರಿ ಹುದ್ದೆಗಳು ಖಾಲಿ ಇವೆ. ವೇತನ ಸೌಲಭ್ಯಗಳ ನಷ್ಟ ಮತ್ತು ಖಾಲಿ ಹುದ್ದೆಗಳ ಹೊರೆ ನೌಕರರ ಮೇಲೆ ಬಿದ್ದಿದೆ. ರಾಜ್ಯದ ವಿದ್ಯಾವಂತ ಯುವಜನತೆ ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ. ಗುತ್ತಿಗೆ- ಹೊರಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡದೆ ಶೋಷಿಸಲಾಗುತ್ತಿದೆ. ಆಡಳಿತ ಸುಧಾರಣೆಗಳ ಆಯೋಗ-2ರ ಶಿಫಾರಸ್ಸುಗಳಲ್ಲಿ ಜೀವನ ಗುಣಮಟ್ಟ ಸುಧಾರಣೆ ಇತ್ಯಾದಿಗಳನ್ನು ಕೇಂದ್ರೀಕರಿಸುವ ಬದಲಿಗೆ ಇಲಾಖೆಗಳ ಖಾಸಗೀಕರಣ, ಇಲಾಖೆಗಳ ವಿಲೀನ ಮಾಡಿ ಹುದ್ದೆಗಳನ್ನು ರದ್ದು ಮತ್ತು ಹೊರಗುತ್ತಿಗೆ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ರಾಜ್ಯ ಸರಕಾರಿ ಒಕ್ಕೂಟವು ರಾಜ್ಯ ಸರಕಾರದ ನಾನಾ ಇಲಾಖಾ ಮತ್ತು ವೃಂದ ಸಂಘಗಳು ಒಡಗೂಡಿ ಈ ಬೇಡಿಕೆಗಳ ಈಡೇರಿಕೆಗಾಗಿ ಫೆ. 7 ರಂದು ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜೈಕುಮಾರ ಎಚ್. ಎಸ್. ತಿಳಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಚಂದ್ರಶೇಖರ ಲೇಂಡಿ, ಜಿಲ್ಲಾ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಸುರೇಶ ಜೀಬಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಇಳಕಲ, ಸಲಹಾ ಸಮಿತಿ ಅಧ್ಯಕ್ಷ ಆರ್. ಎಸ್. ಮೆಣಸಗಿ, ಎನ್ ಪಿ ಎಸ್ ಸಂಘದ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಡಲಗಿ, ಜಿ. ಬಿ. ಅಂಗಡಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.