ಬಜೆಟ್ ನಲ್ಲಿ ಸಿಎಂ ಬೊಮ್ಮಾಯಿ ವಿಧಿಸಿರುವ ತೆರಿಗೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ 2023-24ನೇ ಆರ್ಥಿಕ ವರ್ಷದ ಬಜೆಟ್ ನಲ್ಲಿ ಹಲವಾರು ತೆರಿಗೆಯ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.  ರಾಜಸ್ವದ ಮೂಲಗಳು ಮತ್ತು ಸಂಗ್ರಹವಾಗುವ ಆದಾಯ ಹಾಗೂ ನಾನಾ ಯೋಜನೆಗಳಿಗೆ ಮೀಸಲಿಟ್ಟಿರುವ ಹಣದ ಪ್ರಮಾಣವನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ.

ಬಜೆಟ್ ನಲ್ಲಿ ಸಿಎಂ ಪ್ರಸ್ತಾಪಿಸಿರುವ ತೆರಿಗೆಗಳ ಮಾಹಿತಿ ಇಲ್ಲಿದೆ.

ತೆರಿಗೆ ಪ್ರಸ್ತಾವನೆಗಳು

ವಾಣಿಜ್ಯ ತೆರಿಗೆಗಳು

442. ವೃತ್ತಿ ತೆರಿಗೆ ಅಧಿನಿಯಮವನ್ನು ತಿದ್ದುಪಡಿಗೊಳಿಸಿ ಸರಳೀಕರಿಸಲು ಉದ್ದೇಶಿಸಿದೆ. ಕಡಿಮೆ ವರಮಾನದ ವರ್ಗಕ್ಕೆ ಪರಿಹಾರ ನೀಡಲು ಸಂಬಳ ಅಥವಾ ಮಜೂರಿಯನ್ನು ಪಡೆವ ನೌಕರರಿಗೆ ತೆರಿಗೆ ವಿನಾಯಿತಿ ಮಿತಿಯನ್ನು ಮಾಸಿಕ 15,000 ರೂ. ಗಳಿಂದ 25,000 ರೂ. ಗಳಿಗೆ ಏರಿಕೆ ಮಾಡಲು ಪ್ರಸ್ತಾಪಿಸಿದೆ.
443. ವರ್ತಕರ ವ್ಯವಹಾರಗಳ ನಿಖರವಾದ ಪರಿಶೀಲನೆಗಾಗಿ ಮತ್ತು ದತ್ತಾಂಶಗಳ ಸಾಮ್ಯತೆಯನ್ನು ಹೊಂದಲು, ಜಿ.ಎಸ್‍.ಟಿ PRO ನಿಂದ ಹೊಸ ತಂತ್ರಾಂಶಕ್ಕೆ ಬದಲಾವಣೆ ಮಾಡಲಾಗಿದೆ. ಇದರ ಪರಿಣಾಮವಾಗಿ ವರ್ತಕರಿಗೆ ಮತ್ತು ಇಲಾಖೆಯ ಅಧಿಕಾರಿಗಳಿಗೆ ಲಭ್ಯವಿರುವ ದತ್ತಾಂಶಗಳು ಒಂದೇ ಆಗಿದ್ದು, ಇದರಿಂದಾಗಿ ದತ್ತಾಂಶ ಹೊಂದಾಣಿಕೆಯ ಸಮಸ್ಯಗೆ ಪರಿಹಾರ ಕಂಡುಕೊಳ್ಳಲಾಗಿದೆ.
444. ಜಿ.ಎಸ್.ಟಿ. ಪೂರ್ವ ತೆರಿಗೆ ವಿವಾದಗಳನ್ನು ತ್ವರಿತಗತಿಯಲ್ಲಿ ಪರಿಹರಿಸುವ ಸಲುವಾಗಿ ಮತ್ತು ತೆರಿಗೆ ಬಾಕಿಗಳನ್ನು ಯಾವುದೇ ದಾವೆಯಿಲ್ಲದೆ ಕ್ಷಿಪ್ರವಾಗಿ ಸಂಗ್ರಹಿಸುವುದಕ್ಕಾಗಿ, ನಾನು ಕರಸಮಾಧಾನ ಯೋಜನೆಯನ್ನು ಪ್ರಸ್ತಾಪಿಸುತ್ತೇನೆ. ಈ ಯೋಜನೆಯಡಿ ಎಲ್ಲಾ ಜಿಎಸ್‌ಟಿ-ಪೂರ್ವ ಅಧಿನಿಯಮಗಳ ಅಡಿಯಲ್ಲಿ ಬಾಕಿಯಿರುವ ಪೂರ್ಣ ತೆರಿಗೆಯನ್ನು
30ನೇ ಅಕ್ಟೋಬರ್‌ 2023 ರ ಒಳಗೆ ಪಾವತಿಸುವವರಿಗೆ ಬಡ್ಡಿ ಮತ್ತು ದಂಡಬಡ್ಡಿ ಪಾವತಿಯಲ್ಲಿ ಪರಿಹಾರ ನೀಡಲಾಗುವುದು.
445. ಪ್ರಸಕ್ತ ಸಾಲಿನಲ್ಲಿ ಕರ್ನಾಟಕವು ದೇಶದ ದೊಡ್ಡ ರಾಜ್ಯಗಳಿಗೆ ಹೋಲಿಸಿದಾಗ ಜಿ.ಎಸ್.ಟಿ. ಸಂಗ್ರಹಣೆಯಲ್ಲಿ ಅತೀ ಹೆಚ್ಚು ಬೆಳವಣಿಗೆ ದರವನ್ನು ದಾಖಲಿಸಿದೆ. 2022-23ನೇ ಸಾಲಿಗೆ ವಾಣಿಜ್ಯ ತೆರಿಗೆ ಇಲಾಖೆಗೆ ಆಯವ್ಯಯದಲ್ಲಿ, ಜಿ.ಎಸ್‍.ಟಿ ಪರಿಹಾರ ಹೊರತುಪಡಿಸಿ, 72,010 ಕೋಟಿ ರೂ. ಗಳ ಗುರಿ ನೀಡಲಾಗಿದ್ದು, ವರ್ಷಾಂತ್ಯಕ್ಕೆ 83,010 ಕೋಟಿ ರೂ. ಗಳ ರಾಜಸ್ವ ಸಂಗ್ರಹಣೆ ಮಾಡಲಾಗುವುದು. ಇದು ಆಯವ್ಯಯ ಅಂದಾಜಿಗಿಂತ ಶೇ.15 ರಷ್ಟು ಹೆಚ್ಚಾಗಿರುತ್ತದೆ. ರಾಜ್ಯಕ್ಕೆ ಜಿ.ಎಸ್‍.ಟಿ ಪರಿಹಾರವಾಗಿ 10,548 ಕೋಟಿ ರೂ. ಗಳು ಸ್ವೀಕೃತವಾಗಿದ್ದು, ಜಿ.ಎಸ್.ಟಿ. ಪರಿಹಾರ ಒಳಗೊಂಡಂತೆ ವರ್ಷಾಂತ್ಯಕ್ಕೆ ಒಟ್ಟು ವಾಣಿಜ್ಯ ತೆರಿಗೆ ಸಂಗ್ರಹಣೆಯು 93,558 ಕೋಟಿ ರೂ. ಗಳಾಗುತ್ತದೆ.
446. 2023-24 ನೇ ಸಾಲಿಗೆ ವಾಣಿಜ್ಯ ತೆರಿಗೆಗಳ ಇಲಾಖೆಗೆ 92,000 ಕೋಟಿ ರೂ. ಗಳ (ಜಿ.ಎಸ್‍.ಟಿ ಪರಿಹಾರ ಹೊರತುಪಡಿಸಿ) ತೆರಿಗೆ ಸಂಗ್ರಹಣೆಯ ಗುರಿಯನ್ನು ನಿಗದಿಪಡಿಸಲಾಗಿದೆ.
ನೋಂದಣಿ ಮತ್ತು ಮುದ್ರಾಂಕ
447. ದಿನಾಂಕ 01.01.2022 ರಿಂದ 31.03.2022 ರವರೆಗೆ ಮಾರ್ಗಸೂಚಿ ದರಗಳ ಮೇಲೆ ಶೇ.10 ರಷ್ಟು ರಿಯಾಯಿತಿ ನೀಡಿದ್ದು, ಸದರಿ ಅವಧಿಯಲ್ಲಿ 82,784 ದಸ್ತಾವೇಜುಗಳು ನೋಂದಣಿಯಾಗಿದ್ದು, 4,343 ಕೋಟಿ ರೂ. ಗಳಷ್ಟು ರಾಜಸ್ವ ಸಂಗ್ರಹಣೆಯಾಗಿದ್ದು, ಇದು ರಾಜ್ಯದಲ್ಲಿ ಇತಿಹಾಸದಲ್ಲಿಯೇ ಮೂರು ತಿಂಗಳ ಅವಧಿಯಲ್ಲಿ ದಾಖಲೆ ರಾಜಸ್ವ ಸಂಗ್ರಹಣೆಯಾಗಿರುತ್ತದೆ.
448. ಮತ್ತೊಮ್ಮೆ ಮಾರ್ಗಸೂಚಿ ದರಗಳ ಮೇಲೆ ಶೇ.10 ರಷ್ಟು ರಿಯಾಯಿತಿ ದಿನಾಂಕ:24.04.2022 ರಿಂದ 27.07.2022 ರವರೆಗೆ ವಿಸ್ತರಿಸಿದ್ದು, ಸದರಿ ಅವಧಿಯಲ್ಲಿ 1,73,937 ದಸ್ತಾವೇಜುಗಳು ನೋಂದಣಿಯಾಗಿದ್ದು, 4,018.66 ಕೋಟಿ ರೂ. ಗಳಷ್ಟು ರಾಜಸ್ವ ಸಂಗ್ರಹಣೆಯಾಗಿದೆ.
449. 2022-23ನೇ ಸಾಲಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಆಯವ್ಯಯದಲ್ಲಿ 15,000 ಕೋಟಿ ರೂ. ಗಳ ಗುರಿ ನೀಡಲಾಗಿದ್ದು, ವರ್ಷಾಂತ್ಯಕ್ಕೆ ಗುರಿ ಮೀರಿ 17,000 ಕೋಟಿ ರೂ. ಗಳ ರಾಜಸ್ವ ಸಂಗ್ರಹಣೆ ಮಾಡಲಿದ್ದೇವೆ. ಇದು ಆಯವ್ಯಯ ಅಂದಾಜಿಗಿಂತ ಶೇ.13 ರಷ್ಟು ಹೆಚ್ಚಾಗಿರುತ್ತದೆ.
450. 2023-24ನೇ ಸಾಲಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 19,000 ಕೋಟಿ ರೂ. ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ.
ಅಬಕಾರಿ
451. ಸಾರಾಯಿ/ಸೇಂದಿಗೆ ಸಂಬಂಧಪಟ್ಟ ಅಬಕಾರಿ ಬಾಕಿಗಳನ್ನು ವಸೂಲು ಮಾಡುವುದಕ್ಕಾಗಿ, ನಾನು, ನೂತನ ಕರಸಮಾಧಾನ ಯೋಜನೆಯನ್ನು ರೂಪಿಸಲು ಪ್ರಸ್ತಾಪಿಸುತ್ತೇನೆ. ಸದರಿ ಯೋಜನೆಯಡಿ ಸಾರಾಯಿ/ಸೇಂದಿಗೆ ಬಾಡಿಗೆಗಳ ಸಂಬಂಧದಲ್ಲಿ ಮೂಲಧನವನ್ನು ದಿನಾಂಕ:30.06.2023 ರಂದು ಅಥವಾ ಅದಕ್ಕೂ ಮುಂಚಿತವಾಗಿ ಪಾವತಿಸುವವರಿಗೆ ಬಡ್ಡಿ ಮತ್ತು ದಂಡಬಡ್ಡಿ ಪಾವತಿಯಲ್ಲಿ ಪರಿಹಾರ ನೀಡಲಾಗುವುದು.
452. 2022-23ನೇ ಸಾಲಿಗೆ ಅಬಕಾರಿ ಇಲಾಖೆಗೆ ಆಯವ್ಯಯದಲ್ಲಿ 29,000 ಕೋಟಿ ರೂ. ಗಳ ಗುರಿ ನೀಡಲಾಗಿದ್ದು, ವರ್ಷಾಂತ್ಯಕ್ಕೆ 32,000 ಕೋಟಿ ರೂ. ಗಳ ರಾಜಸ್ವ ಸಂಗ್ರಹಣೆ ಮಾಡಲಿದ್ದೇವೆ. ಇದು ಆಯವ್ಯಯ ಅಂದಾಜಿಗಿಂತ ಶೇ.10 ರಷ್ಟು ಹೆಚ್ಚಾಗಿರುತ್ತದೆ.
453. 2023-24ನೇ ಆರ್ಥಿಕ ವರ್ಷಕ್ಕೆ ಅಬಕಾರಿ ಇಲಾಖೆಗೆ 35,000 ಕೋಟಿ ರೂ. ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ.
ಸಾರಿಗೆ
454. 2022-23 ನೇ ಸಾಲಿಗೆ ಸಾರಿಗೆ ಇಲಾಖೆಗೆ ಆಯವ್ಯಯದಲ್ಲಿ 8,007 ಕೋಟಿ ರೂ. ಗಳ ಗುರಿ ನೀಡಲಾಗಿದ್ದು, ವರ್ಷಾಂತ್ಯಕ್ಕೆ 9,007 ಕೋಟಿ ರೂ. ಗಳ ರಾಜಸ್ವ ಸಂಗ್ರಹಣೆ ಮಾಡಲಿದ್ದೇವೆ. ಇದು ಆಯವ್ಯಯ ಅಂದಾಜಿಗಿಂತ ಶೇ.13 ರಷ್ಟು ಹೆಚ್ಚಾಗಿರುತ್ತದೆ.
455. 2023-24ನೇ ಆರ್ಥಿಕ ವರ್ಷಕ್ಕೆ ಸಾರಿಗೆ ಇಲಾಖೆಗೆ 10,500 ಕೋಟಿ ರೂ. ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ.
ಗಣಿ ಮತ್ತು ಭೂವಿಜ್ಞಾನ
456. ರಾಜ್ಯವು ಇಲ್ಲಿಯವರೆಗೆ 34 ಖನಿಜ ಬ್ಲಾಕ್‍ಗಳನ್ನು ಯಶಸ್ವಿಯಾಗಿ ಹರಾಜು ಮಾಡಿದ್ದು, ದೇಶದಲ್ಲಿಯೇ ಅತಿ ಹೆಚ್ಚು ಹರಾಜು ಮಾಡಿದ ರಾಜ್ಯಗಳ ಪೈಕಿ ಕರ್ನಾಟಕವು ಎರಡನೇ ಸ್ಥಾನದಲ್ಲಿದೆ.
457. 2022-23 ನೇ ಸಾಲಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ 6,500 ಕೋಟಿ ರೂ. ಗಳ ರಾಜಸ್ವ ಸಂಗ್ರಹಣೆಯ ಗುರಿಯನ್ನು ನಿಗದಿಪಡಿಸಲಾಗಿದ್ದು, ಜನವರಿ ಅಂತ್ಯಕ್ಕೆ 4,620 ಕೋಟಿ ರೂ. ಗಳ ರಾಜಸ್ವವನ್ನು ಕ್ರೊಢೀಕರಿಸಲಾಗಿರುತ್ತದೆ. ಪ್ರಸಕ್ತ ಸಾಲಿನ ತೆರಿಗೆ ಸಂಗ್ರಹಣೆ ಗುರಿಯನ್ನು ಸಾಧಿಸಲಾಗುವುದು.
458. 2023-24ನೇ ಸಾಲಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ 7,500 ಕೋಟಿ ರೂ. ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ.
ಪರಿಷ್ಕೃತ ಅಂದಾಜು 2022-23
459. 2022-23ರ ಪರಿಷ್ಕೃತ ಅಂದಾಜುಗಳ ಅನ್ವಯ ಆಯವ್ಯಯದಲ್ಲಿ ಅಂದಾಜಿಸಲಾದ 2,61,977 ಕೋಟಿ ರೂ. ಗಳಿಗೆ ಹೋಲಿಸಿದಲ್ಲಿ ಒಟ್ಟಾರೆ ಜಮೆ 2,79,540 ಕೋಟಿ ರೂ.ಗಳಾಗಿದೆ. ರಾಜ್ಯ ರಾಜಸ್ವ ಕ್ರೊಡೀಕರಣದ ಪ್ರಯತ್ನಗಳು 2,12,360 ಕೋಟಿ ರೂ. ಗಳಾಗಿದ್ದು, ಇದರಲ್ಲಿ ಸ್ವಂತ ತೆರಿಗೆ ರಾಜಸ್ವ ಸಂಗ್ರಹಣೆಯು ಜಿ.ಎಸ್‍.ಟಿ ಪರಿಹಾರ ಒಳಗೊಂಡಂತೆ 1,54,431 ಕೋಟಿ ರೂ.ಗಳಾಗಿರುತ್ತದೆ.
460. ಪರಿಷ್ಕೃತ ಅಂದಾಜಿನ ಪ್ರಕಾರ ಒಟ್ಟು ವೆಚ್ಚವು 2,89,653 ಕೋಟಿ ರೂ. ಗಳಾಗಿದೆ. ಇದು ಆಯವ್ಯಯ ಅಂದಾಜು 2,65,720 ಕೋಟಿ ರೂ. ಗಳಿಗೆ ಹೋಲಿಸಿದಲ್ಲಿ ಶೇ.9 ರಷ್ಟು ಹೆಚ್ಚಳ ಕಂಡಿದೆ.
ಆಯವ್ಯಯ ಅಂದಾಜು 2023-24
461. 2023-24 ನೇ ಸಾಲಿನಲ್ಲಿ ರಾಜ್ಯದ ಒಟ್ಟು ಸ್ವಂತ ತೆರಿಗೆ ರಾಜಸ್ವವು 1,64,653 ಕೋಟಿ ರೂ. ಗಳಾಗುತ್ತದೆಂದು ಅಂದಾಜು ಮಾಡಲಾಗಿದೆ. ತೆರಿಗೆಯೇತರ ರಾಜಸ್ವಗಳಿಂದ 11,000 ಕೋಟಿ ರೂ. ಗಳನ್ನು ಸಂಗ್ರಹಿಸಬಹುದೆಂದು ನಿರೀಕ್ಷಿಸಲಾಗಿದೆ. ಕೇಂದ್ರ ತೆರಿಗೆಯ ಪಾಲಿನ ರೂಪದಲ್ಲಿ 37,252 ಕೋಟಿ ರೂ. ಗಳನ್ನು ಹಾಗೂ 13,005 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರದಿಂದ ಸಹಾಯಾನುದಾನ ರೂಪದಲ್ಲಿ ರಾಜ್ಯ ಸರ್ಕಾರವು ನಿರೀಕ್ಷಿಸಿದೆ. ಈ ರಾಜಸ್ವ ಜಮೆಗಳಿಗೆ ಪೂರಕವಾಗಿ 77,750 ಕೋಟಿ ರೂ. ಗಳ ಒಟ್ಟು ಸಾಲಗಳು, 23 ಕೋಟಿ ರೂ. ಗಳ ಋಣೇತರ ಸ್ವೀಕೃತಿಗಳು ಮತ್ತು 228 ಕೋಟಿ ರೂ. ಗಳ ಸಾಲಗಳ ವಸೂಲು ಮೊತ್ತವನ್ನು ಅಂದಾಜಿಸಲಾಗಿದೆ. 2023-24ನೇ ಸಾಲಿನಲ್ಲಿ ಒಟ್ಟು ಜಮೆಗಳು 3,03,910 ಕೋಟಿ ರೂ. ಗಳಾಗುತ್ತದೆಂದು ಅಂದಾಜು ಮಾಡಲಾಗಿದೆ.
462. 2,25,507 ಕೋಟಿ ರೂ. ಗಳ ರಾಜಸ್ವ ವೆಚ್ಚ, 61,234 ಕೋಟಿ ರೂ. ಗಳ ಬಂಡವಾಳ ವೆಚ್ಚ ಹಾಗೂ ಸಾಲದ ಮರುಪಾವತಿ 22,441 ಕೋಟಿ ರೂ. ಗಳ ವೆಚ್ಚವನ್ನು ಒಳಗೊಂಡು, ಒಟ್ಟು ವೆಚ್ಚವು 3,09,182 ಕೋಟಿ ರೂ. ಗಳಾಗುತ್ತದೆಂದು ಅಂದಾಜು ಮಾಡಲಾಗಿದೆ.
463. ಕೋವಿಡ್‍ ಸಾಂಕ್ರಾಮಿಕದ ನಂತರ ಮೊದಲ ಬಾರಿಗೆ ರಾಜಸ್ವ ಸ್ವೀಕೃತಿಯು ರಾಜಸ್ವ ವೆಚ್ಚಕ್ಕಿಂತ 402 ಕೋಟಿ ರೂ. ಗಳ ಹೆಚ್ಚುವರಿಯನ್ನು ಅಂದಾಜು ಮಾಡಲಾಗಿದ್ದು, ಇದು ರಾಜಸ್ವ ಹೆಚ್ಚುವರಿ (Revenue Surplus) ಆಯವ್ಯಯವಾಗಿರುತ್ತದೆ. ವಿತ್ತೀಯ ಕೊರತೆ 60,581 ಕೋಟಿ ರೂ. ಗಳಾಗುತ್ತದೆಂದು ನಿರೀಕ್ಷಿಸಲಾಗಿದ್ದು, ಅದು GSDP ಯ ಶೇ.2.60% ರಷ್ಟಾಗಿರುತ್ತದೆ. 2023-24ರ ಕೊನೆಯಲ್ಲಿ 5,64,896 ಕೋಟಿ ರೂ. ಗಳ ಒಟ್ಟು ಹೊಣೆಗಾರಿಕೆಗಳು GSDP ಯ ಶೇ.24.20 ರಷ್ಟಾರುತ್ತದೆಂದು ಅಂದಾಜು ಮಾಡಲಾಗಿದೆ. ಈ ಮೂಲಕ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ, 2002 ರಲ್ಲಿ ಸೂಚಿಸಿರುವ ಎಲ್ಲಾ ಮಾನದಂಡಗಳನ್ನು ಪಾಲನೆ ಮಾಡಲಾಗಿದೆ ಎಂದು ಹೇಳಲು ಹರ್ಷಿಸುತ್ತೇನೆ.
ಸನ್ಮಾನ್ಯ ಸಭಾಧ್ಯಕ್ಷರೇ,
464. ನಾನು ಈಗ ಆಯವ್ಯಯವನ್ನು ಗೌರವಾನ್ವಿತ ಸದನದ ಪರಿಗಣನೆಗಾಗಿ ಮಂಡಿಸುತ್ತಿದ್ದೇನೆ ಹಾಗೂ ಆಯವ್ಯಯ ಅಂದಾಜಿನನ್ವಯ 2023-24ನೇ ಸಾಲಿನ 31ನೇ ಜುಲೈ 2023ರ ವರೆಗಿನ ವೆಚ್ಚವನ್ನು ನಿರ್ವಹಿಸಲು ಲೇಖಾನುದಾನವನ್ನು ಕೋರುತ್ತಿದ್ದೇನೆ.
ಜೈ ಹಿಂದ್‌
ಜೈ ಕರ್ನಾಟಕ

Leave a Reply

ಹೊಸ ಪೋಸ್ಟ್‌