ವಿಜಯಪುರ: ಜಿಲ್ಲೆಯಲ್ಲಿ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ ಅಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಾನಾ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಉರ್ದು ಶಾಲೆಗಳಲ್ಲಿ ಮಕ್ಕಳ ಶಿಕ್ಷಣಕ್ಕೆ ಪೂರಕ ವಾತಾವರಣ ಕಲ್ಪಿಸಬೇಕು. ಮಕ್ಕಳ ಶಿಕ್ಷಣದಲ್ಲಿ ಶಿಕ್ಷಕರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ದುರಸ್ತಿ ಕಾರ್ಯ ಕೈಗೊಳ್ಳಬೇಕಾದ ವಿವಿಧ ಶಾಲೆಗಳ ಕೊಠಡಿಗಳನ್ನು ಪರಿಶೀಲನೆ ನಡೆಸಬೇಕು, ಸಣ್ಣ ಪುಟ್ಟ ದುರಸ್ತಿಗಳಿದ್ದರೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.
ಕೇಂದ್ರ ಸರಕಾರ ಜಾರಿಗೊಳಿಸಿರುವ ಈ ಹೊಸ 15ಅಂಶ ಕಾರ್ಯಕ್ರಮದಡಿಯಲ್ಲಿ ಅವಶ್ಯಕ ಇದ್ದವರಿಗೆ ಆರ್ಥಿಕ ಅಭಿವೃದ್ದಿಗಾಗಿ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಸಾಲ-ಸೌಲಭ್ಯ ಒದಗಿಸಬೇಕು. ಈ ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿ ಯಾವುದೇ ವಿಳಂಭ ಧೋರಣೆ ಅನುಸರಿಸಬಾರದು. ನಿಗದಿತ ಅವಧಿಯಲ್ಲಿ, ನಿಗದಿತ ಗುರಿ ಸಾಧಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ವತಿಯಿಂದ ಜಾರಿಗೊಳಿಸಲಾಗಿರುವ ಅರಿವು ಸಾಲ, ಶ್ರಮಶಕ್ತಿ ಸಾಲ ಯೋಜನೆ, ಸ್ವಯಂ ಉದ್ಯೋಗ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಟ್ಯಾಕ್ಸಿ ಗೂಡ್ಸ್ ವಾಹನ ಖರೀದಿಗೆ ಸಹಾಯಧನ ಯೋಜನೆ, ಪ್ಯಾಸೆಂಜ್ ಆಟೋರಿಕ್ಷಾ ಯೋಜನೆ ಖರೀದಿಗೆ ಸಹಾಯಧನ ಯೋಜನೆಯಡಿಯಲ್ಲಿ ನೈಜ್ ಫಲಾನುಭವಿಗಳನ್ನು ಆಯ್ಕೆ ಮಾಡಿ, ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ದಿಗೆ ಕ್ರಮ ವಹಿಸಿ ಎಂದು ಅಬ್ದುಲ್ ಅಜೀಮ್ ಹೇಳಿದರು.
ಜಿಲ್ಲೆಯಲ್ಲಿ 15ಅಂಶಗಳ ಕಾರ್ಯಕ್ರಮ ಸಮರ್ಪಕವಾಗಿ ಜಾರಿಗೊಳಿಸಬೇಕು. ಸಮಗ್ರ ಮಕ್ಕಳ ಅಭಿವೃದ್ದಿ ಯೋಜನೆ ಸೌಲಭ್ಯ, ಶಾಲಾ ಶಿಕ್ಷಣದಲ್ಲಿ ಸುಧಾರಣೆ, ಉರ್ದು ಭಾಷಾ ಬೋಧನೆಯ ಸಂಪನ್ಮೂಲ ಹೆಚ್ಚಿಸುವುದು, ಮದರಸಾ ಶಿಕ್ಷಣ ಉನ್ನತೀಕರಣ, ಮೌಲಾನಾ ಆಝಾಧ ಶಿಕ್ಷಣ ಸಂಸ್ಥೆಯ ಮೂಲಕ ಶಿಕ್ಷಣ ಮೂಲಭೂತ ಸೌಕರ್ಯಗಳ ಸುಧಾರಣೆ, ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವಿದ್ಯಾರ್ಥಿ ವೇತನ ಮಂಜೂರು, ಸೇರಿದಂತೆ ವಿವಿಧ ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ಅವರು ನಡೆಸಿದರು.
ಈ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಜಿ. ಪಂ. ಸಿಇಓ ರಾಹುಲ್ ಶಿಂಧೆ, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ವಿಜಯಪುರ ಡಿವೈಎಸ್ಪಿ ಸಿದ್ಧೇಶ್ವರ, ಅಧ್ಯಕ್ಷ ಆಪ್ತ ಕಾರ್ಯದರ್ಶಿ ನಿಸಾರ್ ಅಹ್ಮದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಯಲ್ಲಮ್ಮ ಪಡೇಸೂರ ಸೇರಿದಂತೆ ನಾನಾ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.