ವಿಜಯಪುರ: ಫೆ.4 ಶನಿವಾರ ಮತ್ತು ಫೆ. 5 ರವಿವಾರ ನಗರದ ಕಂದಗಲ್ಲ ಹಣಮಂತರಾಯ ರಂಗಮಂದಿರದಲ್ಲಿ ನಡೆಯಲಿರುವ ಕಾರ್ಯನಿರತ ಪತ್ರಕರ್ತರ 37 ನೇ ರಾಜ್ಯ ಮಟ್ಟದ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ ನೀಡಿದ್ದಾರೆ.
ನಗರದಲ್ಲಿ ಸಮ್ಮೇಳನಕ್ಕೆ ಅಧಿಕೃತ ಆಹ್ವಾನ ನೀಡಲು ಆಗಮಿಸಿದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ನೇತ್ರತ್ವದ ನಿಯೋಗದೊಂದಿಗೆ ಅವರು ಮಾತನಾಡಿದರು.
ನಗರದಲ್ಲಿ ಈ ಬಾರಿ ರಾಜ್ಯ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿಜಯಪುರ ಜಿಲ್ಲೆ ಅತಿಥಿ ಸತ್ಕಾರಕ್ಕೆ ಹೆಸರಾದ ಜಿಲ್ಲೆ. ರಾಜ್ಯದ ನಾನಾ ಮೂಲೆಗಳಿಂದ ಆಗಮಿಸುವ ಸುಮಾರು 5000 ಜನ ಪತ್ರಕರ್ತರಿಗೆ ಉತ್ತಮ ವಸತಿ, ಊಟದ ವ್ಯವಸ್ಥೆಯಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಘಟಕದ ಪದಾಧಿಕಾರಿಗಳು ನಾನಾ ಸಮಿತಿಗಳನ್ನು ರಚಿಸಿ ಎಲ್ಲ ಸದಸ್ಯರ ಸಹಕಾರದೊಂದಿಗೆ ಕಳೆದ ಹಲವು ದಿನಗಳಿಂದ ಸಮ್ಮೇಳನದ ಯಶಸ್ಸಿಗಾಗಿ ಹಗಲಿರುಳು ಶ್ರಮಿಸುತ್ತಿರುವುದನ್ನು ಗಮನಿಸಿದ್ದೇನೆ. ತಮ್ಮೆಲ್ಲರ ಶ್ರಮ ಸಾರ್ಥಕವಾಗಲಿ ಎಂದು ಹಾರೈಸಿ ಅಗತ್ಯ ನೆರವು ನೀಡುವುದಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
ಈ ಸಂದರ್ಭದಲ್ಲಿ ಕಾನಿಪ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಸಮ್ಮೇಳನದ ಸಿದ್ಧತೆಗಳ ಕುರಿತು ಶಾಸಕರಿಗೆ ವಿವರಿಸಿದರು.
ಕಾನಿಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ವಿ. ಶಟಗಾರ, ಪತ್ರಕರ್ತರಾದ ಅಶೋಕ ಯಡಹಳ್ಳಿ, ಗುರುರಾಜ ಗದ್ದನಕೇರಿ, ಶಶಿಕಾಂತ ಮೆಂಡೆಗಾರ, ದೀಪಕ ಶಿಂತ್ರೆ ಉಪಸ್ಥಿತರಿದ್ದರು.