ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರ ಟೀಂ ಅಲಿಬಾಬಾ ಹಾಗೂ ಚಾಲೀಸ್ ಚೋರ್ ರೀತಿ ಇದೆ ಎಂದು ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಿದ ಮಾತನಾಡಿದ ಅವರು, ರಾಜ್ಯ ಸರಕಾರದ ಭ್ರಷ್ಟಾಚಾರದ ವಿರುದ್ಧ ಹರಿಹಾಯ್ದರು.
ಬೊಮ್ಮಾಯಿ ಆ್ಯಂಡ್ ಟೀಂ ಎಂದರೆ ಅಲಿಬಾಬಾ ಹಾಗೂ ಚಾಲೀಸ್ ಚೋರ್ ರೀತಿ ಇದೆ. ಪೊಲೀಸ್ ನೇಮಕಾತಿಯಲ್ಲಿ ಲಂಚ, ವರ್ಗಾವಣೆಯಲ್ಲಿ ಲಂಚ, ಓಲ್ಲಿ ಹೋದರೂ ಲಂಚಾ, ಲಂಚಾ ಲಂಚಾ. ಹೋಟೇಲಿನಲ್ಲಿ ತಿಂಡಿಗಳಿಗೆ ಮೆನು ಹಾಕಿರುವ ರೀತಿಯಲ್ಲಿ ಅದೇ ರೀತಿ ವಿಧಾನಸೌಧದಲ್ಲಿ ಇವರು ಒಂದು ಕೆಲಸಕ್ಕೆ ಇಂತಿಷ್ಟು ಲಂಚ ಎಂದು ಬೋರ್ಡ್ ಹಾಕಿದ್ದಾರೆ. ನನ್ನ 40 ವರ್ಷದ ರಾಜಕೀಯ ಇತಿಹಾಸದಲ್ಲಿ ಇಂಥ ಲಂಚಕೋರ ಸರಕಾರವನ್ನು ನಾನು ನೋಡಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಪ್ರಜಾಧ್ವನಿ ಎರಡನೇ ಹಂತದ ಯಾತ್ರೆ ಆರಂಭಿಸಿದ್ದೇವೆ. ಹಳೆಯ ಮೈಸೂರು ಭಾಗದಲ್ಲಿ ಡಿಕೆಶಿ ನೇತ್ರತ್ವದಲ್ಲಿ ಮತ್ತು ಇತ್ತ ಉತ್ತರ ಕರ್ನಾಟಕದಲ್ಲಿ ನನ್ನ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ. ನಾನು ಚುನಾವಣೆ ಪ್ರಚಾರಕ್ಕೆ ಮತ್ತೆ ಬರುತ್ತೇನೆ.
ಈ ಚುನಾವಣೆ ಕರ್ನಾಟಕ ಅಷ್ಟೆ ಅಲ್ಲಾ, ದೇಶದ ಹಿತದೃಷ್ಠಿಯಿಂದ ಬಹಳ ಪ್ರಮುಖವಾದ ಚುನಾವಣೆಯಾಗಿದೆ. ಇದರ ಫಲಿತಾಂಶ ದೇಶದ ಭವಿಷ್ಯದ ಬಗ್ಗೆ ಪರಿಣಾಮ ಬೀರಲಿದೆ. ಕರ್ನಾಟಕದ ಭವಿಷ್ಯ ತೀರ್ಮಾನ ಮಾಡುವ ಚುನಾವಣೆ ಇದಾಗಿದ್ದು ಮತದಾರರು ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕು ಎಂದು ಸಿದ್ಧರಾಮಯ್ಯ ಹೇಳಿದರು.
ಅಧಿಕಾರದಲ್ಲಿದ್ದಾಗ ನಾವು ಜನರಿಗೆ ಅಕೌಂಟೇಬಲ್ ಆಗಿರಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೆ ಮಾಲೀಕರು. ನಾವೆಲ್ಲರೂ ಈ ನಾಡಿನ ಏಳು ಕೋಟಿ ಜನರ ಸೇವಕರು. ದುಡ್ಡು ಮಾಡಲು ಅಧಿಕಾರಕ್ಕೆ ಬರುವುದು ಸರಿಯಲ್ಲ. ಜನರ ಸೇವೆ ಮಾಡಲು ಅಧಿಕಾರಕ್ಕೆ ಬರಬೇಕು. ನಿಮ್ಮ ಆಶೀರ್ವದ ಇಲ್ಲದಿದ್ದರೆ ಅಧಿಕಾರಕ್ಕೆ ಬರೋಕೆ ಆಗಲ್ಲ. ಅಧಿಕಾರಕ್ಕೆ ಬಂದಮೇಲೆ ನುಡಿದಂತೆ ನಡೆಯಬೇಕು. ಬಸವಣ್ಣನವರ ಜಯಂತಿಯಂದು ನಾನು ಪ್ರಮಾಣ ವಚನ ಸ್ವೀಕಾರ ಮಾಡಿದೆ. ನಾನೊಬ್ಬನೇ ಪ್ರಮಾಣ ವಚನ ಸ್ವೀಕಾರ ಮಾಡಿದೆ
ಆ ವೇಳೆ ನಾನು ಇನ್ನೊಂದು ಪ್ರಮಾಣ ಮಾಡಿದೆ. ಬಸವಾದಿ ಶರಣರಂತೆ ನಾನೂ ಕೂಡ ಜನರಿಗೆ ಕೊಟ್ಟ ವಚನ ಇಡೇರಿಸಬೇಕು ಎಂದು ಪ್ರಮಾಣ ಮಾಡಿದೆ. ನೇರವಾಗಿ ವಿಧಾನಸೌಧಕ್ಕೆ ಹೋಗಿ ಅಧಿಕಾರಿಗಳನ್ನು ಕರೆದು ಮೊದಲನೇ ದಿನ ಒಂದು ಗಂಟೆಯಲ್ಲಿ ಐದು ಭರವಸೆಗಳ ಜಾರಿಗೆ ಅದೇ ದಿನ ಆವತ್ತೆ ಆದೇಶ ಮಾಡಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರದಾರೆ, ಕೃಷಿಭಾಗ್ಯ, ಬಡವರ ಸಾಲಮನ್ನಾ ಆದೇಶ ಮಾಡಿದೆ ಎಂದು ಅವರು ನೆನಪಿಸಿದರು.
ಯಾವುದಾದರೂ ಧರ್ಮದಲ್ಲಿ ಹೊಡಿ, ಬಡಿ, ಕಡಿ ಕೊಲೆ ಮಾಡು ಎಂದು ಹೇಳುತ್ತಾ?
ರಾಜ್ಯದ ಜನರ ಮಾನ, ಪ್ರಾಣ, ಆಸ್ತಿ ಕಾಪಾಡಬೇಕಾದ ಒಬ್ಬ ಮಂತ್ರಿ ಹೇಗೆ ಟಿಪ್ಪು ಸುಲ್ತಾನ್ ರನ್ನು ಮುಗಿಸಿದರೋ, ಅದೇ ರೀತಿ ಸಿದ್ದರಾಮಯ್ಯ ಅವರನ್ನು ಮುಗಿಸಿ ಅಂತಾರಲ್ಲಾ ಇವರು ಮಂತ್ರಿ ಆಗಲು ಲಾಯಕ್ಕೇನ್ರೀ? ಸಿದ್ದರಾಮಯ್ಯನನ್ನು ಮುಗಿಸಿ ಎನ್ನುವ ವ್ಯಕ್ತಿ ಯಾವ ಪಕ್ಷದವನು? ಎಂದು ಪ್ರಶ್ನಿಸಿದ ಅವರು, ಬಿಜೆಪಿಗೆ ಓಟ್ ಹಾಕ್ತಿರಾ? ಇದು ಬಿಜೆಪಿ ಪ್ರಚೋದನೆ ನಾನು ನಿಮ್ಮ ಗೊಡ್ಡು ಬೆದರಿಕೆಗೆ ಹೆದರಲ್ಲ ಎಂದು ಹೇಳಿದ್ದೇನೆ ಎಂದು ತಿಳಿಸಿದರು.
ಮೋದಿ ಅಧಿಕಾರಕ್ಕೆ ಬಂದು 9 ವರ್ಷ ಮುಗಿತಾ ಬರ್ತಿದೆ. ಯುವಕರಿಗೆ 2 ಕೋಟಿ ಉದ್ಯೋಗ ಕೊಡುತ್ತೇವೆ ಅಂದಿದ್ದರು. ವಿದೇಶದಲ್ಲಿ ಕಪ್ಪು ಹಣ ಇದೆ ಅದನ್ನ ತಂದು ಪ್ರತಿಯೊಬ್ಬರ ಅಕೌಂಟ್ ಗೆ ರೂ. 15 ಲಕ್ಷ ಹಾಕ್ತಿವಿ ಎಂದು ಹೇಳಿದ್ದರು. ನಾ ಖಾವುಂಗಾ ನಾ ಖಿಲಾವುಂಗಾ ಅಂದರು, ಅಚ್ಚೇದಿನ್ ಆಯೇಗಾ ಎಂದಿದ್ದರು. ಯಾವುದಾದ್ರೂ ಮಾಡಿದ್ರಾ? ಕೆಲಸಾ ಕೇಳಿದರೆ ಪಕೋಡಾ ಮಾರಿ ಎಂದು ಹೇಳಿದರು. ರೈತರ ಆದಾಯ ದುಪ್ಪಟ್ಟು ಆಗಲಿಲ್ಲ, ಸಾಲ ದುಪ್ಪಟ್ಟು ಆಯ್ತು. ಗ್ಯಾಸ್, ಪೆಟ್ರೋಲ್, ಅಡುಗೆ ಎಣ್ಣೆ ಎಲ್ಲದರ ಬೆಲೆ ಗಗನಕ್ಕೆ ಹೊಯ್ತು
ಜನರ ರಕ್ತವನ್ನು ಹೀರ್ತಿದಿರಿ, ಜನರ ರಕ್ತವನ್ನು ಕುಡಿತಿದಿರಿ. ಇವರು ಮತ್ತೆ ಅಧಿಕಾರಕ್ಕೆ ಬರಬೇಕಾ? ಇವರಿಗೆ ಮುಖ ಇಲ್ಲ. ಬಡವರಿಗೆ ಮಾಡಬಾರದ ಅನ್ಯಾಯ ಮಾಡಿದ್ದಾರೆ ಇವರು
ಬರಿ ಸುಳ್ಳು ಹೇಳಕೊಂಡು ತಿರುಗುತ್ತಿದ್ದಾರೆ. ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡಿದಾರೆ, ಬೊಮ್ಮಾಯಿ ಸರಿ ಪಡಿಸ್ತಿದಾರೆ ಎಂದು ನಡ್ಡಾ ಹೇಳಿದ್ದರು. ಬೆಕ್ಕು ಕಣ್ಣು ಮುಚ್ಕೊಂಡು ಹಾಲು ಕುಡಿದರೆ ಅಲ್ಲಾರೀ ಮಿಸ್ಟರ್ ನಡ್ಡಾ. ಕಣ್ಣು ಬಿಟ್ಕೊಂಡು ಹಾಲು ಕುಡೀರಿ
ಕಾಂಟ್ರಾಕ್ಟರ್ ಅಸೋಷಿಯೇಷನ್ ಅಧ್ಯಕ್ಷ ಬಿಜೆಪಿಯವರು 40 ಪರ್ಸೆಂಟ್ ಕಮಿಷನ್ ತಗೊತಿದಾರೆ ಅದನ್ನು ತಡಿರಿ ಎಂದು ಮೋದಿಗೆ ಪತ್ರ ಬರೆದಿದ್ದರು. ಗುತ್ತಿಗೆದಾರರು ಕಮಿಷನ್ ಬಗ್ಗೆ ಪತ್ರ ಬರೆದಿದ್ದು ಇತಿಹಾಸದಲ್ಲಿ ಇದೇ ಮೊದಲು. ನಾನಾಗಲಿ, ಎಂಬಿ ಪಾಟೀಲ್ ಆಗಲಿ ಕಮಿಷನ್ ಪಡೆದಿದ್ದೀವಾ? ಯಾರಾದ್ರೂ ಒಬ್ಬರು ಹೇಳಿದರೆ ರಾಜಕೀಯದಿಂದ ನಾನು ನಿವೃತ್ತಿ ಪಡೆಯುತ್ತೇನೆ ಎಂದು ಅವರು ವಾಗ್ದಾಳಿ ನಡೆಸಿದರು.
ಯಾವನೋ ಒಬ್ಬ ಸೂರ್ಯ ಅಂತ ಇದಾನಲ್ಲಾ? ತೇಜಸ್ವಿ ಸೂರ್ಯ, ನಾನು ಯಾವಾಗಲೂ ಅವನಿಗೆ ಅಮವಾಸ್ಯೆ ಅಂತ ಕರೆಯುತ್ತೇನೆ. ರೈತರ ಸಾಲಮನ್ನಾ ಮಾಡಿದರೆ ದೇಶ ಹಾಳಾಗ್ತದೆ ಅಂದಿದ್ದಾರೆ. ಅವರು ಅಂಬಾನಿ, ಅದಾನಿ ಸಾಲ ಮನ್ನಾ ಮಾಡಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಮಾಡುತ್ತೇವೆ. ಕೊಟ್ಟ ಮಾತಿಗೆ ತಪ್ಪಿದರೆ ಒಂದು ಕ್ಷಣ ಅಧಿಕಾರದಲ್ಲಿ ನಾನು ಇರಲ್ಲ. ಯಾರ ಮಾತು ಕೇಳಬೇಡಿ, ನಮಗೆ ಅಧಿಕಾರ ಸಿಗಬೇಕಾದರೆ ನೀವೆಲ್ಲಾ ಕಾಂಗ್ರೆಸ್ ಗೆ ಓಟ್ ಹಾಕಬೇಕಾ? ಕಾಂಗ್ರೆಸ್ ಗೆ ಕೊಡೊ ಒಂದೊಂದು ಓಟು ಸಿದ್ರಾಮಯ್ಯಗೆ ಅನ್ಕೊಂಡು ಹಾಕಿ. ಜಾತಿ, ಹಣ ದಯಮಾಡಿ ನೋಡಬೇಡಿ. ಕೋಮುವಾದಿ ಬಿಜೆಪಿ ಸೋಲಿಸಬೇಕು, ಬೇರು ಸಮೇತ ಕಿತ್ತು ಹಾಕಬೇಕು ಎಂದು ಎಸ್. ಸಿದ್ಧರಾಮಯ್ಯ ಹೇಳಿದರು.
ಇದು ನನ್ನ ಕೊನೆಯ ಚುನಾವಣೆ- ಸಿ. ಎಸ್. ನಾಡಗೌಡ
ಮಾಜಿ ಸಚಿವ ಮತ್ತು ಮುದ್ದೇಬಿಹಾಳ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಿ. ಎಸ್. ನಾಡಗೌಡ ಮಾತನಾಡಿ, ಇದು ನನ್ನ ಕೊನೆ ಚುನಾವಣೆ. ನಾನು ಈ ಬಾರಿ ಕೊನೆ ಚುನಾವಣೆ ಎದುರಿಸುತ್ತೇನೆ. ಇದು ಧರ್ಮ ಹಾಗೂ ಅಧರ್ಮದ ನಡುವೆ ನಡೆಯೋ ಯುದ್ದ ಎಂದು ಹೇಳುವ ಮೂಲಕ ಹಾಲಿ ಮುದ್ದೇಬಿಹಾಳ ಕ್ಷೇತ್ರದ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ವಿರುದ್ದ ಹೆಸರು ಹೇಳದೆ ಆಕ್ರೋಶ ಹೊರ ಹಾಕಿದರು.
ಸ್ಥಳಿಯ ಶಾಸಕರು ತಮ್ಮ ಮನೆಯನ್ನೇ ಆಡಳಿತ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳನ್ನು ಬಳಕೆ ಮಾಡಿ ಪ್ರತಿಪಕ್ಷದವರನ್ನು ಹಣಿಯೋ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕೊನೆ ಹಾಡೋ ಕಾಲ ಬಂದಿದೆ. ಈಮೂಲಕ ಮುಂದಿನ ಚುನಾವಣೆಯಲ್ಲಿ ತಮಗೆ ಬೆಂಬಲಿಸುವಂತೆ ಸಿ. ಎಸ್. ನಾಡಗೌಡ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ, ಶಾಸಕಾರದ ಶಿವಾನಂದ ಎಸ್. ಪಾಟೀಲ, ಯಶವಂತರಾಯಗೌಡ ವಿ. ಪಾಟೀಲ, ಜಮೀರ ಅಹ್ಮದ್, ವಿಧಾನ ಪರಿಷತ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ, ಮಾಜಿ ಸಚಿವ ಸಿ. ಎಸ್. ನಾಡಗೌಡ, ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮುಂತಾದವರು ಉಪಸ್ಥಿತರಿದ್ದರು.