ವಿಜಯಪುರ: ಚುನಾವಣೆ ಸಮೀಪಿಸುತ್ತಿದ್ದಂತೆ ನಾನಾ ಪಕ್ಷಗಳ ಪ್ರಚಾರವೂ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಈ ಮಧ್ಯೆ, ವಿಜಯಪುರ ಪ್ರವಾಸದಲ್ಲಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ ಸಿಂಗ್ ಸುರ್ಜೆವಾಲಾ ಅವರು ಮಹಾಶಿವರಾತ್ರಿಯ ಅಂಗವಾಗಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಮತ್ತೀತರ ಮುಖಂಡರೊಂದಿಗೆ ಟೆಂಪಲ್ ರನ್ ಮಾಡಿದರು.
ವಿಜಯಪುರ ನಗರದ ಬಿ.ಎಲ್.ಡಿ.ಇ ಬಳಿ ಇರುವ 770 ಲಿಂಗಗಳ ಗುಡಿಗೆ ಭೇಟಿ ನೀಡಿದ ಅವರು ಸುಮಾರು ಹೊತ್ತು ದೇವರ ಪೂಜೆ ನಡೆಸಿದರು. ಅಲ್ಲದೇ, ರಾಜ್ಯ ಬಿಜೆಪಿ ಸರಕಾರ ತೊಲಗಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿ ಎಂದು ಸಂಕಲ್ಪ ಮಾಡಿದರು. ವಿಶೇಷ ಕರ್ಪೂರದಾರತಿ ಮಾಡಿ ಶಿವನ ಪ್ರಾರ್ಥಿಸಿದ ನಾಯಕರು ನಾಡಿಗೆ ಒಳಿತಾಗಲಿ. ತಮ್ಮ ಇಷ್ಠಾರ್ಥಗಳು ಸಿದ್ಧಿಸಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಪೂಜಾರಿಗಳು ಮಂತ್ರಪಠಣ ಮತ್ತು ಆರತಿ ಹಾಡು ಹೇಳಿದರು. ಅಲ್ಲದೇ, ರಂದೀಪ ಸಿಂಗ್ ಸುರ್ಜೆವಾಲಾ, ಎಂ. ಬಿ. ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಸಲೀಂ ಅಹ್ಮದ ಮುಂತಾದವರಿಗೆ ದೇವರ ಪ್ರಸಾದ ನೀಡಿ ನಾಯಕರ ಕುಟುಂಬ ಮತ್ತು ನಾಡಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು. ನಂತರ ಹಾರವನ್ನು ನೀಡಿ ಇಷ್ಠಾರ್ಥ ಸಿದ್ಧಿಗೆ ಶುಭ ಕೋರಿದರು.
ಬಳಿಕ ಈ ದೇವಸ್ಥಾನದ ಪಕ್ಕದಲ್ಲಿಯೇ ಇರುವ ಬಂಥನಾಳ ಶಿವಯೋಗಿಗಳ ದೇವಸ್ಥಾನಕ್ಕೂ ಕಾಂಗ್ರೆಸ್ ನಾಯಕರು ತೆರಳಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ನಾಯಕರಾದ ಕಾಂತಾ ನಾಯಕ, ಶರಣಪ್ಪ ಸುಣಗಾರ ಮುಂತಾದವರು ಉಪಸ್ಥಿತರಿದ್ದರು.