ವಿಜಯಪುರ: ತಿಕೋಟಾ ತಾಲೂಕಿನ ಲೋಹಗಾಂವ ಮತ್ತು ಸಿದ್ಧಾಪುರ(ಕೆ) ಗ್ರಾ. ಪಂ. ಗಳಿಗೆ ಜಿಲ್ಲಾ ಪಂಚಾಯfತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಭೇಟಿ ನೀಡಿ ನಾನಾ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ ಶಿಂಧೆ ಅವರು, ಕಾಮಗಾರಿಗಳ ಗುಣ್ಣಮಟ್ಟದಲ್ಲಿ ಯಾವದೇ ಕಾರಣಕ್ಕೂ ರಾಜಿ ಮಾಡಿಕೊಳ್ಳದೇ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಮುಖ್ಯವಾಗಿ ಶಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಅತ್ಯಂತ ಉತ್ತಮ ಗುಣಮಟ್ಟದಿಂದ ನಿರ್ವಹಣೆ ಮಾಡಬೇಕು. ಹೆಚ್ಚುವರಿ ಕ್ರಿಯಾ ಯೋಜನೆಗಳ ಬದಲಿಗೆ ಹಳೆ ವರ್ಷದ ಕ್ರಿಯಾ ಯೋಜನೆಗಳಲ್ಲಿರುವ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಬೇಕು. ಮುಂದಿನ ಆರ್ಥಿಕ ವರ್ಷದ ಆರಂಭದಲ್ಲಿ ಹೊಸ ಕ್ರಿಯಾ ಯೋಜನೆಗಳನ್ನು ಸಲ್ಲಿಸುವಂತೆ ಅವರು ತಿಳಿಸಿದರು.
ಲೋಹಗಾಂವ ಗ್ರಾಮ ಪಂಚಾಯಿತಿಯ ಇಟ್ಟಂಗಿಹಾಳ ಗ್ರಾಮದ ಪ್ರೌಢ ಶಾಲೆಗೆ ಭೇಟಿ ನೀಡಿದ ಅವರು, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಶಾಲಾ ಕಂಪೌಂಡ್ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ನಂತರ 10ನೇ ತರಗತಿಯ ಮಕ್ಕಳೊಡನೆ ಸಮಾಲೋಚನೆ ನಡೆಸಿದ ಅವರು, ಗ್ರಾಮೀಣ ಭಾಗದ ಮಕ್ಕಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಈ ಸಲ ರಾಜ್ಯಕ್ಕೆ ಪ್ರಥಮ ದರ್ಜೆಯಲ್ಲಿ ಬರಲು ಉತ್ತಮ ಶಿಕ್ಷಣವನ್ನು ಪಡೆಯುವ ಮೂಲಕ ಪ್ರಯತ್ನಿಸುವಂತೆ ಮಕ್ಕಳಿಗೆ ಪ್ರೇರಣೆ ನೀಡಿದರು.
ಶಾಲಾ ಶಿಕ್ಷಕರೊಂದಿಗೆ ಶಾಲೆಯಲ್ಲಿ ಲಭ್ಯವಿರುವ ಕುಡಿಯುವ ನೀರು ಮತ್ತು ಶೌಚಾಲಯದ ಕುರಿತು ಚರ್ಚಿಸಿ ಮಕ್ಕಳಿಗೆ ಯಾವದೇ ಕಾರಣಕ್ಕೂ ಕುಡಿಯುವ ನೀರಿನ ಮತ್ತು ಶೌಚಾಲಯದ ಸಮಸ್ಯೆಗಳು ಉಂಟಾಗದಂತೆ ಕ್ರಮ ವಹಿಸಲು ರಾಹುಲ ಶಿಂಧೆ ಸೂಚನೆ ನೀಡಿದರು.
ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ಬೆಳವಣಿಗೆ ದೃಷ್ಠಿಯಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಶಾಲಾ ಆಟದ ಮೈದಾನವನ್ನು ಅಭಿವೃದ್ಧಿ ಪಡಿಸುವಂತೆ ಸ್ಥಳದಲ್ಲಿದ್ದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಪದ್ಮಿನಿ ಬಿರಾದಾರ ಅವರಿಗೆ ಸೂಚಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೇವಾಲಾಲ ನಗರದಲ್ಲಿ ಪ್ರಗತಿಯಲ್ಲಿರುವ ಜಲ ಜೀವನ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಟ್ಯಾಂಕ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಅವರು, ಪ್ರತಿ ಮನೆಗಳಿಗೆ ಕಾರ್ಯಾತ್ಮಕ ನಳ ಸಂಪರ್ಕದ ತಂತ್ರಾಂಶದಲ್ಲಿ ಗ್ರಾಮದ ಎಲ್ಲ ಫಲಾನುಭವಿಗಳ ಆಧಾರ ಕಾರ್ಡ್‍ಗಳು ಅಳವಡಿಕೆ ಕುರಿತು ಪರಿಶೀಲನೆ ನಡೆಸಿ, ಆಧಾರ ಕಾರ್ಡ ಅಳವಡಿಕೆಗೆ ಕೂಡಲೇ ಕ್ರಮ ವಹಿಸುವಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಅವರು ಸೂಚನೆ ನೀಡಿದರು.
ಲೋಹಗಾಂವ ತಾಂಡಾ ನಂ. 1 ಹಾಗೂ ಸೋಮದೇವರ ಹಟ್ಟಿ ತಾಂಡಾ ನಂ. 3ಕ್ಕೆ ಭೇಟಿ ನೀಡಿದ ಸಿಇಓ ಅವರು, ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆ-ಮನೆಗೆ ಕಾರ್ಯಾತ್ಮಕ ನಳ ಸಂಪರ್ಕ ಕಾಮಗಾರಿಯ ಸ್ಥಾನಿಕ ಪರಿಶೀಲನೆ ನಡೆಸಿದರು. ಸೋಮದೇವರ ಹಟ್ಟಿ ತಾಂಡಾದಲ್ಲಿರುವ ಜಲ ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಪ್ರತಿ ದಿನ ನೀರಿನ ಪರೀಕ್ಷೆ ಮಾಡಬೇಕು. ಮತ್ತು ಕುಡಿಯುವ ನೀರಿನ ಕುರಿತು ಗ್ರಾಮೀಣ ಜನರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ತಾಂಡಾ ನಂ. 1 ಸರಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು, ಶಾಲೆಯ ಆವರಣದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಬಿಸಿಯೂಟದ ಅಡುಗೆ ಕೋಣೆಯನ್ನು ನಿರ್ಮಾಣ ಮಾಡಬೇಕು. ಇದೇ ವೇಳೆ ಲೋಹಗಾಂವ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಭೇಟಿ ನೀಡಿ ತೆರಿಗೆ ಸಂಗ್ರಹಣೆ ಮಾಡುವ ಕುರಿತು ಗ್ರಾಮ ಪಂಚಾಯತಿ ಸಿಬ್ಬಂದಿಗಳೊಡನೆ ಚರ್ಚಿಸಿ, ಶೀಘ್ರ ಗತಿಯಲ್ಲಿ ತೆರಿಗೆ ಪರಿಷ್ಕರಣೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿರುವ 10 ಜನ ಕ್ರಿಯಾತ್ಮಕ ಗ್ರಾಮ ಪಂಚಾಯತಿ ಅಧ್ಯಕ್ಷರನ್ನು ಆಯ್ಕೆ ಮಾಡಿ ಉಡುಪಿ ಜಿಲ್ಲೆಗೆ ಹೆಚ್ಚಿನ ಅಧ್ಯಯನಕ್ಕಾಗಿ ಪ್ರವಾಸಕ್ಕೆಂದು ಕಳುಹಿಸಿ ಕೂಡಲಾಗುವುದು ಎಂದು ಹೇಳಿದರು.
ತಿಕೋಟಾ ತಾಲೂಕಿನ ಸಿದ್ಧಾಪುರ(ಕೆ) ಗ್ರಾಮ ಪಂಚಾಯತಿಯ ನಾನಾ ಕಾಮಗಾರಿಗಳನ್ನು ವೀಕ್ಷಣೆ ಮಾಡಿದ ರಾಹುಲ ಶಿಂಧೆ ಅವರು, ಸಿದ್ಧಾಪುರ(ಕೆ) ಗ್ರಾಮದ ಸರಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ಶಾಲಾ ಆವರಣದಲ್ಲಿ ಅನುಷ್ಠಾನಗೊಂಡ ರನ್ನಿಂಗ್ ಟ್ರ್ಯಾಕ್, ಭೋಜನಾಲಯ ಕಾಮಗಾರಿಗಳನ್ನು ಪರಿಶೀಲನೆ ನಡೆಸಿ, ಕಾಮಗಾರಿಗಳನ್ನು ಡ್ರೋನ್ ಕ್ಯಾಮೆರಾ ಮುಖಾಂತರ ವಿಡಿಯೋ ಚಿತ್ರೀಕರಣ ಹಾಗೂ ರನ್ನಿಂಗ್ ಟ್ರ್ಯಾಕ್‍ನ ಮಧ್ಯದಲ್ಲಿ ಹಾಕಿ ಅಥವಾ ಫುಟ್‍ಬಾಲ್ ಅಂಕಣಗಳನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನಿಡಿದ ಅವರು, ಖುದ್ದಾಗಿ ಗ್ರಾಮದ ಸಾರ್ವಜನಿಕರ ಮತದಾನ ಗುರುತಿನ ಚೀಟಿಯನ್ನು ತೆಗೆದುಕೊಂಡು ವೋಟರ್ ಹೆಲ್ಪ್ ಲೈನ್ ಮೊಬೈಲ್ ಆಪ್ ನಲ್ಲು ಗುರುತಿನ ಚೀಟಿ ಚಾಲ್ತಿ ಇರುವ ಬಗ್ಗೆ ಪರಿಶೀಲಿಸಿ ಖಾತರಿಪಡಿಸಿಕೊಂಡರು, ಮತದಾನದ ಬಗ್ಗೆ ಶೇ.100ರಷ್ಟು ಜಾಗೃತಿ ಮೂಡಿಸಬೇಕು ಜೊತೆಗೆ ಶೇ. 100 ರಷ್ಟು ಮತದಾನ ಆಗಬೇಕು ಎಂದು ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಿಕೋಟಾ ತಾಲೂಕು ಪಂಚಾಯಿತಿಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಬಸವರಾಜ ಐನಾಪುರ, ಲೊಹಗಾಂವ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜುಗೌಡ ಬಿರಾದಾರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಬಿ. ಬಿ. ಜಂಗಮಶೆಟ್ಟಿ, ಪಂಚಾಯಿತಿ ರಾಜ್ ಎಂಜನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಪಿ. ಎಸ್. ಚವ್ಹಾಣ, ತಾಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕರು(ಗ್ರಾ. ಉ) ಎಂ. ಬಿ. ಮನಗೂಳಿ, ಲೋಹಗಾಂವ ಪಿಡಿಓ ಪದ್ಮಿನಿ ಬಿರಾದಾರ, ಸಿದ್ಧಾಪುರ(ಕೆ) ಪಿಡಿಓ ಜಿ. ವೈ. ಮಸಳಿ ಹಾಗೂ ಇತರರು ಉಪಸ್ಥಿತರಿದ್ದರು.