ರಾಷ್ಟ್ರಾಭಿಮಾನಕ್ಕೆ ಶಿವಾಜಿ ಪ್ರೇರಣೆ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ

ವಿಜಯಪುರ: ಛತ್ರಪತಿ ಶಿವಾಜಿ ಮಹಾರಾಜರು ಅಪ್ರತಿಮ ದೇಶ ಭಕ್ತರಾಗಿದ್ದರು. ರಾಷ್ಟ್ರಾಭಿಮಾನಕ್ಕೆ ಶಿವಾಜಿ ಹೆಸರು ಪ್ರೇರಣಾದಾಯಕವಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ಯತ್ನಾಳ ಸೇರಿದಂತೆ ನಾನಾ ಗಣ್ಯರು ಶಿವಾಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು

ಛತ್ರಪತಿ ಶಿವಾಜಿ ಅವರು ಚಿಕ್ಕ ವಯಸ್ಸಿನಲ್ಲಿಯೇ ದೇಶಾಭಿಮಾನ ಬೆಳೆಸಿಕೊಂಡಿದ್ದರು. ಬಾಲ್ಯದಲ್ಲಿಯೇ ಸೈನ್ಯ ಕಟ್ಟಿದ ಕೀರ್ತಿ ಶಿವಾಜಿಯದ್ದು, ಸ್ವರಾಜ್ಯ ಕಲ್ಪನೆಯ ರೂವಾರಿಯಾಗಿದ್ದ ಶಿವಾಜಿಗೆ ಅವರ ಮಾತ್ರೋಶ್ರೀಯೇ ಅವರ ಉತ್ತಮ ವ್ಯಕ್ತಿತ್ವ ರೂಪಿಸುವ ಶಕ್ತಿಯಾಗಿದ್ದರು. ತಾಯಿ ಹೇಳುತ್ತಿದ್ದ ಮಾರ್ಗದರ್ಶನದಲ್ಲಿ ವ್ಯಕ್ತಿತ್ವ ರೂಪಿಸಿಕೊಂಡು ಅಪ್ರತಿಮ ದೇಶಭಕ್ತ, ಶೂರ-ಧೀರರಾಗಿದ್ದಾರೆ. ನಾವೆಲ್ಲರೂ ಶಿವಾಜಿಯ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಗೆರಿಲ್ಲಾ ಯುದ್ಧ ಕೌಶಲ್ಯ ಸೈನ್ಯÀದಲ್ಲಿ ಅಳವಡಿಸಿಕೊಂಡಿದ್ದರು. ಆದರ್ಶಮಯ ವ್ಯಕ್ತಿತ್ವ, ಸತ್ಪುರುಷರು ನಮಗೆ ಪ್ರೇರಣೆ ಹಾಗೂ ಆದರ್ಶವಾಗಬೇಕು. ಅವರು ನೀಡಿದ ಕೊಡುಗೆಗೆ ಅಪಾರವಾಗಿವೆ. ದೇಶಪ್ರೇಮ ಹಾಗೂ ಅಪ್ರತಿಮ ಹೋರಾಟಗಾರರ ವ್ಯಕ್ತಿತ್ವವನ್ನು ಮೈಗೂಡಿಸಿಕೊಸಿಕೊಳ್ಳಬೇಕು ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮಾತನಾಡಿ, ಶಿವಾಜಿ ಅವರ ಹುಟ್ಟು, ಬಾಲ್ಯ, ಸಾಧನೆ ಅವರ ಶೌರ್ಯ ಅಪ್ರತಿಮ. ಶಿವಾಜಿ ಕೇವಲ ರಾಜ್ಯ ಕಟ್ಟುವ ಕನಸು ಹೊಂದಿರಲಿಲ್ಲ.  ರಾಷ್ಟ್ರ ನಿರ್ಮಾಣದ ಕನಸು ಕಂಡವರು. ಒಗ್ಗೂಡಿಸಲು ಶ್ರಮಿಸಿದವರು.  ಅವರ ಸಾಧನೆಗೆ ಅವರ ಅಪ್ರತಿಮ ಧೈರ್ಯ, ಶೌರ್ಯಗಳೇ ಮುಖ್ಯ ಕಾರಣ. ರಾಜತಾಂತ್ರಿಕ ಕೌಶಲ್ಯ, ಯುದ್ಧ ಕೌಶಲ್ಯ ಹೊಂದಿದ ಅವರು ಉತ್ತಮ ದಕ್ಷ ಆಡಳಿತಗಾರರಾಗಿದ್ದರು ಎಂದು ಹೇಳಿದರು.

ಶಿವಾಜಿ ವ್ಯಕ್ತಿತ್ವ ಸ್ಪೂರ್ತಿದಾಯಕ ಸದೃಢ ದೇಶ ನಿರ್ಮಾಣದಲ್ಲಿ ಶಿವಾಜಿಯ ಆದರ್ಶ ವ್ಯಕ್ತಿತ್ವ ಪ್ರೇರಣಾದಾಯವಾಗಬೇಕು. ಆಚಾರ-ವಿಚಾರ ಅಳವಡಿಸಿಕೊಳ್ಳುವಂತಾಗಲಿ ಎಂಬುದು ಜಯಂತಿ ಆಚರಣೆಯ ಉದ್ದೇಶವಾಗಿರುವುದರಿಂದ ಆದರ್ಶ ಪುರುಷರ ವಿಚಾರ-ಧಾರೆಗಳನ್ನು ಅಳವಡಿಸಿಕೊಂಡಾಗ ಜಯಂತಿ ಆಚರಣೆ ಸಾರ್ಥಕವಾಗಲಿದೆ ಎಂದು ಅವರು ಹೇಳಿದರು.

ಅಂಕಣಕಾರರಾದ ಮಂಜುನಾಥ ಜುನಗೊಂಡ ಅವರು ಉಪನ್ಯಾಸ ನೀಡಿ, ಅಪ್ರತಿಮ ಶೂರ ಧೀರರಾಗಿದ್ದ ಅವರು ಹಲವು ಯುದ್ಧ ಕೌಶಲ್ಯಗಳನ್ನು ಕರಗತ ಮಾಡಿಕೊಂಡಿದ್ದರು. ಮಹಾಮಾನವತಾವಾದಿಯಾಗಿದ್ದರು. ಶಿವಾಜಿಯ ಜೀವನಾದರ್ಶಗಳು ಪ್ರೇರಣಾದಾಯಕವಾಗಿವೆ. ಛತ್ರಪತಿ ಶಿವಾಜಿ ಅವರ ಹುಟ್ಟು, ಬಾಲ್ಯ, ಸಾಧನೆ ಅವರ ಶೌರ್ಯ, ಧೈರ್ಯ ಅಪ್ರತಿಮ ಹೋರಾಟಗಳ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಎಸ್ಪಿ ಎಚ್. ಡಿ. ಆನಂದಕುಮಾರ, ಡಿವೈಎಸ್ಪಿ ಸಿದ್ದೇಶ್ವರ, ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಅನುಸೂಯಾ ಚಲವಾದಿ, ಮಹಾನಗರ ಪಾಲಿಕೆ ಸದಸ್ಯರಾದ ರಾಹುಲ ಜಾಧವ, ರಾಜಶೇಖರ ಮಗಿಮಠ, ಪ್ರೇಮಾನಂದ ಬಿರಾದಾರ, ಕಿರಣ ಪಾಟೀಲ, ನಾನಾ ಸಮಾಜದ ವಿಜಯ ಚವ್ಹಾಣ, ಬಿ. ವಿ. ಶಿವಾಳ್ಕರ, ಡಾ. ಸದಾಶಿವ ಪವಾರ, ವಕೀಲರಾದ ಸೂರ್ಯವಂಶಿ ಸೇರಿದಂತೆ ಸಮಾಜದ ಅಭಿಮಾನಿಗಳು, ಮುಖಂಡರು ಉಪಸ್ಥಿತರಿದ್ದರು.

ಸಾಕ್ಷಿ ಹಿರೇಮಠ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.  ಶಿಕ್ಷಕ ಮಮದಾಪೂರ ನಿರ್ವಹಿಸಿ, ವಂದಿಸಿದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಎಸ್ಪಿ ಎಚ್. ಡಿ. ಆನಂದಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ ಶಿಂಧೆ ಅವರು ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಮೆರವಣಿಗೆಗೆ ಚಾಲನೆ ನೀಡಿದರು.  ಶಿವಾಜಿ ವೃತ್ತದಿಂದ ಆರಂಭವಾದ ಮೆರವಣಿಗೆ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದವರೆಗೆ ನಡೆಯಿತು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ರಾಹುಲ ಜಾಧವ, ಉಪ ವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ, ಮಹಾನಗರ ಪಾಲಿಕೆ ಉಪಾಯುಕ್ತ ಮಹಾವೀರ ಬೋರಣ್ಣವರ ಸೇರಿದಂತೆ ಸಮಾಜದ ನಾನಾ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌