ವಿಜಯಪುರ: ವೈದ್ಯಕೀಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ ಒಂದು ತಿಂಗಳು ಜೈಲು ಶಿಕ್ಷೆ ಮತ್ತು ರೂ. 25000 ದಂಡ ವಿಧಿಸಿ ಆದೇಶ ಹೊರಡಿಸಿದೆ.
ವಿಜಯಪುರ ನಗರದ ಬಿ.ಎಲ್.ಡಿ.ಇ ರಸ್ತೆಯಲ್ಲಿರುವ ಬಿದರಿಯವರ ಅಶ್ವಿನಿ ಆಸ್ಪತ್ರೆಯಲ್ಲಿ 26.07.2018ರಲ್ಲಿ ವೈದ್ಯಕೀಯ ಸಿಬ್ಬಂದಿ ಮೇಲೆ ರಫೀಕ್ ಅಬ್ದುಲ್ ರಜಾಕ್ ಉಮರಾಣಿ ಮತ್ತು ಸೋಹೇಬ್ ಅಕ್ತರ್ ರುಕ್ಮುದ್ದೀನ್ ಗೌರಿ ಎಂಬುವರು ಆಸ್ಪತ್ರೆಯ ನರ್ಸ್ ಬಸವರಾಜ ದುಂಡಪ್ಪ ಝಳಕಿ ಎಂಬುವರ ಮೇಲೆ ಹಲ್ಲೆ ನಡೆದಿದ್ದಾರೆ ಎಂದು ವಿಜಯಪುರ ನಗರದ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಕುರಿತು ವಿಚಾರಣೆ ನಡೆಸಿದ ಪ್ರಧಾನ ಮತ್ತು ಸತ್ರ ಜಿಲ್ಲಾ ನ್ಯಾಯಾಧೀಶ ಶಿವಾಜಿ ಅನಂತ ನಾಲವಾಡೆ ಅವರು ಆರೋಪಿಗಳಿಗೆ ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ ಎಂದು ಪ್ರಧಾನ ಸರಕಾರಿ ಅಭಿಯೋಜಕ ಎಸ್. ಎಚ್. ಹಕೀಂ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ
26.07.2018ರಲ್ಲಿ ಐದು ತಿಂಗಳ ಮಗುವನ್ನು ಚಿಕಿತ್ಸೆಗಾಗಿ ಬಿದರಿಯವರ ಅಶ್ವಿನಿ ಆಸ್ಪತ್ರೆಗೆ ಕರೆತರಲಾಗಿತ್ತು. ಈ ಸಂದರ್ಭದಲ್ಲಿ ನರ್ಸ್ ಬಸವರಾಜ ದುಂಡಪ್ಪ ಝಳಕಿ ಅವರು ಮಗುವಿನ ಚಿಕಿತ್ಸೆಗೆ ಅಗತ್ಯವಾಗಿರುವ ಔಷಧಿ ಬರೆದು ಕೊಡುವಾಗ ಮಗುವಿನ ಜೊತೆ ಬಂದಿದ್ದ ರಫೀಕ್ ಅಬ್ದುಲರಜಾಕ್ ಉಮರಾಣಿ ಮತ್ತು ಸೋಹೇಬ್ಅಕ್ತರ್ ರುಕ್ಮುದ್ದೀನ್ ಗೌರಿ ತಕರಾರು ಮಾಡಿದ್ದರು. ಅಲ್ಲದೇ, ನೀನ್ಯಾಕೆ ಔಷಧಿ ಬರೆದು ಕೊಡುತ್ತೀಯಾ? ಡಾಕ್ಟರ್ ಬರೆದು ಕೊಡಲಿ ಎಂದು ಪ್ರಶ್ನಿಸಿದ್ದರು. ಆಗ ಝಳಕಿ ಅವರು ವೈದ್ಯರ ಸೂಚನೆ ಮೇರೆಗೆ ಔಷಧಿ ಬರೆದು ಕೊಡುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದರೂ ಅವರು ಒಪ್ಪಲಿಲ್ಲ. ಈ ಸಂದರ್ಭದಲ್ಲಿ ವೈದ್ಯರನ್ನು ಕರೆಯಲು ಹೊರಟಿದ್ದ ನರ್ಸ್ ಝಳಕಿ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಎಸ್. ಬಿ. ಪಾಟೀಲ ಪ್ರಕರಣ ದಾಖಲಿಸಿಕೊಂಡಿದ್ದರು.
ನ್ಯಾಯಾಲಯದಿಂದ ಶಿಕ್ಷೆ, ದಂಡ ಪ್ರಕಟ
ಈ ಪ್ರಕರಣದ ಕೂಲಂಕಷ ವಿಚಾರಣೆ ನಡೆಸಿದ ನ್ಯಾಯಾಧೀಶ ಶಿವಾಜಿ ಅನಂತ ನಾಲವಾಡೆ, ಇಬ್ಬರೂ ಆರೋಪಿಗಳಿಗೆ ಕರ್ನಾಟಕ ವೈದ್ಯೋಪಚಾರ ಸಿಬ್ಬಂದಿಯ ಮೇಲೆ ಹಿಂಸಾಚಾರ ಮತ್ತು ವೈದ್ಯೋಪಚಾರ ಸಂಸ್ಥೆಗಳ ಆಸ್ತಿಗೆ ನಿಷೇಧಿಸುವ ಅಧಿನಿಯಮ 2009 ಕಲಂ 3 ಮತ್ತು 4ರ ಅಡಿಯಲ್ಲಿ ಒಂದು ತಿಂಗಳ ಶಿಕ್ಷೆ ಮತ್ತು ನಾನಾ ಸೇಕ್ಷನ್ ಗಳಡಿ ಇಬ್ಬರಿಗೂ ತಲಾ ರೂ. 11,500 ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಸರಕಾರದ ಪರ ಪ್ರಧಾನ ಸರಕಾರಿ ಅಭಿಯೋಜಕ ಎಸ್. ಎಚ್. ಹಕೀಮ ವಾದ ಮಂಡಿಸಿದ್ದರು.