ವಿಜಯಪುರ: ನಾವೆಲ್ಲ ಜನತಾ ಪರಿವಾರ ಬಿಟ್ಟು ಪಕ್ಷ ಸೇರಿರದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನೂ ಸೇರಿದಂತೆ ಹಲವಾರು ಜನ ಜನತಾ ದಳದಲ್ಲಿ ಮುಂದುವರೆದಿದ್ದರೆ ಒಂದು ಸಲ ಕಾಂಗ್ರೆಸ್ ಮತ್ತೋಂದು ಸಲ ಜನತಾ ದಳ ಅಧಿಕಾರಕ್ಕೆ ಬರುತ್ತಿದ್ದವು. ಬಿಜೆಪಿ ಅಧಿಕಾರಕ್ಕೆ ಬರುತ್ತಿರಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.
ದಲಿತ ಸಿಎಂ ವಿಚಾರ
ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿಯಾಗಬೇಕು ಎಂದು ನಾನು ಸಾಯುವವರೆಗೂ ಬೊಬ್ಬೆ ಹೊಡೆಯುತ್ತೇನೆ. ನಾನು ಜೀವನದಲ್ಲಿ ಯಾವುದಕ್ಕೂ ಆಸೆ ಇಟ್ಟಿಲ್ಲ. ಬೊಬ್ಬೆ ಹೊಡೆಯುತ್ತೇನೆ. ನನ್ನ ಜೀವನದಲ್ಲಿ ಯಾವುದಕ್ಕೂ ಆಸೆ ಇಟ್ಟಿಲ್ಲ. ಯಾವುದಕ್ಕೂ ಬೆನ್ನು ಹತ್ತಿಲ್ಲ. ಬಂದರೆ ಚಾರಾಣೆ. ಹೋದರೆ ಬಾರಾಣೆ. 45 ವರ್ಷಗಳಿಂದ ನಿರಂತರವಾಗಿ ರಾಜಕಾರಣ ಮಾಡಿದ್ದೇನೆ. ಜನ ನನ್ನನ್ನು ನೆಚ್ಚಿಕೊಂಡಿದ್ದಾರೆ ಎಂದು ಹೇಳುವುದಿಲ್ಲ. ನನಗೆ ಮತ ಹಾಕಿದ್ದಾರೆ. ಚಿಕ್ಕೋಡಿ ಮತ ಹಾಕಿದ್ದಾರೆ. ಇಲ್ಲಿಯೂ ಮತ ಹಾಕಿದ್ದಾರೆ. ಬಿಜೆಪಿಯಲ್ಲಿರುವ ಹಿರಿಯರಿಗೆ ರಮೇಶ ಜಿಗಜಿಣಗಿ ಈ ಪಕ್ಷಕ್ಕೆ ಏನು ನೀಡಿದ್ದಾರೆ ಎಂಬುದು ಗೊತ್ತಿದೆ. ಆದರೆ, ಈ ಚೋಟಾ ಮೋಟಾ ಲೀಡರ್ ಅಂದರೆ ಸಣ್ಣಪುಟ್ಟವರು ಇವರ ಕೊಡುಗೆ ಏನು ಎನ್ನುತ್ತಾರೆ. ಇಷ್ಟೇಲ್ಲ ಮಾಡಿ ಒಂದುಲ ಕ್ಷ ಕೋಟಿ ಹಣ ತಂದರೂ ಇವರ ಕೊಡುಗೆ ಏನು ಎಂದು ಕೇಳುತ್ತಾರೆ. ರಾಜ್ಯದಲ್ಲಿರುವ ಎರಡನೇ ಹಂತದ ಹಿರಿಯ ನಾಯಕರು ರಮೇಶ ಜಿಗಜಿಣಗಿ ಕೊಡುಗೆ ಏನು ಎಂದು ಕೇಳುವುದು ಬಹಳ ಸಣ್ಣತನವಾಗುತ್ತದೆ ಎಂದು ಅವರು ಖಾರವಾಗಿ ಪ್ರತಿಕ್ರಿಯೆ ನೀಡಿದರು.
ಆದರೆ, ದೇವರ ನನ್ನನ್ನು ಕೈ ಬಿಟ್ಟಿಲ್ಲ. ಯಾವತ್ತೂ ಕೈ ಹಿಡಿದಿದ್ದಾನೆ. ಯಾವ ಚಲುವ ಏನು ಬೇಕಾದರೂ ಮಾಡಲಿ. ನನಗೆ ಏನೂ ಆಗುವುದಿಲ್ಲ. ದೇವರ ರಕ್ಷಣೆಯಿದೆ. ದೇವರು ನನಗೆ ತುಂಬಾ ಶಕ್ತಿಯನ್ನು ಕೊಟ್ಟಿದ್ದಾನೆ. ಆನೆಯಂಥ ಶಕ್ತಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಹೇನಿನಂತೆ ಸಣ್ಣವನಂತೆ ಕೆಲಸ ಮಾಡುತ್ತಿದ್ದಾನೆ. ಬಸವಣ್ಣನವರ ಹೇಳಿಕೆಯಂತೆ ಎನಗಿಂತ ಕಿರಿಯರಿಲ್ಲ ಎಂದು ಜೀವನ ಸಾಗಿಸುತ್ತಿದ್ದೇನೆ.
2004ರಲ್ಲಿ ರಾಮಷ್ಣ ಹೆಗಡೆ ತೀರಿ ಹೊದ ಮೇಲೆ ಬಿಜೆಪಿಗೆ ಬಂದ ಮೊಟ್ಟ ಮೊದಲ ಮನುಷ್ಯ ನಾನು. ಅಂದು ಇಡೀ ರಾಜ್ಯದ ನಮ್ಮ ದಲಿತರು ಬಿಜೆಪಿಗೆ ಯಾಕೆ ಹೋಗುತ್ತೀರಿ? ಅದು ಜಾತಿವಾದಿ ಪಕ್ಷ ಎಂದು ನನ್ನನ್ನು ತೆಗಳಿದರು. ಆದರೂ ನಾನು ನಾನು ಬಿಜೆಪಿ ಸೇರಿದ್ದೇನೆ. ಅಲ್ಲಿಯವರೆಗೆ ದಲಿತರಷ್ಟೇ ಅಲ್ಲ. ಯಾವ ಲಿಂಗಾಯಿತರೂ ಬಿಜೆಪಿ ಸೇರಿರಲಿಲ್ಲ. ಎಲ್ಲರೂ ನನ್ನ ಕಡೆ ನೋಡುತ್ತ ಕುಳಿತಿದ್ದರು. ಅಂದು ನಾವೆಲ್ಲ ಜನತಾ ಪರಿವಾರದಿಂದ ಬಂದವರು. ಅಂದಿನ ದಿನಗಳಲ್ಲಿ ಹೆಗಡೆ, ಪಟೇಲರ ಜೊತೆ ಶಿಷ್ಯನಾಗಿ ಬೆಳೆದವನು ಸುಮ್ಮನಿದ್ದಾನೆ. ನಾವೂ ಎಲ್ಲಿಗೂ ಹೋಗುವುದ ಬೇಡ ಎಂದು ಇಡೀ ನಮ್ಮ ಜನತಾ ಪರಿವಾರ ಸುಮ್ಮನಿತ್ತು. ಅಂದು ಎಲ್ಲವನ್ನು ಮೀರಿ ನಾನು ಬಿಜೆಪಿಗೆ ಸೇರಿದ್ದು ದೊಡ್ಡ ಕೊಡುಗೆ ಅಲ್ವಾ? ಅಂದು ಒಂದು ವೇಳೆ ನಾನು ದೇವೇಗೌಡರ ಪಕ್ಷ ಸೇರಿದ್ದರೆ ಇಂದು ಬಿಜೆಪಿ ಅಧಿಕಾರಕ್ಕೆ ಬರುತ್ತಿತ್ತಾ? ಹೆಗಡೆ, ಪಟೇಲ್ ಅವರು ಬದುಕಿದ್ದಾಗ ಯಡಿಯೂರಪ್ಪ, ಅನಂತಕುಮಾರ, ಸದಾನಂದಗೌಡ, ಕೆ. ಎಸ್. ಈಶ್ವರಪ್ಪ ರಾಜ್ಯಾದ್ಯಂತ ತಿರುಗಾಡಿ ಚಪ್ಪಲಿ, ಅಂಗಿ ಹರಿದುಕೊಂಡಿದ್ದರೂ ಯಾಕೆ ಅಧಿಕಾರಕ್ಕೆ ಬರಲಿಲ್ಲ? 2004ರಲ್ಲಿ ಜನತಾ ಪರಿವಾದವರು ನಾವು ಬಿಜೆಪಿ ಸೇರಿದಾಗ ಪಕ್ಷ ಅಧಿಕಾರಕ್ಕೆ ಬಂತು ಎಂದು ಸಂಸದರು ತಿಳಿಸಿದರು.
ಸರಕಾರದಿಂದ ಸ್ವಲ್ಪ ದೂರವಿದ್ದೇನೆ
ಹೌದು ನಾನು ಸ್ವಲ್ಪ ದೂರವಿದ್ದೇನೆ. ನನಗೆ ನನ್ನ ಪಕ್ಷದ ಬಗ್ಗೆ ಅಭಿಮಾನವಿದೆ. ಒಂದು ದಿನವೂ ಪಕ್ಷದ ಬಗ್ಗೆ ಕೆಟ್ಟ ಅಭಿಪ್ರಾಯ, ಕೆಟ್ಟ ಮಾತನ್ನು ಆಡಿಲ್ಲ. ನನ್ನ ಸಣ್ಣಪುಟ್ಟ ಯಾವುದೂ ಕೆಲಸಗಳು ಆಗಿಲ್ಲ. ಸರಕಾರ ಸರಿಯಾಗಿ ನಡೆಿದಿಲ್ಲ ಎಂಬ ಕಾರಣಕ್ಕೆ ಸ್ವಲ್ಪ ದೂರವಿದ್ದೇನೆ ಎಂದು ತಿಳಿಸಿದ ಅವರು, ಈ ಹಿಂದೆ ನಮ್ಮನ್ನು ಮರೆತಿದ್ದೀರಾ ಎಂದು ಯಡಿಯೂರಪ್ಪ ಮತ್ತು ಅನಂತಕುಮಾರ ಅವರನ್ನೂ ಕೇಳಿದ್ದೇನೆ. ಆಗ, ಅವರೆಲ್ಲರೂ ಹೆಗಡೆಯವರ ಬಳಿಕ ಜನತಾ ಪರಿವಾರ ಕೈ ಜೋಡಿಸಿದ್ದಕ್ಕಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಅವರು ಹೇಳಿದ್ದಾರೆ ಎಂದು ರಮೇಶ ಜಿಗಜಿಣಗಿ ತಿಳಿಸಿದರು.
ಚುನಾವಣೆಯ ಬಗ್ಗೆ ಏನನ್ನೂ ಹೇಳುವುದಿಲ್ಲ
ಮುಂಬರುವ ಚುನಾವಣೆಯ ಬಗ್ಗೆ ಈಗ ಏನೂ ಹೇಳ್ಲಲ. ಆದರೆ, ನನ್ನ ಮನಸ್ಸು, ಅಂತರಾಳದಲ್ಲಿ ಏನಿದೆ ಅದೇ ಆಗುತ್ತೆ. ಅದನ್ನು ಹೇಳಲು ಬರಲ್ಲ. ಪಕ್ಷದವರು ಹೇಳಿದರೆ ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎಂದು ಅವರು ತಿಳಿಸಿದರು. .
ಎಚ್. ಡಿ. ಕುಮಾರಸ್ವಾಮಿ ಅವರಿಂದ ಜಾತಿ ನಿಂದನೆ ಆರೋಪ ವಿಚಾರ
ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಬ್ರಾಹ್ಣಣರ ಕುರಿತು ಮಾಡಿರುವ ಟೇಕೆಯ ಬಗ್ಗೆ ಪ್ರತಿಕ್ರಿಯೆ ಸಂಸದರು, ಅವರು ಪ್ರತಿಪಕ್ಷದರಾಗಿದ್ದಾರೆ. ಈಗ ಅವರು ಹೇಳಿದ್ದಾರೆ. ಯಾರೇ ಇರಲಿ. ಜಾತಿಗಳ ಬಗ್ಗೆ ನಿಂದನೆ ಮಾಡಬಾರದು. ಇದು ಬೇಕಿಲ್ಲ. ಜಾತಿ ನಿಂದನೆ ಅವರವರ ಎತ್ತರಕ್ಕೆ ಸಲ್ಲುವುದಲ್ಲ ಎಂದು ತಿಳಿಸಿದರು.
ಸಂಸದರ ಆಸ್ತಿ ಹೆಚ್ಚಳ ವಿಚಾರ
2008 ರಿಂದ 2019 ಅವಧಿಯಲ್ಲಿ ಸತತ ಮೂರು ಬಾರಿ ಆಯ್ಕೆಯಾದ 71 ಜನ ಸಂಸದರ ಆಸ್ತಿ ಹೆಚ್ಚಳವಾಗಿದೆ. ಇದರಲ್ಲಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಆಸ್ತಿ ಎಲ್ಲರಿಗಿಂತ ಹೆಚ್ಚು ಆಗಿರುವ ಮಾಹಿತಿಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಲಂಚ ತಿನ್ನದೇ ನನ್ನ ಆಸ್ತಿ ಹೆಚ್ಚಾಗಿದೆ. ನನ್ನ ಆಸ್ತಿಗಳ ಕಿಮ್ಮತ್ತು ಹೆಚ್ಚಾಗಿದೆ. ನಾನು ಬಹಳ ಹಿಂದೆ ಪ್ರತಿ ಎಕರೆಗೆ ರೂ. 4000 ದಂತೆ 150 ಎಕರೆ ಭೂಮಿ ಖರೀದಿಸಿದ್ದೆ. ಈಗ ಅದರ ಬೆಲೆ ಹೆಚ್ಚಾಗಿದೆ. ಅದರ, ಮೌಲ್ಯ ಈಗ ಹೆಚ್ಚಾಗಿದೆ. ನಾನೇನು ರಸ್ತೆ ಅಗೆದು ಹಣ ಮಾಡಿಲ್ಲ. ಯಾರ ಕಿಸೆಯಲ್ಲೂ ಕೈ ಹಾಕಿಲ್ಲ. ನಾನು ವಿಚಿತ್ರ ವ್ಯಕ್ತಿಯಾಗಿದ್ದೇನೆ. ನಿಮಗಾರಿಗೂ ಗೊತ್ತಾಗುವುದಿಲ್ಲ ಎಂದು ಖಡಕ್ಕಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ ಮುಂತಾದವರು ಉಪಸ್ಥಿತರಿದ್ದರು.