ಲಡಾಖ್ ನಲ್ಲಿ -25°C ತಾಪಮಾನ, ಹೆಪ್ಪುಗಟ್ಟಿದ ಸರೋವರದ ಮೇಲೆ 21 ಕಿ. ಮೀ. ಮ್ಯಾರಾಥನ್: ರಾಜ್ಯದ ಸಿಪಿಐ ಮಹಾಂತೇಶ ಧಾಮಣ್ಣವರ ಮತ್ತೀತರರು ಭಾಗಿ

ವಿಜಯಪುರ: ಲಡಾಖ್ ನಲ್ಲಿ ನಡೆದ ಮೊದಲ ಫ್ರೋಜನ್ ಲೇಕ್ ಮ್ಯಾರಾಥಾನ್ ನಲ್ಲಿ ಕರ್ನಾಟಕದ ಪೊಲೀಸ್ ಅಧಿಕಾರಿ ಸಿಪಿಐ‌ ಮಹಾಂತೇಶ ಧಾಮಣ್ಣವರ ಸೇರಿ 15 ಜನ ಭಾಗಿಯಾಗಿದ್ದು, ಈ ಟ್ರಯಲ್ ರನ್ನಿಂಗ್ ಸ್ಪರ್ಧೆ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ.

ಮ್ಯಾರಾಥಾನ್ ನಲ್ಲಿ ಪಾಲ್ಗೊಂಡ ಮಹಾಂತೇಶ ಧಾಮಣ್ಣವರ ಮತ್ತೀತರರು

ಸಮುದ್ರ ಮಟ್ಟದಿಂದ 13,852 ಕಿ. ಮೀ. ಎತ್ತರದಲ್ಲಿ ಮತ್ತು -25°C ತಾಪಮಾನ ಅಂದರೆ ಶೂನ್ಯಕ್ಕಿಂತ ಕಡಿಮೆ ಉಷ್ಣಾಂಶದಲ್ಲಿ ಈ ಸ್ಪರ್ಧೆ ನಡೆಸಿದೆ. ಅದರಲ್ಲೂ ಭಾರತ ಮತ್ತು ಚೀನಾ ಗಡಿಯಲ್ಲಿರುವ ಪ್ಯಾಂಗಾಂಗ್ ಸರೋವರ ಸುಮಾರು 700 ಚದುರ ಕಿ. ಮೀ. ಹರಡಿದೆ. ಈ ಸರೋವರದ ನೀರು ಈಗ ಹೆಪ್ಪುಗಟ್ಟಿದೆ. ಈ ಸರೋವರದ ನೀರು ಮಂಜುಗಡ್ಡೆಯಾಗಿದ್ದು, ಅದರ ಮೇಲೆಯೇ ಓಡುವ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸರೋವರದ ಲುಕುಂಗ್ ನಿಂದ ಆರಂಭವಾಗಿ ಮಾನ್ ಗ್ರಾಮದ ವರೆಗೆ 4 ಗಂಟೆಗಳ ಕಾಲ ಈ ಸ್ಪರ್ಧೆ ನಡೆಯಿತು. ಬಸವನಾಡು ವಿಜಯಪುರದಿಂದ ಮೂರು ಜನ ಸೇರಿದಂತೆ ಕರ್ನಾಟಕದಿಂದ 15 ಮತ್ತು‌ ದೇಶ ನಾನಾ ರಾಜ್ಯಗಳಿಂದ ಒಟ್ಟು75 ಜನ ಈ ಹಾಫ್ ಮ್ಯರಾಥಾನ್ ನಲ್ಲಿ ಪಾಲ್ಗೊಂಡಿದ್ದರು. ಶರೀರ ಮರಗಟ್ಟುವ ಈ ಚಳಿಯಲ್ಲಿ ಪಾಲ್ಗೊಂಡ ಎಲ್ಲ ಸ್ಪರ್ಧಾಳುಗಳು ಯಾವುದೇ ತೊಂದರೆ ಇಲ್ಲದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ ಎಂದು ಲೇಹ್ ಜಿಲ್ಲಾ ಅಭಿವೃದ್ಧಿ ಆಯುಕ್ತ ಶ್ರೀಕಾಂತ ಬಾಳಾಸಾಹೇಬ ಸೂಸ್ ತಿಳಿಸಿದ್ದಾರೆ.

ಈ ಕುರಿತು ಬಸವನಾಡು ವೆಬ್ ಜೊತೆ ಮಾತನಾಡಿದ ಡಾ. ಮಹಾಂತೇಶ ಧಾಮಣ್ಣವರ, ಈ ಹಾಫ್ ಮ್ಯಾರಾಥಾನ್ ನಲ್ಲಿ ವಿಜಯಪುರದ ಸಂಗಮೇಶ ಪಡಬಾಡ, ರಘು ಸಾಲೋಟಗಿ, ಬೆಳಗಾವಿಯ ಅಮನ್ ಸೇರಿದಂತೆ ಕರ್ನಾಟಕದಿಂದ 15 ಜನ, ಲಡಾಖ್ ಸ್ಥಳೀಯರಾದ 25 ಜನ ಹಾಗೂ ದೇಶದ ನಾನಾ ರಾಜ್ಯಗಳ 35 ಜನ ಸೇರಿದಂತೆ ಒಟ್ಟು 75 ಜನ ಭಾಗವಹಿಸಿದ್ದರು. 21 ಕಿ.ಮೀ. ದೂರದ ಈ ಮ್ಯಾರಾಥಾನ್ ಪೂರ್ಣಗೊಳಿಸಲು 5 ಗಂಟೆಗಳ‌ ಕಾಲಾವಕಾಶ ನೀಡಲಾಗಿತ್ತು. ನಾವು ಕೇವಲ 3 ಗಂಟೆಗಳಲ್ಲಿ ಓಟವನ್ನು ಪೂರ್ಣಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ.

ಈ ಪ್ಯಾಂಗಾಂಗ್ ಸರೋವರ ಚಳಿಗಾಲದಲ್ಲಿ ವಿಶ್ವದಲ್ಲಿಯೇ ಅತೀ ಹೆಚ್ಚ ಹೆಪ್ಪುಗಟ್ಟುತ್ತದೆ. ಅಲ್ಲಿ ಓಡುವುದು ಒಂದು ರೋಮಾಂಚಕ ಅನುಭವ ನೀಡಿದೆ. ಸ್ಪರ್ಧೆಯಲ್ಲಿ ಪಾಲ್ಗೋಳ್ಳಲು ಬೇಕಾದ ಎಲ್ಲ ಸಿದ್ಧತೆಗಳನ್ನು ಮೊದಲೇ ಮಾಡಿಕೊಂಡಿದ್ದೇವು ಎಂದು ಪೊಲೀಸ್ ಇಲಾಖೆಯಲ್ಲಿ ಮ್ಯಾರಾಥಾನ್ ಓಟದ ಮೂಲಕ ಜನಪ್ರೀಯರಾಗಿರುವ ಡಾ. ಮಹಾಂತೇಶ ಧಾಮಣ್ಣವರ ತಿಳಿಸಿದರು.

Leave a Reply

ಹೊಸ ಪೋಸ್ಟ್‌