ವಿಜಯಪುರ: ದ್ರಾಕ್ಷಿ ಕಣಜ ಬಸವನಾಡು ವಿಜಯಪುರ ಜಿಲ್ಲೆಯ ದ್ರಾಕ್ಷಿ ಬೆಳೆಗೆ ಹೆಸರುವಾಸಿ. ಇಲ್ಲಿ ಬೆಳೆಯುವ ಉತೃಷ್ಠ ಗುಣಮಟ್ಟದ ದ್ರಾಕ್ಷಿ ದೇಶವಷ್ಟೇ ಅಲ್ಲ, ವಿದೇಶಗಳಲ್ಲಿಯೂ ಫೇಮಸ್ ಆಗಿದೆ. ಹೀಗಾಗಿ ರೈತರು ಅಕ್ಕರೆಯಿಂದ ಬೆಳೆಯುವ ಸಕ್ಕರೆ ರುಚಿಯ ದ್ರಾಕ್ಷಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ವಿಜಯಪುರ ತೋಟಗಾರಿಕೆ ಇಲಾಖೆ ರೈತರು ಬೆಳೆಯುವ ದ್ರಾಕ್ಷಿಯನ್ನು ನೇರವಾಗಿ ಗ್ರಾಹಕರಿಗೆ ಪೂರೈಸಲು ನಮ್ಮ ವಿಜಯಪುರ ದ್ರಾಕ್ಷಿ ಬಿಡುಗಡೆ ಮಾಡಿದೆ.
ತೋಟಗಾರಿಕೆ ಇಲಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ರಾಹುಲ ಶಿಂಧೆ ದ್ರಾಕ್ಷಿಯನ್ನು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ಜಿಲ್ಲೆಯ ದ್ರಾಕ್ಷಿ ಬೆಳೆಗಾರರಿಗೆ ಪ್ರೋತ್ಸಾಹ ನೀಡಿ, ಜಿಲ್ಲೆಯ ದ್ರಾಕ್ಷಿಯನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ ವಹಿವಾಟು ನಡೆಸಲು ಉತ್ತೇಜನ ನೀಡುವ ಉದ್ದೇಶದಿಂದ ‘ನಮ್ಮ ವಿಜಯಪುರ ದ್ರಾಕ್ಷಿ’ಎಂದು ಬ್ರ್ಯಾಂಡಿಂಗ್ ಮಾಡಲಾಗಿದ್ದು ಈ ಕುರಿತು ಹೆಚ್ಚಿನ ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ನಗರದ ಅಂಬೇಡ್ಕರ ಸರ್ಕಲ್ ಹತ್ತಿರದ ಬಸವ ವನದಲ್ಲಿ ಫೆಬ್ರವರಿ 16 ರಿಂದ 20ರ ವರೆಗೆ ಪ್ರತಿದಿನ ಬೆ. 11 ರಿಂದ ಸಂ. 6 ಗಂಟೆಯ ವರೆಗೆ ದ್ರಾಕ್ಷಿ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ವಿಜಯಪುರ ಜಿಲ್ಲಾ ತೋಟಗಾರಿಕೆ ಸಂಘ ಹಾಗೂ ಬೆಂಗಳೂರಿನ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಇವರ ಸಹಯೋಗದೊಂದಿಗೆ ಮಾರಾಟ ಮೇಳ ಹಾಗೂ ಪ್ರದರ್ಶನ ಏರ್ಪಡಿಸಲಾಗಿದೆ. ಈ ಪ್ರದರ್ಶನದಲ್ಲಿ ರೈತರು ಬೆಳೆದ ನಾನಾ ತಳಿಗಳ ಪ್ರದರ್ಶನ ಹಾಗೂ ಮಾರಾಟಕ್ಕಾಗಿ 10 ರಿಂದ 12 ಮಳಿಗೆಗಳನ್ನು ನಿರ್ಮಿಸಿ, ಜಿಲ್ಲೆಯಲ್ಲಿ ಬೆಳೆಯುವ ಸುಮಾರು 12 ಬೇರೆ ಬೇರೆ ತಳಿಗಳಾದ ಥಾಮ್ಸನ್ ಸೀಡಲೆಸ್, ಮಾಣಿಕ್ ಚಮನ್, ಸೋನಾಕಾ, ಎಸ್. ಎಸ್. ಎನ್, ಅನುಷ್ಕಾ, ಶರದ ಸೀಡಲೆಸ್, ಕೃಷ್ಣಾ ಸೆಂಡೀಕ್ಸ್ ಮತ್ತು ಜ್ಯೋತಿ ಮುಂತಾದ ತಳಿಗಳ ದ್ರಾಕ್ಷಿ ಮಾರಾಟ ಹಾಗೂ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ವಿಜಯಪುರ ಜಿಲ್ಲೆಯು ತೋಟಗಾರಿಕೆ ಜಿಲ್ಲೆಯಾಗಿದ್ದು, 91,546 ಹೇಕ್ಟರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಪ್ರಮುಖವಾಗಿ ದ್ರಾಕ್ಷಿ, ಲಿಂಬೆ, ದಾಳಿಂಬೆ ಮತ್ತು ಈರುಳ್ಳಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದ ಆಹಾರ ಧಾನ್ಯಗಳು, ಬೆಳೆ, ಹಣ್ಣುಗಳ ಮಳಿಗೆಗಳನ್ನು ಸ್ಥಾಪಿಸಿ ಮಾರುಕಟ್ಟೆಯಲ್ಲಿ ಮುಕ್ತವಾದ ರೀತಿಯಲ್ಲಿ ಹೊರ ರಾಜ್ಯಗಳಲ್ಲೂ ನಮ್ಮ ನಾಡಿನ ಹಣ್ಣು ವ್ಯಾಪಾರ ಮಾರಾಟವಾಗುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಸಿಇಓ ಮಾಹಿತಿ ನೀಡಿದರು.
ರಾಜ್ಯದಲ್ಲಿ ಒಟ್ಟು 32,473ಹೆಕ್ಟೆರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದ್ದು, ವಿಜಯಪುರ ಜಿಲ್ಲೆಯಲ್ಲಿ 20,911 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುತ್ತಿದೆ. ಒಟ್ಟು 13,377 ರೈತರಿದ್ದು, ಇದರಲ್ಲಿ 4,675 ಸಣ್ಣ ರೈತರು ಮತ್ತು 8,702 ದೊಡ್ಡ ರೈತರು ದ್ರಾಕ್ಷಿ ಬೆಳೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಸುಮಾರು 5,22,775 ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತಿದ್ದು, ಇದರ ಶೇ. 90 ರಷ್ಟು ಮೌಲ್ಯಾಭಿವೃದ್ಧಿಪಡಿಸಿ 24 ಮೆಟ್ರಿಕ್ ಟನ್ ದ್ರಾಕ್ಷಿ ಉತ್ಪಾದನೆಯಾಗುತ್ತಿದೆ. ಉಳಿದ ಶೇ. 10 ರಷ್ಟು ಅಂದರೆ ಸುಮಾರು 52,000 ಮೆಟ್ರಿಕ್ ಟನ್ ನಷ್ಟು ದ್ರಾಕ್ಷಿಯನ್ನು ತಾಜಾ ಹಣ್ಣುಗಳಾಗಿ ಮಾರಾಟ ಮಾಡಲಾಗುತ್ತಿದೆ ಎಂದು ರಾಹುಲ ಶಿಂಧೆ ತಿಳಿಸಿದರು.
ವಿಜಯಪುರ ನಗರದ ಪ್ರಮುಖ ಕಾಲನಿಗಳಲ್ಲಿರುವ ಹಾಪಕಾಮ್ಸ್ ಮಳಿಗೆಗಳಲ್ಲಿಯೂ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಗಾಂಧಿಚೌಕ್, ಗೋದಾವರಿ, ಹೊಟೇಲ್, ಸಿದ್ದೇಶ್ವರ ದೇವಸ್ಥಾನ ಹತ್ತಿರ ಹಾಗೂ ಬಿ. ಎಲ್. ಡಿ. ಇ ಎಂಜಿನಿಯರಿಂಗ್ ಕಾಲೇಜ್ ಹತ್ತಿರ ಕೂಡ ಪ್ರತ್ಯೇಕವಾದ ಸ್ಟಾಲ್ ಗಳನ್ನು ನಿರ್ಮಿಸಲಾಗುವುದು. ಶಿವರಾತ್ರಿ ಹಬ್ಬದ ಪ್ರಯುಕ್ತ ಅವಶ್ಯಕತೆಯಿರುವ ಹಣ್ಣುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ದಾಕ್ಷಿ ಹಣ್ಣಿನ ಜೊತೆ ಕಲ್ಲಂಗಡಿ, ಬಾರಿಕಾಯಿ, ಪಪ್ಪಾಯ, ಪೇರು, ಗೆಣಸು, ಗಜ್ಜರಿ ಹಾಗೂ ಮಹಿಳಾ ಸ್ವಸಹಾಯ ಸಂಘ (NRLM)ದಿಂದ ತಯಾರಿಸಿದ ತಿಂಡಿ ತಿನಿಸುಗಳು ಕೂಡ ಮಾರಾಟಕ್ಕೆ ಲಭ್ಯ ಇರುತ್ತವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಉಪನಿರ್ದೇಶಕರು ಸಿದ್ಧರಾಮಯ್ಯ ಎಂ. ಬರಗಿಮಠ ಮತ್ತು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಸಿ. ಬಿ. ದೇವರಮನಿ ಉಪಸ್ಥಿತರಿದ್ದರು.