ವಿಜಯಪುರ: ಚಿನ್ನದಂಗಡಿಯಲ್ಲಿ ಬೆದರಿಸಿ ಹಣ ದರೋಡೆ ಮಾಡಲು ಬಂದಿದ್ದ ದುರ್ಷ್ಕಮಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಸಾರ್ವಜನಿಕರನ್ನು ಹೆದರಿಸಿ ಆತಂಕ ಸೃಷ್ಠಿಸಿದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದಿದೆ.
ಸಿಂದಗಿ ಪಟ್ಟಣದ ಶಾಂತವೀರ ಮಠದ ರಸ್ತೆಯ ಪಕ್ಕದಲ್ಲಿ ಕಾಳು ಪತ್ತಾರ ಎಂಬುವರಿಗೆ ಸೇರಿದ ನ್ಯೂ ಚಾಮುಂಡೇಶ್ವರಿ ಜ್ಯುವೆಲರ್ಸ್ ಅಂಗಡಿ ಬಳಿ ಈ ಘಟನೆ ನಡೆದಿದೆ. ಸಂಜೆ ಚಿನ್ನದ ಅಂಗಡಿಗೆ ಬಂದಿದ್ದ ದುಷ್ಕರ್ಮಿಗಳು, ಜುವೆಲರ್ಸ್ ಅಂಗಡಿಗೆ ನುಗ್ಗಿ ಚಿನ್ನಾಭರಣ ಕಳ್ಳತನಕ್ಕೆ ಯತ್ಸಿಸಿದ್ದಾರೆ. ಈ ಸಂದರ್ಭದಲ್ಲಿ ಅಂಗಡಿಗೆ ಬಂದಿದ್ದ ಆಲಮೇಲ ಮೂಲದ ವ್ಯಕ್ತಿಯೊಬ್ಬರು ಇವರಿಗೆ ಪ್ರತಿರೋಧ ಒಡ್ಡಿದ್ದಾರೆ.
ಕಾಳು ಪತ್ತಾರ ಎಂಬುವರ ಅಂಗಡಿಗೆ ಆಗಮಸಿದ ಕಳ್ಳರು ವಿಫಲ ಯತ್ನ ನಡೆಸಿ ಕೊನೆಗೆ ಗಾಳಿಯಲ್ಲಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಈ ಘಟನೆಯನ್ನು ಕಣ್ಣಾರೆ ಕಂಡಿರುವ ಪ್ರತ್ಯಕ್ಷದರ್ಶಿ ಮತ್ತು ಕಾಳು ಪತ್ತಾರ ಸಹೋದರ ನಾಗರಾಜ ಪ್ತತಾರ ಮಾತನಾಡಿ, ನಮ್ಮ ಅಂಗಡಿಗೆ ಪರಿಚಯವಿಲ್ಲದ ಐದು ಜನ ಬಂದಿದ್ದರು. ರೊಕ್ಕಾ ತೆಗಿ, ರೊಕ್ಕ ತೆಗಿ ಎಂದು ಹಿಂದಿಯಲ್ಲಿ ಹೇಳುತ್ತಿದ್ದರು. ಅಲ್ಲದೇ, ಗನ್ ತೋರಿಸುತ್ತಿದ್ದರು. ಆಗ ನಾನು ಪ್ರತಿರೋಧ ಒಡ್ಡಿದೆ. ಏನು ಮಾತನಾಡುತ್ತಿದ್ದೀರಿ ಎಂದು ಪೊಲೀಸರಿಗೆ ಫೋನ್ ಮಾಡುವುದಾಗಿ ಹೊರಗೆ ಹೋದೆ. ಆಗ ಅವರಲ್ಲಿ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಓಡಿದರು. ನಾನು ಅವರನ್ನು ಬೆನ್ನು ಹತ್ತಿ ಹೋಗಿದ್ದೇನೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಯಾವುದೇ ರೀತಿ ಹಾನಿಯಾಗಿಲ್ಲ. ಹಣ ಕೂಡ ಸುರಕ್ಷಿತವಾಗಿದೆ ಎಂದು ಅಂಗಡಿಯ ಮಾಲಿಕ ನಾಗರಾಜ ಪತ್ತಾರ ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಎರಡು ಜೀವಂತ ಗುಂಡುಗಳು ಪತ್ತೆಯಾಗಿವೆ. ನಾನು ಅವರಿಗೆ ಪ್ರತಿರೋಧ ಒಡ್ಡುತ್ತಿದ್ದ ಹಿನ್ನೆಲೆಯಲ್ಲಿ ನನಗೆ ಏನೂ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಎರಡು ಬೈಕ್ ಗಳ ಮೇಲೆ ಒಟ್ಟು ಐದು ಜನ ದರೋಡೆಗೆ ಆಗಮಿಸಿದ್ದರು. ಅವರ ಮುಖ ಪರಿಚಯವೂ ನನಗಿಲ್ಲ. ಸಂಜೆ 6.55 ರಿಂದ 7 ಗಂಟೆಯ ಒಳಗೆ ಈ ಘಟನೆ ನಡೆದಿದೆ. ಅವರ ಬೈಕಿಗೆ ನಂಬರ್ ಪ್ಲೇಟ್ ಇರಲಿಲ್ಲ. ಅವರೆಲ್ಲರೂ ಮಾಸ್ಕ್ ಹಾಕಿದ್ದರು ಎಂದು ನಾಗರಾಜ ಪತ್ತಾರ ಮಾಹಿತಿ ನೀಡಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಸಿಂದಗಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.
ಪೊಲೀಸ್ ಮಾಹಿತಿಯಂತೆ ಪಲ್ಸರ್ ಬೈಕ್ ಮೇಲೆ ಮೇಲೆ ಬಂದ ಐವರ ಪೈಕಿ ಓರ್ವ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಗುಂಡಿನ ಶಬ್ದ ಕೇಳುತ್ತಿದ್ದಂತೆ ಸ್ಥಳೀಯರು ಜಮಾಯಿಸುತ್ತಿದ್ದಂತೆ ಆರೋಪಿಗಳು ಪರಾರಿಗೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಒಂದು ಪಲ್ಸರ್ ಬೈಕ್ ಕೂಡ ಹಿಡಿದಿದ್ದಾರೆ. ಇನ್ನುಳಿದ ಮೂರು ಜನ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈಗ ವಶಕ್ಕೆ ಸಿಕ್ಕಿರುವ ಇಬ್ಬರ ಬಳಿ ಒಂದು ಕಂಟ್ರಿ ಪಿಸ್ತೂಲು್ ಇದ್ದು, ಮೂರು ಜೀವಂತ ಗುಂಡುಗಳೂ ಇವೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ವಶಕ್ಕೆ ಪಡೆದ ಇಬ್ಬರು ಆರೋಪಿಗಳು, ಪಲ್ಸರ್ ಬೈಕ್ ಮತ್ತು ಮೂರು ಜೀವಂತ ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತಾವು ಮಹಾರಾಷ್ಟ್ರದ ಪುಣೆ ಮೂಲದವರು ಎಂದು ಆರೋಪಿಗಳು ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಿಂದಗಿ ಪಟ್ಟಣದಲ್ಲಿ ನಡೆದಿರುವ ಈ ಘಟನೆ ಜನರಲ್ಲಿ ಆತಂಕ ಮೂಡಿಸಿದೆ.
ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.