ಅಡುಗೆ ತಯಾರಿ ಕೇವಲ ಶಾಸ್ತ್ರವಷ್ಟೇ ಅಲ್ಲ, ಕಲೆಯೂ ಹೌದು: ಡಾ. ಎಂ. ಎಸ್. ಮದಭಾವಿ

ವಿಜಯಪುರ: ಮನುಷ್ಯನ ಬದುಕಿಗೆ ಅಗತ್ಯವಾದ ಅಡುಗೆ ತಯಾರಿ ಒಂದು ಶಾಸ್ತ್ರ ಅಷ್ಟೇ ಅಲ್ಲ ಕಲೆಯೂ ಹೌದು ಎಂದು ಬಿ.ಎಲ್.ಡಿ.ಇ. ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿ ಡಾ. ಎಂ.ಎಸ್.ಮದಭಾವಿ ಹೇಳಿದರು.

ಇಂಟ್ಯಾಚ್ ಮತ್ತು ಹಳಕಟ್ಟಿ ಸಂಶೋಧನ ಕೇಂದ್ರದ ಸಹಯೋಗದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಖಾನಾ ಖಜಾನಾ ಮೈ ಫುಡ್ ಹೇರಿಟೇಜ್ ಚಿತ್ರ ಬಿಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಖಾನಾ ಖಜಾನಾ ಮೈ ಫೆವರೇಟ್ ಫುಡ್ ಚಿತ್ರಕಲೆ ಸ್ಪರ್ಧೆಯಲ್ಲಿ ಪಾಲ್ಗೊಂಡ ನಾನಾ ವಿದ್ಯಾರ್ಥಿಗಳು

ಬದುಕಿನ ಅವಿಭಾಜ್ಯ ಅಂಗವಾದ ಆಹಾರ ತಯಾರಿಕೆಯ ಕಲೆಯನ್ನು ಚಿತ್ರದ ಮೂಲಕ ವ್ಯಕ್ತಪಡಿಸುವುದು ಅದ್ಭುತ ಅನುಭವ ನೀಡುತ್ತದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮುಖ್ಯ ಶಿಕ್ಷಕಿ ಶಾರದಾ ವಿ. ಐಹೊಳ್ಳಿ ಮಾತನಾಡಿ, ಭಾರತೀಯ ಆಹಾರ ತಯಾರಿಕೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅಜ್ಜಿ, ತಾಯಂದಿರಿಂದ ಪಾರಂಪರಿಕವಾಗಿ ಬೆಳೆದು ಬಂದಿರುವ ಆಹಾರ ತಯಾರಿಕೆ ಈಗ ಆಧುನಿಕತೆಗೆ ತಕ್ಕಂತೆ ಬದಲಾವಣೆ ಆಗುತ್ತಿದೆ. ಇಂದು ಅಡುಗೆ ತಯಾರಿ ಕೇವಲ ಮಹಿಳೆಯರಿಗಷ್ಟೇ ಸೀಮಿತವಾಗಿಲ್ಲ. ಪುರುಷರೂ ಅಡುಗೆ ತಯಾರಿಯಲ್ಲಿ ನೈಪುಣ್ಯತೆ ಸಾಧಿಸುತ್ತಿದ್ದಾರೆ. ಭಾರತದಲ್ಲಿ ತಾಯಿಯ ಜೊತೆ ಮಕ್ಕಳು ಬಾಲ್ಯದಿಂದಲೇ ಅಡುಗೆ ತಯಾರಿಯಲ್ಲಿ ನೆರವಾಗುವ ಮೂಲಕ ಪಾಕಶಾಸ್ತ್ರದ ಅನುಭವ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಈಗ ಆಹಾರ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆ ಆಗುತ್ತಿದೆ. ಪಾರಂಪರಿಕ ಪದ್ಧತಿಯ ಜೊತೆ ಆರೋಗ್ಯಕ್ಕೆ ಪೂರಕವಾದ ಆಧುನಿಕ ಪದ್ಧತಿಗಳಾದ ಮೊಳಕೆ ಕಾಳುಗಳ ತಯಾರಿ ಮತ್ತು ಸೇವನೆಯ ಜಾಗೃತಿ ಹೆಚ್ಚಾಗುತ್ತಿದೆ. ಅಡುಗೆ ದೊಡ್ಡ ಕಲೆ ಮತ್ತು ಅದೊಂದು ಶಾಸ್ತ್ರವಾಗಿದ್ದರೂ ಸರಳವಾಗಿ ಕಲಿಯುವಂತಿದೆ. ಅಡಿಗೆ ತಯಾರಿ ಬಗ್ಗೆ ಓದಿರುವುದನ್ನು ಮತ್ತು ಮಾಡುವುದನ್ನು ಚಿತ್ರದ ಮೂಲಕ ಚಿತ್ರಿಕರಿಸಿದರೆ ಹೆಚ್ಚು ಮನವರಿಕೆಯಾಗುತ್ತದೆ ಎಂದು ಅವರು ಹೇಳಿದರು.

ಇಂಟ್ಯಾಚ್ ಸಂಚಾಲಕ ಡಾ. ಕೃಷ್ಣ ಕೊಲ್ಹಾರಕುಲಕರ್ಣಿ ಮಾತನಾಡಿ, ಸಂಸ್ಥೆ ಕಳೆದ 35 ವರ್ಷಗಳಿಂದ ಭಾರತೀಯ ಐತಿಹಾಸಿಕ ಪರಂಪರೆಗೆ ಸಂಬಂಧಿಸಿದ ಮತ್ತು ಮಕ್ಕಳ ಕೇಂದ್ರೀಕರಿಸಿ ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ಆಯೋಜಿಸುವ ಮೂಲಕ ನಮ್ಮ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಭಾರತೀಯ ಆಹಾರಗಳಿಗೆ ಅದರದೇ ಆದ ಐತಿಹ್ಯವಿದೆ. ಅಡುಗೆಯನ್ನು ಚಿತ್ರದ ರೂಪದಲ್ಲಿ ವ್ಯಕ್ತಪಡಿಸುವುದು ಒಂದು ಕಲೆಯಾಗಿದೆ. ಅದರ ಬಗ್ಗೆ ಮಾಹಿತಿ ಸಂಗ್ರಹಿಸಿ ಉಳಿಸಿ ಬೆಳೆಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಚಿತ್ರಗಳನ್ನು ಎಂಗ್ ಇಂಟ್ಯಾಚ್ ಮಾಸಿಕ ನಿಯತಕಾಲಿಕೆಯಲ್ಲಿ ಪ್ರಕಟಿಸಿ ದೇಶಾದ್ಯಂತ ವಿತರಿಸಲಾಗುವುದು ಎಂದು ತಿಳಿಸಿದರು.

ವಿಜಯಪುರ ನಗರದ 13 ನಾನಾ ಶಾಲೆಗಳ 131 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಅಡುಗೆ ತಯಾರಿ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಿಸಲಾಯಿತು. ಮಕ್ಕಳು ಬಿಡಿಸಿದ ಚಿತ್ರಗಳನ್ನು ನವದೆಹಲಿಯಲ್ಲಿರುವ ಇಂಟ್ಯಾಚ್ ಮುಖ್ಯ ಕಚೇರಿಗೆ ಕಳುಹಿಸಲಾಗುತ್ತಿದ್ದು, ಅಲ್ಲಿ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಲಾಗುತ್ತದೆ.

ಆ್ಯಕ್ಟ್ ಶಾರದಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಡಾ. ವಿ. ಡಿ. ಐಹೊಳ್ಳಿ ಸ್ವಾಗತಿಸಿ, ನಿರೂಪಿಸಿದರು. ಪ್ರೊ. ಎ. ಬಿ. ಬೂದಿಹಾಳ ವಂದಿಸಿದರು.

Leave a Reply

ಹೊಸ ಪೋಸ್ಟ್‌