ವಿಜಯಪುರ: ನಾಲ್ಕೈದು ದಶಕಗಳಿಂದ ವೈರತ್ವ ಹೊಂದಿರುವ ವಿಜಯಪುರ ಜಿಲ್ಲೆಯ ಭೀಮಾ ತೀರದ ಉಮರಾಣಿ ಗ್ರಾಮದ ಚಡಚಣ ಮತ್ತು ಭೈರಗೊಂಡ ಕುಟುಂಬಗಳ ನಡುವಿನ ದ್ವೇಷ ಪ್ರಕರಣಕ್ಕೆ ಪೊಲೀಸರು ರಾಜಿ ಸಂಧಾನ ಮಾಡಿಸಿದ್ದಾರೆ.
ಚಡಚಣ ಪಟ್ಟಣದಲ್ಲಿ ಎಡಿಜಿಪಿ ಅಲೋಕಕುಮಾರ ನೇತೃತ್ವದಲ್ಲಿ ಎರಡೂ ಕುಟುಂಬಗಳು ಮತ್ತು ಅವರ ಬೆಂಬಲಿಗರ ಸಭೆ ನಡೆಯಿತು. ರಾತ್ರಿವರೆಗೆ ನಡೆದ ಸಂಧಾನ ಸಭೆಯಲ್ಲಿ ಅಲೋಕಕುಮಾರ ವಿಮಲಾಬಾಯಿ ಚಡಚಣ ಮತ್ತು ಮಹಾದೇವ ಸಾಹುಕಾರ ಭೈರಗೊಂಡ ಅವರನ್ನು ಒಂದೇ ವೇದಿಕೆಯಲ್ಲಿ ಮುಖಾಮುಖಿ ಮಾಡಿಸಿ ದಶಕಗಳ ವೈಮನಸ್ಸನ್ನು ಮರೆತು ದೇವರು, ಸ್ವಾಮೀಜಿಗಳು, ಅಧಿಕಾರಿಗಳು, ಗ್ರಾಮಸ್ಥರ ಸಾಕ್ಷಿಯಾಗಿ ಪ್ರಮಾಣ ಮಾಡಿಸಿದರು.
ಭೀಮಾ ತೀರದಲ್ಲಿ ಉಮರಾಣಿ ಗ್ರಾಮದ ಮಲ್ಲಿಕಾರ್ಜುನ ಚಡಚಣ ಮತ್ತು ಮಹಾದೇವ ಸಾಹುಕಾರ ಭೈರಗೊಂಡ ಕುಟುಂಬಗಳ ಮಧ್ಯೆ ಕಳೆದ ಸುಮಾರು ನಾಲ್ಕೈದು ದಶಕಗಳಿಂದ ಇದ್ದ ದ್ವೇಷದ ಹಿನ್ನೆಲೆಯಲ್ಲಿ ಈ ಭಾಗಕ್ಕೆ ಅಂಟಿರುವ ಭೀಮಾ ತೀರದ ಹಂತಕರು ಹಣೆಪಟ್ಟಿಯನ್ನು ಅಳಿಸಿ ಹಾಕಲು ಅಲೋಕಕುಮಾರ ಈ ಹಿಂದೆ ಬೆಳಗಾವಿ ಉತ್ತರ ವಲಯ ಐಜಿಪಿಯಾಗಿದ್ದ ಸಂದರ್ಭದಲ್ಲಿ ಸಂಧಾನ ಸಭೆ ನಡೆಸಿದ್ದರು. ಈಗ ಅಲೋಕಕುಮಾರ ಎಡಿಜಿಪಿಯಾಗಿದ್ದು, ಎರಡು ಕುಟುಂಬದ ಸದಸ್ಯರನ್ನು ಕರೆದು ಸಂಧಾನ ಮಾಡಿದರು. ಈ ಹಿಂದೆ ಎರಡು ಸಲ ಎರಡೂ ಕುಟುಂಬಗಳು ಮತ್ತು ಅವರ ಬೆಂಬಲಿಗರನ್ನು ಕರೆಯಿಸಿ ಶಾಂತಿಯಿಂದ ಇರುವಂತೆ ಎಚ್ಚರಿಕೆಯನ್ನೂ ನೀಡಿದ್ದರು. ಈಗ ಎರಡೂ ಕುಟುಂಬಗಳನ್ನು ಮುಖಾಮುಖಿ ಮಾಡುವ ಮೂಲಕ ಸಂಧಾನ ಮಾಡಿಸಿದರು. ಜನರ ಮುಂದೆ ಗ್ರಾಮ ದೇವರ ಮೇಲೆ ಪ್ರಮಾಣ ಮಾಡಿಸಿ ಮುಂದಿನ ದಿನಗಳಲ್ಲಿ ಯಾವುದೇ ಕೃತ್ಯಗಳಿಗೆ ಕೈ ಹಾಕುವುದಿಲ್ಲ ಎಂದು ಆಣೆ ಪ್ರಮಾಣ ಮಾಡಿಸಿದರು.
ಹತ್ತಳ್ಳಿ ಮತ್ತು ಇತರ ಸ್ವಾಮೀಜಿಗಳು ಇಬ್ಬರಿಗೂ ಪ್ರಮಾಣ ಮಾಡಿಸಲು ನೆರವಾದರು.
ಅಲೋಕಕುಮಾರ ಪ್ರತಿಕ್ರಿಯೆ
ಸಂಧಾನದ ಬಳಿಕ ಮಾತನಾಡಿದ ಎಡಿಜಿಪಿ ಅಲೋಕಕುಮಾರ್, ಕಾನೂನಿನ ಹೋರಾಟದಲ್ಲಿ ನಾವು ಭಾಗಿಯಾಗಲ್ಲ. ನಮ್ಮಿಂದ ಸಾಧ್ಯವಾಗುವ ಸಹಾಯವನ್ನು ನಾನು ಮಾಡುತ್ತೇವೆ. ಈ ಭಾಗದಲ್ಲಿ ಶಾಂತಿ ನೆಲೆಸಬೇಕು. ಇದರ ಹೊರತಾಗಿ ಬಾಲ ಬಿಚ್ವಿದರೆ ಸರಕಾರ ನಮಗೆ ಪೂಜೆ ಮಾಡಲು ಆಯುಧ ನೀಡಿಲ್ಲ ಎಂದು ಖಡಕ್ಕಾಗಿ ಎರಡೂ ಕುಟುಂಬಗಳಿಗೆ ಎಚ್ಚರಿಕೆ ನೀಡಿದರು.
ಇದಕ್ಕೂ ಅಲೋಕಕುಮಾರ ಅವರು ಮೊದಲು ಅಕ್ಷರಕ್ಕಾಗಿ ಆರಕ್ಷಕರು ಹಾಗೂ ಅಗ್ನಿಪಥ ವೀರರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು. ಶಾಲಾ ಮಕ್ಕಳಿಗೆ ಶಾಲಾ ಕಿಟ್ ವಿತರಣೆ ಮಾಡಿದರು. ನೂರಾರು ಜನರು ತಮ್ಮ ಸಮಸ್ಯೆಗಳ ಕುರಿತು ಎಡಿಜಿಪಿ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ವಲಯ ಐಜಿ ಸತೀಶ, ವಿಜಯಪುರ ಎಸ್ಪಿ ಎಚ್. ಡಿ. ಆನಂದಕುಮಾರ, ಇಂಡಿ ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ, ಚಡಚಣ ಸಿಪಿಐ ಸಾಹೇಬಗೌಡ ಪಾಟೀಲ, ಪಿಎಸ್ಐ ತಿಪ್ಪಾರೆಡ್ಡಿ, ಚಡಚಣ, ಉಮರಾಣಿ ಮತ್ತು ಕೆರೂರ ಗ್ರಾಮಸ್ಥರು ಉಪಸ್ಥಿತರಿದ್ದರು.
ಈಗ ಅಲೋಕಕುಮಾರ್ ಭೀಮಾ ತೀರದಲ್ಲಿ ಸಂಚಾರ ಮಾಡಿ ಸಂಧಾನ ಮಾಡಿ ಈ ಭಾಗದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಮುಂದಾಗಿದ್ದಾರೆ.