ವಿಜಯಪುರ: ಪತ್ರಕರ್ತರ ಛಲ ಪ್ರಜಾಪ್ರಭುತ್ವಕ್ಕೆ ಬಲವಿದ್ದಂತೆ. ಆದರೆ ಈ ಛಲ ಪ್ರಜಾಪ್ರಭುತ್ವಕ್ಕೆ ಮಾರಕವಾಗಬಾರದು ಎಂದು ಮಾಜಿ ಸಚಿವ ಮತ್ತು ಬಸವನ ಬಾಗೇವಾಡಿ ಶಾಸಕ ಶಿವಾನಂದ ಎಸ್. ಪಾಟೀಲ ಹೇಳಿದ್ದಾರೆ.
ವಿಜಯಪುರದಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ ಸಂಘದ 37ನೇ ರಾಜ್ಯ ಮಟ್ಟದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪತ್ರಕರ್ತರು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮತ್ತು ಸಮಾಜದ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಸಮಯೋಚಿತ ನಿರ್ಧಾರಗಳ ಮೂಲಕ ವರದಿ ಮಾಡಬೇಕು. ಪ್ರಜಾಪ್ರಭುತ್ವ ರಕ್ಷಣೆಗೆ ಎಲ್ಲ ರಂಗಗಳು ಕೈ ಜೋಡಿಸಿ ಕಾರ್ಯ ನಿರ್ವಹಣೆ ಮಾಡಿದಾಗ ಮಾತ್ರ ದೇಶ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.
ರಾಜಕೀಯ ವ್ಯವಸ್ಥೆಯಲ್ಲಿ ಒಂದೇ ಪಕ್ಷದಲ್ಲಿರುವ ಜನಪ್ರತಿನಿಧಿಗಳ ಮಧ್ಯೆ ಭಿನ್ನಾಭಿಪ್ರಾಯಗಳಿರುತ್ತವೆ. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆಯೂ ಭಿನ್ನಾಭಿಪ್ರಾಯಗಳಿರುತ್ತವೆ. ಹೀಗಾಗಿ ರಾಜಕಾರಣಿಗಳು ತಮ್ಮ ರಾಜಕೀಯ ಕಾರಣಗಳಿಗಾಗಿ ಭಿನ್ನಾಭಿಪ್ರಾಯ ಹೊಂದಿರುತ್ತೇವೆ. ಆದರೆ, ಇಂಥ ಸಮ್ಮೇಳನಗಳಲ್ಲಿ ಉದ್ಘಾಟನೆ ಸಮಾರಂಭಕ್ಕೆ ಒಂದು ಪಕ್ಷದವರನ್ನು ಆಹ್ವಾನಿಸುವುದು, ಸಮಾರೋಪ ಸಮಾರಂಭಕ್ಕೆ ಮತ್ತೋಂದು ಪಕ್ಷದವರನ್ನು ಆಮಂತ್ರಿಸುವುದು ಸರಿಯಲ್ಲ. ಕಡೆ ಪಕ್ಷ ಸಮಾಜ ತಿದ್ದುವ ಜವಾಬ್ದಾರಿ ಇರುವ ತಾವಾದರೂ ಇಂಥ ಕಾರ್ಯಕ್ರಮಗಳಲ್ಲಿ ಒಂದು ಸಮಾರಂಭದಲ್ಲಿ ಒಂದೇ ಪಕ್ಷದವರನ್ನು ಕರೆಯುವ ಬದಲು ಬೇರೆ ಬೇರೆ ಪಕ್ಷಗಳ ನಾಯಕರನ್ನು ಆಹ್ವಾನಿಸಬೇಕು. ಇದರಿಂದ ಕೆಲವು ಬಾರಿಯಾದರೂ ನಾವು ಬೇರೆ ಬೇರೆ ಪಕ್ಷಗಳಲ್ಲಿರುವ ರಾಜಕಾರಣಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಸಮಾಜದ ಮೇಲೆ ಉತ್ತಮ ಪರಿಣಾ ಬೀರಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲಸ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಮಾಜಿ ಶಾಸಕ ಡಾ. ಮಕ್ಬೂಲ ಬಾಗವಾನ, ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಮೊಹ್ಮದ್ ರಫೀಕ್ ಟಪಾಲ್ ಎಂಜಿನಿಯರ್, ಐಯುಡಬ್ಲೂಜೆ ಅಧ್ಯಕ್ಷ ಬಿ. ವಿ. ಮಲ್ಲಿಕಾರ್ಜುನಯ್ಯ, ಪ್ರಧಾನ ಕಾರ್ಯದರ್ಶಿ ಜೆ. ಸಿ. ಲೋಕೇಶ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪ್ರಕಾಶ ಶೆಟ್ಟಿ, ಕಾನಿಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ವಿ. ಶಟಗಾರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ. ಬಿ. ವಡವಡಗಿ, ಜಿಲ್ಲಾ ಉಪಾಧ್ಯಕ್ಷರಾದ ಇಂದುಶೇಖರ ಮಣೂರ, ಪ್ರಕಾಶ ಬೆನ್ನೂರ, ಫಿರೋಸ್ ರೋಜಿಂದಾರ ಮುಂತಾದವರು ಉಪಸ್ಥಿತರಿದ್ದರು.
ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾನಿಪ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಕಾರ್ಯಕ್ರಮ ನಿರ್ವಹಿಸಿದರು. ಸಾಧಕ ಪತ್ರಕರ್ತರಿಗೆ ನಾನಾ ಪ್ರಶಸ್ತಿಗಳನ್ನು ಪ್ರಧಾನ ಮಾಡಿ ಗೌರವಿಸಲಾಯಿತು.