ವಿಜಯಪುರ: ಬಸವನಾಡು ವಿಜಯಪುರದಲ್ಲಿ ಇದೇ ಮೊದಲ ಬಾರಿಗೆ ವೈದ್ಯರು ಮೂತ್ರಪಿಂಡ ಕಸಿಯನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಯಶೋಧಾ ಆಸ್ಪತ್ರೆಯ ಮೂತ್ರಪಿಂಡ ವಿಭಾಗದ ಮುಖ್ಯಸ್ಥ ಡಾ. ರವೀಂದ್ರ ಮದ್ದರಕಿ, ಈ ಶಸ್ತ್ರಚಿಕಿತ್ಸೆ ವಿಜಯಪುರ ಜಿಲ್ಲೆಯ ಇತಿಹಾಸದಲ್ಲಿ ಒಂದು ಮೈಲುಗಲ್ಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಶಸ್ತ್ರಚಿಕಿತ್ಸೆಯ ಯಶಸ್ಸಿನಿಂದಾಗಿ ಈ ಭಾಗದಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವವರು ಬೇರೆ ಕಡೆಗೆ ಚಿಕಿತ್ಸೆಗೆ ಹೋಗುವುದನ್ನು ತಪ್ಪಿಸಲು ನರವಾಗಿದೆ. ಅಲ್ಲದೇ, ಅಂಗಾಂಗ ಕಸಿ ಅಗತ್ಯವಿರುವವರಿಗೆ ಮತ್ತು ಸಂಕಷ್ಟದಲ್ಲಿರುವ ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಂತಾಗಿದೆ ಎಂದು ತಿಳಿಸಿದರು.
ವಿಜಯಪುರ ನಗರದ ಹೊರವಲಯದ ಭೂತನಾಳ ಘಟಕದ ಯಶೋದಾ ಸಂಸ್ಥೆಯು ಇದೇ ಮೊದಲ ಬಾರಿಗೆ ಕಿಡ್ನಿ ಕಸಿ ಮಾಡಿದೆ. ಈ ಮೂಲಕ ಬೆಳಗಾವಿ ಜಿಲ್ಲೆಯ ಹಾರೂಗೇರಿಯ ಯುವಕನಿಗೆ ಹೊಸ ಜೀವನವನ್ನು ನೀಡಿದೆ. 18 ವರ್ಷದ ಯುವಕ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ. ಅಲ್ಲದೇ, ಕಳೆದ ಮೂರು ವರ್ಷಗಳಿಂದ ಹಿಮೋ- ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದ. ಈ ಯುವಕನಿಗೆ ಯಶೋದಾ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡಿದ್ದು, ರೋಗಿಯ ಅಜ್ಜಿ ಸ್ವಯಂ ಇಚ್ಛೆಯಿಂದ ತಮ್ಮ ಒಂದು ಕಿಡ್ನಿದಾನ ಮಾಡಲು ಒಪ್ಪಿದರು. ಅವರು ನೀಡಿದ ಕಿಡ್ನಿಯನ್ನು ಯುವಕನಿಗೆ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿ ಕಸಿ ಮಾಡಲಾಯಿತು ಎಂದು ಅವರು ತಿಳಿಸಿದರು.
ಈ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಕಾನೂನಾತ್ಮಕವಾಗಿ ಮತ್ತು ವೈದ್ಯಕೀಯವಾಗಿ ಕಸಿ ಮಾಡಲು ಅಗತ್ಯವಿರುವ ಎಲ್ಲ ನಿಯಮಗಳನ್ನು ಪಾಲನೆ ಮಾಡಲಾಯಿತು. ಕಿಡ್ನಿ ಕಸಿಗೆ ಅಗತ್ಯ ಪರೀಕ್ಷೆಗಳಾದ ಕ್ರಾಸ್ ಮ್ಯಾಚ್ ಪರೀಕ್ಷೆ, ಎಚ್ಎಲ್ಎ ಟೈಪಿಂಗ್ ಮತ್ತು ಯಾವುದೇ ಸೋಂಕನ್ನು ತಳ್ಳಿಹಾಕುವ ಪರೀಕ್ಷೆಗಳನ್ನು ನಡೆಸಲಾಯಿತು. ರೋಗಿಯ ಸೂಕ್ತ ಸ್ಪಂದನೆಯಿಂದಾಗಿ ಯಶೋದಾ ಸಂಸ್ಥೆಯಲ್ಲಿನ ಕಿಡ್ನಿ ಕಸಿ ಮಾಡುವ ತಜ್ಞವೈದ್ಯರ ತಂಡ, ತೀವ್ರ ನಿಗಾ ಘಟಕದ ವೈದ್ಯರು ಸಾಕಷ್ಟು ನಿಗಾವಹಿಸಿ ಯಶಸ್ವಿ ಕಸಿ ಮಾಡಿದ್ದಾರೆ ಎಂದು ಡಾ. ರವೀಂದ್ರ ಮದ್ದರಕಿ ತಿಳಿಸಿದರು.
ಮೂತ್ರಪಿಂಡ ಕಸಿ ಮಾಡುವಿಕೆಯು ಮೂತ್ರಪಿಂಡದ ಬದಲಿ ಚಿಕಿತ್ಸೆಯ ಅತ್ಯಂತ ಅಪೇಕ್ಷಿತ ಮತ್ತು ವೆಚ್ಚದ ಹಾಗೂ ಪರಿಣಾಮಕಾರಿ ವಿಧಾನವಾಗಿದ್ದು ಕೊನೆಯ ಹಂತದ ಮೂತ್ರಪಿಂಡ ಕಾಯಿಲೆ (ಸಿಕೆಡಿ ಹಂತ 5) ರೋಗಿಗಳಿಗೆ ಅಗತ್ಯವಾದ ಚಿಕಿತ್ಸಾ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಮೂಲಕ ಇದಕ್ಕೆ ಅಗತ್ಯವಾಗಿರುವ ಎಲ್ಲ ಸೌಲಭ್ಯಗಳು ಆಸ್ಪತ್ರೆಯಲ್ಲಿ ಲಭ್ಯವಿವೆ ಎಂದು ಅವರು ತಿಳಿಸಿದರು.
ಈ ಶಸ್ತಚಿಕಿತ್ಸೆ ಸಂದರ್ಭದಲ್ಲಿ ಡಾ. ಭುವನೇಶ ಆರಾಧ್ಯ, ಡಾ. ಅವಿನಾಶ ಓದುಗೌಡರ, ಡಾ. ಸುನೀಲಕುಮಾರ, ಡಾ. ಸಜ್ಜನ, ಡಾ. ಶ್ರೀನಾಥ ಪಾಟೀಲ, ಡಾ. ಮಹೇಶ ಬಾಗಲಕೋಟಕರ, ಸಹಾಯಕರಾಗಿ ಡಾ. ಮಂಜುನಾಥ ದೋಶೆಟ್ಟಿ ಮತ್ತು ಡಾ. ಸಂತೋಷ ಕಾಮಶೆಟ್ಟಿ ಪಾಲ್ಗೋಂಡಿದ್ದರು ಎಂದು ಅವರು ತಿಳಿಸಿದರು.
ಮೂತ್ರಪಿಂಡ ದಾನಿಗಳ ಘಟಕ
ಇದೇ ವೇಳೆ ಯಶೋಧಾ ಆಸ್ಪತ್ರೆಯಲ್ಲಿ ಮೂತ್ರಪಿಂಡ ದಾನಿಗಳನ್ನು ಅಂದರೆ, ಮೆದುಳು ನಿಷ್ಕ್ರೀಯಗೊಂಡಿರುವ ಹಿನ್ನೆಲೆಯಲ್ಲಿ ದಾನ ಮಾಡುವವರು, ಈ ಆಸ್ಪತ್ರೆಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಕಿಡ್ನಿ ಕಸಿ ಅಗತ್ಯವಾಗಿರುವ ರೋಗಿಗಳೂ ಕೂಡ ಈ ಆಸ್ಪತ್ರೆಯಲ್ಲಿ ತಮ್ಮ ಹೆಸರು ನೋಂದಾಯಿಸಬಹುದು. ಈ ಮೂಲಕ ಮೂತ್ರಪಿಂಡ ಕಸಿಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊ. ನಂ. 9611140135 ಸಂಪರ್ಕಿಸಬಹುದು ಎಂದು ಯಶೋದಾ ಆಸ್ಪತ್ರೆ ಪದಾಧಿಕಾರಿ ರವಿ ಪವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.