ಸಮಾಜ ಕಲುಷಿತವಾಗಲು ನಾವೇ ಹೊಣೆಗಾರರು- ತಿಂಥಣಿ ಶ್ರೀಗಳ ಅಭಿಮತ

ವಿಜಯಪುರ: ಇಂದು ಸಮಾಜ ವಿವೇಕದ ಹಿಂದೆ ಹೋಗದೆ ಸಮೂಹ ದಾಂಗುಡಿ ಹಾಕುತ್ತ ಕಲುಷಿತಗೊಳ್ಳಲು ನಾವೇ ಹೊಣೆಗಾರರು ಎಂದು ತಿಂಥಣಿ ಕನಕ ಗುರುಪೀಠದ ಶ್ರೀ ಸಿದ್ಧರಾಮಾನಂದ ಮಹಾಸ್ವಾಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ದಿ. ಸಂಗಪ್ಪ ಕಮದಾಳ ಅವರ 26ನೆಯ ಪುಣ್ಯಸ್ಮರಣೆ ಅಂಗವಾಗಿ ಅವರ ಜೀವನ-ಸಾಧನೆ ಕುರಿತಾದ ದಾಂಗುಡಿ‌ ಎಂಬ ಸಂಸ್ಮರಣ ಗ್ರಂಥವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಇಂದು ಸರಕಾರಿ ನೌಕರರು, ಅಧಿಕಾರಿಗಳು ಸಾಮಾಜಿಕ ಕಾಳಜಿಯನ್ನು ಕಳೆದುಕೊಂಡು ಸ್ವಾರ್ಥಕ್ಕೋಸ್ಕರ ಕೆಲಸ ಮಾಡುತ್ತಿದ್ದಾರೆ. ಮನುಷ್ಯನಿಗೆ ಹಣ ಮುಖ್ಯ. ಆದರೆ ಅದರಿಂದ ನೆಮ್ಮದಿ ಕೆಡಬಾರದು. ಜೀವನದಲ್ಲಿ ಹಣ ಎಷ್ಟು ಮುಖ್ಯವೋ ನೆಮ್ಮದಿಯೂ ಅಷ್ಟೇ ಮುಖ್ಯ ಎಂದು ಅವರು ಹೇಳಿದರು.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಶಾಮೀಲಾಗಿ ಸರಕಾರದ ಆಡಳಿತ ಯಂತ್ರವನ್ನು ಹದಗೆಡಿಸಿದ್ದಾರೆ ರಾಜಕಾರಣಿಗಳ ಗುಲಾಮಗಿರಿ ಮಾಡುವ ಅಧಿಕಾರಿಗಳಿಗೆ ಪ್ರಮುಖ ಹುದ್ದೆಗಳನ್ನು ನೀಡಲಾಗುತ್ತಿದೆ ಎಂದು ಅವರು ವಿಷಾಧ ವ್ಯಕ್ತಪಡಿಸಿದರು.

ಸಂಗಪ್ಪ ಕಮದಾಳ ಅವರು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ಉನ್ನತ ಹುದ್ದೆಯಲ್ಲಿದ್ದರು. ಲೋಕಸೇವಾ ಆಯೋಗದ ಸದಸ್ಯರೂ ಆಗಿದ್ದರು. ಆದರೆ, ತಮ್ಮ ಅತ್ಯಂತ ಸರಳ, ಪ್ರಾಮಾಣಿಕ ಮತ್ತು ಮಾನವೀಯ ಮೌಲ್ಯಗಳೊಂದಿಗೆ ಬದುಕಿ, ಸಮಾಜಮುಖಿಯಾಗಿ ಸೇವೆ ಸಲ್ಲಿಸಿದ್ದರು. ಅವರ ನಡವಳಿಕೆ ಇಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದು ಶ್ರೀಗಳು ಹೇಳಿದರು.

ದಿ. ಸಂಗಪ್ಪ ಕಮದಾಳ ಜೀವನ-ಸಾಧನೆ ಕುರಿತಾದ ದಾಂಗುಡಿ‌ ಎಂಬ ಸಂಸ್ಮರಣ ಗ್ರಂಥವನ್ನು ಬಿಡುಗಡೆ ಮಾಡಿದ ಗಣ್ಯರು

ಸಾಹಿತಿ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಮಾತನಾಡಿ, ಕಮದಾಳ ಸಂಗಪ್ಪ ಅವರು ಸತ್ಯಶುದ್ಧ ಕಾಯಕ ಜೀವಿಯಾಗಿದ್ದರು. ಜೀವನ ಮೌಲ್ಯಗಳನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು ಎಂದು ಹೇಳಿದರು.

ಜಾತಿ, ಮತಗಳನ್ನು ಮೀರಿದ ಸಂಗಪ್ಪನವರ ಶೈಕ್ಷಣಿಕ ಆದರ್ಶಗಳ ಆತ್ಮವಲೋಕನ ನಡೆಯಬೇಕು ಎಂದ ಅವರು ಸಂಗಪ್ಪ ಕಮದಾಳ ಅವರು ಬರೀ ಕೆಲಸ ಮಾಡದೆ, ಆದರ್ಶಗಳೊಂದಿಗೆ ಶಿಕ್ಷಣವನ್ನು ರೂಪಿಸಿದರು. ಅವರ ಆಶಯದ ಭವಿಷ್ಯ ಕಟ್ಟುವ ಕೆಲಸ ನಡೆಬೇಕಿದೆ ಎಂದು ಹೇಳಿದರು.

ಯಾರನಾಳದ ಶ್ರೀ ಗುರುಸಂಗನಬಸವ ಶಿವಾಚಾರ್ಯರು, ಡೋಣೂರಿನ ಡಾ. ಸಿದ್ಧಲಿಂಗ ಶಿವಾಚಾರ್ಯರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.‌‌ ನಿವೃತ್ತ ಪ್ರಾಚಾರ್ಯ ಎಂ. ಎಂ. ಪಡಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಸಿದ್ಧರಾಮ ಮನಹಳ್ಳಿ ನುಡಿನಮನ ಸಲ್ಲಿಸಿದರು. ಧಾರವಾಡ ರಂಗಾಯಣ ನಿರ್ದೇಶಕಿ ಶಶಿಕಲಾ ಹುಡೇದ ಕೃತಿ ಪರಿಚಯ ಮಾಡಿದರು. ವಿ. ಎಸ್. ಹುಡೇದ ಸಂಪಾದಕೀಯ ಮಾತುಗಳನ್ನಾಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಶಿವಶಂಕರ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಣಾಧಿಕಾರಿ ರವಿ ಕೊಣ್ಣೂರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಬನಶ್ರೀ ಹತ್ತಿ ನಿರೂಪಿಸಿದರು.

ಈ ಸಂದರ್ಭದಲ್ಲಿ ಸುವರ್ಣಾ ಸಂಗಪ್ಪ ಕಮದಾಳ, ಸುಭಾಸ ಕಮದಾಳ, ಕೆ. ಆರ್. ಸಂಕದ, ಡಾ. ಎಸ್. ಎಲ್. ಲಕ್ಕಣ್ಣವರ, ವಿ. ಸಿ. ನಾಗಠಾಣ, ಡಾ. ಜೆ. ಎಸ್. ಪಾಟೀಲ, ಚೆನ್ನಪ್ಪ ಕಟ್ಟಿ, ಎನ್. ಜಿ. ಕರೂರ, ರಾಜು ಕಂಬಾಗಿ, ರವಿ ಕಿತ್ತೂರು, ಬಿ. ವೈ. ಕನ್ನೂರ, ಎಚ್. ಎಸ್. ಮಣೂರ, ಸಿ. ಎಸ್. ಕಣಕಾಲಮಠ, ಎಸ್. ಎಚ್. ಶಿರೂರು, ರವೀಂದ್ರ ಶಿರೂರು, ದ್ರಾಕ್ಷಾಯಿಣಿ ಹುಡೇದ, ಡಾ. ಎಂ. ಜಿ. ಬಿರಾದಾರ, ಡಾ. ಗುಂಡಪ್ಪ, ಡಾ. ಧರ್ಮರಾಯ ಇಂಗಳೆ, ಅನಿಲ ಹೊಸಮನಿ, ಶ್ರೀನಾಥ ಪೂಜಾರಿ, ಗೋಪಾಲ ಅಥರ್ಗಾ, ಚನ್ನು ಕಟ್ಟಿಮನಿ, ಬೀರಪ್ಪ ಜುಮನಾಳ, ಹುಡೇದ ಮತ್ತು ಕಮದಾಳ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌