ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿ- ವಿಚ್ಛೇದನ ಕೋರಿ ಬಂದ ದಂಪತಿಗಳ ಮನವೊಲಿಕೆ ಸೇರಿ 7124 ಪ್ರಕರಣ ಇತ್ಯರ್ಥ

ವಿಜಯಪುರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲೆಯಾದ್ಯಂತ ಆಯೋಜಿಸಲಾಗಿದ್ದ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮ ಯಶಸ್ವಿಯಾಗಿದೆ. 

ಲೋಕ ಅದಾಲತ್‍ನಲ್ಲಿ ಒಟ್ಟು 7124 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಹೊಸಮನಿ ತಿಳಿಸಿದ್ದಾರೆ.

ವಿಚ್ಛೇಧನ ಕೋರಿ ಅರ್ಜಿ ಸಲ್ಲಿಸಿದ ದಂಪತಿಗಳಿಗೆ ತಿಳಿವಳಿಕೆ ನೀಡಿ, ಮನವೊಲಿಸುವ ಮೂಲಕ ವಿಚ್ಛೇದನದಿಂದ ಹಿಂದೆ ಸರಿದು, ಪರಸ್ಪರ ಉತ್ತಮ ಸಮನ್ವಯತೆಯಿಂದ ಜೀವನ ಸಾಗಿಸುವಂತೆ ತಿಳಿಹೇಳಿ ವ್ಯಾಜ್ಯವನ್ನು ಇತ್ಯರ್ಥಪಡಿಸಲಾಯಿತು.  ಅಲ್ಲದೇ, ಇನ್ನೊಂದು ಪ್ರಕರಣದಲ್ಲಿ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿಗೆ ರಾಜಿ ಸಂಧಾನದ ಮೂಲಕ ವಿಮೆ ಕಂಪನಿಯೊಂದರಿಂದ ರೂ. 22 ಲಕ್ಷ ಪರಿಹಾರ ಧನದ ಚೆಕ್ ನ್ನು ಜನತಾ ನ್ಯಾಯಾಲಯದಲ್ಲಿ ನೀಡಲಾಯಿತು.

ಲೋಕ ಅದಾಲತ್‍ನಲ್ಲಿ ವಿಚಾರಣೆಗೆ ಬಾಕಿಯಿದ್ದ ಆಸ್ತಿ ವಿಭಾಗದ 129, ಮೋಟಾರು ಅಪಘಾತ ಪರಿಹಾರ ಕೋರಿದ್ದ 135 ಸೇರಿದಂತೆ 7124 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.  ವ್ಯಾಜ್ಯ ಪೂರ್ವ 102635 ಪ್ರಕರಣಗಳನ್ನು ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಇತ್ಯರ್ಥಪಡಿಸಿ, ಕಕ್ಷಿದಾರರಿಗೆ ಬರಬೇಕಾಗಿದ್ದ ಪರಿಹಾರ ಹಾಗೂ ಸರಕಾರಕ್ಕೆ ಜಮೆ ಆಗಬೇಕಾಗಿದ್ದ ದಂಡ ಸೇರಿದಂತೆ ಒಟ್ಟು ರೂ. 805640113 ಗಳ ಇತ್ಯರ್ಥಪಡಿಸಲಾಗಿದೆ.

ಜಿಲ್ಲಾದ್ಯಂತ ನಡೆದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ವಿಶೇಷವಾಗಿ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ವಿಜಯಪುರ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶ ನ್ಯಾ. ಎಚ್. ಪಿ. ಸಂದೇಶ ಭಾಗವಹಿಸಿದ್ದರು.  ಅಲ್ಲದೇ, ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಿವಾಜಿ ನಲವಡೆ, ನ್ಯಾಯಿಕ ಸಂಧಾನಕಾರ ಶಿವಾನಂದ ಜೀಪರೆ, ವಕೀಲ ಸಂಧಾನಕಾರ ಪಿ.ಬಿ.ಪಾಟೀಲ, ವಕೀಲರ ಸಂಘದ ಅಧ್ಯಕ್ಷ ಈರಣ್ಣ ಚಾಗಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಲೋಕ್ ಅದಾಲತ್ ಕಾರ್ಯಕ್ರಮಕ್ಕೆ ಸಹಕರಿಸಿದ ಜಿಲ್ಲೆಯ ಕಕ್ಷಿದಾರರು, ನ್ಯಾಯವಾದಿಗಳು, ಪೋಲಿಸ್ ಅಧಿಕಾರಿ, ಮಹಾನಗರ ಪಾಲಿಕೆ, ಕಂದಾಯ ಇಲಾಖೆ, ನೀರು ಸರಬರಾಜು ಇಲಾಖೆ, ಕಾರ್ಯಕ್ರಮದ ಜಾಗೃತಿ ಮೂಡಿಸಲು ಸಹಕರಿಸಿದ ಎಲ್ಲ ಮಾಧ್ಯಮದವರಿಗೆ ವೆಂಕಣ್ಣ ಹೊಸಮನಿ ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

ಹೊಸ ಪೋಸ್ಟ್‌