ವಿಜಯಪುರ: ಕಾಂಗ್ರೆಸ್ ಬಿಟ್ಟವರು ವಾಪಸ್ ಬಂದ್ರೆ ಅವರನ್ನು ಸೇರಿಸಿಕೊಳ್ಳುವ ಅಥವಾ ಸೇರಿಸಿಕೊಳ್ಳದಿರುವ ಕುರಿತು ಹೈಕಮಾಂಡ್ ನಿರ್ಧರಿಸಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿ ತೊರೆದು ಈಗ ಮರುಸೇರ್ಪಡೆಯಾಗಲು ಬಯಸುವ ನಾಯಕರಿಗೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರದ ಕುರಿತು ಅವರು ಪ್ರತಿಕ್ರಿಯೆ ನೀಡದಿರ.
ಯಾವ ನಾಯಕರು ಬೇಕು ಅಥವಾ ಬೇಡ ಎಂಬುದರ ಕುರಿತು ನಾವು ನಮ್ಮ ಅಭಿಪ್ರಾಯ ಹೇಳಬಹುದು. ಆದರೆ, ಈ ಕುರಿತು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಲಿದೆ. ಪಕ್ಷಕ್ಕೆ ಬರುವವರು ನಮ್ಮ ಪಕ್ಷಕ್ಕೆ ಅನಿವಾರ್ಯತೆಯಿದೆಯಾ ಅಥವಾ ಇಲ್ಲ ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ನಾವು ವಯಕ್ತಿಕವಾಗಿ ಬೇಕು, ಬೇಡ ಎಂಬ ಅಭಿಪ್ರಾಯವನ್ನು ಮಾತ್ರ ಹೇಳಬಹುದು. ವಲಸೆ ಹೋದವರ ಅವಶ್ಯಕತೆ ಪಕ್ಷಕ್ಕಿದ್ದರೆ ವಾಪಸ್ ತೆಗೆದುಕೊಳ್ಳಲು ಅವಕಾಶವಿದೆ ಎಂದು ಅವರು ತಿಳಿಸಿದರು.
ಉಮೇಶ ಕತ್ತಿ ಕುಟುಂಬ ಕಾಂಗ್ರೆಸ್ ಸೇರುವ ವದಂತಿ ವಿಚಾರ
ಮಾಜಿ ಸಚಿವ ದಿ. ಉಮೇಶ ಕತ್ತಿ ಅವರ ಕುಟುಂಬ ಕಾಂಗ್ರೆಸ್ ಸೇರುವ ವದಂತಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಸಿದ್ಧಾಂತಗಳನ್ನು ಒಪ್ಪಿ ಪಕ್ಷಕ್ಕೆ ಬಂದರೆ ಸ್ವಾಗತವಿದೆ ಎಂದು ಸತೀಶ ಜಾರಕಿಹೊಳಿ ತಿಳಿಸಿದರು.
ಯಮಕನಮರಡಿ ಕ್ಷೇತ್ರ ಬದಲಾವಣೆ ಇಲ್ಲ
ಮುಂಬರುವ ಚುನಾವೆಣೆಯಲ್ಲಿ ತಾವು ಕ್ಷೇತ್ರ ಬದಲಾವಣೆ ಮಾಡುವ ಕುರಿತು ಈಗಾಗಲೇ ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದ ಅವರು, ಕ್ಷೇತ್ರ ಬದಲಾವಣೆ ಮಾಡುವುದಿಲ್ಲ. ಯಮಕನಮರಡಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ಪುನರುಚ್ಚರಿಸಿದರು.
ಕಾಂಗ್ರೆಸ್‌ನಲ್ಲಿ ಡಿಕೆಶಿ-ಸಿದ್ದರಾಮಯ್ಯ ಕಿತ್ತಾಟ, ವಿಜಯೇಂದ್ರ ಆರೋಪ ವಿಚಾರ
ಕಾಂಗ್ರೆಸ್ಸಿನಲ್ಲಿ ಕಿತ್ತಾಟ ಮತ್ತು ಕಚ್ಚಾಟ ಹೆಚ್ಚಾಗಿದೆ. ಕೆ ಪಿ ಸಿ ಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಮತ್ತು ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ ಮಧ್ಯೆ ಬಹಳ ಕಿತ್ತಾಟ ನಡೆಯುತ್ತಿದೆ ಎೞದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲೂ ಕಿತ್ತಾಟ ಇದೆ. ಬಿಜೆಪಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಹೇಗೆ ಬಳಸಿಕೊಳುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಬಿಜೆಪಿಯಲ್ಲೂ ಸಮಸ್ಯೆ ಇದೆ. ಎಲ್ಲ ಪಕ್ಷದಲ್ಲು ಸಮಸ್ಯೆ ಇರುವುದು ಸ್ವಾಭಾವಿಕ ಎಂದು ಕೆ ಪಿ ಸಿ ಸಿ ಕಾರ್ಯಾಧ್ಯಕ್ಷರು ತಿಳಿಸಿದರು.
ಮುಂಬರುವ ಚುನಾವಣೆಲ್ಲಿ ಪ್ರಸ್ತಾಪಿಸಬೇಕಿರುವ ವಿಷಯಗಳ ವಿಚಾರ
ಮುಂಬರುವ ಚುನಾವಣೆಯಲ್ಲಿ ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಕೇಂದ್ರದಲ್ಲಿ ಯುಪಿಎ ಸರಕಾರ ಮಾಡಿರುವ ಅಭಿವೃದ್ಧಿ ಅಜೆಂಡಾ ಇಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.
ಬುಧವಾರ ಕೇಂದ್ರ ಬಜೆಟ್ ವಿಚಾರ
ಕೇಂದ್ರ ಸರಕಾರ ಫೆ. 1 ರಂದು ಬಜೆಟ್ ಮಂಡಿಸಲಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಬಜೆಟ್ ಹತ್ತರಲ್ಲಿ ಹನ್ನೊಂದು ಎಂದು ವ್ಯಂಗ್ಯವಾಡಿದರು.
ಸಿಡಿ ಪ್ರಕರಣ
ರಾಜ್ಯದಲ್ಲಿ ಮತ್ತೆ ಸಿಡಿ ಪ್ರಕರಣ ಸದ್ದು ಮಾಡುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನೀವು ಅವರನ್ನೇ ಕೇಳಿ. ಯಾರ ಕಡೆಗೆ ಸಿಡಿ ಇದೆ ಅಲ್ಲಿಯೆ ಕೇಳಿ ಎಂದು ಹೇಳಿದರು.
ಸಿಡಿ ವಿಚಾರ ಸಿಬಿಐಗೆ ನೀಡಬೇಕು ಎನ್ನುವ ವಿಚಾರದ ಕುರಿತು ಪ್ರಕರಣ ಸಿಬಿಐಗೆ ಕೊಡುವ ವಿಚಾರದ ಕುರಿತು ಕೇಳಿದ ಪ್ರಶ್ನೆಯ ಬಗ್ಗೆ ಸತೀಶ ಜಾರಕಿಹೊಳಿ, ಸಿಬಿಐ ತನಿಖೆ ಪ್ರಶ್ನೆ ಉದ್ಭವಿಸಲ್ಲ. ಇದು ಇಬ್ಬರ ವ್ಯಕ್ತಿಗಳ ನಡುವಿನ ಯುದ್ಧ. ಕಾನೂನು ಏನು ಹೇಳುತ್ತದೆ ಆ ರೀತಿ ಮಾಡಬಹುದು ನಾನು ನಿನ್ನೆ ಕೂಡ ಬೆಳಗಾವಿಯಲ್ಲಿ ಹೇಳಿದ್ದೇನೆ ಇಬ್ಬರ ನಡುವಿನ ಸಮಸ್ಯೆಗ ಅವರೇ ಉತ್ತರ ನೀಡಿದರೆ ಒಳ್ಳೆಯದು. ಯಾರ ಕಡೆಗೆ ಏನಿದೆ ಎನ್ನುವುದು ನಮಗೆ ಗೊತ್ತಿಲ್ಲ. ನಾವೇನು ಹೇಳಲು ಆಗುವುದಿಲ್ಲ. ಕಾನೂನಿನಲ್ಲಿ ಎಲ್ಲರಿಗೂ ಅವಕಾಶವಿದೆ. ಕಾನೂನು ಪ್ರಕಾರ ಅವರು ಮಾಡಬಹುದು ಎಂದು ಸತೀಶ ಜಾರಕಿಹೊಳಿ ಪರೋಕ್ಷವಾಗಿ ಸಿಬಿಐ ತನಿಖೆ ನಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸೋಮನಾಥ ಕಳ್ಳಿಮನಿ, ಶ್ರೀನಾಥ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.