ವಿಜಯಪುರ: ಮಹಾಶಿವರಾತ್ರಿ ಶಿವನ ಭಕ್ತರ ಪಾಲಿಗೆ ಸಂತಸ, ಸಂಭ್ರಮಕ್ಕೆ ಅವಕಾಶ ಕಲ್ಪಿಸುತ್ತದೆ. ರಾತ್ರಿಯಿಡಿ ಜಾಗರಣೆ ಮಾಡುವ ಶಿವಭಕ್ತರು ತಮಗೆ, ತಮ್ಮ ಕುಟುಂಬಕ್ಕೆ ಮತ್ತು ನಾಡಿಗೆ ಒಳಿತಾಗಲಿ ಎಂದು ನಾನಾ ರೀತಿಯಲ್ಲಿ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ.
ಬಸವನಾಡು ವಿಜಯಪುರ ಜಿಲ್ಲೆಯ ಈ ಭಾಗದಲ್ಲಿ ಮಹಾಶಿವರಾತ್ರಿಗೆ ವಿಶೇಷ ಮೆರಗು ನೀಡಿದ್ದು ಆ ಒಂದು ನೀರಾವರಿ ಯೋಜನೆ. ಪ್ರತಿವರ್ಷ ಹೊರಗಡೆ ಬೋರವೆಲ್ ನಿಂದ ನೀರು ತಂದು ಉದ್ಭವ ಶಿವಲಿಂಗ ಪೂಜೆ ನೆರವೇರಿಸುತ್ತಿದ್ದ ಗ್ರಾಮಸ್ಥರ ಪಾಲಿಗೆ ಈ ಬಾರಿ ಸ್ವತ ಕೃಷ್ಣೆ ಹರಿದು ಬಂದಿದ್ದಳು. ಕೃಷ್ಣಾ ನದಿಯ ನೀರು ದೇವಸ್ಥಾನದ ಆವರಣದಲ್ಲಿ ಹರಿಯುತ್ತಿರುವುದು ಹಬ್ಬದ ಕಳೆಯನ್ನು ಇಮ್ಮಡಿಗೊಳಿಸಿತ್ತು. ಸೊಂಟದವರೆಗೆ ನೀರಿದ್ದರೂ ಲೆಕ್ಕಿಸದೇ ಸಂಭ್ರಮದಿಂದ ದೇವಸ್ಥಾನ ಪ್ರವೇಶಿಸಿದ ಗ್ರಾಮದ ಮಹಿಳೆಯರು, ಮಕ್ಕಳು ಮತ್ತು ಹಿರಿಯರು ನೀರಿನಲ್ಲಿಯೇ ನಿಂತುಕೊಂಡು ಶಿವನಿಗೆ ಪೂಜೆ ಸಲ್ಲಿಸಿದರು.
ಈ ವಿಶೇಷ ಪೂಜೆ ನಡೆದಿದ್ದು, ಬಸವನಾಡು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದಲ್ಲಿ.
ಇಲ್ಲಿನ ಸಂಗಮನಾಥ ದೇವಸ್ಥಾನದಲ್ಲಿ ಉದ್ಭವ ಶಿವಲಿಂಗವಿದೆ. ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಎಂ. ಬಿ. ಪಾಟೀಲ ಅಂದು ಅನುಷ್ಠಾನಕ್ಕೆ ತಂದ ತುಬಚಿ- ಬಬಲೇಶ್ವರ ಏತನೀರಾವರಿ ಈಗ ಈ ಭಾಗದಲ್ಲಿ ಸಾಕಷ್ಟು ಜಲಕ್ರಾಂತಿಗೆ ಕಾರಣವಾಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ಮಾತ್ರ ನೀರು ಹರಿಯುತ್ತಿದ್ದ ಈ ದೇವಸ್ಥಾನದ ಪಕ್ಕದಲ್ಲಿನ ಹಳ್ಳದಲ್ಲಿ ಈ ಸಲ ಬೇಸಿಗೆ ಆರಂಭದಲ್ಲಿ ಅಂದರೆ ಫೆಬ್ರವರಿಯಲ್ಲಿಯೂ ನೀರು ಹರಿಯುತ್ತಿದೆ. ಕಾಲುವೆಗಳಿಗೆ ನೀರು ಹರಿಸಿದ ಪರಿಣಾಮ ಈ ಬಾರಿ ಕೃಷ್ಣಾ ನದಿ ಪವಿತ್ರ ನೀರಿನಲ್ಲಿ ದೇವಸ್ಥಾನ ಜಲಾವೃತವಾಗಿದ್ದು, ಶಿವನಿಗೆ ನೈಸರ್ಗಿಕವಾಗಿ ಹರಿಯುತು ಕೃಷ್ಣಾ ನದಿ ನೀರಿನ ಮೂಲಕ ನಿರಂತರ ರುದ್ರಾಭಿಷೇಕ ನೆರವೇರಿಸಿದ್ದು ಗಮನಾರ್ಹವಾಗಿದೆ.
ಮಹಾಶಿವರಾತ್ರಿ ಅಂಗವಾಗಿ ರಾತ್ರಿಯಿಡೀ ಜಾಗರಣೆ ನಡೆಸಿದ ಮಹಿಳೆಯರು, ಮಕ್ಕಳು ಮತ್ತು ಹಿರಿಯರು ಶಿವನಾಮ ಸ್ಮರಣೆ ಮಾಡಿದರು. ಅಲ್ಲದೇ, ಈ ಬಾರಿಯ ಮಹಾಶಿವರಾತ್ರಿ ವಿಶೇಷವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಇದಕ್ಕೆ ಕಾರಣಿಕರ್ತರಾದವರಿಗೆ ಕೃತಜ್ಞತೆಯನ್ನೂ ಸಲ್ಲಿಸಿದರು.
ಬೇಸಿಗೆಯಲ್ಲಿ ಮಳೆಗಾಲದ ಸಿರಿ ಸೃಷ್ಠಿಯಾಗಿರುವುದು ಇವರ ಸಂತಸಕ್ಕೆ ಪಾರವೇ ಇಲ್ಲದಂತಾಗಿತ್ತು. ಗರ್ಭಗುಡಿಯಲ್ಲಿ ಹರಿಯುತ್ತಿದ್ದ ನಾಲ್ಕೈದು ಅಡಿ ನೀರಿನಲ್ಲಿ ಸುಮಾರು ಹೊತ್ತು ನಿಂತು ಭಜನಾ ಪದ ಹಾಡಿ, ವಿಶೇಷ ಪೂಜೆ ಸಲ್ಲಿಸಿ ತಮ್ಮ ಸಕಲ ಇಷ್ಠಾರ್ಥ ಸಿದ್ಧಿಸಲಿ ಎಂದು ಶಿವನಿಗೆ ಮೊರೆ ಹೋಗಿದ್ದು ವಿಶೇಷವಾಗಿತ್ತು. ದೇವಸ್ಥಾನದ ಪೂಜಾರಿ ಸಂಗಮನಾಥನಿಗೆ ಹಾಲು, ಮೊಸರು, ತುಪ್ಪ ಅಭಿಷೇಕ ಮಾಡಿದರೆ, ಗೃಹಿಣಿಯರು ಭಜನಾ ಪದ ಹಾಡಿದ್ದೂ ಗಮನಾರ್ಹವಾಗಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿದ ದೇವಸ್ಥಾನದ ಪೂಜಾರಿ ಮಲ್ಲಯ್ಯ ಹಿರೇಮಠ, ಈ ಬಾರಿ ಕೃಷ್ಣಾ ನದಿಯಿಂದ ಕಾಲುವೆಗೆ ನೀರು ಬಿಡಲಾಗಿದ್ದು, ರಾತ್ರಿ 12 ಗಂಟೆಗೆ ರುದ್ರಾಭಿಷೇಕ ಆರಂಭಿಸಿದ್ದೇವೆ. 1.30 ಗಂಟೆಯವರೆಗೆ ಪೂಜೆ ನೆರವೇರಿತು. ಈ ಮುಂಚೆ ಹೊರಗಿನ ಬೋರವೆಲ್ ನಿಂದ ನೀರು ತಂದು ಗದ್ದುಗೆಯ ಪೂಜೆ ಮಾಡು್ತತಿದ್ದೇವು. ಎದೆಮಟ್ಟದವರೆಗೆ ನೀರಿತ್ತು. ಮಹಿಳೆಯರು ಮತ್ತು ಪುರುಷರು ಬಂದು ಪೂಜೆ ಸಲ್ಲಿಸಿದ್ದಾರೆ. ಈ ಬಾರಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ಹೇಳಿದರು.
ಗ್ರಾಮಸ್ಥರಾದ ಪೀರಗೊಂಡ ಮಲಕಪ್ಪ ಗದ್ಯಾಳ ಮಾತನಾಡಿ, ಕಳ್ಳಕವಟಗಿ ಗ್ರಾಮದಲ್ಲಿ ಸಂಗಮನಾಥ ದೇವಸ್ಥಆನದಲ್ಲಿ ಪ್ರತಿವರ್ಷ ರುದ್ರಾಭಿಷೇಕ ಮಾಡುತ್ತಿದ್ದೇವು. ಬಹಳ ಸರಳವಾಗಿ ಆಚರಿಸುತ್ತಿದ್ದೇವು. ಈ ಬಾರಿ ಬಹಳಷ್ಟು ನೀರು ಬಂದಿದೆ. ಹೀಗಾಗಿ ಗ್ರಾಮದ ಎಲ್ಲ ಸಮಾಜದವರು ಸೇರಿ ಸಂತಸದಿಂದ ರುದ್ರಾಭಿಷೇಕ ಮಾಡಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.
ಮತ್ತೋಬ್ಬ ಗ್ರಾಮಸ್ಥ ಬಸವರಾಜ ನಿಡೋಣಿ ಮಾತನಾಡಿ, ನಿರಂತರ ರುದ್ರಾಭಿಷೇಕ ಮಾಡಿದ್ದೇವೆ. ಈ ವರ್ಷ ವಿಶೇಷವೆಂದರೆ ಕೃಷ್ಣಾ ನದಿ ನೀರು ತುಬಚಿ ಬಬಲೇಶ್ವರ ಏತನೀರಾವರಿ ನೀರು ಬಂದಿದೆ. ಈ ಮುಂಚೆ ಮಳೆಗಾಲದಲ್ಲಿ ಮಾತ್ರ ನೀರು ಬರುತ್ತಿತ್ತು. ಈ ಬಾರಿ ಫೆಬ್ರವರಿಯಲ್ಲಿ ಕೃಷ್ಣಾ ನೀರು ಬಂದಿರುವುದು ವಿಶೇಷ ನಮ್ಮ ದೇವಸ್ಥಾನ ಪವಿತ್ರವಾಯಿತು. ಈ ಬಾರಿ ಪೂಜೆ ವಿಶೇಷವಾಗಿದೆ ಎಂದು ಸಂತಸ ಹಂಚಿಕೊಂಡರು.
ಒಟ್ಟಾರೆ, ಬೇಸಿಗೆಯಲ್ಲಿ ಮಲೆನಾಡ ಸಿರಿಗೆ ಕಾರಣವಾಗಿರುವ ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆಯಂಥ ಮತ್ತಷ್ಟು ಯೋಜನೆಗಳು ನಾಡಿನಾದ್ಯಂತ ಜಾರಿಯಾಗಲಿ ಎಂಬುದು ಕರುನಾಡಿನ ಜನರ ಆಶಯವಾಗಿದೆ.