ವಿಜಯಪುರ: ಬಬಲೇಶ್ವರದಲ್ಲಿ ಫೆ. 23 ರಂದು ಗುರುವಾರ ಮಾಜಿ ಮುಖ್ಯಮಂತ್ರಿ ಮತ್ತು ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಪ್ರಜಾಧ್ವನಿ ನಡೆಯಲಿದ್ದು, ಮತಕ್ಷೇತ್ರದ 75 ಸಾವಿರ ಜನರು ಪಾಲ್ಗೊಳ್ಳುವ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬಬಲೇಶ್ವರ ಬಸ್‍ಸ್ಟ್ಯಾಂಡ್ ಹತ್ತಿರದ ನಿಡೋಣಿ ರಸ್ತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 50 ಸಾವಿರ ಜನ ಕುಳಿತುಕೊಂಡು ನೋಡುವ ಬೃಹತ್ ಪೆಂಡಾಲ್ ನಿರ್ಮಿಸಲಾಗುತ್ತಿದೆ. ವೇದಿಕೆಯಲ್ಲಿ ಹಾಗೂ ದೂರದಲ್ಲಿ ಒಂಬತ್ತು ಬೃಹತ್ ಎಲ್ಇಡಿ ಪರದೆಗಳನ್ನು ಹಾಕಲಾಗುತ್ತಿದ್ದು, ದೂರದಿಂದ ನಿಂತುಕೊಂಡು ಕಾರ್ಯಕ್ರಮದ ವಿಕ್ಷೀಸಬಹುದಾಗಿದೆ. ಎದುರಿನ ಗುರುಪಾದೇಶ್ವರ ಮಠದ ರಸ್ತೆಯಲ್ಲಿ ಊಟದ ವ್ಯವಸ್ಥೆಗೆ ಶಾಮಿಯಾನ ಹಾಕಲಾಗುತ್ತಿದೆ. ಬಬಲೇಶ್ವರದ ಬಾಣಸಿಗ ಶಾಂತುಗೌಡ ಬಿರಾದಾರ ಎಲ್ಲರಿಗಾಗಿ ವಿಶೇಷ ಭಕ್ಷವಾದ ಬೆಲ್ಲದ ಸಿಹಿ ಮಾದಲಿಯನ್ನು ತಯಾರಿಸುತ್ತಿದ್ದಾರೆ. ಇದರ ಜೊತೆಗೆ ಜೊತೆಗೆ ಅನ್ನ ಮತ್ತು ಸಾಂಬಾರ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಯುವಮುಖಂಡ ಶಿವರಾಜ ಕೋಟ್ಯಾಳ ನೇತೃತ್ವದಲ್ಲಿ 30 ಯುವಕ, ಯುವತಿಯರ ತಂಡ ಕಾರ್ಯಕ್ರಮದ ವೇದಿಕೆಯ ಮೇಲೆ ಹನಿ ನೀರು ಕೊಡುವಂತೆ ಕೇಳಿದರು ಜನರು, ಹೊಳೆಯನ್ನೇ ತಂದರು ನಮ್ಮ ಎಂ.ಬಿ.ಪಾಟೀಲರು ಎಂಬ ಗೀತೆಯ ಸಮೂಹ ನೃತ್ಯದ ಪ್ರದರ್ಶಿಸಲಿದ್ದಾರೆ.
ತಿಕೋಟಾದ ಉದ್ಯಮಿ, ಕಾಂಗ್ರೆಸ್ ಮುಖಂಡ ಹಾಜಿಲಾಲ್ ಬಾಗವಾನ ಅವರು ತಿಕೋಟಾ ಭಾಗದ ರೈತರು ಬೆಳೆದ ಒಣದ್ರಾಕ್ಷಿಯಿಂದ ತಯಾರಿಸಿದ ಹಾರಗಳಿಂದ ಸಿದ್ದರಾಮಯ್ಯ ಮತ್ತು ಎಂ. ಬಿ. ಪಾಟೀಲ ಅವರನ್ನು ಸ್ವಾಗತಿಸಲಿದ್ದಾರೆ.
ಸಮೀಪದ ಹಳ್ಳಿಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಯುವ ಮುಖಂಡ ಹಣಮಂತ ಬಡಚಿ ನೇತೃತ್ವದ ಕಾರ್ಯಕರ್ತರ ತಂಡ ಬಬಲೇಶ್ವರ ಸುತ್ತಲಿನ ಪ್ರತಿ ಹಳ್ಳಿಗಳಿಗೂ ಸಮೂಹ ಸಾರಿಗೆ ವ್ಯವಸ್ಥೆ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಬಬಲೇಶ್ವರವನ್ನು ಸಂಪರ್ಕಿಸುವ ವಿಜಯಪುರ ರಸ್ತೆ, ಕಾಖಂಡಕಿ ರಸ್ತೆ, ಜಮಖಂಡಿ ರಸ್ತೆ, ನಿಡೋಣಿ ರಸ್ತೆಗಳಲ್ಲಿಯೇ ಬಬಲೇಶ್ವರ ಪಟ್ಟಣದ ಹೊರವಲಯದಲ್ಲಿ ಪಾರ್ಕಿಂಗ್ ಮಾಡಿ, ನಡೆದುಕೊಂಡು ಕಾರ್ಯಕ್ರಮ ಸ್ಥಳಕ್ಕೆ ಬರಬೇಕು. ಸಮೀಪದ ಹಳ್ಳಿಯ ಟ್ರಿಪ್ ಮಾಡುವ ವಾಹನಗಳು ಮಾತ್ರ ಬಸ್‍ಸ್ಟ್ಯಾಂಡ್ ಹತ್ತಿರ ಬರಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ ತಿಳಿಸಿದ್ದಾರೆ.