ವಿಜಯಪುರ: ಕಾಲಜ್ಞಾನದ ಭವಿಷ್ಯಕ್ಕೆ ಹೆಸರಾಗಿರುವ ಬಸವನಾಡು ವಿಜಯಪುರ ಜಿಲ್ಲೆಯ ಕೃಷ್ಣಾ ನದಿ ತೀರದ ಹೊಳೆ ಬಬಲಾದಿ ಶ್ರೀ ಸದಾಶಿವ ಮಠಾಧೀಶ ಶ್ರೀ ಸಿದ್ಧರಾಮಯ್ಯ 2023-24ರ ಭವಿಷ್ಯ ನುಡಿದಿದ್ದು, ಅದರಲ್ಲಿನ ಬಹುತೇಕ ಅಂಶಗಳು ಜನಸಾಮಾನ್ಯರಿಗೆ ನೆಮ್ಮದಿ ತರುವಂತಿವೆ.
ಬಬಲೇಶ್ವರ ತಾಲೂಕಿನ ಹೊಳೆಬಬಲಾದಿ ಶ್ರೀ ಸದಾಶಿವ ಮುತ್ಯಾನ ಜಾತ್ರೆ ಪ್ರತಿ ವರ್ಷ ಮಹಾಶಿವರಾತ್ರಿಯಂದು ನಡೆಯುತ್ತಿದ್ದ, ಇಲ್ಲಿ ಮದ್ಯಾರಾಧನೆ ತಲೆತಲಾಂತರಗಳಿಂದಲೂ ಮುಂದುವರೆದುಕೊಂಡು ಬಂದಿದೆ. ಈ ಹಿಂದೆ ಕೊರೊನಾ, ನಾನಾ ಬೆಂಕಿ, ಭೂಕಂಪ, ಜಲಪ್ರಳಯಗಳು, ರಾಜಕೀಯ ಪಲ್ಲಟಗಳ ಕುರಿತು ಇಲ್ಲಿನ ಕಾರ್ಣಿಕರು ನುಡಿದಿದ್ದ ಭವಿಷ್ಯ ನಿಜವಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯ ಹೇಳಿಕೆಯೂ ಮಹತ್ವ ಪಡೆದಿತ್ತು.
ಈ ಬಾರಿ ಕಾರ್ಣಿಕ ಶ್ರೀ ಸಿದ್ಧರಾಮಯ್ಯ ಹೊಳಿಮಠ ಸ್ವಾಮೀಜಿ ನುಡಿದಿರುವ ಭವಿಷ್ಯ ರಾಜ್ಯ, ದೇಶ ಮತ್ತು ವಿಶ್ವಕ್ಕೆ ನೆಮ್ಮದಿ ತರುವಂತಿದ್ದಿರೂ, ಕೆಲವು ಅಹಿತಕರ ಘಟನೆಗಳ ಬಗ್ಗೆಯೂ ಭವಿಷ್ಯ ಹೇಳಿದ್ದಾರೆ.
ಕಾಲಜ್ಞಾನದ ಹೊತ್ತಿಗೆಯಲ್ಲಿ ಪುಟಗಳಲ್ಲಿ ಬರೆಯಲಾದ ಈ ವರ್ಷದ ಭವಿಷ್ಯದಂತೆ, ಮಳೆ, ಬೆಳೆ ಚೆನ್ನಾಗಿರಲಿದ್ದು, ರಾಜ್ಯವನ್ನಾಳುವ ದೊರೆಗೆ ಉತ್ತಮ ಕಾಲ ಕೂಡಿ ಬರಲಿದೆ ಎಂದು ಹೇಳಿದ್ದಾರೆ.
ಆಷಾಢ ಮಾಸದಲ್ಲಿ ಮಳೆ ಸುಭಿಕ್ಷೆಯಾಗಿರಲಿದೆ. ಶ್ರಾವಣ ಮಾಸದಲ್ಲಿ ಗಾಳಿ ಬಹಳ ಇರಲಿದೆ. ಅಕ್ಕಿ, ಗೋದಿ ಚೆನ್ನಾಗಿ ಬೆಳೆಯಲಿವೆ. ಖಾದ್ಯ ಪದಾರ್ಥಗಳ ಬೆಲೆ ತುಟ್ಟಿಯಾಗಲಿದೆ. ಶುಭಕೃತನಾಮ ಸಂವತ್ಸರದಲ್ಲಿ ಸಜ್ಜನರೂ ಕೂಡ ದುರ್ಜನರಾಗುತ್ತಾರೆ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಮಳೆ, ಬೆಳೆಗಳ ಭವಿಷ್ಯ
ಮುಂಗಾರು ಮಳೆ ಉತ್ತಮ. ಹಿಂಗಾರು ಮಳೆ ಉತ್ತಮ ಫಲ ನೀಡಲಿದೆ. ನಮ್ಮ ರಾಜ್ಯಕ್ಕೆ ಒಂದಾಗಿ ನಮ್ಮ ನಮ್ಮಲ್ಲಿ ಜಗಳ, ಬಡಿದಾಟ ಉಂಟಾಗುವುದು ತಿಳಿಯದಣ್ಣ, ಬೆಳೆಗಳು ಸಮೃದ್ಧ ವೈಶಾಲ್ಯದ ತಿಳಿಯಿರಣ್ಣ. ಮುಂಗಾರು ಮಳೆ ಒಂಬತ್ತಾಣೆ, ಹಿಂಗಾರು ಮಳೆ ಹತ್ತಾಣೆ ಎಂದು ಹೇಳಿರುವುದು ಅನ್ನದಾತರಲ್ಲಿ ಸಂತಸ ಮೂಡಲು ಕಾರಣವಾಗಿದೆ.
ಪ್ರಕೃತಿ ವಿಕೋಪಗಳ ಕುರಿತು ಭವಿಷ್ಯ
ಇದೇ ವೇಳೆ ಜಲಪ್ರಳಯದ ಸೂಚನೆ ಇದೆ. ಯಾವ ದಿಕ್ಕಿನಲ್ಲಿ ಗೊತ್ತಿಲ್ಲ ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ. . ಕೆಲವು ಕಡೆಗಳಲ್ಲಿ ಭೂಮಿ ಕುಪ್ಪಳಿಸಲಿದೆ ಎಂದು ಅವರು ಆತಂಕವನ್ನೂ ಹೊರ ಹಾಕಿದ್ದಾರೆ.
ರಾಜ್ಯದ ಭವಿಷ್ಯ
ನಮ್ಮ ರಾಜ್ಯದಲ್ಲಿ ಮೋಸ, ವಂಚನೆ, ಕೊಲೆ, ಸುಲಿಗೆ ಹೆಚ್ಚಾಗಲಿವೆ. ವೈಶಾಖ ಮತ್ತು ಜೇಷ್ಠ ಮಾಸದಲ್ಲಿ ಸುಖ, ಶಾಂತಿ, ನೆಮ್ಮದಿ ಸಿಗಲಿದೆ. ಮತ್ತೋಂದು ಕಡೆ ದುಃಖವೂ ಇದೆ.
ರಾಜ್ಯ ರಾಜಕಾರಣದಲ್ಲಿ ಸ್ವಲ್ಪ ಹೊಸ ತಿರುವ ಉಂಟಾಗಲಿದೆ. ಪ್ರಜೆಗಳಲ್ಲಿ ಏರುಪೇರಾಗಲಿದೆ. ಆದರೆ, ಆಳುವ ಪ್ರಭುಗಳಿಗೆ ಸುಭಿಕ್ಷೆಯಿದೆ. ಶುಭಕೃತ ನಾಮ ಸಂವತ್ಸರದಲ್ಲಿ ತನ್ನಿಂದ ತಾನೆ ಹಸನಾಗಲಿದೆ ಎಂದು ಶ್ರೀ ಸಿದ್ಧರಾಮಯ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ವೃದ್ಧಾಶ್ರಮಗಳು ಕಡಿಮೆಯಾಗಲಿವೆ
ಇದೇ ವೇಳೆ, ಕಾರ್ಣಿಕ ನುಡಿದಿರುವ ಭವಿಷ್ಯವೊಂದು ಹಿರಿಯ ನಾಗರಿಕರ ಪಾಲಿಗೆ ಅತೀವ ಸಂತಸ ಉಂಟು ಮಾಡುವಂತಿದೆ. ಈ ಬಾರಿ ಜಾತಿ, ಮತ, ಭೇದ-ಭಾವಗಳಿಗೆ ಹೆಚ್ಚಿನ ಒಲವು ಸಿಗಲಿದೆ. ಎಲ್ಲ ಮಕ್ಕಳಿಗೆ ತಂದೆ, ತಾಯಿಗಳ ಬಗ್ಗೆ ಪ್ರೀತಿ, ವಾತ್ಸಲ್ಯ, ಅನುಕಂಪ ಹೆಚ್ಚಾಗಲಿದೆ. ಅನುಕಂಪ ಹೆಚ್ಚಿ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಲಿವೆ. ಜಗತ್ತಿಗೆ ಮಾರಕವಾಗಿದ್ದ ರೋಗ ಕಡಿಮೆಯಾಗುವ ಕಾಲ ಬಂದಿದೆ ಎಂದು ಹೇಳುವ ಮೂಲಕ ಅವರು ಮಕ್ಕಳು ತಂತಮ್ಮ ಪೋಷಕರ ಬಗ್ಗೆ ಕಾಳಜಿ ಹೊಂದಲಿದ್ದಾರೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ಈವರೆಗೆ ಆತಂಕ ಮೂಡಿಸಿದ್ದ ಕೊರೊನಾ ಕೂಡ ತೊಲಗಲಿದೆ ಎಂದು ಹೇಳಿರುವುದು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಯೋಧರ ಬಗ್ಗೆ ಮಾತು
ಯುದ್ಧ ಕುರಿತೂ ಪರೋಕ್ಷವಾಗಿ ಪ್ರಸ್ತಾಪಿಸಿರುವ ಅವರು, ಗಡಿ ಕಾಯುವ ಜನರಿಗೆ ಜಯ ಸಿಗಲಿದೆ. ಇನ್ನೋಂದು ಸೂತಕದ ಛಾಯೆ ಇದೆ ಎಂದು ಹೇಳಿರುವುದು ಕೂಡ ಗಮನಾರ್ಹವಾಗಿದೆ.
ಕೊನೆಯದಾಗಿ ಜಗತ್ತಿಗೆ ಸುಭಿಕ್ಷೆ ಕಾದಿದೆ ಎಂದು ಕಾರ್ಣಿಕ ಶ್ರೀ ಸಿದ್ಧರಾಮಯ್ಯ ಸ್ವಾಮೀಜಿ ಹೇಳಿರುವುದು ಜಗತ್ತಿನಲ್ಲಿ ಈಗ ಕಾಡುತ್ತಿರುವ ನಾನಾ ದೇಶಗಳ ನಡುವಿವ ವೈಮನಸ್ಸು, ಯುದ್ಧದ ಕಾರ್ಮೋಡಗಳನ್ನು ಕಡಿಮೆ ಮಾಡಬಹುದು. ಜೊತೆಗೆ ಯುಕ್ರೇನ್ ಮತ್ತು ರಷ್ಯಾ ಯುದ್ಧ ಕೊನೆಯಾಗಬಹುದು ಎಂಬುದರ ಮುನ್ಸೂಚನೆಯಾಗಿದೆ ಎಂದೇ ಅರ್ಥೈಸಲಾಗುತ್ತಿದೆ.
ಒಟ್ಟಾರೆ, ಈ ಬಾರಿಯ ಬಬಲಾದಿ ಸಿದ್ಧು ಮುತ್ಯಾ ನುಡಿದಿರುವ ಭವಿಷ್ಯ ಮಠದ ಭಕ್ತರಲ್ಲಿ ಸ್ವಲ ಮಟ್ಟಿಗೆ ನೆಮ್ಮದಿ ತಂದಿದೆ.