ದ್ರಾಕ್ಷಿ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ- ಜಿಲ್ಲೆಯ ನಾನಾ ದ್ರಾಕ್ಷಿ ತಳಿ ಪರಿಚಯಕ್ಕೆ ಪ್ರದರ್ಶನ ಮೇಳ ಸಹಕಾರಿ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಜಿಲ್ಲೆಯಲ್ಲಿ ಬೆಳೆಯುವ ನಾನಾ ತಳಿಗಳ ದ್ರಾಕ್ಷಿಯನ್ನು ಜಿಲ್ಲೆ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ದ್ರಾಕ್ಷಿ ಮಾರಾಟ ಹಾಗೂ ಪ್ರದರ್ಶನ ಸಹಕಾರಿಯಾಗಲಿದ್ದು, ಇದರರೊಂದಿಗೆ ಕಡಿಮೆ ಬೆಲೆಯಲ್ಲಿ ನೇರವಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ದ್ರಾಕ್ಷಿ ದೊರೆಯಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಜಿಲ್ಲಾ ಪಂಚಾಯತಿ, ತೋಟಗಾರಿಕೆ ಇಲಾಖೆ, ವಿಜಯಪುರ ಜಿಲ್ಲಾ ತೋಟಗಾರಿಕೆ ಸಂಘ ಹಾಗೂ ಬೆಂಗಳೂರಿನ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಇವರ ಸಹಯೋಗದೊಂದಿಗೆ ನಗರದ ಸ್ಟೇಶನ  ರಸ್ತೆಯಲ್ಲಿರುವ ತೋಟಗಾರಿಕೆ ಕಚೇರಿಯ ಆವರಣದಲ್ಲಿರುವ ಬಸವ ವನದಲ್ಲಿ ಆಯೋಜಿಸಲಾಗಿದ್ದ ದ್ರಾಕ್ಷಿ ಮಾರಾಟ ಮೇಳ ಹಾಗೂ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ನಾನಾ ತಳಿಗಳ ದ್ರಾಕ್ಷಿ ಬೆಳೆಯಲಾಗಿತ್ತಾದರೂ ಸಹ ಇದರ ಮಾಹಿತಿ ಕೊರತೆ ಇದೆ. ದ್ರಾಕ್ಷಿ ಬೆಳೆಯ ನಾನಾ ತಳಿಗಳನ್ನು ಪರಿಚಯಿಸಲು ಮಾರಾಟ ಹಾಗೂ ಪ್ರದರ್ಶನ ಏರ್ಪಡಿಸುವ ಮೂಲಕ ಜಿಲ್ಲೆಯಲ್ಲಿ ಬೆಳೆಯುವ ಸುಮಾರು 12 ಬೇರೆ ಬೇರೆ ಬಗೆಯ ದ್ರಾಕ್ಷಿ ತಳಿಗಳಾದ ಥಾಮ್ಸನ್ ಸೀಡಲೆಸ್,ಮಾಣಿಕ್ ಚಮನ್,ಕ ಸೋನಾಕಾ, ಎಸ್‍ಎಸ್‍ಎನ್, ಅನುಷ್ಕಾ, ಶರದ ಸೀಡ್‍ಲೆಸ್, ಕೃಷ್ಣಾ ಮತ್ತು ಜ್ಯೋತಿ ತಳಿಗಳ ದ್ರಾಕ್ಷಿಯನ್ನು ಈ ಮೇಳದಲ್ಲಿ ಪ್ರದರ್ಶನ ಮಾರಾಟಕ್ಕಿಡುವುದರಿಂದ ಜನರಿಗೆ ಜಿಲ್ಲೆಯಲ್ಲಿ  ಬೆಳೆಯುವ ದ್ರಾಕ್ಷಿ ಮಾಹಿತಿ ದೊರೆತು, ಉತ್ತಮ ವಹಿವಾಟು ಆಗುವುದರೊಂದಿಗೆ ಜಿಲ್ಲೆಯ ವಿವಿಧ ತಳಿಗಳ ದ್ರಾಕ್ಷಿ ಬೆಳೆಗೆ ಉತ್ತೇಜನ ಹಾಗೂ ವ್ಯಾಪಾರ ವಹಿವಾಟುದಿಂದ ರೈತರಿಗೆ ಅನುಕೂಲವಾಗಲಿದೆ ಎಂದು ರಮೇಶ ಜಿಗಜಿಣಗಿ ಹೇಳಿದರು.

ದ್ರಾಕ್ಷಿ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ತೆರೆಯಲಾಗಿರುವ ಮಳಿಗೆಗಳನ್ನು ಸಂಸದ ರಮೇಶ ಜಿಗಜಿಣಗಿ ಮತ್ತೀತರರು ವೀಕ್ಷಿಸಿದರು

ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮಾತನಾಡಿ, ನಗರದ ಪ್ರಮುಖ ಕಾಲನಿಯ ಹಾಪ್‍ಕಾಮ್ಸ್ ಮಳಿಗೆಯಲ್ಲಿ ಕೂಡ ಮಾರಾಟ ವ್ಯವಸ್ಥೆ ಮಾಡಲಾಗಿದೆ.  ನಗರದ ವಿವಿಧ ಆಯ್ದ ಸ್ಥಳಗಳಾದ ಗಾಂಧಿಚೌಕ್, ಗೋದಾವರಿ, ಹೊಟೇಲ್, ಸಿದ್ದೇಶ್ವರ ದೇವಸ್ಥಾನ ಹತ್ತಿರ ಹಾಗೂ ಬಿ.ಎಲ್.ಡಿ.ಇ ಎಂಜಿನಿಯರಿಂಗ್ ಕಾಲೇಜ್ ಹತ್ತಿರ ಪ್ರತ್ಯೇಕವಾದ ಸ್ಟಾಲ್‍ಗಳನ್ನು  ನಿರ್ಮಿಸಿ, ದ್ರಾಕ್ಷಿ ಮಾರಾಟದೊಂದಿಗೆ ಶಿವರಾತ್ರಿ ಹಬ್ಬದ ಪ್ರಯುಕ್ತ ಅವಶ್ಯಕತೆಯಿರುವ ಕಲ್ಲಂಗಡಿ, ಬಾರಿಕಾಯಿ, ಪಪ್ಪಾಯ, ಪೇರು, ಗೆಣಸು, ಗಜ್ಜರಿ ಹಾಗೂ ಮಹಿಳಾ ಸ್ವಸಹಾಯ ಸಂಘ ದಿಂದ ತಯಾರಿಸಿದ ತಿಂಡಿ ತಿನಿಸುಗಳು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದು, ರೈತರಿಗೆ ಉತ್ತೇಜನ ನೀಡುವ ಈ ಮೇಳಕ್ಕೆ ಸಹಕರಿಸುವಂತೆ ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಮಾತನಾಡಿ, ದ್ರಾಕ್ಷಿ ಬೆಳೆಗಳ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟದ ಅಂಗ ಸಂಸ್ಥೆಯಾದ ಪ್ರಾದೇಶಿಕ ಸಂಶೋಧನಾ ಕೇಂದ್ರ, ತಿಡಗುಂದಿ ರವರು ನಾನಾ ದ್ರಾಕ್ಷಿ ತಳಿಗಳು ಹಾಗೂ ರೈತರು ಬೆಳೆದ ದ್ರಾಕ್ಷಿ ಮತ್ತು ಇತರೆ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರದರ್ಶನ ಮೇಳವು ಫೆ. 20ರ ವರೆಗೆ ಪ್ರತಿದಿನ ಬೆ. 11 ರಿಂದ ಸಂಜೆ 6 ಗಂಟೆವರೆಗೆ ನಡೆಯಲಿದೆ.  ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕ ಸಿದ್ಧರಾಮಯ್ಯ ಎಂ. ಬರಗಿಮಠ ಮಾತನಾಡಿ, ಉತ್ತಮ ಗುಣಮಟ್ಟದ ದ್ರಾಕ್ಷಿ ತಳಿಗಳನ್ನು ದ್ರಾಕ್ಷಿ ಮಾರಾಟದ ಮೇಳದಲ್ಲಿ ತಂದು ಮಧ್ಯವರ್ತಿಗಳಲ್ಲದೇ ನೇರವಾಗಿ ರೈತರಿಂದ ಗ್ರಾಹಕರಿಗೆ ನಮ್ಮ ವಿಜಯಪುರ ದ್ರಾಕ್ಷಿ ಎಂಬ ಬ್ರ್ಯಾಂಡ್ ಮೂಲಕ ಮಾರಾಟ ಮಾಡಲಾಗುತ್ತಿದೆ ಈ ಮೇಳದಲ್ಲಿ 17 ಜನ ರೈತರು ಭಾಗವಹಿಸಿದ್ದಾರೆ ಎಂದು ಹೇಳಿದರು.

ತಿಕೋಟಾದ ದ್ರಾಕ್ಷಿ ಬೆಳೆಗಾರರಾದ ಅಶೋಕ ಬಾಬರ, ಸಂದೀಪ ಪಾಟೀಲ, ಪಿಂಟು ಕನ್ನೂರ, ತಾಜಪುರದ ಅನೀಲಕುಮಾರ ಹಿರೇಮಠ, ಪ್ರವೀಣ ಶೇಂಡೆ ಅವರು ಭಾಗವಹಿಸಿದ್ದರು.  ಅತಾಲಟ್ಟಿಯ ಡಾ. ಎಸ್. ಆರ್. ಮುದನೂರ, ನಿಡೋಣಿಯ ರಾಜು ಡೆಂಗಿ, ಮಲ್ಲು ಮಾಳಿ, ಬಬಲೇಶ್ವರದ ಶರಣು ಬೀಳೂರ, ಸುರೇಶ ಬೀಳೂರ, ಕೆಂಗಲಗುತ್ತಿಯ ವಿಶ್ವನಾಥ ಚನ್ನಾಳ, ಇವರು ಬಬಲೇಶ್ವರ ತಾಲೂಕಿನಿಂದ ಹಾಗೂ ಮಲಘಾಣದ ಅಶೋಕ ಬಿದರಿ, ಜುಮನಾಳದ ಉಮೇಶ ಕಾರಜೋಳ, ಸುರೇಶ ಖಾಂಡಸj, ಮಾದೇವ ಉಮರಾಣಿ, ನಿಡೋಣಿಯ ರುದ್ರು ಡೆಂಗಿ, ಈರಗೊಂಡ ಶಹಾಪೂರ, ಉತ್ನಾಳದ ಐ. ಬಿ. ಬನಗೊಂಡ, ತಳೇವಾಡದ ಶಿವಪ್ಪ ಹಾದಿಮನಿ ಅವರು ಉತ್ತಮ ಗುಣಮಟ್ಟದ ಕಲ್ಲಂಗಡಿ, ಆಫಲ ಬೇರ, ಗೇಣಸು, ಪೇರು ಹಾಗೂ ಗಜ್ಜರಿಯನ್ನು ಈ ಪ್ರದರ್ಶನ ಮೇಳದಲ್ಲಿ ಮಾರಾಟಕ್ಕೆ ಇಕ್ಕಿಟ್ಟಿರುವುದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಕರ್ನಾಟಕ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಪುಣೆಯ ರಾಷ್ಟ್ರೀಯ ದ್ರಾಕ್ಷಿ ಸಂಶೋಧನಾ ಕೇಂದ್ರದ ನಿರ್ದೇಶಕ ಸಂಜಯ ಪಾಟೀಲ ಕನಮಡಿ, ಜಿಲ್ಲಾ ಹಾಪಕಾಮ್ಸ್ ಅಧ್ಯಕ್ಷ ಸುಭಾಸಗೌಡ ಬ. ಪಾಟೀಲ, ತಿಡಗುಂದಿ ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಸತ್ಯನಾರಾಯಣ ಸಿ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳಾದ ಆರ್. ಟಿ. ಹಿರೇಮಠ, ಶಾಲಿನಿ ತಳಕೇರಿ, ಸಿ. ಬಿ. ಪಾಟೀಲ, ಎಂ. ಎಸ್. ರಮೇಶ, ಎಸ್. ಎಸ್. ಟಾಕಳೆ, ಸತೀಶ ಬಡಿಗೇರ, ಗುರುನಾಥ ಪಾಟೀಲ, ನಾಗೇಂದ್ರ ಗೊರನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌