ಹಳಕಟ್ಟಿ ಅವರ ತ್ಯಾಗ, ಬದ್ಧತೆ ಗುಣವನ್ನು ಪತ್ರಕರ್ತರು ಅಳವಡಿಸಿಕೊಳ್ಳಬೇಕು

ವಿಜಯಪುರ: ಪತ್ರಕರ್ತ, ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ತ್ಯಾಗ, ಬದ್ಧತೆ ಗುಣವನ್ನು ಪತ್ರಕರ್ತರು ಅಳವಡಿಸಿಕೊಳ್ಳಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಕರೆ ನೀಡಿದ್ದಾರೆ.

ವಿಜಯಪುರ ನಗರದ ಕಂದಗಲ್ ಶ್ರೀ ಹಣಮಂತರಾಯ ರಂಗಮಂದಿರದಲ್ಲಿ ನಡೆದ 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದ ಸಮಾರೋಪ ಸಮಾರಂಭದ ಪತ್ರಕರ್ತರಿಗೆ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದರು.

ಡಾ. ಫ. ಗು. ಹಳಕಟ್ಟಿ ಅವರು ಶಿವಾನುಭವ, ನವ ಕರ್ನಾಟಕ ಮಾಸ ಪತ್ರಿಕೆ ಆರಂಭಿಸಿ, ಮನೆಯನ್ನು ಮಾರಾಟ ಮಾಡಿ ಹಿತಚಿಂತಕ ಮುದ್ರಣಾಲಯ ತೆರೆದರು.‌‌ ಆ ಮೂಲಕ ಶರಣರ ವಚನ ಸಾಹಿತ್ಯವನ್ನು ಬೆಳಕಿಗೆ ತರುವ ಜೊತೆಗೆ ಪತ್ರಿಕೋದ್ಯಮಕ್ಕೂ ಕೊಡುಗೆ ನೀಡಿದ ಶ್ರೇಯಸ್ಸು ಡಾ. ಫ.‌ ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು.

ಮೈಸೂರು ಮಹಾರಾಜರು ಡಾ. ಹಳಕಟ್ಟಿ ಅವರಿಗೆ ಏನು ಬೇಕು ಕೇಳಿ ಎಂದಾಗ, ಮುದ್ರಣಕ್ಕೆ ಪೂರಕವಾದ ಮೊಳೆಗಳನ್ನು ಕೊಡಿ ಎಂದು ಕೇಳಿದ್ದರು.‌ ಈ ಹಳಕಟ್ಟಿ ಅವರ ಪ್ರಾಮಾಣಿಕತೆಯನ್ನು ಮಹಾರಾಜರು ಅಪಾರವಾಗಿ ಮೆಚ್ಚಿಕೊಂಡಿದ್ದರು. ಡಾ. ಫ. ಗು. ಹಳಕಟ್ಟಿ ಅವರ ತ್ಯಾಗ, ಬದ್ಧತೆಯನ್ನು ಪತ್ರಕರ್ತರು ಮೈಗೂಡಿಸಿಕೊಳ್ಳಬೇಕು. ಎಲ್ಲ ವಲಯಗಳಲ್ಲಿ ಕೆಟ್ಟವರು, ಒಳ್ಳೆಯವರು ಇದ್ದಾರೆ. ಪತ್ರಿಕೋದ್ಯಮದಲ್ಲಿ ಒಳ್ಳೆಯವರೇ ಅಧಿಕ ಜನರಿದ್ದಾರೆ. ಆದರೆ ವ್ಯವಸ್ಥೆಯಿಂದಾಗಿ ಪತ್ರಿಕೋದ್ಯಮ ಮಾಲೀಕರ ಸಾರ್ವಭೌಮತ್ವ ಅಧಿಕವಾಗಿದೆ. ಮಾಲೀಕರ ಅಧೀನದಲ್ಲಿದ್ದರೂ ಸಹ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳದೇ ಮುನ್ನಡೆಯಬೇಕಾದ ಸವಾಲು ಪತ್ರಕರ್ತರ ಮೇಲಿದೆ. ಅನೇಕ ಪತ್ರಕರ್ತರು ಈ ಸವಾಲನ್ನು ಸಮರ್ಥವಾಗಿ ನಿಭಾಯಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರು ಹೇಳಿದರು.

ಶನಿವಾರ ನಡೆದ ಸಮ್ಮೇಳನ ಉದ್ಘಾಟನೆ ಸಮಾರಂಭದಲ್ಲಿ ಜವಾಬ್ದಾರಿಯುವ ಸಚಿವರೊಬ್ಬರು ಕಾಂಗ್ರೆಸ್ ಪಕ್ಷದ ಬಗ್ಗೆ ವಿಚಾರವೊಂದನ್ನು ಪ್ರಸ್ತಾಪಿಸಿದ್ದರು. ಆದರೆ ಆ ವಿಷಯ ಪ್ರಸ್ತಾಪಕ್ಕೆ ಈ ವೇದಿಕೆ ಸೂಕ್ತವಲ್ಲ ಎಂದು ಎಂ.‌ ಬಿ.‌ ಪಾಟೀಲ ಅವರು, ಪರೋಕ್ಷವಾಗಿ ಕಾರಜೋಳ ನಡೆಯನ್ನು ಟೀಕಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಮತ್ತು ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಮಾಜಿ ಶಾಸಕ ಡಾ. ಮಕ್ಬೂಲ ಬಾಗವಾನ, ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಮೊಹ್ಮದ್‌ ರಫೀಕ್ ಟಪಾಲ್ ಎಂಜಿನಿಯರ್, ಐಯುಡಬ್ಲೂಜೆ ಅಧ್ಯಕ್ಷ ಬಿ. ವಿ.  ಮಲ್ಲಿಕಾರ್ಜುನಯ್ಯ, ಪ್ರಧಾನ ಕಾರ್ಯದರ್ಶಿ ಜೆ. ಸಿ. ಲೋಕೇಶ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪ್ರಕಾಶ ಶೆಟ್ಟಿ, ಕಾನಿಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ವಿ. ಶಟಗಾರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ. ಬಿ. ವಡವಡಗಿ, ಜಿಲ್ಲಾ ಉಪಾಧ್ಯಕ್ಷರಾದ ಇಂದುಶೇಖರ ಮಣೂರ, ಪ್ರಕಾಶ ಬೆನ್ನೂರ, ಫಿರೋಸ್ ರೋಜಿಂದಾರ ಮುಂತಾದವರು ಉಪಸ್ಥಿತರಿದ್ದರು.

ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಪ್ರಾಸ್ತಾವಿಕವಾಗಿ ಮಾತನಾಡಿದರು.  ಕಾನಿಪ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಕಾರ್ಯಕ್ರಮ ನಿರ್ವಹಿಸಿದರು.  ಸಾಧಕ ಪತ್ರಕರ್ತರಿಗೆ ನಾನಾ ಪ್ರಶಸ್ತಿಗಳನ್ನು ಪ್ರಧಾನ ಮಾಡಿ ಗೌರವಿಸಲಾಯಿತು.

Leave a Reply

ಹೊಸ ಪೋಸ್ಟ್‌