ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ ಬಜೆಟ್ ನಲ್ಲಿ ವಿಜಯಪುರ ಜಿಲ್ಲೆಗೂ ಕೆಲವು ಯೋಜನೆಗಳನ್ನು ನೀಡಿದ್ದಾರೆ.
ಆ ಯೋಜನೆಗಳು ಮತ್ತು ಪ್ರಸ್ತಾಪಿಸಿರುವ ಅಂಶಗಳು ಯಾವವು ಎಂಬುದರ ಮಾಹಿತಿ ಇ್ಲಲಿವೆ.
- ವಿಜಯಪುರ, ಬೀದರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ನೆಟೆ ರೋಗದಿಂದ ತೊಗರಿ ಬೆಳೆ ಹಾನಿಯಾಗಿರುವ ರೈತರ ಪ್ರತಿ ಹೆಕ್ಟೇರ್ ಗೆ ರೂ. 10000 ದಂತೆ ಒಟ್ಟು ರೂ. 223 ಕೋ. ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.
- ದ್ರಾಕ್ಷಿ ಬೆಳೆಗಾರರಿಗೆ ನೆರವಾಗಲು ಕರ್ನಾಟಕ ದ್ರಾಕ್ಷಿ ಹಾಗೂ ದ್ರಾಕ್ಷಾರಸ ಮಂಡಳಿ ಮೂಲಕ ರೂ. 100 ಕೋ. ವೆಚ್ಚದಲ್ಲಿ ವಿಶೇಷ ಕಾರ್ಯಕ್ರಮಗಳ ಜಾರಿಗೆ ಕ್ರಮ.
- ವಿಜಯಪುರ, ಶಿವಮೊಗ್ಗ, ಹಾಸನ, ರಾಯಚೂರು ಮತ್ತು ಕಾರವಾರಗಳಲ್ಲಿ ವಿಮಾನ ನಿಲ್ದಾಣ ಯೋಜನೆಗಳನ್ನು ಈ ವರ್ಷ ಪೂರ್ಣಗೊಳಿಸಲಾಗುವುದು.
- ವಿಜಯಪುರ ಜಿಲ್ಲೆಯ ಹೂವಿನ ಹಿಪ್ಪರಗಿ, ಉತ್ತರ ಕನ್ನಡ ಜಿಲ್ಲೆಯ ಕೋಡ್ಕಣಿ, ಬೆಳಗಾವಿ ಜಿಲ್ಲೆಯ ಕಣಗಲಾ, ಚಾಮರಾಜನಗರದ ಬದನಗುಪ್ಪೆ, ಕಲಬುರಗಿಯ ಚಿತ್ತಾಪುರ, ತುಮಕೂರಿನ ಬೈರಗೊಂಡನಹಳ್ಳಿ- ಚಿಕ್ಕನಾಯಕನಹಳ್ಳಿ, ಬೀದರಿನ ಹುಮನಾಬಾದ, ರಾಯಚೂರು ಗ್ರಾಮಾಂತರ ಮತ್ತು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಸೇರಿದಂತೆ ರಾಜ್ಯದ ಒಂಬತ್ತು ಸ್ಥಳಗಳಲ್ಲಿ ಹೊಸದಾಗಿ ಕೈಗಾರಿಕೆ ವಸಾಹತು ಸ್ಥಾಪಿಸಲಾಗುವುದು.
- ಕರ್ನಾಟಕದ ಇತಿಹಾಸ ಮತ್ತು ಕಲೆಯ ಶ್ರೀಮಂತಿಕೆಯನ್ನು ಬಿಂಬಿಸುವ ವಿಜಯಪುರದ ಗೋಳಗುಮ್ಮಟ, ಹಂಪಿಯ ವಿಜಯವಿಠಲ ದೇವಾಲಯ ಮತ್ತು ಪುರಂದರ ಮಂಟಪ, ಚಿಕ್ಕಬಳ್ಳಾಪುರ ಜಿಲ್ಲೆಯ ಭೋಗನಂದೀಶ್ವರ ದೇವಾಲಯ, ಬಾದಾಮಿ ಗುಹೆಗಳು, ಕಿತ್ತೂರು ಹಾಗೂು ಬೀದರ್ ಕೋಟೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಈ ಸ್ಥಳಗಳಲ್ಲಿ ಅತ್ಯಾಧುನಿಕ ಬೆಳಕಿನ ವ್ಯವಸ್ಥೆ, 3D Projection Mapping, ಧ್ವನಿ ಮತ್ತು ಬೆಳಕು ಪ್ರದರ್ಶನಗಳನ್ನು ಅಳವಡಿಸಲಾಗುವುದು. ಇದಕ್ಕಾಗಿ 2023-24ನೇ ಬಜೆಟ್ ನಲ್ಲಿ ರೂ. 60 ಕೋ. ನೀಡಲಾಗುವುದು.
- ರಾಜ್ಯದಲ್ಲಿನ ನಾನಾ ಸ್ಮಾರಕಗಳನ್ನು 3D ಮ್ಯಾಪಿಂಗ್ ಮತ್ತು ಲೇಸರ್ ಸ್ಕ್ಯಾನಿಂಗ್ ಮೂಲಕ ಡಿಜಿಟಲೀಕರಣ ಮಾಡುವ ಕಾರ್ಯವನ್ನು ಪೂರ್ಣಗೊಳಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ. Adopt a Monument ಯೋಜನೆಯಡಿ ವಿಜಯಪುರದ ತಾಜಬಾವಡಿ ಮತ್ತು ಕೊಪ್ಪಳ ಜಿಲ್ಲೆಯ ಆನೆಗುಂದಿಯ ಗಗನ್ ಮಹಲ್ ಸ್ಮಾರಕಗಳ ಸಂರಕ್ಷಣೆಗೆ ಖಾಸಗಿ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ.
- ಕರ್ನಾಟಕದ ಇತಿಹಾಸ ಪ್ರಮುಖ ಘಟನಾವಳಿಗಳಲ್ಲಿ ತಾಳಿಕೋಟೆಯೂ ಸೇರಿದೆ. ಈ ಹಿನ್ನೆಲೆಯಲ್ಲಿ ರಕ್ಕಸಗಿ, ತಂಗಡಗಿ ಮತ್ತು ತಾಳಿಕೋಟೆ ಸುತ್ತಲಿನ ಐತಿಹಾಸಿಕ ಪ್ರಸಿದ್ಧ ತಾಣಗಲನ್ನು ಯುವಜನರಿಗೆ ಪರಿಚಯಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗುವುದು.
- ಕೃಷ್ಣಾ ನದಿಯ ಜಲಾನಯನ ಪ್ರದೇಶದಲ್ಲಿ 168 ಕಿ. ಮೀ. ಅದ್ದದ ಅರಣ್ಯೀಕರಣ ಹಾಗೂ 25 ಲಕ್ಷ ಸಸಿಗಳನ್ನು ನೆಡುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
- ವಿಜಯಪುರ, ಬೀದರ, ಮಂಗಳೂರು ಮತ್ತು ಬೆಂಗಳೂರು ಕಾರಾಗೃಹಗಳ ಆವರಣದಲ್ಲಿ ಗರಿಷ್ಠ ಭದ್ರತಾ ಕಾರಾಗೃಹ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಲಲಾಗಿದೆ. ಇದರಿಂದ ಕಾರಾಗೃಹ ಸಾಮರ್ಥ್‌ಯ 4000 ರಷ್ಟು ಹೆಚ್ಚಾಗಿರುತ್ತದೆ. ಅಲ್ಲದೇ, ರಾಜ್ಯದ ಉಳಿದ ಕಾರಾಗೃಹಗಳಲ್ಲಿಯೂ ಸಹ 1465 ಬಂದಿಗಳ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.
- ವಿಜಯಪುರ, ದೇವನಹಳ್ಳಿ, ಕೋಲಾರ, ಹೊಸಪೇಟೆ, ಗದಗ, ಬಳ್ಳಾರಿ, ಬೀದರ, ಯಾದಗಿರಿ ಮತ್ತು ದಾವಣಗೆರೆಯಲ್ಲಿ ರೂ. 80 ವೆಚ್ಚದಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳ ನಿರ್ಮಾಣ ಮಾಡಲಾಗುವುದು.
ಅಷ್ಟೇ ಅಲ್ಲ, ಇತರ ಯೋಜನೆಗಳಡಿಯೂ ಬಸವನಾಡು ವಿಜಯಪುರ ಜಿಲ್ಲೆಗೆ ನಾನಾ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.