ನಾನೂ ಹಿಂದು, ನಮ್ಮಪ್ಪ ಹಿಂದು, ನನಗೆ ಸಿದ್ಧರಾಮಯ್ಯ ಎಂದು ಹೆಸರಿಟ್ಟಿದ್ದಾರೆ- ಸಿ. ಟಿ. ರವಿ ಹೇಳಿದಾಕ್ಷಣ ನಾನು ಮುಸ್ಲಿಮ್ ಆಗಿಬಿಡುತ್ತೇನಾ? ಸಿದ್ಧರಾಮಯ್ಯ ವಾಗ್ದಾಳಿ

ವಿಜಯಪುರ: ನಾನೂ ಹಿಂದು.  ನಮ್ಮಪ್ಪನೂ ಹಿಂದು.   ನನಗೆ ಸಿದ್ಧರಾಮಯ್ಯ ಎಂದು ಹೆಸರಿಟ್ಟಿದ್ದಾರೆ.  ಸಿ. ಟಿ. ರವಿ ಹೇಳಿದಾಕ್ಷಣ ನಾನು ಮುಸ್ಲಿಂ ಆಗಿಬಿಡುತ್ತೇನಾ? ಎಂದು ಎಂದು ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ ಖಾರವಾಗಿ ಪ್ರಶ್ನಿಸಿದ್ದಾರೆ. 

ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ನಾನು ಹಿಂದು.  ನಮ್ಮಪ್ಪ ಹಿಂದು.  ನಾನು ಹಿಂದು ಅಲ್ಲವಾ? ನಮ್ಮವ್ವ- ನಮ್ಮಪ್ಪ ಹಿಂದುಗಳಲ್ಲವಾ? ಸಿ.ಟಿ. ರವಿ ಹೇಳಿದ ಮಾತ್ರಕ್ಕೆ ನಾನು ಮುಸ್ಲಿಂನಾಗಿ ಬಿಡುತ್ತೇನಾ? ಎಂದು ಕಿಡಿಕಾರಿದ ಅವರು, ಬಿಜೆಪಿಗೆ ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಬದಲಾವಣೆ ಮಾಡಲು ಆಗಿಲ್ಲ. ರೈತರ ಬಿಕ್ಕಟ್ಟಿಗೆ ಪರಿಹಾರ ಒದಗಿಸಲಾಗಿಲ್ಲ. ರೈತರ ಸಾಲ ದುಪ್ಪಟ್ಟಾಯಿತೇ ಹೊರತು ಆದಾಯ ದುಪ್ಪಟ್ಟು ಆಗಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಬಡವರಿಗೆ ನೀಡಲಾಗುತ್ತಿದ್ದ 7 ಕೆ. ಜಿ. ಅಕ್ಕಿಯ ಪ್ರಮಾಣವನ್ನು ಈಗ 5 ಕೆ. ಜಿ. ಗೆ ಇಳಿಸಿದ್ದು ಸುಳ್ಳಾ? ಅಕ್ಕಿ ಕೇಂದ್ರ ಸರಕಾರದ್ದು.  ಚೀಲ ಮಾತ್ರ ಕಾಂಗ್ರೆಸ್ಸಿನದ್ದು ಎನ್ನುವ ಬಿಜೆಪಿಯವರು ತಮ್ಮದೇ ಪಕ್ಷದ ಆಡಳಿತವಿರುವ ಉತ್ತರ ಪ್ರದೇಶ, ಗುಜರಾತ, ಅಸ್ಸಾಂನಲ್ಲಿ ಏಕೆ ಅಕ್ಕಿಯನ್ನು ಕೊಡುತ್ತಿಲ್ಲ? ಎಂದು ಪ್ರಶ್ನಿಸಿದ ಎಸ್. ಸಿದ್ಧರಾಮಯ್ಯ, ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿದ್ದೇವೆ ಎಂದು ತಿಳಿಸಿದರು.

ಸಿಂದಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಎಸ್. ಸಿದ್ಧರಾಮಯ್ಯ ಮಾತನಾಡಿದರು

ಅಮಿತ್ ಶಾ ರಾಜ್ಯ ಪ್ರವಾಸ ವಿಚಾರ

ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅಮೀತ್ ಶಾ ಅವರಿಗೆ ಬರಬೇಡಿ ಎಂದು ಯಾರು ಹೇಳಿದ್ದಾರೆ? ಅಮೀತಾ ಶಾ, ಜೆ. ಪಿ. ನಡ್ಡಾ, ಮೋದಿಯಾದರೂ ಬರಲಿ.  ಈ ಬಾರಿ ಬಿಜೆಪಿ ಸೋಲಿಸಿ ಕಾಂಗ್ರೆಸ್ಸಿಗೆ ಮತ್ತೇ ಆಶೀರ್ವಾದ ಮಾಡಬೇಕು ಎಂದು ರಾಜ್ಯದ ಜನತೆ ತೀರ್ಮಾನ ಮಾಡಿದ್ದಾರೆ.  ರಾಷ್ಟ್ರೀಯ ನಾಯಕರು ಎಷ್ಟು ಸಾರಿ ಬಂದರೂ ಬಿಜೆಪಿಗೆ ಏನೂ ಪ್ರಯೋಜನ ಆಗಲ್ಲ ಎಂದು ಅವರು ಭವಿಷ್ಯ ನುಡಿದರು.

ಬಿಜೆಪಿಯವರು ಮಾಡಿರುವ ಭ್ರಷ್ಟಾಚಾರ ಬದಲಾವಣೆ ಮಾಡಲು ಆಗುವುದಿಲ್ಲ.  ಬೆಲೆಯೇರಿಕೆ ಬದಲಾವಣೆ ಮಾಡೋಕೆ ಆಗೋಲ್ಲ.  ಯುವಕರು, ಮಹಿಳೆಯರ ಸಮಸ್ಯೆಗೆ ಸ್ಪಂದಿಸಲು ಆಗಿಲ್ಲ.  ಇಂದು ರೈತರು ಕಂಗಾಲಾಗಿದ್ದಾರೆ.  2017 ರಲ್ಲಿ ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದಿದ್ದರು.  ಈಗ ಐದು ವರ್ಷ ಮುಗಿದು ಹೋಯ್ತು.  ರೈತರ ಸಾಲ ದುಪ್ಪಟ್ಟು ಆಗಿದೆ ಹೊರತು ರೈತರ ಆದಾಯ ಹೆಚ್ಚಾಗಲಿಲ್ಲ.  ರೈತರ ಆದಾಯ ದುಪ್ಪಟ್ಟು ಆಗಿದ್ಯಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಪೆಟ್ರೋಲ್, ಡಿಸೇಲ್ ಗ್ಯಾಸ್ ಬೆಲೆ ಏರಿಕೆಯಾಗಿದೆ.  ಸಹಮತವಿದ್ದರೇ ಬಿಜೆಪಿ ಪರ ಮಾತಾಡಿ ಸಹಮತ ಇಲ್ಲ ಎನ್ನುವುದಾದರೆ ಬಿಜೆಪಿ ವಿರುದ್ಧ ಮಾತಾಡಿ, ಸತ್ಯ ಬರೆಯಿರಿ.  ನಾವೇನು ಸುಳ್ಳು ಬರಿಯಿರಿ ಎಂದು ಹೇಳಲ್ಲ.  ಸತ್ಯ ಬರೆಯಿರಿ.  ನಾವು ಸತ್ಯ ಹೇಳುತ್ತೇವೆ.  ಸುಳ್ಳು ಹೇಳೋಕೆ ಹೋಗಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಕನ್ನಡ ಹೋರಾಟಗಾರರ ವಿರುದ್ಧ ರೌಡಿಶೀಟ್ ಓಪನ್ ರದ್ದು ಪಡಿಸಲು ಆಗ್ರಹ

ಕನ್ನಡ ಭಾಷೆ, ಜಲ, ನೆಲಕ್ಕಾಗಿ ಹೋರಾಟ ಮಾಡಿದರೆ ಅವರ ಮೇಲೆ ಕೇಸ್ ಹಾಕಬಾರದು.  ಬೆಳಗಾವಿ ಕನ್ನಡ ಹೋರಾಟಗಾರರ ವಿರುದ್ಧ ರೌಡಿಶೀಟರ್ ಓಪನ್ ಮಾಡಬಾರದಿತ್ತು.  ರೌಡಿಶೀಟ ಓಪನ್ ಮಾಡಬಾರದು.  ಕನ್ನಡ ಹೋರಾಟಗಾರರ ವಿರುದ್ಧ ಕೇಸ್ ಹಾಕಬಾರದು.  ಅಲ್ಲದೇ, ಕೇಸ್ ಹಾಕಿದ್ದರೆ ತಕ್ಷಣವೇ ಕೇಸ್ ವಾಪಾಸ್ ಪಡೆಯಬೇಕು.  ಕೂಡಲೇ ರೌಡಿಶೀಟರ್ ಹಿಂಪಡೆಯಬೇಕು.  ನಮ್ಮ ಭಾಷೆ, ನೆಲ, ಜಲಕ್ಕಾಗಿ ಹೋರಾಟ ಮಾಡುವುದು ನಮ್ಮ ಹಕ್ಕು.  ಅದನ್ನು ಉಳಿಸಬೇಕಾಗಿರುವುದು ನಮ್ಮ ಸಂವಿಧಾನಿಕ ಹಕ್ಕು.  ಒಕ್ಕೂಟ ವ್ಯವಸ್ಥೆ ಇರೋದ್ಯಾಕೆ? ಮಹಾರಾಷ್ಟ್ರದವರೂ ನಮ್ಮ ಭಾರತೀಯರೆ.  ಹಾಗಂತ ಏನು ಮಾಡಿದರೂ ನಡೆಯೊಲ್ಲ.  ಕಾಲು ಕೆರೆದು ಜಗಳಕ್ಕೆ ಬರ್ತಾರೆ.  ಮಹಾಜನ್ ಆಯೋಗದ ವರದಿಯಲ್ಲಿ ತೀರ್ಮಾನ ಆಗಿಲ್ವಾ? ಎಂದು ಎಸ್. ಸಿದ್ಧರಾಮಯ್ಯ ಪ್ರಶ್ನಿಸಿದರು.

Leave a Reply

ಹೊಸ ಪೋಸ್ಟ್‌