ಈ ಬಾರಿ ಚುನಾವಣೆ ಬಿಜೆಪಿ Vs ಕಾಂಗ್ರೆಸ್ ಪ್ಲಸ್ ಕರ್ನಾಟಕದ ಜನತೆಯ ಮಧ್ಯೆ ನಡೆಯಲಿದೆ- ಭ್ರಷ್ಟಾಸುರ ಸರಕಾರ ತೊಲಗಿಸಲು ಸಂಕಲ್ಪ ಮಾಡಿದ್ದೇವೆ- ಸುರ್ಜೆವಾಲಾ

ವಿಜಯಪುರ: ಈ ಬಾರಿ ಚುನಾವಣೆ ಬಿಜೆಪಿ ಮತ್ತು ಕರ್ನಾಟಕದ ಜನರ ಬೆಂಬಲ ಹೊಂದಿರುವ ಕಾಂಗ್ರೆಸ್ ಮಧ್ಯೆ ನೇರಾನೇರ ಸ್ಪರ್ಧೆ ನಡೆಯುತ್ತಿದ್ದು, ರಾಜ್ಯ ಭ್ರಷ್ಟಾಸುರ ಸರಕಾರವನ್ನು ಜನತೆ ಕಿತ್ತೆಸೆಯಲಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಂದೀಪಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.

ಮಹಾಶಿವರಾತ್ರಿ ಅಂಗವಾಗಿ ಬಸವನಾಡು ವಿಜಯಪುರ ನಗರದ ಬಿ.ಎಲ್.ಡಿ.ಇ ಬಳಿ ಇರುವ 770 ಲಿಂಗದ ಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಅವರು ಮಾತನಾಡಿದರು.  ಚುನಾವಣೆ ಪ್ರಚಾರದ ಅಂಗವಾಗಿ ಪ್ರವಾಸದಲ್ಲಿರುವ ಸುರ್ಜೆವಾಲಾ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಸಲೀಂ ಅಹ್ಮದ ಮುಂತಾದವರ ಜೊತೆ 770 ಲಿಂಗದ ಗುಡಿ ಮತ್ತು ಬಂಥನಾಳ ಶಿವಯೋಗಿಗಳ ದೇವಸ್ಥಾನಕ್ಕೂ ಭೇಟಿ ನೀಡಿ ದರ್ಶನ ಪಡೆದರು.

ಬಳಿಕ ಮಾತನಾಡಿದ ಅವರು, ಬಾರಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಕರ್ನಾಟಕ ಜನರ ಬೆಂಬಲ ಹೊಂದಿರುವ ಕಾಂಗ್ರೆಸ್ ಮಧ್ಯೆ ನಡೆಯುತ್ತಿದೆ.  ಕಾಂಗ್ರೆಸ್ಸಿಗೆ ಪಕ್ಷದ ಶಕ್ತಿಯ ಜೊತೆಗೆ ಜನರ ಬೆಂಬಲವಿರುವದು ಪ್ಲಸ್ ಪಾಯಿಂಟ್ ಆಗಿದೆ.  ಮತದಾರರು ಈ ಬಾರಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಮತ್ತು ಟಿಕೆಟ್ ಹಂಚಿಕೆ ನನ್ನ ಪರಿವ್ಯಾಪ್ತಿಯಲ್ಲಿಲ್ಲ.  ನಮ್ಮ ಪಕ್ಷದ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಸಲೀಂ ಅಹ್ಮದ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಮತ್ತು ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ ಸೇರಿ ಈ ಕುರಿತು ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಈ ಬಾರಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ.  ಎಲ್ಲರೊಂದಿಗೆ ಚರ್ಚಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಚುನಾವಣೆಗೆ ಟಿಕೆಟ್ ನೀಡಲಾಗುವುದು.  ಈ ಬಾರಿ ಬಿಜೆಪಿ ಒಂದು ಕಡೆಯಾದರೆ, ಕಾಂಗ್ರೆಸ್ ಮತ್ತು ಕರ್ನಾಟಕದ ಜನತೆ ಒಂದು ಕಡೆಗಿದ್ದಾರೆ.  ಮಹಾಶಿವರಾತ್ರಿಯ ದಿನದಂದು ಎಲ್ಲ ದುಷ್ಟ ಶಕ್ತಿಗಳನ್ನು ತೊಲಗಿಸಲು ಸಂಕಲ್ಪ ಮಾಡಬೇಕು ಎಂದು ದೇವರಾದ ಶಿವ ಹೇಳುತ್ತಾರೆ.  ಅದರಂತೆ ರಾಜ್ಯದಜ ಜನರ ಪಾಲಿಗೆ ಶಾಪವಾಗಿರುವ ಬೊಮ್ಮಾಯಿ ನೇತೃತ್ವದ ಸರಕಾರ ತೊಲಗಬೇಕು.  ಶೇ. 40 ಕಮೀಷನ್, ನೌಕರಿಗಳ ಮಾರಾಟ, ದುರಾಡಳಿತ, ಎಲ್ಲ ಕಡೆ ಬೆಲೆ ಏರಿಕೆ, ದಲಿತ, ಆದಿವಾಸಿ, ಅಲ್ಪಸಂಖ್ಯಾತರು, ಮಹಿಳೆಯರು, ಯುವಕರಿಗೆ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಈ ಸರಕಾರ ಸಾಕ್ಷಿಯಾಗಿದೆ.  ಈ ಹಿನ್ನೆಲೆಯಲ್ಲಿ ಶಿವನ ಹೇಳಿಕೆಯಂತೆ, ಕೆಟ್ಟ ವಿಚಾರಗಳು ತಲೆಯನ್ನು ಮೀರಿ ಬೆಳೆದರೆ ಅದರ ಅಂತ್ಯ ಮಾಡಬೇಕು.  ಈಗ ಕಲಿಯುಗದಲ್ಲಿ ಮತ ಹಾಕುವ ಮೂಲಕ ಅದಕ್ಕೆ ಅಂತ್ಯ ಹಾಡಬೇಕು.  ಯಾವುದೇ ಜಾತಿ ಮತ್ತು ಪಂಥಗಳ ಜನರು ಮತದಾನ ಮಾಡುವ ಮೂಲಕ ರಾಜ್ಯದ ಕೆಟ್ಟ ಸರಕಾರ ತೊಲಗಿಸಲು ಕೈಜೊಡಿಸಬೇಕು ಎಂದು ರಂದೀಪಸಿಂಗ್ ಸುರ್ಜೆವಾಲಾ ಹೇಳಿದರು.

ಇದಕ್ಕೂ ಮೊದಲು ಮಾತನಾಡಿದ ಅವರು, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ ಅವರ ಅಸಮಾಧಾನದ ಕುರಿತು ಪ್ರತಿಕ್ರಿಯೆ ನೀಡಿದರು.

ಡಾ. ಜಿ. ಪರಮೇಶ್ವರ ನಮ್ಮ ಬಹಳ ದೊಡ್ಡ ಮತ್ತು ನಮ್ಮ ಪರಿವಾರದ ಹಿರಿಯ ಸದಸ್ಯರಾಗಿದ್ದಾರೆ.  ಅಷ್ಟೇ ಅಲ್ಲ, ಚುನಾವಣೆ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ.  ಇಲ್ಲಿ ಅಧಿಕಾರಕ್ಕಾಗಿ ಜಗಳ ನಡೆಯುತ್ತಿಲ್ಲ.  ಇಲ್ಲಿ ಕೆಟ್ಟ ಸರಕಾರದ ದುರಾಡಳಿದಿಂದ ಜನರನ್ನು ಭ್ರಷ್ಟಾಸುರ ಸರಕಾರದಿಂದ ಮುಕ್ತರನ್ನಾಗಿ ಮಾಡುವುದು, ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಒದಗಿಸಲು, ಪ್ರತಿಯೊಬ್ಬ ಮಹಿಳೆಯರಿಗೆ ರೂ. 2000 ಮಾಶಾಸನ ನೀಡುವುದು, ರೈತರು, ಬಡವರು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ಮಹಿಳೆಯರು, ಯುವಕರಿಗೆ ನ್ಯಾಯ ಒದಗಿಸುವುದು ಇಲ್ಲಿ ಪ್ರಮುಖವಾಗಿದ್ದು, ದೇಶದ ಹಿತ ನಮಗೆ ಮುಖ್ಯವಾಗಿದೆ ಎಂದು ಅವರು ಹೇಳಿದರು.

ರಾಜಕೀಯದಲ್ಲಿ ಆಸೆ ಮತ್ತು ಆಕಾಂಕ್ಷೆಗಳಿರುವುದು ಸಹಜ. ಅದನ್ನು ಬಂಡಾಯ ಎನ್ನುವುದು ಸರಿಯಲ್ಲ.  ವಿಶ್ವದಲ್ಲಿ ರಾಜ್ಯವನ್ನು ಬ್ರ್ಯಾಂಡ್ ಕರ್ನಾಟಕ ಮಾಡುವುದು ನಮ್ಮ ಧ್ಯೇಯವಾಗಿದೆ.  ಬಿಜೆಪಿಯನ್ನು ಸೋಲಿನಕ್ಕಿ ಕರ್ನಾಟಕದ ಗೆಲುವಿದೆ ಎಂದು ರಂದೀಪಸಿಂಗ್ ಸುರ್ಜೆವಾಲಾ ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.  ಬಿ. ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಸಲೀಂ ಅಹ್ಮದ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ಮುಖಂಡರಾದ ಸೋಮನಾಥ ಕಳ್ಳಿಮನಿ, ಶರಣಪ್ಪ ಸುಣಗಾರ, ಶ್ರೀನಾಥ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌