ವಿಜಯಪುರ: ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಚಾರದ ಕಾವು ತೀವ್ರವಾಗುತ್ತಿದ್ದು, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲರ ಸ್ವಕ್ಷೇತ್ರ ಬಬಲೇಶ್ವರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ವಾಹನಕ್ಕೆ ಎಂ. ಬಿ. ಪಾಟೀಲರ ಪುತ್ರ ಮತ್ತು ಬಿ.ಎಲ್.ಡಿ.ಇ ಸಂಸ್ಥೆಯ ನಿರ್ದೇಶಕ ಬಸನಗೌಡ ಪಾಟೀಲ ಚಾಲನೆ ನೀಡಿದರು.
ಈ ಬಾರಿ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಪ್ರಚಾರದ ಹೊಣೆಯನ್ನು ಮಾಜಿ ಸಚಿವ ಎಂ. ಬಿ. ಪಾಟೀಲ ಅವರಿಗೆ ವಹಿಸಲಾಗಿದ್ದು, ಅವರು ಈಗಾಗಲೇ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕ್ಯಾಂಪೇನ್ ಆರಂಭಿಸಿದ್ದಾರೆ. ಇತ್ತ ಎಂ. ಬಿ. ಪಾಟೀಲ ಅವರ ಸ್ವಕ್ಷೇತ್ರ ಬಸವನಾಡಿನ ಬಬಲೇಶ್ವರ ಮತಕ್ಷೇತ್ರದ ಪ್ರಚಾರದ ಹೊಣೆಯನ್ನು ಅವರ ಪುತ್ರ ಮತ್ತು ಬಿ.ಎಲ್.ಡಿ.ಇ ಸಂಸ್ಥೆಯ ನಿರ್ದೇಶಕ ಬಸನಗೌಡ ಪಾಟೀಲ ಉರ್ಫ್ ರಾಹುಲ ಪಾಟೀಲ ವಹಿಸಿಕೊಂಡಿದ್ದಾರೆ.
ಕಳೆದ 10 ವರ್ಷಗಳಲ್ಲಿ ಬಬಲೇಶ್ವರ ಮತಕ್ಷೇತ್ರದಲ್ಲಿ ಎಂ. ಬಿ. ಪಾಟೀಲರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಸಾಕ್ಷಿ ಸಮೇತ ತೋರಿಸಲು ಡಾಕ್ಯೂಮೆಂಟರಿ ತಯಾರಿಸಲಾಗಿದ್ದು, ಇದನ್ನು ಒಂದು ದೊಡ್ಡ ಮತ್ತು ಮೂರು ಸಣ್ಣ ಎಲ್ಇಡಿ ವಾಹನಗಳ ಸುಮಾರು 60 ದಿನಗಳ ಕಾಲ ಕ್ಷೇತ್ರಾದ್ಯಂತ ಸಂಚರಿಸಿ ಪ್ರಚಾರ ನಡೆಸಲು ಯೋಜನೆ ರೂಪಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಂ. ಬಿ. ಪಾಟೀಲರ ಪುತ್ರ ರಾಹುಲ ಪಾಟೀಲ, ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ ಮತ್ತು ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ ಅವರ ಆಶಯದಂತೆ ಎಂ. ಬಿ. ಪಾಟೀಲರ ಸಾಧನೆಗಳ ಮಾಹಿತಿಯನ್ನು ಬಬಲೇಶ್ವರ ಮನೆಮನೆಗಳಿಗೆ ತಲುಪಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಎಂ. ಬಿ. ಪಾಟೀಲ 2013ರಿಂದ ಈವರೆಗೆ ಬಬಲೇಶ್ವರ ಮತಕ್ಷೇತ್ರ, ವಿಜಯಪುರ ಜಿಲ್ಲೆ ಮತ್ತು ರಾಜ್ಯಕ್ಕೆ ಮಾಡಿರುವ ಕೆಲಸ ಕಾರ್ಯಗಳನ್ನು ಈ ಸಾಕ್ಷ್ಯಚಿತ್ರ ಒಳಗೊಂಡಿದೆ. ಇದರ ಜೊತೆಗೆ ಕಳೆದ 10 ವರ್ಷಗಳಲ್ಲಿ ಮಾಡಿರುವ ಕೆಲಸಗಳ ಕುರಿತು ನಮ್ಮ ಎಂ. ಬಿ. ಪಾಟೀಲ ಹೆಸರಿನಲ್ಲಿ ಪೋಸ್ಟರ್ ಗಳನ್ನು ತಯಾರಿಸಲಾಗಿದ್ದು, ಅವುಗಳನ್ನು ಕಾರ್ಯಕರ್ತರು ತಂತಮ್ಮ ಮನೆಗಳ ಗೋಡೆಗಳ ಮೇಲೆ ಹಚ್ಚಿಕೊಳ್ಳಲಿದ್ದಾರೆ. ಈ ಮೂಲಕ ಎಂ. ಬಿ. ಪಾಟೀಲರು ಜಲ, ವೃಕ್ಷ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಮಾಹಿತಿ ನೀಡಲಿದ್ದಾರ ಎಂದು ಅವರು ತಿಳಿಸಿದರು.
ಬಂಗಾರದ ಬಬಲೇಶ್ವರ 2023ರಿಂದ ಮತ್ತೋಮ್ಮೆ ಸುವರ್ಣಯುಗ ಆಧುನಿಕ ಬಬಲೇಶ್ವರ ಆಧುನಿಕ ಭಗೀರಥ ಬಬಲೇಶ್ವರ ಕ್ಷೇತ್ರದ ನಿಮ್ಮ ಮನೆಯ ಮಗ ಬಸವನಾಡಿನ ಭಗೀರಥ ಹೆಸರಿನಲ್ಲಿ ಈ ಪೋಸ್ಟರ್ ತಯಾರಿಸಲಾಗಿದೆ.
ಕಳೆದ 10 ವರ್ಷಗಳಲ್ಲಿ ಬರೀ ಘೋಷಣೆಗಳಲ್ಲ! ಸಾಕಾರವಾಗಿವೆ ಅಭಿವೃದ್ಧಿ ಯೋಜನೆಗಳು, ಬಬಲೇಶ್ವರದ 1.40 ಲಕ್ಷಕ್ಕೂ ಹೆಚ್ಚು ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ತಿಡಗುಂದಿ ಅಕ್ವಾಡಕ್ಟ್ ನಿರ್ಮಾಣ, ತುಬಚಿ ಬಬಲೇಶ್ವರ
ಕಳೆದ 10 ವರ್ಷಗಳಲ್ಲಿ ಕ್ಶೇತ್ರದಲ್ಲಿ ಎರಡು ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ತಿಡಗುಂದಿ ಅಕ್ವಾಡಕ್ಟ್, ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ, ಜಿಲ್ಲೆಯ 250ಕ್ಕೂ ಹೆಚ್ಚು ಕೆರೆ-ಬಾಂದಾರಗಳಿಗೆ ನೀರು ಹರಿಸಲಾಗಿದೆ. ಎಲ್ಲ ಸಮಾಜಗಳಿಗೆ ಸುಮಾರು 500 ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ.
ಶಿಕ್ಷಣದಲ್ಲಿ ಆಧುನೀಕರಣ ಶಾಲೆಗಳಲ್ಲಿ ಟಾಕಿಂಗ್ ಟ್ರೀ ಅಳವಡಿಕೆ, 360 ಶಾಲೆಗಳಲ್ಲಿ ಇ- ಕ್ಸಾಸ್ ರೂಂ ಸ್ಥಾಪನೆ, ನೂರಾರು ಕಿ. ಮೀ. ರಸ್ತೆ ಅಭಿವೃದ್ಧಿ, ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ, ಹೈ-ಟೆಕ್ ಆ್ಯಂಬೂಲನ್ಸ್ ಗಳು, ಕೋಟಿ ವೃಕ್ಷ ಅಭಿಯಾನದ ಬಗ್ಗೆ ಮಾಹಿತಯನ್ನು ಈ ಪೋಸ್ಟರ್ ಗಳು ಒಳಗೊಂಡಿವೆ.
ನಿಮ್ಮೆಲ್ಲರ ಏಳಿಗೆಗಾಗಿ ಅಂದು ಜಾರಿಯಾದವು ಅನ್ನಭಾಗ್ಯ, ಕ್ಷೀರಭಾಗ್ಯ, ಆರೋಗ್ಯಭಾಗ್ಯ, ಹೀಗೆ ಹತ್ತು ಹಲವು ಯೋಜನೆಗಳು. ಮುಂದೆ ಬರಲಿವೆ ಗೃಹಜ್ಯೋತಿ- 200 ಯುನೀಟ್ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಪ್ರತಿ ಮನೆಯ ಯಜಮಾನಿಗೆ ರೂ. 2000. ಉದ್ಯೋಗ ಕ್ರಾಂತಿ, ಹೊಲ-ತೋಟದ ರಸ್ತೆ ಸರ್ವರಿಗೂ ಮನೆ, ಇನ್ನೂ ಹೆಚ್ಚಿನ ನೀರಾವರಿ, ನಗರ ಶಾಲೆಗಳ ಮಾದರಿಯಲ್ಲಿ ಸರಕಾರಿ ಶಾಲೆಗಳ- ಅಂಗನವಾಡಿಗಳ ಆಧುನೀಕರಣ, ಮಹಿಳೆಯರ ಸ್ವಾಲಂಬನೆಗಾಗಿ ಕ್ಷೀರ ಕ್ರಾಂತಿ ಮಾಹಿತಿಯುಳ್ಳ ಎರಡು ಮೂರು ಪೋಸ್ಟರ್ ಗಳನ್ನು ತಯಾರಿಸಲಾಗಿದೆ ಎಂದು ಅವರು ತಿಳಿಸಿದರು.
ರಾಜಕೀಯ ಪ್ರವೇಶ ವಿಚಾರ
ಈ ಮಧ್ಯೆ, ತಾವು ಸಕ್ರೀಯ ರಾಜಕಾರಣಕ್ಕೆ ಪ್ರವೇಶಿಸುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಸದ್ಯಕ್ಕೆ ಯಾವುದೇ ಯೋಟನೆ ಇಲ್ಲ. ಈಗ ತಂದೆಯವರ ಮತಕ್ಷೇತ್ರದಲ್ಲಿ ಪ್ರಚಾರಕ್ಕೆ ಸಹಾಯ ಮಾಡುತ್ತಿದ್ದೇನೆ. ಸಕ್ರೀಯ ರಾಜಕೀಯ ಪ್ರವೇಶದ ಬಗ್ಗೆ ಸಧ್ಯಕ್ಕೆ ಯೋಚನೆ ಇಲ್ಲ ಎಂದು ತಿಳಿಸಿದರು.
ನಂತರ ಒಂದು ಬೃಹತ್ ಎಲ್ ಇ ಡಿ ಪರದೆ ಹೊಂದಿರುವ ಮತ್ತು ಎರಡು ಸಣ್ಣ ಪ್ರಚಾರ ವಾಹನಗಳಿಗೆ ಬಸನಗೌಡ ಪಾಟೀಲ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಬಿ. ಎಲ್. ಡಿ. ಇ ಸಂಸ್ಥೆಯ ಪ್ರಚಾರಾಧಿಕಾರಿ ಡಾ. ಮಹಾಂತೇಶ ಬಿರಾದಾರ, ಕಾಂಗ್ರೆಸ್ ಮುಖಂಡರಾದ ಟಪಾಲ್ ಎಂಜಿನಿಯರ್, ಸುರೇಶ ಘೋಣಸಗಿ, ಯಾಕೂಬ್ ಜತ್ತಿ, ಅಜಯ ಪಾಟೀಲ ಗೂಗಿಹಾಳ ಮುಂತಾದವರು ಉಪಸ್ಥಿತರಿದ್ದರು.