ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ ಬಜೆಟ್ ನಲ್ಲಿ ಆರ್ಥಿಕ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ. ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ ತಲೆಬರಹದಡಿ ಬಜೆಟ್ ನಲ್ಲಿ ಕೈಗಾರಿಕೆ, ಇಂಧನ, ನಗರಾಭಿವೃದ್ಧಿ, ಲೋಕೋಪಯೋಗಿ ಸೇರಿದಂತೆ ಆದಾಯ ತರುವ ಪ್ರಮುಖ ಇಲಾಖೆಗಳಿಗೆ ನೀಡಲಾಗಿರುವ ಆದ್ಯತೆಗಳನ್ನು ಬಹಿರಂಗಪಡಿಸಿದ್ದಾರೆ.
227. ಕರ್ನಾಟಕ ರಾಜ್ಯವು ಹೂಡಿಕೆ ಆಕರ್ಷಿಸುವಲ್ಲಿ ದೇಶದಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡು ಬಂದಿದೆ. ವಿವಿಧ ವಲಯಗಳಿಗೆ ನಿರ್ದಿಷ್ಟ ನೀತಿ ನಿರೂಪಣೆ, ಪ್ರೋತ್ಸಾಹಕಗಳು ಹಾಗೂ Ease of Doing Business ಉಪಕ್ರಮಗಳ ಮೂಲಕ ಹೂಡಿಕೆದಾರರ ನೆಚ್ಚಿನ ತಾಣವಾಗಿ ರೂಪುಗೊಂಡಿದೆ.
228. ನಮ್ಮ ಸರ್ಕಾರವು ರಾಜ್ಯದ ಆರ್ಥಿಕತೆಯನ್ನು ಉತ್ತೇಜಿಸಲು ಮತ್ತು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಲುವಾಗಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಲು ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ 2022-23ರ ಆಯವ್ಯಯದಲ್ಲಿ ಅಂದಾಜಿಸಿದ 46,955 ಕೋಟಿ ರೂ. ಗಳಿಂದ 2023-24ನೇ ಸಾಲಿನಲ್ಲಿ 61,234 ಕೋಟಿ ರೂ. ಗಳಿಗೆ ಹೆಚ್ಚಿಸಲಾಗಿದೆ. ಇದು ಕಳೆದ ವರ್ಷದ ಆಯವ್ಯಯ ಅಂದಾಜಿಗಿಂತ ಶೇ.30.4ರಷ್ಟು ಹೆಚ್ಚಾಗಿದೆ. ಇದು ಕಳೆದ 10 ವರ್ಷಗಳಲ್ಲಿನ ಬಂಡವಾಳ ಹಂಚಿಕೆಯಲ್ಲಿ ಅತೀ ಹೆಚ್ಚಿನ ಏರಿಕೆಯಾಗಿದೆ.
229. ಪ್ರಸಕ್ತ ವರ್ಷದ ಜನವರಿ ಅಂತ್ಯದವರೆಗೂ ರಾಜ್ಯದಲ್ಲಿ 33,991 ಕೋಟಿ ರೂ. ಗಳಷ್ಟು ಬಂಡವಾಳ ವೆಚ್ಚವಾಗಿರುತ್ತದೆ. ಇದು ಆಯವ್ಯಯ ಅಂದಾಜಿನ ಶೇ. 72ರಷ್ಟಿದೆ. ಕಳೆದ 10 ವರ್ಷಗಳಲ್ಲಿ ಆರ್ಥಿಕ ವರ್ಷದ ಜನವರಿ ಅಂತ್ಯದವರೆಗಿನ ಯಾವುದೇ ಸರ್ಕಾರವು ಸಾಧಿಸಿರದ ಅತೀ ಹೆಚ್ಚಿನ ಬಂಡವಾಳ ವೆಚ್ಚ ಇದಾಗಿರುತ್ತದೆ. ನಮ್ಮ ಸರ್ಕಾರವು ಕೇವಲ ಆಯವ್ಯಯ ಅಂದಾಜಿಸದೇ, ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುತ್ತದೆ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ.
230. ರಾಜ್ಯದಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ವಿಮಾನ ನಿಲ್ದಾಣಗಳ ಅಭಿವೃದ್ಧಿ, ರೈಲು ಮಾರ್ಗಗಳ ಅಭಿವೃದ್ಧಿ,
ಸಬ್‌ಅರ್ಬನ್ ರೈಲ್ವೆ ನಿಲ್ದಾಣ, ಬಂದರುಗಳ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ಮಲ್ಟಿ ಮೋಡಲ್ ಲಾಜಿಸ್ಟಿಕ್ ಪಾರ್ಕ್ ಮೊದಲಾದ ಮೂಲಸೌಕರ್ಯಗಳ ಅಭಿವೃದ್ಧಿಗೆ 69,031 ಕೋಟಿ ರೂ. ಗಳ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಅಲ್ಲದೆ ಇನ್ನೂ ಹೆಚ್ಚುವರಿಯಾಗಿ ಸಾಕಷ್ಟು ಯೋಜನೆಗಳು ಅನುಷ್ಠಾನಗೊಳಿಸುವ ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ.
231. ಕೇಂದ್ರ ಸರ್ಕಾರವು, ರಾಜ್ಯದ ಆರ್ಥಿಕತೆಯನ್ನು ಉತ್ತೇಜಿಸಲು ಸತತವಾಗಿ ರಾಜ್ಯಕ್ಕೆ ಸಂಪೂರ್ಣ ಬೆಂಬಲ ನೀಡುತ್ತಾ ಬಂದಿದೆ. 2019-20 ರಿಂದ 2022-23 ರವರೆಗೂ, ಕೇಂದ್ರ ಸರ್ಕಾರವು ನಮ್ಮ ರಾಜ್ಯಕ್ಕೆ ಒಟ್ಟು 2,77,711 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ 1,20,493 ಕೋಟಿ ರೂ. ಗಳು ತೆರಿಗೆಯಲ್ಲಿ ರಾಜ್ಯದ ಪಾಲಾಗಿದ್ದು, 1,57,218 ಕೋಟಿ ರೂ. ಗಳನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನ, ಕೋವಿಡ್ ಲಸಿಕೆ, ಜಲಜೀವನ್ ಮಿಷನ್, ಅಮೃತ್ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆ, ಫಸಲ್ ಬಿಮಾ ಯೋಜನೆ, ನರೇಗ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಸೇರಿದಂತೆ 105 ಕೇಂದ್ರ ಪುರಸ್ಕೃತ ಯೋಜನೆಗಳಡಿ ಬಿಡುಗಡೆ ಮಾಡಿದೆ.
232. 2019ರಲ್ಲಿ ಜಲಜೀವನ್ ಮಿಷನ್ ಪ್ರಾರಂಭವಾದಾಗ ಕರ್ನಾಟಕದಲ್ಲಿ ಮನೆಯಲ್ಲಿ ನಳ ಸಂಪರ್ಕ ಹೊಂದಿರುವ ಗ್ರಾಮೀಣ ಕುಟುಂಬಗಳ ಸಂಖ್ಯೆಯು 24 ಲಕ್ಷವಿದ್ದು, ಹಿಂದಿನ 3 ವರ್ಷಗಳಲ್ಲಿ ಹೊಸದಾಗಿ 38 ಲಕ್ಷ ನಳ ಸಂಪರ್ಕವನ್ನು ನೀಡುವ ಮೂಲಕ ಪ್ರಸ್ತುತ 62 ಲಕ್ಷಕ್ಕೆ ಏರಿಸಲಾಗಿದೆ. ಇದಕ್ಕೆ ಪೂರಕವಾಗಿ ಸುಸ್ಥಿರವಾಗಿ ನೀರನ್ನು ಸರಬರಾಜು ಮಾಡಲು 101 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ 30,308 ಕೋಟಿ ರೂ. ಗಳಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ. ರಾಜ್ಯದಲ್ಲಿ ಉಳಿದ ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲು 31,235 ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ. ಇದಕ್ಕಾಗಿ, ಪ್ರಸಕ್ತ ವರ್ಷದಲ್ಲಿ 6,23೪ ಕೋಟಿ ರೂ. ಗಳನ್ನು ಒದಗಿಸಲಾಗಿದೆ.
233. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯವು ಕಳೆದ 5 ವರ್ಷಗಳಲ್ಲಿ 23 ಲಕ್ಷ ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಮೂಲಕ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಈ ಯೋಜನೆಯಡಿ ವಿವಿಧ ಇಲಾಖೆಗಳೊಂದಿಗೆ ಒಗ್ಗೂಡಿಸಿ ಅನುಷ್ಠಾನಗೊಳಿಸಿರುವ ಕಾಮಗಾರಿಗಳಲ್ಲಿ 2.25 ಲಕ್ಷ ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ, 25 ಸಾವಿರ ಎಕರೆ ಪ್ಲಾಂಟೇಷನ್, 25 ಸಾವಿರ ಎಕರೆ ರೇಷ್ಮೆ ಪ್ರದೇಶ ವಿಸ್ತರಣೆ, 1.25 ಲಕ್ಷ ಎಕರೆ ಕೃಷಿ ಅರಣ್ಯೀಕರಣ ಸೇರಿರುತ್ತದೆ. ಅಲ್ಲದೆ 12,547 ಶಾಲಾ ಕಾಂಪೌಂಡ್, 2,331 ಆಟದ ಮೈದಾನಗಳು, 17,574 ಶೌಚಾಲಯಗಳು, 3,117 ಅಂಗನವಾಡಿ ಕಟ್ಟಡಗಳು,
4.95 ಲಕ್ಷಗಳ ಜಾನುವಾರು ಶೆಡ್‌ಗಳ ನಿರ್ಮಾಣವಾಗಿವೆ. ಜೊತೆಗೆ 42,717 ಸಾಂಪ್ರದಾಯಿಕ ಜಲಮೂಲಗಳ ಪುನರುಜ್ಜೀವನ,
1.34 ಲಕ್ಷ ರಸ್ತೆ ಕಾಮಗಾರಿಗಳು ಹಾಗೂ 13,500 ಕಿ.ಮೀ. ರಸ್ತೆ ಬದಿ ನೆಡುತೋಪುಗಳೂ ಸೇರಿವೆ. ಈ ಯೋಜನೆಯಡಿಯಲ್ಲಿ
2023-24ನೇ ಸಾಲಿನಲ್ಲಿ 1,800 ಕೋಟಿ ರೂ. ವೆಚ್ಚದಲ್ಲಿ 88 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಲು ಉದ್ದೇಶಿಸಲಾಗಿದೆ.
234. ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನು ಸಶಕ್ತಗೊಳಿಸಲು ಮತ್ತು ಜನರಿಗೆ ಗ್ರಾಮ ಪಂಚಾಯಿತಿಗಳ ಮುಖಾಂತರ ಸ್ಥಳೀಯವಾಗಿಯೇ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಅವಕಾಶ ಮಾಡಲಾಗುವುದು. ಪ್ರಸ್ತುತ ಗ್ರಾಮ ಪಂಚಾಯಿತಿಗಳಿಗೆ, ಜನಸಂಖ್ಯೆ ಆಧರಿಸಿ 12 ಲಕ್ಷ ರೂ. ಗಳಿಂದ 35 ಲಕ್ಷ ರೂ. ಗಳವರೆಗೆ ರಾಜ್ಯ ಸರ್ಕಾರದಿಂದ ಅನುದಾನ ನೀಡಲಾಗುತ್ತಿದೆ. 2023-24ನೇ ಸಾಲಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ 22 ರಿಂದ 60 ಲಕ್ಷ ರೂ. ಗಳಷ್ಟು ಅನುದಾನ ಲಭ್ಯಪಡಿಸಲು 780 ಕೋಟಿ ರೂ. ಗಳ ಒಂದು ಬಾರಿಯ ವಿಶೇಷ ಅನುದಾನ ಒದಗಿಸಲಾಗುವುದು.
235. ಗ್ರಾಮೀಣ ರಸ್ತೆಗಳ ಸುಧಾರಣೆಗಾಗಿ ಸರ್ಕಾರವು ಹೆಚ್ಚಿನ ಮಹತ್ವವನ್ನು ನೀಡಿದೆ. ಪ್ರಸಕ್ತ ಸಾಲಿನಲ್ಲಿ 2,070 ಕೋಟಿ ರೂ. ಗಳ ವೆಚ್ಚದಲ್ಲಿ 4,504 ಕಿ.ಮೀ. ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ.
236. ಗ್ರಾಮೀಣ ಭಾಗದ ರಸ್ತೆಗಳ ಮತ್ತು ಕೃಷಿ ಭೂಮಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗಾಗಿ, ನರೇಗಾ ಜೊತೆಗೆ ಸಂಯೋಜಿಸಿ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ 25 ಕಿ.ಮೀ. ನಂತೆ ಒಟ್ಟಾರೆಯಾಗಿ 5,000 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲು 300 ಕೋಟಿ ರೂ. ವೆಚ್ಚ ಮಾಡಲಾಗುವುದು.
237. ರಾಜ್ಯದ 20 ಸಾವಿರ ಗ್ರಾಮಗಳಲ್ಲಿ ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಕಾಮಗಾರಿಗಳು ಜಾರಿಯಲ್ಲಿವೆ. ಗ್ರಾಮೀಣ ಪ್ರದೇಶಗಳ ಸ್ವಚ್ಛತೆಯನ್ನು ಕಾಪಾಡಲು ಅಗತ್ಯ ಚರಂಡಿ ವ್ಯವಸ್ಥೆಯನ್ನು ನರೇಗಾ ಹಾಗೂ ಸ್ವಚ್ಛ ಭಾರತ್ ಯೋಜನೆಗಳಡಿಯಲ್ಲಿ 4,190 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು.
238. ಪ್ರತಿ ವರ್ಷ 2,000 ಕೆರೆಗಳನ್ನು 200 ಕೋಟಿ ರೂ. ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಮೂಲಕ ಪಂಚಾಯತ್ ಕೆರೆಗಳ ಪುನರುಜ್ಜೀವನಕ್ಕೆ ಕ್ರಮವಹಿಸಲಾಗುವುದು.
239. ಕಳೆದ ಮೂರು ವರ್ಷಗಳಲ್ಲಿ 5,213 ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ಘಟಕಗಳನ್ನು ಸ್ಥಾಪಿಸಲಾಗಿದ್ದು, ಉಳಿದ ಗ್ರಾಮ ಪಂಚಾಯಿತಿಗಳಲ್ಲಿ ಡಿಸೆಂಬರ್ 2023 ರ ಒಳಗಾಗಿ ಕಸ ವಿಲೇವಾರಿ ಘಟಕಗಳನ್ನು ಸ್ಥಾಪಿಸಲಾಗುವುದು.
240. ರಾಜ್ಯದ 3,798 ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳನ್ನು ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಡಿಜಿಟಲ್ ಗ್ರಂಥಾಲಯಗಳನ್ನಾಗಿ ಪರಿವರ್ತಿಸಲಾಗಿದೆ. ನಮ್ಮ ರಾಜ್ಯದಲ್ಲಿ ಅನುಷ್ಠಾನಗೊಳಿಸಿರುವ ಈ ಯೋಜನೆಯನ್ನು ಈ ವರ್ಷದ ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ಘೋಷಿಸಲಾಗಿದ್ದು, ನಮ್ಮ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ಗ್ರಂಥಾಲಯಗಳಿಲ್ಲದ 330 ಗ್ರಾಮ ಪಂಚಾಯಿತಿಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಲಾಗುವುದು. ವಿಶೇಷಚೇತನ ಮಕ್ಕಳಿಗಾಗಿ ರಾಜ್ಯದ
1,000 ಗ್ರಾಮೀಣ ಗ್ರಂಥಾಲಯಗಳನ್ನು ಉನ್ನತೀಕರಿಸಲಾಗುವುದು.
241. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಹಾಗೂ ಜನರ ಅವಶ್ಯಕತೆಗೆ ತಕ್ಕಂತೆ ಯೋಜನೆಗಳನ್ನು ರೂಪಿಸುವ ಉದ್ದೇಶದಿಂದ ಜಿಲ್ಲಾ ಯೋಜನಾ ಸಮಿತಿಗಳನ್ನು ಬಲಪಡಿಸಲಾಗುವುದು. ಪಂಚಾಯತ್ ರಾಜ್ ಸಂಸ್ಥೆಗಳ ವಿವಿಧ ಹಂತದ ಕಾರ್ಯನಿರ್ವಹಣೆ ಕುರಿತಂತೆ Responsibility Mapping ಮಾಡಲಾಗುವುದು.
242. ಗ್ರಾಮ ಪಂಚಾಯಿತಿಗಳಲ್ಲಿ ತಂತ್ರಜ್ಞಾನದ ಬಳಕೆಯನ್ನು ಮಾಡುವಲ್ಲಿ ಕರ್ನಾಟಕ ಇಡೀ ದೇಶದಲ್ಲಿಯೇ ಮುಂಚೂಣಿಯಲ್ಲಿದ್ದು, ತಂತ್ರಜ್ಞಾನದ ಮೂಲಕ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಪಂಚತಂತ್ರ 2.0 ಎಂಬ ತಂತ್ರಾಂಶವನ್ನು ಅಳವಡಿಸಲಾಗುವುದು.
243. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ದಾಖಲಾತಿಯಿರುವ ಸರ್ಕಾರಿ ಶಾಲೆಗಳಲ್ಲಿ ಊಟ ಮಾಡಲು ಹಾಗೂ ಇತರೆ ಕಾರ್ಯಕ್ರಮಗಳಿಗೆ ಅನುವಾಗುವಂತೆ ನರೇಗಾ ಯೋಜನೆಯಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ 18 ಲಕ್ಷ ರೂ. ಗಳ ಘಟಕ ವೆಚ್ಚದಲ್ಲಿ ಆಹಾರ ಮಂದಿರಗಳನ್ನು ನಿರ್ಮಿಸಲಾಗುವುದು.
244. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ 2021-22ರಲ್ಲಿ
1,500 ಕೋಟಿ ರೂ. ಒದಗಿಸಿದ್ದು, ಹಿಂದಿನ ಆಯವ್ಯಯದಲ್ಲಿ ನಮ್ಮ ಸರ್ಕಾರ 3,000 ಕೋಟಿ ರೂ. ಗಳಿಗೆ ಹೆಚ್ಚಿಸಿದೆ. ಈ ಅನುದಾನದಲ್ಲಿ 3,155 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಪ್ರಾದೇಶಿಕ ಅಸಮತೋಲನೆಯನ್ನು ಸರಿಪಡಿಸುವ ಉದ್ದೇಶದಿಂದ
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ 5,000 ಕೋಟಿ ರೂ. ಮೌಲ್ಯದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು.
245. ಕರ್ನಾಟಕದ ಜಿಡಿಪಿಯು One Trillion Dollar Economy ಯನ್ನಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆಯನ್ನು ನಮ್ಮ ಸರ್ಕಾರ ಹೊಂದಿದೆ. ಇದಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಲು ರಚಿಸಲಾದ ಕೈಗಾರಿಕಾ ತಜ್ಞರು ಮತ್ತು ಸರ್ಕಾರದ ಪ್ರತಿನಿಧಿಗಳ ಉನ್ನತ ಮಟ್ಟದ ಸಮಿತಿಯ ಶಿಫಾರಸ್ಸುಗಳಂತೆ ಎಲ್ಲಾ ಅಗತ್ಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು.
246. ನೀತಿ ಆಯೋಗದ ಮಾದರಿಯಂತೆ, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗವನ್ನು ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆ (SITK) ಎಂದು ಪುನರ್ ರಚಿಸಲಾಗಿದ್ದು, ಈ ಸಂಸ್ಥೆಯ ಮೂಲಕ ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣಕ್ಕೆ ವಿನೂತನ ಪರಿಹಾರಗಳನ್ನು ರೂಪಿಸಲಾಗುವುದು.
247. ಹೊಸ ಕಾರ್ಯಕ್ರಮಗಳನ್ನು ರೂಪಿಸುವ ಸಂದರ್ಭದಲ್ಲಿ ದತ್ತಾಂಶ ವಿಶ್ಲೇಷಣೆ ಮತ್ತು ಮುನ್ಸೂಚನೆ ಪಡೆಯಲು Big Data Lake ಯೋಜನೆಯನ್ನು IIIT-B ಮತ್ತು ಇ-ಆಡಳಿತ ಕೇಂದ್ರದ (CeG) ಸಹಯೋಗದೊಂದಿಗೆ ಪ್ರಾರಂಭಿಸಲಾಗುವುದು.
248. ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಯೋಜನೆ (ಹಂತ-4) ರಡಿ 302 ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 3,885 ಕೋಟಿ ರೂ. ಗಳ ವೆಚ್ಚದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
249. ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ರಾಜ್ಯದ 287 ನಗರಗಳಲ್ಲಿ ಒಟ್ಟು ಯೋಜನಾ ಮೊತ್ತ 9,230 ಕೋಟಿ ರೂ. ಗಳಲ್ಲಿ ನೀರು ಸರಬರಾಜು, ಜಲಮೂಲಗಳ ಸಂರಕ್ಷಣೆ ಮತ್ತು ಪುನಶ್ಚೇತನ ಮತ್ತಿತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಈ ಯೋಜನೆಯಡಿಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ 2023-24ನೇ ಸಾಲಿನಲ್ಲಿ 185 ನಗರ ಮತ್ತು ಪಟ್ಟಣಗಳಲ್ಲಿ 6,820 ಕೋಟಿ ರೂ. ವೆಚ್ಚದಲ್ಲಿ ಸುಮಾರು 7.21 ಲಕ್ಷ ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲಾಗುವುದು.
250. ರಾಜ್ಯದ 5,188 ಪೌರನೌಕರರಿಗೆ ಗೃಹ ನಿರ್ಮಾಣಕ್ಕಾಗಿ ಅನುಮೋದನೆ ನೀಡಲಾಗಿದ್ದು, ಅದರಲ್ಲಿ 3,733 ಮನೆಗಳು ಪೂರ್ಣಗೊಂಡಿದೆ. ಪ್ರಸಕ್ತ ವರ್ಷದಲ್ಲಿ ʻಪೌರ ಆಸರೆʼ ಯೋಜನೆಯಡಿ 5,000 ವಸತಿರಹಿತ ಪೌರನೌಕರರಿಗೆ 300 ಕೋಟಿ ರೂ. ಗಳ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲು ಯೋಜಿಸಲಾಗಿದೆ.
251. ಸ್ಮಾರ್ಟ್ ಸಿಟಿ ಅಭಿಯಾನದಲ್ಲಿ ಕರ್ನಾಟಕ ರಾಜ್ಯದಿಂದ ಏಳು ನಗರಗಳು ಆಯ್ಕೆಯಾಗಿದ್ದು, 5,900 ಕೋಟಿ ರೂ. ಅನುದಾನವನ್ನು 7 ನಗರಗಳಿಗೆ ಬಿಡುಗಡೆ ಮಾಡಲಾಗಿದ್ದು, 4,157 ಕೋಟಿ ರೂ. ಮೊತ್ತದ 506 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
ಈ ವರ್ಷದಲ್ಲಿ 3,395 ಕೋಟಿ ರೂ. ಮೊತ್ತದ 143 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು.
252. ರಾಜ್ಯದ 196 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸುಮಾರು ಹತ್ತು ವರ್ಷಗಳಿಂದ ಸಂಗ್ರಹಣೆಯಾಗಿರುವ 179 ಲಕ್ಷ ಮೆಟ್ರಿಕ್ ಟನ್ Legacy Waste ಅನ್ನು ಎರಡು ವರ್ಷಗಳ ಅವಧಿಯೊಳಗೆ ತೆರವುಗೊಳಿಸಲು ಯೋಜಿಸಲಾಗಿದೆ. ಇದರಿಂದ ಸುಮಾರು 1,180 ಎಕರೆ ಪ್ರದೇಶವನ್ನು ಹಿಂಪಡೆದು ನಗರ ಅರಣ್ಯೀಕರಣ, ಉದ್ಯಾನವನ, ಮನರಂಜನೆ ಜಾಗಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು.
253. ಬೀದರ್ ಮತ್ತು ರಾಯಚೂರು ನಗರ ಸಭೆಗಳನ್ನು ಮಹಾನಗರಪಾಲಿಕೆಯನ್ನಾಗಿ ಉನ್ನತೀಕರಿಸುವ ಬಗ್ಗೆ ಮಾನದಂಡಗಳನ್ವಯ ಪರಿಶೀಲಿಸಲಾಗುವುದು.
254. ಮೈಸೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾವೇರಿ, ಕೋಲಾರ ಮತ್ತು ರಾಮನಗರದಲ್ಲಿ Integrated Township ಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲು ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಿಂದ Expression of Interest ಅನ್ನು ಆಹ್ವಾನಿಸಲಾಗಿದೆ. ಈ ಟೌನ್‌ಶಿಪ್‌ಗಳು ನಗರ ಯೋಜನೆಗೆ, ಹೊಸ ಉದ್ಯಮಗಳಿಗೆ ನೂತನ ಆಯಾಮವನ್ನು ನೀಡಲಿದೆ ಹಾಗೂ ಉತ್ತಮವಾದ ಜೀವನಶೈಲಿ ಹಾಗೂ ಕೆಲಸದ ವಾತಾವರಣ ಸೃಜಿಸಲಿವೆ.
255. ನಗರ ಮತ್ತು ಪಟ್ಟಣಗಳಲ್ಲಿ ಖಾಲಿ ಇರುವ ಜಾಗಗಳನ್ನು ಗುರುತಿಸಿ ಖ್ಯಾತ ನಟರಾದ ದಿವಂಗತ ಶಂಕರ್‌ನಾಗ್ ರವರ ಹೆಸರಿನಲ್ಲಿ ಟ್ಯಾಕ್ಸಿ ಮತ್ತು ಆಟೋ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುವುದು.
256. ವಿದ್ಯುತ್ ಕ್ಷೇತ್ರದಲ್ಲಿ ಬೆಳಕು ಯೋಜನೆಯಡಿ 124 ಕೋಟಿ ರೂ. ವೆಚ್ಚದಲ್ಲಿ 2.35 ಲಕ್ಷ ವಿದ್ಯುತ್ ರಹಿತ ಮನೆಗಳಿಗೆ ವಿದ್ಯುತ್ ಸಂಪರ್ಕ, 24 ಗಂಟೆಗಳಲ್ಲಿಯೇ ವಿದ್ಯುತ್ ಪರಿವರ್ತಕ ಬದಲಾಯಿಸುವ ಕಾರ್ಯಕ್ರಮದಡಿ 1.37 ಲಕ್ಷ ವಿಫಲ ಪರಿವರ್ತಕಗಳ ಬದಲಾವಣೆ, 67,713 ಹೊಸ ವಿದ್ಯುತ್ ಪರಿವರ್ತಕಗಳ ಅಳವಡಿಕೆ ಮತ್ತು ಗಂಗಾ ಕಲ್ಯಾಣ ಯೋಜನೆಯಡಿ 4,268 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕವೂ ಸೇರಿ ಹಲವು ಜನಸ್ನೇಹಿ ಕ್ರಮಗಳನ್ನು ಕೈಗೊಳ್ಳಲಾಗಿದೆ.
257. ರಾಜ್ಯದಲ್ಲಿ 10 GW ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಉತ್ಪಾದನೆಯ ಗುರಿಯೊಂದಿಗೆ ʻಕರ್ನಾಟಕ ನವೀಕರಿಸಬಹುದಾದ ಇಂಧನ ನೀತಿ 2022-27ʼ ಜಾರಿಗೊಳಿಸಲಾಗಿದೆ. ಕಳೆದ ವರ್ಷ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಗ್ರೀನ್ ಹೈಡ್ರೋಜನ್ ಒಳಗೊಂಡಂತೆ ನವೀಕರಿಸಬಹುದಾದ ಇಂಧನಗಳ ಹೂಡಿಕೆಗೆ ಸುಮಾರು 1.68 ಲಕ್ಷ ಕೋಟಿ ರೂ. ಮೌಲ್ಯದ MoU ಗಳನ್ನು ಸಹಿ ಮಾಡಲಾಗಿದೆ.
258. 2022-23ನೇ ಸಾಲಿನಲ್ಲಿ ಸುಗಮ ವಿದ್ಯುತ್ ರವಾನೆ ಹಾಗೂ ಪ್ರಸರಣ ಜಾಲದ ಬಲವರ್ಧನೆಗಾಗಿ 16 ಹೊಸ ಉಪಕೇಂದ್ರಗಳ ಸ್ಥಾಪನೆ, 910 ಕಿ.ಮೀ. ಪ್ರಸರಣಾ ಮಾರ್ಗ ರಚನೆ ಮತ್ತು
151 ಉಪಕೇಂದ್ರಗಳ ಉನ್ನತೀಕರಣ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಮುಂದುವರೆದು, 50 ಹೊಸ ಉಪ ಕೇಂದ್ರಗಳನ್ನು, 1,060 Circuit ಕಿ.ಮೀ. ಪ್ರಸರಣ ಮಾರ್ಗಗಳನ್ನು ಮತ್ತು 100 ಹಾಲಿ ಇರುವ ಉಪ ಕೇಂದ್ರಗಳ ಸಾಮರ್ಥ್ಯ ಉನ್ನತೀಕರಣ ಕಾಮಗಾರಿಗಳೂ ಸೇರಿದಂತೆ ಈ ವರ್ಷದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ 3,000 ಕೋಟಿ ರೂ. ಗಳ ಹೂಡಿಕೆ ಮಾಡಲಾಗುವುದು.
259. ಕರ್ನಾಟಕ ವಿದ್ಯುತ್ ನಿಗಮದ Generation Switchyard ಉಪಕರಣಗಳು ಹಾಗೂ ಸಂರಕ್ಷಣಾ ವ್ಯವಸ್ಥೆಗಳ ಆಧುನೀಕರಣವನ್ನು ಕೇಂದ್ರ ಸರ್ಕಾರದ ಪವರ್ ಸಿಸ್ಟಂ ಡೆವೆಲಪ್ಮೆಂಟ್ ಫಂಡ್ ಫೇಸ್-3 ಅಡಿಯಲ್ಲಿ 102 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು.
260. ಕರ್ನಾಟಕ ಸರ್ಕಾರವು ಈಗಾಗಲೇ ಶರಾವತಿ ಪಂಪ್ಡ್ ಸ್ಟೋರೇಜ್ ಪವರ್ ಪ್ಲ್ಯಾಂಟ್‌ನ (PSP) ವಿಸ್ತೃತ ಯೋಜನಾ ವರದಿಯನ್ನು ತಯಾರಿಸಿದ್ದು, ಈ ಯೋಜನೆಯನ್ನು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ 7,394 ಕೋಟಿ ರೂ. ಗಳ ಅಂದಾಜು ವೆಚ್ಚದಲ್ಲಿ ಕರ್ನಾಟಕ ವಿದ್ಯುತ್ ನಿಗಮದ ಮೂಲಕ ಅನುಷ್ಠಾನಗೊಳಿಸಲಾಗುವುದು. ಇದಲ್ಲದೇ, 1,000 MW ನ ಹೊಸ ಪಂಪ್ಡ್ ಸ್ಟೋರೇಜ್ ಘಟಕವನ್ನು, ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲಾಗುವುದು.
261. 2023-24ನೇ ಸಾಲಿನ ಕೇಂದ್ರ ಸರ್ಕಾರದ ಆಯವ್ಯಯದಲ್ಲಿ 4,000 MWH ಸಾಮರ್ಥ್ಯದ Battery Storage System ಗಳನ್ನು Viability Gap Funding ಮೂಲಕ ಉತ್ತೇಜಿಸುವುದಾಗಿ ಘೋಷಿಸಲಾಗಿದೆ. ಈ ಯೋಜನೆಯ ನೆರವಿನೊಂದಿಗೆ ಪಾವಗಡ ಸೋಲಾರ್ ಪಾರ್ಕ್‌ನಲ್ಲಿ 48 ಕೋಟಿ ರೂ. ವೆಚ್ಚದಲ್ಲಿ ಬ್ಯಾಟರಿ ಶೇಖರಣೆ ವ್ಯವಸ್ಥೆಯನ್ನು ಹೊಂದಿದ 2 MW ಸಾಮರ್ಥ್ಯದ ಸೌರ ಘಟಕವನ್ನು KREDL ವತಿಯಿಂದ ಸ್ಥಾಪಿಸಲಾಗುವುದು.
262. ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳ ಬಲವರ್ಧನೆ ಮತ್ತು ಆರ್ಥಿಕ ಸ್ವಾವಲಂಬನೆ ಕುರಿತು ಅಧ್ಯಯನ ನಡೆಸುವ ಸಲುವಾಗಿ ಗುರುಚರಣ್ ಸಮಿತಿಯನ್ನು ರಚಿಸಲಾಗಿತ್ತು. ಸದರಿ ಸಮಿತಿಯ ಶಿಫಾರಸ್ಸುಗಳನ್ನು ಪರಿಶೀಲಿಸಿ ವಿದ್ಯುತ್ ಸರಬರಾಜು ಕಂಪನಿಗಳ ಕಾರ್ಯನಿರ್ವಹಣೆ ಮತ್ತು ಆರ್ಥಿಕ ಸ್ಥಿತಿಯ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
263. ಹಲವಾರು ವರ್ಷಗಳಿಂದ ಸಂಕಷ್ಟದಲ್ಲಿರುವ ವಿದ್ಯುತ್ ಸರಬರಾಜು ಕಂಪನಿಗಳಿಗೆ ಕಳೆದೆರಡು ಸಾಲಿನಲ್ಲಿ 31,869 ಕೋಟಿ ರೂ. ಗಳ ಅನುದಾನ ಒದಗಿಸುವ ಮೂಲಕ ನಮ್ಮ ಸರ್ಕಾರವು ಕಾಯಕಲ್ಪ ನೀಡಿದೆ. ಇದರಲ್ಲಿ 25,445 ಕೋಟಿ ರೂ. ಗಳನ್ನು ಉಚಿತ ವಿದ್ಯುತ್ ಯೋಜನೆಗಳಾದ ರೈತರ ಪಂಪ್‌ಸೆಟ್ ಯೋಜನೆ ಹಾಗೂ ಭಾಗ್ಯಜ್ಯೋತಿ ಮತ್ತು ಕುಟೀರಜ್ಯೋತಿ ಯೋಜನೆಗಳಿಗೆ ನೀಡಲಾಗಿದೆ. 924 ಕೋಟಿ ರೂ. ಗಳ ಬಂಡವಾಳ ಹೂಡಿಕೆಯನ್ನು ಮಾಡಿದೆ. ಇದರ ಜೊತೆ 5,500 ಕೋಟಿ ರೂ. ಗಳ ವಿಶೇಷ ಆರ್ಥಿಕ ನೆರವು ಹಾಗೂ 2,564 ಕೋಟಿ ರೂ. ಗಳ ಹಿಂದಿನ ಸಾಲವನ್ನು ಹೊಂದಾಣಿಕೆಯ ಮೂಲಕ ಕೈಬಿಡಲಾಗಿದೆ. 2022-23 ಆರ್ಥಿಕ ವರ್ಷದಲ್ಲಿ ವಿದ್ಯುತ್ ಉತ್ಪದನಾ ಕಂಪನಿಗಳ ಹಿಂಬಾಕಿ ಪಾವತಿಗಾಗಿ ರಾಜ್ಯ ಸರ್ಕಾರವು ಸುಮಾರು 13,709 ಕೋಟಿ ರೂ. ಗಳ ಸಾಲಕ್ಕೆ ಖಾತರಿ ಯನ್ನು ನೀಡಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ರಾಜ್ಯದ ಇಂಧನ ಕಂಪನಿಗಳಿಗೆ 13,743 ಕೋಟಿ ರೂ. ಗಳ ಅನುದಾನವನ್ನು ನೀಡಲಾಗುವುದು.
264. 2022-23ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿ 4,221 ಕೋಟಿ ರೂ. ವೆಚ್ಚದಲ್ಲಿ 818 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ಹಾಗೂ 1,093 ಕಿ.ಮೀ. ಜಿಲ್ಲಾ ಮತ್ತು ಇತರೆ ರಸ್ತೆಗಳ ಅಭಿವೃದ್ಧಿ, 135 ಸೇತುವೆಗಳ ನಿರ್ಮಾಣ ಪೂರ್ಣಗೊಳಿಸಲಾಗಿದೆ. ಜೀವಿತಾವಧಿ ಪೂರ್ಣಗೊಂಡಿರುವ 1,008 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಗಳ ನವೀಕರಣವನ್ನು 440 ಕೋಟಿ ರೂ. ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಮಾರ್ಚ್ 2023ರ ಅಂತ್ಯದೊಳಗೆ 3,720 ಕೋಟಿ ರೂ. ಗಳ ವೆಚ್ಚದಲ್ಲಿ 948 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ಹಾಗೂ 1,364 ಕಿ.ಮೀ. ಉದ್ದದ ಜಿಲ್ಲಾ ಮತ್ತು ಇತರೆ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುವುದು.
265. 2014ರಲ್ಲಿ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಇಲ್ಲಿಯವರೆಗೂ ಕರ್ನಾಟಕದಲ್ಲಿ 64,512 ಕೋಟಿ ರೂ. ವೆಚ್ಚದಲ್ಲಿ 6,715 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲಾಗಿದೆ. ಮುಂದುವರೆದು, ಒಂದು ಲಕ್ಷ ಇಪ್ಪತ್ತು ಸಾವಿರ ಕೋಟಿ ರೂ. ಗಳ ವೆಚ್ಚದಲ್ಲಿ 3,084 ಕಿ.ಮೀ. ಹೆದ್ದಾರಿಯನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ೫,೪೮೬ ಕೋಟಿ ರೂ. ವೆಚ್ಚದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ, 8,408 ಕೋಟಿ ರೂ. ವೆಚ್ಚದ ಬೆಂಗಳೂರು-ರಾಮನಗರ-ಮಂಡ್ಯ-ಮೈಸೂರು ಹೆದ್ದಾರಿ, 4,544 ಕೋಟಿ ರೂ. ವೆಚ್ಚದ ಸೂರತ್-ಚೆನ್ನೈ ಎಕ್ಸ್‌ಪ್ರೆಸ್‌ವೇ, 1,200 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿ-ಧಾರವಾಡ ಆರು ಪಥಗಳ ರಸ್ತೆ, 2,200 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿ-ಹೊಸಪೇಟೆ-ಬಳ್ಳಾರಿ-ಆಂಧ್ರ ಗಡಿ ಹೆದ್ದಾರಿ, 2,611 ಕೋಟಿ ರೂ. ವೆಚ್ಚದಲ್ಲಿ ಚಿತ್ರದುರ್ಗ-ದಾವಣಗೆರೆ-ಹಾವೇರಿ ಮಾರ್ಗದ ಆರು ಪಥದ ಹೆದ್ದಾರಿಗಳು ಸೇರಿವೆ. ಮೈಸೂರು-ಕುಶಾಲನಗರ ಮಾರ್ಗದಲ್ಲಿ ೯೨ ಕಿ.ಮಿ. ಉದ್ದದ ಹೆದ್ದಾರಿಯನ್ನು ೪,೧೨೮ ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಅನುಮೋದನೆಯಾಗಿದೆ.
266. ರಸ್ತೆ ಅಪಘಾತಗಳನ್ನು ತಡೆಗಟ್ಟಲು ಮತ್ತು ಸುಗಮ ಸಂಚಾರಕ್ಕೆ ಅನುವಾಗುವಂತೆ, ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರದ ವತಿಯಿಂದ 124 ಕೋಟಿ ರೂ. ವೆಚ್ಚದಲ್ಲಿ 145 ರಸ್ತೆ ಸುರಕ್ಷತಾ ಕಪ್ಪು ಸ್ಥಳ ನಿವಾರಣಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
267. 2022-23ನೇ ಸಾಲಿನಲ್ಲಿ ಉಂಟಾದ ಅತೀವೃಷ್ಟಿ ಹಾಗೂ ನೆರೆಹಾವಳಿಯಿಂದ ಹಾನಿಗೊಳಗಾದ ಇಲಾಖೆಯ ರಸ್ತೆ ಮತ್ತು ಸೇತುವೆಗಳ ದುರಸ್ತಿ ಮತ್ತು ಪುನರ್ ನಿರ್ಮಾಣ ಕಾಮಗಾರಿಗಳನ್ನು ಒಟ್ಟು 500 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ.
268. ರಾಜ್ಯ ಕೋರ್ ನೆಟ್ ವರ್ಕ್ ರಸ್ತೆ ಜಾಲದಲ್ಲಿ 1,700 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ರಸ್ತೆಗಳನ್ನು ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಯೋಜನೆಯ (ಎಸ್.ಹೆಚ್.ಡಿ.ಪಿ) ಹಂತ-4, ಘಟ್ಟ-3 ರಡಿ 2,000 ಕೋಟಿ ರೂ. ಮೊತ್ತದಲ್ಲಿ ನಿರ್ಮಾಣ ಮಾಡಲಾಗುವುದು.
269. ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳೊಂದಿಗೆ ಸಂಪರ್ಕ ಕಲ್ಪಿಸಲು, ಪ್ರಾದೇಶಿಕ ಅಸಮತೋಲನವನ್ನು ಸರಿದೂಗಿಸಲು ಹಾಗೂ ಲಾಸ್ಟ್ ಮೈಲ್ ಕನೆಕ್ಟಿವಿಟಿ ನೀಡಲು, ಬಾಹ್ಯ ನೆರೆವಿನ ಯೋಜನೆಯಾದ ಕೆಶಿಪ್-4 ರಡಿ 2,943 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ರಸ್ತೆಯನ್ನು ನಿರ್ಮಿಸಲು ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲಾಗುವುದು. ಈ ಯೋಜನೆಗೆ 5,000 ಕೋಟಿ ರೂ. ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ.
270. ಜಿಲ್ಲಾ ಕೇಂದ್ರಗಳಲ್ಲಿ ಸಂಪರ್ಕ ಜಾಲವನ್ನು ವಿಸ್ತರಿಸಲು ಹಾಗೂ ಗ್ರಾಮೀಣ ರಸ್ತೆಗಳಿಗೆ ಸಂಪರ್ಕ ಕಲ್ಪಿಸಲು ಅನುಮೋದನೆಗೊಂಡಿರುವ 5,000 ಕಿ.ಮೀ. ಉದ್ದದ ಜಿಲ್ಲಾ ಪ್ರಮುಖ ರಸ್ತೆಗಳ ಕಾಮಗಾರಿಗಳಿಗೆ 1,500 ಕೋಟಿ ರೂ. ಗಳ ಅನುದಾನವನ್ನು ಆಯವ್ಯಯದಲ್ಲಿ ಒದಗಿಸಲಾಗುವುದು.
271. ಕಲ್ಯಾಣ ಕರ್ನಾಟಕದ ಪ್ರಮುಖ ಸಂಪರ್ಕ ರಸ್ತೆಯಾದ 411 ಕಿ.ಮೀ. ಉದ್ದದ ಬೀದರ್ – ಕಲಬುರಗಿ – ಬಳ್ಳಾರಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರವು ಜಂಟಿಯಾಗಿ 7,650 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.
272. ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಜಿಲ್ಲೆಗಳಲ್ಲಿ ಮಳೆಗಾಲದಲ್ಲಿ ರಭಸದಿಂದ ಹರಿಯುವ ಹಳ್ಳ ತೊರೆಗಳನ್ನು ಸುರಕ್ಷಿತವಾಗಿ ದಾಟಲು ಹಾಗೂ ಸಂಪರ್ಕರಹಿತ ಜನ ವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು
500 ಕಾಲುಸಂಕಗಳ ನಿರ್ಮಾಣ ಕಾಮಗಾರಿಯನ್ನು 250 ಕೋಟಿ ರೂ. ಮೊತ್ತದಲ್ಲಿ ಕೈಗೆತ್ತಿಕೊಳ್ಳಲಾಗುವುದು.
273. ಕೊಡಗು ಜಿಲ್ಲೆಯ ಮುಖ್ಯ ರಸ್ತೆಗಳ ಅಭಿವೃದ್ಧಿಗಾಗಿ 100 ಕೋಟಿ ರೂ. ಗಳ ವಿಶೇಷ ಪ್ಯಾಕೇಜನ್ನು ನೀಡಲಾಗುವುದು.
274. ರಾಜ್ಯ ಸರ್ಕಾರವು ರೈಲ್ವೆ ಮಂತ್ರಾಲಯದೊಂದಿಗೆ 50:50 ರ ವೆಚ್ಚ ಹಂಚಿಕೆ ಆಧಾರದಲ್ಲಿ 9 ಹೊಸ ರೈಲ್ವೆ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದೆ. ರಾಜ್ಯ ಸರ್ಕಾರವು ನಿರ್ಮಾಣ ವೆಚ್ಚದ ಪಾಲನ್ನು ಒದಗಿಸುವುದಲ್ಲದೇ, ಎಲ್ಲಾ ಯೋಜನೆಗಳಿಗೆ ಭೂ ಸ್ವಾಧೀನದ ವೆಚ್ಚವನ್ನು ಸಹ ಭರಿಸಲಿದೆ. ಈ ವರ್ಷದ ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ಕರ್ನಾಟಕದ ರೈಲು ಜಾಲವನ್ನು ಅಭಿವೃದ್ಧಿಪಡಿಸಲು 7,561 ಕೋಟಿ ರೂ. ಗಳನ್ನು ಮೀಸಲಿಡಲಾಗಿದೆ.
275. ಕೇಂದ್ರ ಸರ್ಕಾರವು ಈ ವರ್ಷದಲ್ಲಿ ತುಮಕೂರು-ಚಿತ್ರದುರ್ಗ ರೈಲ್ವೆ ಮಾರ್ಗಕ್ಕೆ 220 ಕೋಟಿ ರೂ., ಶಿವಮೊಗ್ಗ-ಶಿಕಾರಿಪುರ ರೈಲ್ವೆ ಮಾರ್ಗಕ್ಕೆ 150 ಕೋಟಿ ರೂ., ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗಕ್ಕೆ 210 ಕೋಟಿ ರೂ., ಮುನಿರಾಬಾದ್-ಗಿಣಿಗೇರಾ-ರಾಯಚೂರು ರೈಲ್ವೆ ಮಾರ್ಗಕ್ಕೆ 150 ಕೋಟಿ ರೂ., ಗದಗ-ವಾಡಿ ರೈಲ್ವೆ ಮಾರ್ಗಕ್ಕೆ 200 ಕೋಟಿ ರೂ., ತುಮಕೂರು-ರಾಯದುರ್ಗ ರೈಲ್ವೆ ಮಾರ್ಗಕ್ಕೆ 225 ಕೋಟಿ ರೂ., ಒಳಗೊಂಡಂತೆ ಎಲ್ಲಾ ಹೊಸ ರೈಲ್ವೆ ಕಾಮಗಾರಿಗಳಿಗೆ ಒಟ್ಟಾರೆಯಾಗಿ 1,537 ಕೋಟಿ ರೂ. ಗಳನ್ನು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಒದಗಿಸಲಾಗಿದೆ.
276. ಇದಲ್ಲದೆ, ಡಬ್ಲಿಂಗ್ ಕಾಮಗಾರಿಗಳಿಗೂ ಸಹ ಕೇಂದ್ರ ಸರ್ಕಾರ ವಿಶೇಷ ಆದ್ಯತೆ ನೀಡಿದೆ. ಬೈಯ್ಯಪ್ಪನಹಳ್ಳಿ-ಹೊಸೂರು 100 ಕೋಟಿ ರೂ., ಹುಬ್ಬಳ್ಳಿ-ಚಿಕ್ಕಜಾಜೂರು 150 ಕೋಟಿ ರೂ., ಹೊಸಪೇಟೆ-ಹುಬ್ಬಳ್ಳಿ-ಲೋಂಡಾ-ವಾಸ್ಕೋ-ಡ-ಗಾಮ 400 ಕೋಟಿ ರೂ., ಗದಗ-ಹೋಟಗಿ 170 ಕೋಟಿ ರೂ., ಕೆ.ಆರ್. ಪುರಂ-ವೈಟ್‌ಫೀಲ್ಡ್ 250 ಕೋಟಿ ರೂ. ಒಳಗೊಂಡಂತೆ ಎಲ್ಲಾ ಡಬ್ಲಿಂಗ್ ಕಾಮಗಾರಿಗಳಿಗೆ ಈ ವರ್ಷದಲ್ಲಿ 1,490 ಕೋಟಿ ರೂ. ಗಳನ್ನು ಒದಗಿಸಲಾಗುತ್ತಿದೆ. ಈ ಎಲ್ಲಾ ಕಾಮಗಾರಿಗಳಿಗೆ ಅಗತ್ಯವಿರುವ ರಾಜ್ಯ ಸರ್ಕಾರದ ಪಾಲನ್ನು ನೀಡಲಾಗುವುದು.
277. ತುಮಕೂರು – ರಾಯದುರ್ಗ, ಗಿಣಿಗೇರಾ – ರಾಯಚೂರು, ಬಾಗಲಕೋಟೆ-ಕುಡಚಿ ಮತ್ತು ಚಿಕ್ಕಮಗಳೂರು-ಬೇಲೂರು ರೈಲ್ವೆ ಮಾರ್ಗಗಳ ಮೂಲ ಅಂದಾಜು 2,880 ಕೋಟಿ ರೂ. ಗಳಿದ್ದು, ಕಳೆದ ವರ್ಷದಲ್ಲಿ ಇದನ್ನು 5,838 ಕೋಟಿ ರೂ. ಗಳಿಗೆ ಪರಿಷ್ಕರಿಸಲಾಗಿದ್ದು, ಇದಕ್ಕೆ 960 ಕೋಟಿ ರೂ. ಗಳ ಹೆಚ್ಚುವರಿ ಅನುದಾನವನ್ನು ರಾಜ್ಯ ಸರ್ಕಾರದ ವತಿಯಿಂದ ಒದಗಿಸಲಾಗುವುದು. ಮುಂದುವರೆದು, ಬೆಳಗಾವಿ-ಕಿತ್ತೂರು-ಧಾರವಾಡ ರೈಲ್ವೆ ಮಾರ್ಗಕ್ಕೆ ಭೂ ಸ್ವಾಧೀನಕ್ಕಾಗಿ 150 ಕೋಟಿ ರೂ.,ಗಳನ್ನು ಈ ವರ್ಷದಲ್ಲಿ ಒದಗಿಸಲಾಗುವುದು.
278. ಸುಗಮ ಸಂಚಾರ ಮತ್ತು ಸಮಯದ ಉಳಿತಾಯದ ದೃಷ್ಟಿಯಿಂದ ಜನ ಸಾಮಾನ್ಯರು ವಿಮಾನ ಪ್ರಯಾಣಕ್ಕೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರವು ದಾಖಲೆ ಪ್ರಮಾಣದ ೫ ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ ಕಾಮಗಾರಿಗಳನ್ನು ಶಿವಮೊಗ್ಗ, ವಿಜಯಪುರ, ಹಾಸನ, ರಾಯಚೂರು ಮತ್ತು ಕಾರವಾರ ಜಿಲ್ಲೆಗಳಲ್ಲಿ ಕೈಗೆತ್ತಿಕೊಂಡಿದೆ. ಶಿವಮೊಗ್ಗ ಮತ್ತು ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿಗಳನ್ನು ಪ್ರಸಕ್ತ ಸಾಲಿನಲ್ಲಿಯೇ ಪೂರ್ಣಗೊಳಿಸಲಾಗುವುದು.
279. ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಿ, ಹೊಸ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಗೊಳಿಸಿ ಸ್ಪರ್ಧಾತ್ಮಕ ಬಿಡ್ ಪ್ರಕ್ರಿಯೆ ಮೂಲಕ
PPP ಮಾದರಿಯಲ್ಲಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುವುದು. ಮೈಸೂರು ವಿಮಾನ ನಿಲ್ದಾಣವನ್ನು ಉನ್ನತೀಕರಿಸಲು ಭೂ ಸ್ವಾಧೀನಕ್ಕಾಗಿ ಕ್ರಮ ವಹಿಸಲಾಗಿದ್ದು, ಇದಕ್ಕಾಗಿ 320 ಕೋಟಿ ರೂ. ಗಳಷ್ಟು ಹಂಚಿಕೆ ಮಾಡಲಾಗಿದೆ.
280. ದಾವಣಗೆರೆ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಈಗಾಗಲೇ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲಾಗಿದ್ದು, ಪ್ರಸ್ತುತ ಸಾಲಿನಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು.
281. ಕಳೆದ ವರ್ಷದಲ್ಲಿ ರಾಜ್ಯದ ಸಣ್ಣ ಬಂದರುಗಳ ಮುಖಾಂತರ 6 ಲಕ್ಷ ಟನ್ನುಗಳಿಗಿಂತ ಹೆಚ್ಚು ಸರಕುಗಳನ್ನು ಸರಬರಾಜು ಮಾಡಲಾಗಿದೆ. ಭಾರತ ಸರ್ಕಾರದ ಸಾಗರಮಾಲ ಯೋಜನೆಯಡಿ ಈಗಾಗಲೇ 370 ಕೋಟಿ ರೂ. ಗಳ ನಾಲ್ಕು ಕಿರು ಬಂದರುಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಪ್ರಸಕ್ತ ಸಾಲಿನಲ್ಲಿ 597 ಕೋಟಿ ರೂ. ಗಳ 12 ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗುವುದು.
282. ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಬೆಂಬಲವಾಗಿ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಕೇಣಿಯಲ್ಲಿ 30 MTPA ಸಾಮರ್ಥ್ಯದ ಮತ್ತು ಪಾವಿನ ಕುರ್ವೆಯಲ್ಲಿ 14 MTPA ಸಾಮರ್ಥ್ಯದ Deep Water All Weather Greenfield ಬಂದರುಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಗೊಳಿಸಲಾಗುವುದು.
283. ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಮಾಜಾಳಿಯಲ್ಲಿ ಅತ್ಯಾಧುನಿಕ ಮೀನುಗಾರಿಕಾ ಬಂದರನ್ನು ನಿರ್ಮಿಸಲು 275 ಕೋಟಿಯ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಿ, ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮತ್ತು ಸಾಗರಮಾಲಾ ಯೋಜನೆಗಳಡಿಯಲ್ಲಿ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
284. ಹಂಗಾರಕಟ್ಟೆ ಮತ್ತು ಉಡುಪಿಯಲ್ಲಿ, ಕೊಚ್ಚಿನ್ ಶಿಪ್‌ಯಾರ್ಡ್ಸ್ ಲಿಮಿಟೆಡ್‌ರವರಿಂದ ದೋಣಿ ನಿರ್ಮಾಣವನ್ನು ಪ್ರಾರಂಭಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಹಳೆ ಮಂಗಳೂರು ಬಂದರಿನಲ್ಲಿ ಹೆಚ್ಚುವರಿ ಶಿಪ್‌ಯಾರ್ಡ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗುವುದು. ಇದು ಕರಾವಳಿ ಪ್ರದೇಶದಲ್ಲಿ ಕೈಗಾರಿಕೆ ಮತ್ತು ಮೀನುಗಾರಿಕೆ ಕ್ಷೇತ್ರಗಳ ಬೆಳವಣಿಗೆಗೆ ಪೂರಕವಾಗಲಿದೆ.
285. ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವದೊಂದಿಗೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಮರೀನಾವನ್ನು ಅಭಿವೃದ್ಧಿಪಡಿಸಲಾಗುವುದು.
286. ಮಾನ್ಯ ಪ್ರಧಾನ ಮಂತ್ರಿಗಳ ಆಶಯದಂತೆ, Blue Economy ಯ ಅಭಿವೃದ್ಧಿಗಾಗಿ ADB ಸಹಯೋಗದೊಂದಿಗೆ ಅಂದಾಜು ೧,೧೦೦ ಕೋಟಿ ರೂ.ಗಳ ವೆಚ್ಚದಲ್ಲಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರವು ಉದ್ದೇಶಿಸಿದೆ.
287. ಗುರುಪುರ ಮತ್ತು ನೇತ್ರಾವತಿ ನದಿಗಳ ಪಾತ್ರದಲ್ಲಿ ಜಲಸಾರಿಗೆ ಸಂಪರ್ಕವನ್ನು ಕಲ್ಪಿಸಲು ಬಾರ್ಜ್‌ಗಳ ಸೇವೆಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾಗುವುದು. ಅಲ್ಲದೆ, ಬಾಗಲಕೋಟೆ-ಕಂಕಣವಾಡಿ-ಕದಮ್‌ಪುರ, ಕಲಬುರಗಿ-ಸನ್ನತಿ, ಶಿವಮೊಗ್ಗ-ಕೊಗರು-ಶಿಗ್ಲು, ಮಂಗಳೂರು-ಹಂಗಾರಕಟ್ಟೆಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಹೊಸ Light Cargo Transport (LCT) ಬೋಟ್ ಸೇವೆಗಳನ್ನು ಪ್ರಾರಂಭಿಸಲಾಗುವುದು.
288. ಕರಾವಳಿ ಪ್ರದೇಶದಲ್ಲಿ ಜನರ ಸುಗಮ ಸಂಚಾರಕ್ಕಾಗಿ
ಮತ್ತು ವಾಣಿಜ್ಯ ವ್ಯವಹಾರಗಳನ್ನು ಉತ್ತಮಗೊಳಿಸಲು
ಮಂಗಳೂರು – ಕಾರವಾರ – ಗೋವಾ – ಮುಂಬಯಿ Waterways ಅನ್ನು ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು.
289. ಕೇಂದ್ರ ಸರ್ಕಾರದ ಇತ್ತೀಚಿನ ವರದಿಯ ಪ್ರಕಾರ 2022-23ನೇ ಸಾಲಿನಲ್ಲಿ ನಮ್ಮ ರಾಜ್ಯವು 41.6 ಸಾವಿರ ಕೋಟಿ ರೂ. ವಿದೇಶಿ ಬಂಡವಾಳ ಹೂಡಿಕೆ ಪಡೆದಿರುತ್ತದೆ ಮತ್ತು 75,439 ಮಿಲಿಯನ್ ಡಾಲರ್ ಮೊತ್ತದ ರಫ್ತನ್ನು ಮಾಡಿದೆ. ರಾಜ್ಯದ ಅತ್ಯುತ್ತಮ ಆರ್ಥಿಕ ಪ್ರಗತಿಯನ್ನು ಬಿಂಬಿಸುವ ಈ ಎರಡೂ ಸೂಚ್ಯಂಕಗಳಲ್ಲಿ ಕರ್ನಾಟಕವು ದೇಶದಲ್ಲಿಯೇ 2ನೇ ಸ್ಥಾನದಲ್ಲಿದೆ. ಹಾಗೆಯೇ
Ease of Doing Business ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಶ್ರೇಯಾಂಕ ಪಟ್ಟಿಯಲ್ಲಿ ಕರ್ನಾಟಕ “ಟಾಪ್ ಅಚೀವರ್” ಆಗಿ ಹೊರಹೊಮ್ಮಿದೆ.
290. ಪ್ರಸ್ತುತ ವರ್ಷದಲ್ಲಿ ರಾಜ್ಯ ಸರ್ಕಾರವು ಅನುಮೋದಿಸಿದ 393 ಕೈಗಾರಿಕಾ ಯೋಜನೆಗಳಿಂದ 2.37 ಲಕ್ಷ ಕೋಟಿ ರೂ. ಗಳ ಬಂಡವಾಳ ಹೂಡಿಕೆಯೊಂದಿಗೆ ಸುಮಾರು 2 ಲಕ್ಷ ಜನರಿಗೆ ಉದ್ಯೋಗಾವಕಾಶ ದೊರೆಯುವ ನಿರೀಕ್ಷೆ ಇದೆ. ಮುಂದುವರೆದು, ʻಇನ್ವೆಸ್ಟ್ ಕರ್ನಾಟಕ 2022ʼ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಹೊಸದಾಗಿ 9.82 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯನ್ನು ಆಕರ್ಷಿಸಿದೆ.
291. ರಾಜ್ಯದಲ್ಲಿ ಉದ್ಯೋಗಾವಕಾಶ ಹೆಚ್ಚಿಸಲು ಹಾಗೂ ವಿವಿಧ ವಲಯಗಳಲ್ಲಿ ಹೂಡಿಕೆಗಳನ್ನು ಆಕರ್ಷಿಸಲು ʻಕರ್ನಾಟಕ ಉದ್ಯೋಗ ನೀತಿ 2022-25ʼ, ʻಕರ್ನಾಟಕ ಏರೋಸ್ಪೇಸ್ ಮತ್ತು ಡಿಫೆನ್ಸ್ ನೀತಿ 2022-27ʼ ಹಾಗೂ ʻವಿಶೇಷ ಹೂಡಿಕೆ ಪ್ರದೇಶ ಕಾಯಿದೆ, 2022ʼ ಅನ್ನು ಜಾರಿಗೊಳಿಸಲಾಗಿದೆ.
292. 2023-24ನೇ ಸಾಲಿನಲ್ಲಿ ನಾಲ್ಕು ಹೂಡಿಕೆ ಪ್ರದೇಶಗಳು ಮತ್ತು ಕೈಗಾರಿಕಾ ಪ್ರದೇಶಗಳನ್ನು ವಿಶೇಷ ಹೂಡಿಕೆ ಪ್ರದೇಶಗಳೆಂದು ʻಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮ, 2022ʼ ರಡಿ ಅಧಿಸೂಚಿಸಲಾಗುವುದು. ಇದಕ್ಕೆ ಅಗತ್ಯವಿರುವ ಅನುದಾನವನ್ನು ಒದಗಿಸಲಾಗುವುದು.
293. ಬಹು-ರಾಷ್ಟ್ರೀಯ ಕಂಪನಿಗಳ ಕಾರ್ಯಾಚರಣೆಯನ್ನು ತ್ವರಿತವಾಗಿ ಪ್ರಾರಂಭಿಸಲು, KIADB ಸಂಸ್ಥೆಯು ಬೆಂಗಳೂರಿನ ಸುತ್ತಮುತ್ತ ವಿಶ್ವದರ್ಜೆಯ Plug and Play ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸಲು ಉದ್ದೇಶಿಸಿದೆ.
294. ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ (KSSIDC) ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಕೋಡ್ಕಣಿ, ಬೆಳಗಾವಿಯ ಕಣಗಲಾ, ಚಾಮರಾಜನಗರದ ಬದನಗುಪ್ಪೆ, ಕಲಬುರಗಿಯ ಚಿತ್ತಾಪುರ, ತುಮಕೂರಿನ ಬೈರಗೊಂಡನಹಳ್ಳಿ-ಚಿಕ್ಕನಾಯಕನಹಳ್ಳಿ, ಬೀದರ್‌ನ ಹುಮನಾಬಾದ್, ರಾಯಚೂರು ಗ್ರಾಮಾಂತರ, ವಿಜಯಪುರದ ಹೂವಿನ ಹಿಪ್ಪರಗಿ ಮತ್ತು ಚಿತ್ರದುರ್ಗದ ಮೊಳಕಾಲ್ಮೂರು ಹೀಗೆ 9 ಸ್ಥಳಗಳಲ್ಲಿ ಹೊಸದಾಗಿ ಕೈಗಾರಿಕಾ ವಸಾಹತುಗಳನ್ನು ಸ್ಥಾಪಿಸಲಾಗುವುದು.
295. ದೇವನಹಳ್ಳಿಯಲ್ಲಿ ಸ್ಥಾಪಿಸಲಾಗಿರುವ ಡಾ|| ಬಿ.ಆರ್. ಅಂಬೇಡ್ಕರ್ ಕೌಶಲ್ಯ ಅಭಿವೃದ್ಧಿ ಕೇಂದ್ರದ ವಿಸ್ತರಣೆಗೆ 2 ಕೋಟಿ ರೂ. ಅನುದಾನವನ್ನು ನೀಡಲಾಗುವುದು.
296. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ಸೇವಾ ವಲಯದಲ್ಲಿನ ಮಹಿಳಾ ಉದ್ದಿಮೆದಾರರಿಗೆ 2 ಕೋಟಿ ರೂ. ವರೆಗೆ ಶೇ.4ರ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡುತ್ತಿದ್ದು, ಇದನ್ನು 5 ಕೋಟಿ ರೂ. ವರೆಗೆ ಹೆಚ್ಚಿಸಲಾಗುವುದು.
297. ರಾಜ್ಯ ಸರ್ಕಾರವು ಖನಿಜಾನ್ವೇಷಣೆ, ಗಣಿ ಹರಾಜು ಮತ್ತು ಪ್ರಾರಂಭಿಸುವಿಕೆಯಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ
ಕೇಂದ್ರ ಗಣಿ ಮಂತ್ರಾಲಯ ʻರಾಷ್ಟ್ರೀಯ ಖನಿಜ ವಿಕಾಸ ಪುರಸ್ಕಾರʼ ಪ್ರಶಸ್ತಿ ನೀಡಿರುತ್ತದೆ.
298. 2018ರಿಂದ ನೆನೆಗುದಿಗೆ ಬಿದ್ದಿದ್ದ ಜಿಲ್ಲಾ ಸಮಗ್ರ ಗಣಿ ಬಾಧಿತ ಪರಿಸರ ಪುನಶ್ಚೇತನ ಅಭಿವೃದ್ಧಿ ಯೋಜನೆಗಳನ್ನು (CEPMIZ) ನಮ್ಮ ಸರ್ಕಾರ, ತನ್ನ ನಿರಂತರ ಪ್ರಯತ್ನದಿಂದ, ಏಪ್ರಿಲ್ 2022 ರಲ್ಲಿ 24,997 ಕೋಟಿ ರೂ. ಗಳ ಯೋಜನೆಗೆ ಸರ್ವೋಚ್ಛ ನ್ಯಾಯಾಲಯದ ಅನುಮೋದನೆ ಪಡೆದಿದೆ. ಈ ಪೈಕಿ 4,332 ಕೋಟಿ ರೂ. ಗಳ ಮೊತ್ತದ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ
151 ಯೋಜನೆಗಳಿಗೆ ಮೇಲ್ವಿಚಾರಣಾ ಪ್ರಾಧಿಕಾರವು ಅನುಮೋದನೆ ನೀಡಿದ್ದು, ಬಳ್ಳಾರಿ, ಚಿತ್ರದುರ್ಗ, ವಿಜಯನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುವುದು.
299. ನಮ್ಮ ಸರ್ಕಾರವು ʻಕರ್ನಾಟಕ ಉಪಖನಿಜಗಳ ರಿಯಾಯಿತಿ ನಿಯಮಗಳು, 1994ʼ ರ ನಿಯಮಗಳನ್ನು ತಿದ್ದುಪಡಿ ಮಾಡುವ ಮೂಲಕ ಹೆಚ್ಚು ಸಮಯ ತೆಗೆದುಕೊಳ್ಳುವ ಕಲ್ಲು ಗಣಿ ಗುತ್ತಿಗೆ ಮಂಜೂರಾತಿ ಕಾರ್ಯವಿಧಾನವನ್ನು ಸರಳೀಕರಿಸಲಿದೆ. ಆ ಮೂಲಕ ಸಾರ್ವಜನಿಕರಿಗೆ ಉಪಖನಿಜ ಪೂರೈಕೆ ಮಾಡಲು ನಿಯಮಗಳಲ್ಲಿ ಏಕರೂಪತೆಯನ್ನು ತರಲಾಗುವುದು.
300. ರಾಜ್ಯದಲ್ಲಿ ವಂಶಪಾರಂಪರ್ಯವಾಗಿ ಜೀವನ ನಿರ್ವಹಣೆಗೆ ಕಟ್ಟಡ ಕಲ್ಲು ಗಣಿಗಾರಿಕೆಯನ್ನು ಅವಲಂಬಿಸಿರುವ ಜನರಿಗೆ ಸರ್ಕಾರವು ಕಟ್ಟಡ ಕಲ್ಲು ಗಣಿಗಾರಿಕೆ ಅನುಮತಿಯಲ್ಲಿ ರಿಯಾಯಿತಿ ನೀಡಲು ನಿಯಮಗಳನ್ನು ಸರಳೀಕರಿಸಲಾಗುವುದು.
301. ಹಿಂದಿನ ಆಯವ್ಯಯದಲ್ಲಿ ಮೈಶುಗರ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಬಗ್ಗೆ ಘೋಷಿಸಿದ್ದೇನೆ. ಕಾರ್ಖಾನೆಯು ಪ್ರಾರಂಭಗೊಂಡಿದ್ದು, ಪ್ರಸಕ್ತ ವರ್ಷದಲ್ಲಿ ಎಥನಾಲ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗುವುದು.
302. ಪ್ರಸಕ್ತ ವರ್ಷದಲ್ಲಿ ರಾಯಚೂರು, ಕಲಬುರಗಿ, ವಿಜಯಪುರ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನೂತನ ಮೆಗಾ ಜವಳಿ ಪಾರ್ಕ್ ಮತ್ತು ರಾಜ್ಯದ 25 ಸ್ಥಳಗಳಲ್ಲಿ ಮಿನಿ ಜವಳಿ ಪಾರ್ಕ್ ಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು. ಇದರಿಂದಾಗಿ ಸುಮಾರು 25,000 ಜನರಿಗೆ ಉದ್ಯೋಗ ಸೃಜನೆಯಾಗಲಿದೆ.
303. ನಮ್ಮ ರಾಜ್ಯದ ನೇಕಾರರ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗೆ ವಿಶೇಷ ನೆರವು ನೀಡಲು ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ.
ನೇಕಾರ ಸಮ್ಮಾನ್ ಯೋಜನೆಯಡಿ ನೀಡಲಾಗುತ್ತಿದ್ದ ಸಹಾಯಧನ 3,000 ರೂ. ಗಳಿಂದ 5,000 ರೂ. ಗಳಿಗೆ ಹೆಚ್ಚಿಸಲಾಗಿದೆ.
ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ವಿದ್ಯುತ್ ಮಗ್ಗ ನೇಕಾರರು ಮತ್ತು ಮಗ್ಗ ಪೂರ್ವ ಕಾರ್ಮಿಕರಿಗೂ ಸಹ ನೇಕಾರ್ ಸಮ್ಮಾನ್ ಯೋಜನೆಯನ್ನು ವಿಸ್ತರಿಸಲಾಗಿದೆ.
ನೇಕಾರ್ ಸಮ್ಮಾನ್ ಯೋಜನೆಯಿಂದ ಸುಮಾರು 1.5 ಲಕ್ಷ ನೇಕಾರರಿಗೆ ಅನುಕೂಲವಾಗಲಿದ್ದು 75 ಕೋಟಿ ರೂ. ಗಳನ್ನು ನೇರ ನಗದು ವರ್ಗಾವಣೆ ಮೂಲಕ ನೇಕಾರರ ಖಾತೆಗೆ ಜಮೆ ಮಾಡಲಾಗಿದೆ.
ಐದು ಹೆಚ್‌ಪಿ ವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ ಮಗ್ಗ ಹಾಗೂ ಮಗ್ಗ ಪೂರ್ವ ಘಟಕಗಳಿಗೆ ಉಚಿತ ವಿದ್ಯುತ್ ಒದಗಿಸಲಾಗುವುದು ಮತ್ತು Fixed Charges ನಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಲಾಗುವುದು.
ನೇಕಾರರ ಪ್ಯಾಕೇಜ್ ಯೋಜನೆಯಡಿ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಾಮಾನ್ಯ ವರ್ಗದ ಫಲಾನುಭವಿಗಳಿಂದ ಸ್ಥಾಪಿಸಲಾಗುವ ಅತಿ ಸಣ್ಣ ಘಟಕಗಳಿಗೆ ಒಂದು ಕೋಟಿ ರೂ. ವರೆಗಿನ ಜವಳಿ ಮತ್ತು ಸಿದ್ಧ ಉಡುಪು ಘಟಕಗಳಿಗೆ ಶೇ.50 ರಷ್ಟು ಅಥವಾ ಗರಿಷ್ಠ 50 ಲಕ್ಷ ರೂ. ಗಳ ಬಂಡವಾಳ ಸಹಾಯಧನ ನೀಡುವ ಯೋಜನೆ ಜಾರಿಗೊಳಿಸಲಾಗಿದೆ.
ನೂತನ ಜವಳಿ ಹಾಗೂ ಸಿದ್ಧ ಉಡುಪು ನೀತಿ 2019-24 ಅನ್ನು ಪರಿಷ್ಕರಿಸಲಾಗಿದ್ದು, ಅದರ ಪರಿಣಾಮವಾಗಿ ರಾಜ್ಯದಲ್ಲಿ 4,292 ಕೋಟಿ ರೂ. ಗಳ ಬಂಡವಾಳ ಹೂಡಿಕೆ ಮಾಡಲು ಉದ್ಯಮಿಗಳು ಮುಂದೆ ಬಂದಿದ್ದು, ಇದರಿಂದಾಗಿ ಸುಮಾರು 44,257 ಜನರಿಗೆ ಉದ್ಯೋಗ ಸೃಜನೆಯಾಗಲಿದೆ.
304. ಕರ್ನಾಟಕವು ದೇಶದ ಐಟಿ ರಫ್ತಿನಲ್ಲಿ ಶೇ. 38 ರಷ್ಟು ಹಾಗೂ ಇಂಜಿನಿಯರಿಂಗ್ R & D ಯಲ್ಲಿ ಶೇ. 40ರಷ್ಟು ಪಾಲು
ಹೊಂದಿದೆ. Global Capability Centres (GCC) Ecosystem ಅಡಿಯ ಮಾನವ ಸಂಪನ್ಮೂಲದ ಶೇ. 35 ರಷ್ಟು ಬೆಂಗಳೂರಿನಲ್ಲಿದೆ. ಐಟಿ ವಲಯದಲ್ಲಿ ರಾಜ್ಯದ ಮುನ್ನಡೆಯನ್ನು ಕಾಯ್ದುಕೊಳ್ಳಲು Beyond Bengaluru ಎಂಬ ಘೋಷವಾಕ್ಯದೊಂದಿಗೆ 2 ಹಾಗೂ 3ನೇ ಹಂತದ ನಗರಗಳಲ್ಲಿ ಡಿಜಿಟಲ್ ಮೂಲಸೌಕರ್ಯಗಳನ್ನು ಬಲಪಡಿಸಲು ಆದ್ಯತೆ ನೀಡಲಾಗುತ್ತಿದೆ.
305. ಕರ್ನಾಟಕವು 163 Billion Dollars ಅಂದಾಜು ಮೌಲ್ಯದ
40 ಯುನಿಕಾರ್ನ್‌ಗಳ ನೆಲೆಯಾಗಿದೆ. 2022-23ನೇ ಸಾಲಿನಲ್ಲಿ ಕರ್ನಾಟಕದ 6 ಸ್ಟಾರ್ಟಪ್‌ಗಳಿಗೆ ಯುನಿಕಾರ್ನ್ ಪಟ್ಟ ದೊರಕಿದೆ.
306. ಐಟಿ ವಲಯದಲ್ಲಿ ಮುನ್ನಡೆಯನ್ನು ಕಾಯ್ದುಕೊಳ್ಳಲು ರಾಜ್ಯ ಸರ್ಕಾರವು ʻಕರ್ನಾಟಕ ಸ್ಟಾರ್ಟಪ್ ನೀತಿ 2022-27ʼ, ʻಕರ್ನಾಟಕ ಡೇಟಾ ಸೆಂಟರ್ ನೀತಿ 2022-27ʼ ಹಾಗೂ ʻಕರ್ನಾಟಕ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತಾ ನೀತಿʼಯನ್ನು 2022 ರಲ್ಲಿ ಜಾರಿಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ʻಕರ್ನಾಟಕ ಜೈವಿಕ ತಂತ್ರಜ್ಞಾನ ನೀತಿʼ ಮತ್ತು ʻAVGC ನೀತಿʼಯನ್ನು ಪರಿಷ್ಕರಿಸಲಾಗುವುದು.
307. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಮಹಿಳೆಯರು ಹಾಗೂ ಹಿಂದುಳಿದ ವರ್ಗದವರ ಸ್ಟಾರ್ಟಪ್ ಗಳನ್ನು ಉತ್ತೇಜಿಸಲು ELEVATE ಉನ್ನತಿ 2022, ಅಮೃತ ಸ್ಟಾರ್ಟಪ್ಗಳು 2022 ಮತ್ತು ELEVATE ಕಲ್ಯಾಣ ಕರ್ನಾಟಕವನ್ನು ಪ್ರಾರಂಭಿಸಲಾಗಿದೆ. ELEVATE ಯೋಜನೆ ಅಡಿಯಲ್ಲಿ ಈಗಾಗಲೇ 93 ಸ್ಟಾರ್ಟಪ್‌ಗಳನ್ನು ಗುರುತಿಸಿ, ಪ್ರೋತ್ಸಾಹ ನೀಡಲಾಗುತ್ತಿದೆ.
308. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ಅತ್ಯಾಧುನಿಕ ಸ್ಟಾರ್ಟ್‌ಪ್ ಪಾರ್ಕ್ ಅನ್ನು 30 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ.
309. ಬೆಂಗಳೂರು ಬಯೋ-ಇನೋವೇಶನ್ ಸೆಂಟರ್ (BIC) ಮತ್ತು ಸಾಂಕ್ರಾಮಿಕ ರೋಗಗಳ ಸಂಶೋಧನಾ ಪ್ರತಿಷ್ಠಾನ (IDRF) ಸಹಯೋಗದೊಂದಿಗೆ ಸಾಂಕ್ರಾಮಿಕ ಸನ್ನದ್ದತೆ ಕೇಂದ್ರವನ್ನು ಸ್ಥಾಪಿಸಲು ಮೊದಲ ಹಂತದಲ್ಲಿ ಸರ್ಕಾರವು 10 ಕೋಟಿ ರೂ. ಬೆಂಬಲ ನೀಡಲು ನಿರ್ಧರಿಸಿದೆ.
310. ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಗಳನ್ನು ಜನಸಾಮಾನ್ಯರಿಗೆ ಪರಿಚಯಿಸಲು ಹಾಗೂ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಅರಿವು ಮೂಡಿಸಲು 6 ಪ್ರಾದೇಶಿಕ ಹಾಗೂ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನು ಉನ್ನತೀಕರಿಸಲಾಗುವುದು.
311. ರಾಜ್ಯದಲ್ಲಿ ಸಂಶೋಧನೆ ಮತ್ತು ನಾವೀನ್ಯತೆಯ ಪ್ರೋತ್ಸಾಹನೆಗೆ ಎಲ್ಲಾ ಹಿತಾಸಕ್ತರುಗಳಿಂದ ಅವಶ್ಯಕ ಬೆಂಬಲ ಖಚಿತಪಡಿಸಿಕೊಳ್ಳಲು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಅಂತರ್ ಇಲಾಖೆಗಳ ಸಮನ್ವಯ ಸಾಧಿಸಲು Karnataka State Research Foundation ಅನ್ನು ಸ್ಥಾಪಿಸಲಾಗುವುದು.
312. ಆರ್ಥಿಕ ಅಭಿವೃದ್ಧಿಗೆ ಉತ್ತೇಜನೆ ವಲಯಕ್ಕೆ 2023-24ನೇ ಸಾಲಿಗೆ 61,488 ಕೋಟಿ ರೂ. ಗಳ ಅನುದಾನ ಒದಗಿಸಿದೆ.