ವಿಜಯಪುರ: ಮಕ್ಕಳನ್ನು ಸನ್ಮಾರ್ಗದಡೆಗೆ ಕರೆದೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಚಿತ್ರ ನಟಿ ಮತ್ತು ಮಾಜಿ ಸಚಿವೆ ಉಮಾಶ್ರಿ ಹೇಳಿದ್ದಾರೆ.
ನಗರದಲ್ಲಿ ಆಕ್ಸಫರ್ಡ್ ಐಐಟಿ ಓಲಂಪಿಯಾಡ್ ಶಾಲೆ ಆಯೋಜಿಸಿದ್ದ ದಿ ಇವನಿಂಗ್ ಆಫ್ ಮರ್ಯಾಲಿಟಿ ಹೆಸರಿನ ವಿಶೇಷ ಪರಿಕಲ್ಪನೆಯ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಒಳಗೊಂಡ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕೇವಲ ಮಕ್ಕಳಿಗೆ ಜನ್ಮ ನೀಡಿದರೆ ಸಾಲದು. ಅವರಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಸಂಸ್ಕಾರವಂತ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಪಾಲಕರು, ಶಿಕ್ಷಕರು, ಶಿಕ್ಷಣ ಸಂಸ್ಥೆಗಳ ಮೇಲಿದೆ. ಮಕ್ಕಳ ಆಸಕ್ತಿಯನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡುವ ಮೂಲಕ ನಾನಾ ರಂಗಗಳ ಸಾಧಕರಾಗಿ ಬೆಳೆಯಲು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ, ನಮ್ಮ ಆಕ್ಸಫರ್ಡ್ ಮತ್ತು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳಲ್ಲಿ ಓದಿರುವ ಮಕ್ಕಳು ವಾರಣಾಸಿಯ ಐಐಟಿಯಲ್ಲಿ ಪ್ರವೇಶ ಪಡೆದಿದ್ದಾರೆ. ಪ್ರಾಥಮಿಕ ಹಂತದಿಂದಲೇ ದೇಶದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಕ್ಕಳನ್ನು ಅಣಿಗೊಳಿಸುವ ಮಹತ್ವದ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ. ಈ ನಮ್ಮ ಸೇವಾ ಕಾರ್ಯದಲ್ಲಿ ಶಿಕ್ಷಕರು, ಶಿಕ್ಷಣ ಸಂಸ್ಥೆ, ಜೊತೆಗೆ ಪಾಲಕರ ಜವಾಬ್ದಾರಿ ಕೂಡ ಮಹತ್ವದ್ದಾಗಿದೆ. ಪಾಲಕ, ಶಿಕ್ಷಕ, ಶಿಕ್ಷಣ ಸಂಸ್ಥೆಗಳು ಜೊತೆಗೂಡಿ ಉತ್ತಮ ಕಾರ್ಯ ಮಾಡಿದರೆ ಬಲಿಷ್ಠ ಭಾರತ ಕಟ್ಟುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.
ಆಕ್ಸಫರ್ಡ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಶತಮಾನದ ಸಂತ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ನಡೆದಾಡಿದ ನೆಲದಲ್ಲಿ ಹುಟ್ಟಿರುವ ನಾವು ಆದರ್ಶ ಜೀವನವನ್ನು ನಡೆಸಿದರೆ ಶ್ರೀಗಳಿಗೆ ನಿಜವಾದ ಗೌರವ ಮತ್ತು ಶ್ರದ್ಧಾಂಜಲಿ ಸಲ್ಲಿಸಿದಂತೆ ಎಂದು ಹೇಳಿದರು.
ಬಸವಾದಿ ಶರಣರ ಪ್ರೇರಣೆಯಿಂದ ನಮ್ಮ ಮಕ್ಕಳು ಬರಿ ಶೈಕ್ಷಣಿಕವಾಗಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದರೆ ಸಾಲದು. ಜೀವನದ ಪರೀಕ್ಷೆಯಲ್ಲಿಯೂ ಅವರು ಯಶಸ್ವಿಯಾಗುವಂತಾಗಲಿ ಎಂದು ಅವರು ಹಾರೈಸಿದರು.
ಈ ಸಮಾರಂಭದಲ್ಲಿ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ ರಾಜಶೇಖರ ಕೌಲಗಿ, ಮಂಜುನಾಥ ಕೌಲಗಿ, ಆಕ್ಸಫರ್ಡ್ ಸಂಸ್ಥೆಯ ಆಡಳಿತಾಧಿಕಾರಿ ಪ್ರದೀಪ ಲಿಂಗದಳ್ಳಿ, ಆಕ್ಸಫರ್ಡ್ ಪ್ರೌಢ ಶಾಲೆಯ ಪ್ರಾಚಾರ್ಯ ಜೆ. ಎಂ. ಇನಾಮದಾರ, ಅನಸೂಯಾ ಅಮರಣ್ಣವರ, ಜಿ. ಎಂ. ಕಟ್ಟಿ, ದರ್ಶನ ಬೋಹಿತೆ, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.