ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯ ಜನರ ಹೃದಯ ವೈಶಾಲ್ಯತೆ ಇತರರಿಗೂ ಮಾದರಿಯಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ವಿಜಯಪುರದಲ್ಲಿ ನಡೆಯುತ್ತಿರುವ ಕಾರ್ಯನಿರತ ಪತ್ರಕರ್ತರ ಸಂಘದ 37ನೇ ರಾಜ್ಯ ಮಟ್ಟದ ಸಮ್ಮೇಳನ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆ ಜನ ದಾನ, ಧರ್ಮ, ಮಾನವೀಯ ಮೌಲ್ಯಗಳ ಆಗರ. ವಿಜಯಪುರ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು, ಬಂಥನಾಳ ಶಿವಯೋಗಿಗಳು ಜನಿಸಿದ ಪುಣ್ಯ ಭೂಮಿ. ಬಸವನಾಡಿನ ಜನರ ಹೃದಯ ವೈಶಾಲ್ಯತೆ ಯಾವ ರೀತಿ ಎಂದರೆ ಮಿನಿಸ್ಟರ್ ಅಷ್ಟೇ ಅಲ್ಲ ಡ್ರೈವರ್ ಸಾಹೇಬರು, ಗನ್ ಮ್ಯಾನ್ ಸಾಹೇಬರು ಊಟ ಮಾಡಿದ್ದಾರೆಯೇ? ಎಂದು ಕೇಳುವ ಔದಾರ್ಯತೆ, ಸೌಜನ್ಯತೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ನೀಡಿದ ಅನುದಾನದಿಂದ ವಿಜಯಪುರ ನಗರ ಸ್ಮಾರ್ಟ್ ಸಿಟಿಯಾಗಿ ರೂಪುಗೊಳ್ಳುತ್ತಿದೆ ಎಂದು ಅವರು ತಿಳಿಸಿದರು.
ಇತ್ತೀಚಿಗೆ ಯೂಟ್ಯೂಬ್ ಚಾನೆಲ್ ಗಳ ಹಾವಳಿ ಅಧಿಕವಾಗಿದೆ. ಕೆಲವರು ಪ್ರೆಸ್ ಎಂದು ಬರೆದಿರುವ ಪಾಸ್ ಇಟ್ಟುಕೊಂಡು ಕಚೇರಿಗಳಿಗೆ ಅಲೆದಾಡಿ, ಶಾಸಕರು, ಸಂಸದರನ್ನು ಹೆದರಿಸಿ ಬ್ಲ್ಯಾಕ್ ಮೇಲ್ ಮಾಡುವ ತಂಡಗಳೂ ಇವೆ. ಜಾಕೆಟ್ ಹಾಕಿಕೊಂಡು ಕೆಲವರು ತಾವೇ ನಿಂತು ವೋಟ್ ಹಾಕಿದಂತೆ ನಿರ್ಣಯ ಮಂಡಿಸುತ್ತಾರೆ. ಅವರಿಗೆ ಏನೂ ಬರುವುದಿಲ್ಲ. ಆದರೆ, ದಿನಪತ್ರಿಕೆಗಳು ಇಂದಿಗೂ ವಿಶ್ವಾಸಾರ್ಹತೆ ಕಾಯ್ದುಕೊಂಡಿವೆ. ಈಗ ಮಾಧ್ಯಮ ಲೋಕ ಪುನ: ವಿಶ್ವಾಸಾರ್ಹತೆಯನ್ನು ಸ್ಥಾಪಿಸಿಕೊಳ್ಳಲು ಈ ಸಮ್ಮೇಳನ ವೇದಿಕೆಯಾಗಲಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಗೋವಿಂದ ಕಾರಜೋಳ, ಸಿ. ಸಿ. ಪಾಟೀಲ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಎ. ಎಸ್. ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ ಸಾಸನೂರ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ರಾಜ್ಯ ಸಾವಯವ ಬೀಜ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ, ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ, ಬಿ. ವಿ. ಮಲ್ಲಿಕಾರ್ಜುನ, ಸಂಗಮೇಶ ಟಿ. ಚೂರಿ, ಮೋಹನ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.