ಮಹಾನಗರ ಪಾಲಿಕೆ ಬಜೆಟ್- ರೂ. 8.74 ಲಕ್ಷ ಉಳಿತಾಯ ಆಯವ್ಯಯ ಅನುಮೋದನೆ ನೀಡಿದ ಡಿಸಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ

ವಿಜಯಪುರ: ಬಸವನಾಡು ವಿಜಯಪುರ ಮಹಾನಗರಪಾಲಿಕೆಯ ಬಜೆಟ್ ಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅನುಮೋದನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 2023-24ನೇ ಆರ್ಥಿಕ ವರ್ಷದ ಬಜೆಟ್ ಗೆ ಅನುಮೋದನೆ ನೀಡಿದ ಅವರು, ಈ ಬಾರಿ ರೂ. 8.74 ಲಕ್ಷ ಉಳಿತಾಯ ಬಜೆಟ್ ಮಂಡನೆಯಾಗಿದೆ ಎಂದು ತಿಳಿಸಿದರು.

ನಗರದ ಸರ್ವತೋಮುಖ ಅಭಿವೃದ್ಧಿಗಾಗಿ ರಸ್ತೆ, ಒಳಚರಂಡಿ, ಮಳೆ ನೀರು ಚರಂಡಿ ಮತ್ತು ನಾನಾ ಅಭಿವೃದ್ಧಿ ಕಾರ್ಯಗಳಿಗಾಗಿ ನಿಯಾಮವಳಿಗಳ ಪ್ರಕಾರ ಅನುದಾನ ಕಾಯ್ದಿರಿಸಿ ಎಲ್ಲ ಮೂಲಗಳಿಂದ ರೂ. 204.02 ಕೋ. ಆದಾಯ ನಿರೀಕ್ಷಿಸಲಾಗಿದೆ.  ಇದಲ್ಲಿ ಎಲ್ಲಾ ತರಹದ ಖರ್ಚು ವೆಚ್ಚಗಳು ಸೇರಿ ರೂ. 203.54 ಕೋ. ವೆಚ್ಚವನ್ನು ಅಳವಡಿಸಿಕೊಳ್ಳಲಾಗಿದೆ.  ಹೀಗಾಗಿ ರೂ. 8.74 ಲಕ್ಷ ಉಳಿತಾಯ ಬಜೆಟ್ ಇದಾಗಿದೆ ಎಂದು ಅವರು ತಿಳಿಸಿದರು.

ಆಸ್ತಿ ತೆರಿಗೆ ಮತ್ತು ಇತರ ಪಾಲಿಕೆಯ ಮೂಲಗಳಿಂದ ರೂ. 474.47 ಕೋ. ಆದಾಯ ನಿರೀಕ್ಷೆಯಿದ್ದು, ಸರಕಾರದಿಂದ ಬರುವ ನಾನಾ ಅನುದಾನಗಳಿಂದ ರೂ. 150.74 ಬರುವ ಅಂದಾಜಿದೆ.  ಇದರಲ್ಲಿ ಎಫ್.ಎಸ್.ಸಿ ರೂ. 5.85 ಕೋ. ಎಸ್. ಎಫ್.ಸಿ ವೇತನ ರೂ. 18.74 ಕೋ. ರೂ. 15ನೇ ಹಣಕಾಸು ಯೋಜನೆ ರೂ. 1.50 ಕೋ. ಎಂ.ಜಿ.ಎನ್.ವಿ.ವೈ, ಎಸ್.ಎಫ್.ಸಿ ವಿಶೇಷ ಅನುದಾನ ಹಾಗೂ ಇತರೆ ಅನುದಾನಗಳಿಂದ ಬರುವ ರೂ. 11.11 ಕೋ. ಸೇರಿವೆ.  ಒಟ್ಟು ಬಂಡವಾಳ ಆಸ್ತಿ ಸೃಷ್ಠಿಸಲು ರೂ. 106 ಕೋ. ನಿರೀಕ್ಷಿಸಲಾಗಿದೆ ಎಂದು ಡಿಸಿ ಮಾಹಿತಿ ನೀಡಿದ್ದಾರೆ.

ವಿಜಯಪುರ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಹಾನಗರ ಪಾಲಿಕೆ 2023-24ನೇ ವರ್ಷದ ಬಜೆಟ್ ಗೆ ಡಾ. ದಾನಮ್ಮನವರ ಅನುಮೋದನೆ ನೀಡಿದರು

ಸ್ವಚ್ಛ ವಿಜಯಪುರ ಸಂಕಲ್ಪದ ಭಾಗವಾಗಿ ವಿಜಯಪುರ ನಗರದ ಸ್ವಚ್ಛತೆಗಾಗಿ ಒಟ್ಟು ರೂ. 29.75 ಕೋ. ಕಾಯ್ದಿರಿಸಲಾಗಿದೆ.  ನಗರದ ಹಸರೀಕರಣಕ್ಕಾಗಿ ಒತ್ತು ನೀಡಿ ರೂ. 1.75 ಕೋ. ಕಾಯ್ದಿರಿಸಲಾಗಿದೆ.  ಸ್ವಚ್ಛತೆಗೆ ಹೆಚ್ಚಿನ ಕೊಡುಗೆ ನೀಡುವ ಬೀದಿ ಬದಿ ವ್ಯಾಪಾರಸ್ಥರಿಗೆ ವಿಶೇಷವಾಗಿ ನಗರದ ಬೀದಿ ಬದಿ ವ್ಯಾಪಾರಸ್ಥರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಮತ್ತು ಸ್ವಚ್ಛತೆ ಪಾಲನೆಗಾಗಿ ಡಸ್ಟಬಿನ್ ಗಳ ಹಾಗೂ ಛತ್ರಿಗಳನ್ನು ವಿತರಿಸಲು ರೂ. 40 ಲಕ್ಷ ಅನುದಾನವನ್ನು ಕಾಯ್ದಿರಿಸಲಾಗಿದೆ ಡಾ. ದಾನಮ್ಮನವರ ಮಾಹಿತಿ ನೀಡಿದರು.

ವಿಶೇಷವಾಗಿ ನಗರದ ಸ್ವಚ್ಛತೆಗಾಗಿ ಹಗಲಿರುಳು ಶ್ರಮಿಸುವ ಪೌರ ಕಾರ್ಮಿಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನಗರದ ನಾನಾ ಕಡೆ ಉನ್ನತ ಮಟ್ಟದ ಸೌಲಭ್ಯಗಳನ್ನು ಹೊಂದಿದ ವಿಶ್ರಾಂತಿ ಕೊಠಡಿಗಳ ನಿರ್ಮಾಣಕ್ಕಾಗಿ ರೂ. 20 ಕೋ. ಕಾಯ್ದಿರಿಸಲಾಗಿದೆ ಎಂದು ಅವರು ಹೇಳಿದರು.

ಕಲ್ಯಾಣ ಕಾರ್ಯಕ್ರಮಗಳಾದ ಪರಿಶಿಷ್ಠ ಜಾತಿ ಮತ್ತು ಪಂಗಡ, ಬಡಜನರ ಕಲ್ಯಾಣಕ್ಕಾಗಿ ಹಾಗೂ ವಿಕಲಚೇತನರ ಅಭಿವೃದ್ಧಿಗಾಗಿ ಮಹಾನಗರ ಪಾಲಿಕೆ ನಿಧಿಯಿಂದ ರೂ. 24.10ರ ಅನುದಾನಕ್ಕಾಗಿ ರೂ. 52.89 ಲಕ್ಷ, ಶೇ. 7.25ರ ಅನುದಾನಕ್ಕಾಗಿ ರೂ. 15.91 ಲಕ್ಷ ಹಾಗೂ ಶೇ. 5ರ ಅನುದಾನಕ್ಕಾಗಿ ರೂ. 10.97 ಲಕ್ಷ ಹಣವನ್ನು ಬಜೆಟ್ ನಲ್ಲಿ ಕಾಯ್ದಿರಸಲಾಗಿದ್ದು, ಈ ಬಜೆಟ್ ಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅನುಮೋದನೆ ನೀಡಿದ್ದಾರೆ.  ಈ ಆಯವ್ಯಯ ಮಂಡನೆ ಸಂದರ್ಭದಲ್ಲಿ ಮಹಾನಗರಪಾಲಿಗೆ ಲೆಕಾಧೀಕ್ಷಕ ವಿಶ್ವನಾಥ ನಂದಿ, ಎನ್. ಆರ್. ಕಗ್ಗೋಡ ಉಪಸ್ಥಿತರಿದ್ದರು ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ವಿಜಯ ಮೆಕ್ಕಳಕಿ ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌