ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗಾಗಿ ಆಗ್ರಹಿಸಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪ್ರಥಮ ಜಗದ್ಗುರುಗಳಾದ ಬಸವಜಯ ಮೃತುಂಜಯ ಮಹಾಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಕಳೆದ 34 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಯುತ್ತಿದೆ. ಈ ಧರಣಿ ಸತ್ಯಾಗ್ರಹದಲ್ಲಿ ವಿಜಯಪುರ ಜಿಲ್ಲೆಯ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ರಾಷ್ಟ್ರೀಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಎಸ್. ಬಿರಾದಾರ ಮನವಿ ಮಾಡಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ಸರಕಾರ ಲಿಂಗಾಯತ ಪಂಚಮಸಾಲಿ ಬಡ ವಿದ್ಯಾರ್ಥಿಗಳಿಗೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿಯನ್ನು ಕಲ್ಪಿಸಬೇಕು ಎಂದು ಕೂಡಲ ಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿ ಬೆಂಗಳೂರಿನ ಅರಮನೆ ಮೈದಾನ, ಬೆಳಗಾವಿಯ ಸುವರ್ಣ ಸೌಧದ ಮುಂದೆ ಸಮುದಾಯದ ಶಕ್ತಿ ಪ್ರದರ್ಶನ ಮಾಡಲಾಗಿತ್ತು. ಆದರೂ ಕೂಡ ಸರಕಾರ ಈವರೆಗೆ ನಮ್ಮ ಹೋರಾಟಕ್ಕೆ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈಗ ನಡೆಯುತ್ತಿರುವ ಅಧಿವೇಶನದಲ್ಲಿ ನಮ್ಮ ಸಮುದಾಯದ ಶಾಸಕರು, ಅಷ್ಟೇ ಅಲ್ಲ, ನಮ್ಮ ಸಮುದಾಯದಿಂದ ಚುನಾವಣೆಯಲ್ಲಿ ಜಯ ಸಾಧಿಸಿ ವಿಧಾನಸೌಧಕ್ಕೆ ಹೋಗಿರುವ ಬೇರೆ ಸಮುದಾಯದ ಶಾಸಕರೂ ಕೂಡ ಅಧಿವೇಶನದಲ್ಲಿ ಧ್ವನಿಯೆತ್ತಿ ಕೃಷಿ ಪ್ರಧಾನವಾದ ಈ ಸಮುದಾಯಕ್ಕೆ ನ್ಯಾಯವನ್ನು ಒದಗಿಸಬೇಕು. ಈ ನಿಟ್ಟಿನಲ್ಲಿ ವಿಜಯಪುರ ಜಿಲ್ಲೆಯ ಇಂಡಿ ಹಾಗೂ ಚಡಚಣ ತಾಲೂಕಿನ ಸಮಾಜ ಬಾಂಧವರು ಫೆಬ್ರುವರಿ 20ರಂದು ಬೆಂಗಳೂರಿನ ಧರಣಿ ಸತ್ಯಾಗ್ರಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಫೆಬ್ರುವರಿ 21ರಂದು ಸಿಂದಗಿ, ದೇವರ ಹಿಪ್ಪರಗಿ, ಫೆಬ್ರುವರಿ 22ರಂದು ಬಸವನ ಬಾಗೇವಾಡಿ, ನಿಡುಗುಂದಿ, ಕೋಲಾರ, ಫೆಬ್ರವರಿ 23ರಂದು ಮುದ್ದೇಬಿಹಾಳ, ತಾಳಿಕೋಟೆ, ಫೆಬ್ರುವರಿ 24ರಂದು ವಿಜಯಪುರ, ಬಬಲೆಶ್ವರ, ತಿಕೋಟಾ ತಾಲೂಕುಗಳ ಸಮಾಜ ಬಾಂಧವರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಹೋರಾಟವನ್ನು ಬಲಗೊಳಿಸಬೇಕು. ಸಮಾಜ ಬಾಂಧವರಲ್ಲಿ ತಂತಮ್ಮ ಮನೆಯಿಂದ ಸ್ವಂತ ಬುತ್ತಿ ಕಟ್ಟಿಕೊಂಡು ಬರಬೇಕು ಎಂದು ಶಂಕರಗೌಡ ಎಸ್. ಬಿರಾದಾರ ಮನವಿ ಮಾಡಿದ್ದಾರೆ.