ನಾಥೋರಾಮ್ ಗೋಡ್ಸೆ, ವೀರ ಸಾವರಕರ ಪೂಜೆ ಮಾಡುವವರಿಂದ ಪಾಠ ಹೇಳಿಕೊಡುವ ಅಗತ್ಯವಿಲ್ಲ- ಅಮಿತ್ ಶಾ ವಿರುದ್ಧ ಸಿದ್ಧರಾಮಯ್ಯ ವಾಗ್ದಾಳಿ

ವಿಜಯಪುರ: ನಾಥೋರಾಮ್ ಗೋಡ್ಸೆ ಮತ್ತು ವೀರ್ ಸಾವರಕರ ಪೂಜೆ ಮಾಡುವವರು ನಮಗೇನು ಪಾಠ ಹೇಳಿಕೊಡುತ್ತಾರೆ ಎಂದು ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಆರಾಧನೆ ಮಾಡುವವರಿಗೆ ಮತ ಹಾಕಬೇಡಿ ಎಂದು ಮಂಗಳೂರಿನಲ್ಲಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾತಿಗೆ ತಿರುಗೇಟು ನೀಡಿದರು.

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರನ್ನು ಕೊಂದು ಹಾಕಿದವರನ್ನು ಪೂಜಿಸುವ ಪಕ್ಷದ ಬಗ್ಗೆ ಏನು ಮಾಡಬೇಕು? ವೀರ ಸಾವರಕರ ಬ್ರಿಟಿಷ್ ಸರಕಾರದಲ್ಲಿ ಪೆನ್ಷನ್ ತೆಗೆದುಕೊಳ್ಳುತ್ತಿದ್ದರು.  ಅವರನ್ನು ಇವರು ಪೂಜಿಸುತ್ತಾರೆ.  ಅವರ ಬಗ್ಗೆ ನಾವು ಮಾತನಾಡಲು ಆಗುತ್ತಾ? ಗೋಡ್ಸೆ ಪೂಜೆ ಮಾಡುವವರು ನಮಗ ಏನು ಹೇಳಿ ಕೊಡುತ್ತಾರೆ? ಸಾವರಕರ ಅವರ ಪೂಜೆ ಮಾಡುವವರು ನಮಗೇನು ಪಾಠ ಹೇಳಿ ಕೊಡುತ್ತಾರೆ?  ಎಂದು ಸಿದ್ಧರಾಮಯ್ಯ ಲೇವಡಿ ಮಾಡಿದರು.

ಬಿಜೆಪಿಯವರು ಕಿತ್ತೂರು ರಾಣಿ ಚೆನ್ನಮ್ಮ ಅ;ರಿಗೆ ಎಂದಾದರೂ ಗೌರವ ನೀಡಿದ್ದಾರಾ? ಎಂದು ಪ್ರಶ್ನಿಸಿದ ಅವರು, ಟಿಪ್ಪು ಸುಲ್ತಾನ್ ಓರ್ವ ದೇಶಪ್ರೇಮಿ ಎಂದು ನಂಬಿಕೆ ಇಟ್ಟುಕೊಂಡಿದ್ದೇವೆ.  ಅವರ ಜೊತೆ ಇನ್ನೂ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಝಾನ್ಸಿರಾಣಿ ಲಕ್ಷ್ಮಿಬಾಯಿ, ಒನಕೆ ಓಬವ್ವ, ಬೆಳವಾಡಿ ಮಲ್ಲಮ್ಮ, ರಾಣಿ ಅಬ್ಬಕ್ಕ ಎಲ್ಲರೂ ದೇಶಪ್ರೇಮಿಗಳಾಗಿದ್ದಾರೆ.  ಅವರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ನಾವು ಶ್ರದ್ಧೆಯಿಂದ, ಭಕ್ತಿಯಿದ ಗೌರವಿಸುತ್ತೇವೆ.   ಕಿತ್ತೂರು ರಾಣಿ ಚೆನ್ನಮ್ಮಳ ಜಯಂತಿ ಮಾಡಿದವನು ನಾನು.  ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ರಚಿಸಿ ರೂ. 262 ಕೋ. ಹಣ ನೀಡಿದವನು ನಾನು ಎಂದು ಅವರು ಹೇಳಿದರು.

ದೇಶಪ್ರೇಮಿಗಳನ್ನು ನಾವು ಗೌರವಿಸ್ತೀವಿ ಎಂದು ಬಿಜೆಪಿ‌ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡಿದ ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ, ಕಾಂಗ್ರೆಸ್ ಸಂವಿಧಾನ ಮೇಲೆ ನಂಬಿಕೆ ಇಟ್ಟುಕೊಂಡಿರೋ ಪಕ್ಷವಾಗಿದೆ.  ಬಿಜೆಪಿ ಸಂವಿಧಾನಕ್ಕೆ ಗೌರವ, ನಂಬಿಕೆ ಇಲ್ಲದ  ವಿರೋಧಿ ಪಕ್ಷವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಜೆಡಿಎಸ್ ಒಂದೇ ನಾಣ್ಯದ ಎರಡು ಮುಖವಿದ್ದಂತೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಯ ಕುರಿತು ಟೀಕಾಪ್ರಹಾರ ನಡೆಸಿದ ಅವರು, ಕಾಂಗ್ರೆಸ್ ಸಂವಿಧಾನ ಮೇಲೆ ನಂಬಿಕೆ ಇಟ್ಟುಕೊಂಡಿದೆ.  ಬಿಜೆಪಿ ಸಂವಿಧಾನ ವಿರೋಧಿ ಪಕ್ಷವಾಗಿದೆ.  ಇನ್ನೂ ಜೆಡಿಎಸ್ ಜಾತ್ಯತೀತ ಪಕ್ಷ.  ಹೀಗಿರುವಾಗ ಹೇಗೆ ಒಂದಾಗಲು ಸಾಧ್ಯ ಎಂದು ಅವರು ಮರುಪ್ರಶ್ನಿಸಿದರು.

ಈ ಹಿಂದೆ ಬಿಜೆಪಿ ಮತ್ತು ಜೆಡಿಎಸ್ ಸೇರಿ ಸರಕಾರ ರಚನೆ ಮಾಡಿದ್ದರು.  ಇನ್ನೂ ಜೆಡಿಎಸ್ ಜಾತ್ಯಾತೀತ ಪಕ್ಷ, ಹೇಗೆ ಒಂದಾಗೋದಕ್ಕೆ ಸಾಧ್ಯ ಎೞಂದು ಎಸ್. ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ, ಕಾಂಗ್ರೆಸ್ ಮುಖಂಡರಾದ ಸೋಮನಾಥ ಕಳ್ಳಿಮನಿ, ಎಸ್. ಎಂ. ಪಾಟೀಲ ಗಣಿಹಾರ, ಪ್ರೊ. ರಾಜು ಆಲಗೂರ, ಹಮೀದ ಮುಶ್ರಿಫ್, ಸುರೇಶ ಘೋಣಸಗಿ, ತಾಂಬೋಳಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌