ವಿಜಯಪುರ: ಸರಕಾರ ವಿಕಲಚೇತನರ ಉನ್ನತಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಯ ಲಾಭ ನೈಜ ವಿಕಲಚೇತನರಿಗೆ ದೊರಕಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಫಲಾನುಭವಿಗಳು ಸಹ ಈ ಯೋಜನೆಯ ಮಾಹಿತಿ ಪಡೆದುಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದ್ದಾರೆ.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ವತಿಯಿಂದ ವಿಕಲಚೇತನರ ಜಿಲ್ಲಾ ಮಟ್ಟದ ಕುಂದು ಕೊರತೆ ಸಭೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದರು.
ವಿಕಲಚೇತನರಿಗೆ ಅನುಕೂಲವಾಗಲಿ ಎಂಬ ದೃಷ್ಟಿಕೋನದಿಂದ ಸರಕಾರ ಅವರಿಗೆ ಶೇ. 5ರಷ್ಟು ಪ್ರತಿಶತ ಅನುದಾನವನ್ನು ಮೀಸಲಿಟ್ಟಿದ್ದು, ಸರಕಾರದ ಮಾರ್ಗಸೂಚಿಯಂತೆ ಅವರ ಅನುಕೂಲಕ್ಕಾಗಿ ನಿಗದಿಪಡಿಸಿದ ಅನುದಾನ ಖರ್ಚು- ವೆಚ್ಚವಾಗಬೇಕು. 2016ರ ಕಾಯ್ದೆ ಅಡಿಯಲ್ಲಿ ಬರುವ ವಿಕಲಚೇತನರ ಕಾಯ್ದೆ-ಕಾನೂನು ಕುರಿತ ಜಾಗೃತಿ ನಾಮಫಲಕ ಹಾಗೂ ಭಿತ್ತಿಪತ್ರಗಳನ್ನು ಅಳವಡಿಸಬೇಕು. ಆರ್ಥಿಕತೆ, ಸಾಮಾಜಿಕತೆ ಉನ್ನತಿ ಹೊಂದುವ ರೀತಿಯಲ್ಲಿ ಯೋಜನೆಗಳನ್ನು ಜಿಲ್ಲೆಯಲ್ಲಿ ಜಾರಿಗೆ ತಂದು ವಿಕಲಚೇತನರು ಆರ್ಥಿಕವಾಗಿ ಸಬಲರಾಗಲು ಯೋಜನೆಗಳ ಮಾಹಿತಿ ದೊರಕಿಸುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
15ನೇ ಹಣಕಾಸು ಯೋಜನೆಯಡಿಯ ಅನುದಾನವನ್ನು ಸಾಮೂಹಿಕ ಫಲಾನುಭವಿಗಳ ಆಯ್ಕೆಗೆ ಸಮರ್ಪಕವಾಗಿ ಬಳಕೆಯಾಗಬೇಕು. ಪಂಚಾಯಿತಿ ಮಟ್ಟದಲ್ಲಿ ಜಾರಿಯಾಗುವ ವಸತಿ ಯೋಜನೆಗಳಲ್ಲಿ ಅರ್ಹ ವಿಕಲಚೇತನರಿಗೆ ಪರಿಗಣಿಸಬೇಕು. ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ ದುರ್ಬಳಕೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಆಧಾರಗೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ಆಧಾರ ಕನ್ಸಲ್ಟಂಟ್ ಪ್ರಭು ಮೊ. ನಂ. 9482564296 ಇವರನ್ನು ಸಂಪರ್ಕಿಸಿ ವಿಕಲಚೇತನರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ವಿಕಲಚೇತನರಿಗೆ ಸಮರ್ಪಕವಾಗಿ ಪಿಂಚಣಿ ದೊರೆಯುವಂತೆ ನೋಡಿಕೊಳ್ಳಬೇಕು. ವಿಕಲಚೇತನ ಕ್ರೀಡಾಪಟುಗಳಿಗೆ ಸಿಗುವ ಪ್ರೊತ್ಸಾಹ ಧನ ಕುರಿತು ಅಗತ್ಯ ಮಾಹಿತಿ ಪಡೆದುಕೊಂಡು, ಅರ್ಹ ವಿಕಲಚೇತನ ಕ್ರೀಡಾಪಟುಗಳಿಗೆ ಪ್ರೊತ್ಸಾಹಧನ ಒದಗಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವಿಕಲಚೇತನರ ಕುಂದು-ಕೊರತೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಸ್ಥಳದಲ್ಲಿಯೇ ದೃಷ್ಟಿದೋಷವುಳ್ಳ ಮಗುವಿನ ಆಧಾರ ಕಾರ್ಡ ಒದಗಿಸಲು ಕ್ರಮ ವಹಿಸುವಂತೆ ಸೂಚನೆ ನೀಡಿದರು. ಹೊರಗುತ್ತಿಗೆ ಆಧಾರದ ಮೇಲೆ ವಿಕಲಚತನರಿಗೆ ಉದ್ಯೋಗಾವಕಾಶ, ಬೆನ್ನುಹುರಿವುಳ್ಳ ವಿಕಲಚೇತನರಿಗೆ ಮೆಡಿಕಲ್ ಕಿಟ್ ಒದಗಿಸುವುದು, ಸ್ಪೋರ್ಟ ವ್ಹೀಲ್ ಚೇರ್ ಒದಗಿಸುವುದು, ಪಿಂಚಣಿ ಯೋಜನೆ ನಿಗದಿತ ಅವಧಿಯಲ್ಲಿ ದೊರಕಿಸಲು, ಸಾರ್ವಜನಿಕ ಸ್ಥಳಗಳಲ್ಲಿ ವಿಕಲಚೇತನರಿಗೂ ಮುಕ್ತ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ರ್ಯಾಂಪ್, ವ್ಹೀಲ್‍ಚೇರ್, ರೇಲಿಂಗ್ ಅಳವಡಿಸುವುದು, ಕುಟುಂಬವಿಲ್ಲದ ವಿಕಲಚೇತನರಿಗೆ ರೇಶನ್ ಕಾರ್ಡ ಒದಗಿಸುವುದು, ರ್ಯಾಟ್ರೋ ಫಿಟಮೆಂಟ್ ತ್ರಿಚಕ್ರ ವಾಹನ್ ಒದಗಿಸಲು ಕೋರಿ ಹಲವು ಕುಂದು-ಕೊರತೆಗಳನ್ನು ಆಲಿಸಿದ, ಜಿಲ್ಲಾಧಿಕಾರಿಗಳು ಈ ಕುರಿತಂತೆ ಆದ್ಯತೆ ಮೇಲೆ ಕ್ರಮ ಕೈಗೊಂಡು ವಿಕಲಚೇತನರಿಗೆ ಸೌಲಭ್ಯ ದೊರಕಿಸುವಂತೆ ಅಧಿಕಾರಿಗಳಿಗೆ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸುರೇಶ ಮಠಪತಿ, ಅಲ್‍ಫಿಯಾ ನಾಗರಬಾವಡಿ ಹಾಗೂ ವಿನಾಯಕ ಭಾಗ್ಯವಂತಿ ಮತ್ತು ಗಣೇಶ ಇವರಿಗೆ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.
ಮಹಾನಗರಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಉಪ ನಿದೇರ್ಶಕ ಕೆ. ಕೆ. ಚವ್ಹಾಣ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀಮತಿ ಎಲ್. ರೂಪಾ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ರಾಜಶೇಖರ ದೈವಾಡಿ, ರಾಜಶೇಖರ ದೈವಾಡಿ, ರೇಷ್ಮೆ ಇಲಾಖೆ ವಿಸ್ತರಣಾಧಿಕಾರಿ ಸಿದ್ಧರಾಜು, ಸಂಘ-ಸಂಸ್ಥೆಗಳ ಸದಸ್ಯರು, ವಿವಿಧ ವಿಕಲಚೇತನರು ಉಪಸ್ಥಿತರಿದ್ದರು.