ಎಂ. ಬಿ. ಪಾಟೀಲ ವಿಧಾನಸಭೆ, ಸರಕಾರದಲ್ಲಿರಬೇಕು- ಅವರಿಗೆ ಮತ ಹಾಕಿದರೆ ನನಗೆ ಹಾಕಿದಂತೆ- ಎಲ್ಲ ಖಾತೆ ನಿರ್ವಹಿಸಬಲ್ಲ ಸಾಮರ್ಥ್ಯವಿದೆ- ಎಂಬಿಪಿ ಗುಣಗಾನ ಮಾಡಿದ ಸಿದ್ಧರಾಮಯ್ಯ

ವಿಜಯಪುರ: ಸಿದ್ಧರಾಮಯ್ಯ ಅವರ ಭಾಷಣವೆಂದರೆ ಬಹುತೇಕ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಳ್ಳುವುದು ಮತ್ತು ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ ಹಾಗೂ ಮುಂದೆ ಅಧಿಕಾರಕ್ಕೆ ಬಂದರೆ ಕೈಗೊಳ್ಳುವ ಯೋಜನೆಗಳ ಬಗ್ಗೆ ಭರ್ಜರಿಯಾಗಿ ಭಾಷಣ ಮಾಡುವುದು ಮಾಮೂಲು.  ಆದರೆ, ಇದೆಲ್ಲಕ್ಕಿಂತ ಭಿನ್ನವಾದ ಪ್ರಚಾರಕ್ಕೆ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಸಾಕ್ಷಿಯಾಯಿತು.

ಬಬಲೇಶ್ವರದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಜನಸಮೂಹ ಕಂಡು ಪುಳಕಿತರಾದ ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ, ಈ ಕ್ಷೇತ್ರದ ಶಾಸಕ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರನ್ನು ಮನಸಾರೆ ಹೊಗಳುವು ಮೂಲಕ ಅವರ ಮೇಲೆ ತಮಗಿರುವ ಪ್ರೀತಿ ಮತ್ತು ಆದಮ್ಯ ವಿಶ್ವಾಸವನ್ನು ಬಹಿರಂಗ ಪಡಿಸಿದರು.

ಬಬಲೇಶ್ವರದಲ್ಲಿ ಪ್ರಜಾಧ್ವನಿ ಯಾತ್ರೆಯನ್ನು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದ ಎಸ್. ಸಿದ್ಧರಾಮಯ್ಯ

ಮೈಕ್ ಬಳಿಗೆ ಬಂದು ಬಾಷಣ ಆರಂಭಿಸುತ್ತಲೇ ಎರಡೂ ಕೈ ಎತ್ತಿ ನಮಸ್ಕರಿಸಿದ ಸಿದ್ರಾಮಯ್ಯ. ನನಗೆ ಮತ್ತು ಎಂ. ಬಿ. ಪಾಟೀಲ ಅವರಿಗೆ ಬಬಲೇಶ್ವರ ಕ್ಷೇತ್ರದ ಜನತೆ ಸಾವಯವ ಬೆಲ್ಲದ ಮೂಲಕ ತುಲಾಭಾರ ಮಾಡುವ ಮೂಲಕ ಪ್ರೀತಿ ತೋರಿಸಿದ್ದೀರೆ.  ಇದು ಒಂದು ವಿಶೇಷವಾದ ಕಾರ್ಯಕ್ರಮ.  ಇದಕ್ಕೆ ಕಾರಣ ವಿಜಯಪುರ ಜಿಲ್ಲೆ ಈ ಮುಂಚೆ ಬರಡು ಜಿಲ್ಲೆ ಆಗಿತ್ತು.  ಆ ಜಿಲ್ಲೆಗೆ ನಾನು ಸಿಎಂ ಆಗಿದ್ದಾಗ ಎಂ. ಬಿ. ಪಾಟೀಲ ನೀರಾವರಿ ಸಚಿವರಾಗಿದ್ದರು.  ರೈತರಿಗೆ ನೀರು ಕೊಟ್ಟಿದ್ದೇವೆ, ಅದಕ್ಕಾಗಿ ಕೃತಜ್ಞತಾ ಪೂರ್ವಕವಾಗಿ ತುಲಾಭಾರ ಮಾಡ್ತಿವಿ ಎಂದು ನೀವು ಹೇಳಿದ್ದೀರಿ.  ಅದಕ್ಕಾಗಿ ನಿಮ್ಮೆಲ್ಲರಿಗೂ ಕೂಡ ನಾನು ಧನ್ಯವಾದ ಹೇಳ್ತೆನೆ.  ನಾವು ನೀರು ಕೊಟ್ಟಿರುವಂತದ್ದು ಬಹಳ ದೊಡ್ಡ ಉಪಕಾರ ಅಲ್ಲ.  ಎಲ್ಲಿ ನೀರು ಸಿಗುತ್ತೊ, ನೀರು ರೈತರಿಗೆ ಅಗತ್ಯ ಇದೆ ಅಂತಹ ಪ್ರದೇಶದಲ್ಲಿ ನೀರು ಕೊಡಬೇಕಾಗಿರುವುದು ಯಾವುದೇ ಸರಕಾರದ ಕರ್ತವ್ಯವಾಗಿದೆ.  ನಾನು ಎಂ. ಬಿ. ಪಾಟೀಲ ಹಾಗೂ  ನಮ್ಮ ಸರಕಾರ ಆ ಕರ್ತವ್ಯ ನಿರ್ವಹಿಸಿ ನೀರು ಕೊಟ್ಟಿದ್ದೇವೆ.  ಅದು ನಮ್ಮ ಕರ್ತವ್ಯ, ನಾನು ದೊಡ್ಡಸ್ತಿಕೆ ಮಾಡಿಲ್ಲಾ, ಇದು ನಮ್ಮ ಕೆಲಸ ಎಂದು ಹೇಳಿದರು.

ಎಂ. ಬಿ. ಪಾಟೀಲರ ಗುಣಗಾನ

ಎಂ. ಬಿ. ಪಾಟಿಲ ಅವರಿಗೆ ನೀರಾವರಿ ಕೊಡುವಾಗ ನನಗೆ ಸಂಶಯ ಇತ್ತು.  ಸಂಶಯದಿಂದಲೇ ಖಾತೆ ಕೊಟ್ಟಿದ್ದೆ.  ಬಳಿಕ ಕೆಲವೇ ದಿನಗಳಲ್ಲಿ ಅವರು ಆ ಖಾತೆಯನ್ನು ಬಹಳ ಸಮರ್ಥವಾಗಿ ನಿಭಾಯಿಸ್ತಾರೆ ಎಂದು ಗೊತ್ತಾಯ್ತು.  ಐದು ವರ್ಷದಲ್ಲಿ ರಾಜ್ಯದ ಅನೇಕ ಭಾಗಕ್ಕೆ ನೀರು ಕೊಡುವ ಕೆಲಸ ಮಾಡಿದ್ದೇವೆ.  ನಾನು ಎಂ. ಬಿ. ಪಾಟೀಲ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೆ.  ಸರಕಾರಕ್ಕೆ ಹೆಸರು ತರಬೇಕು.  ಜನರಿಗೆ ಒಳ್ಳೆಯ ಕೆಲಸ ಮಾಡಬೇಕು ಎಂದು ಹೇಳಿದ್ದೆ.  ಎಂ. ಬಿ. ಪಾಟೀಲ ಅವರಿಗೆ ವಹಿಸಿದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ.  ಹೀಗಾಗಿ ಎಂ. ಬಿ. ಪಾಟೀಲ ಅವರನ್ನು ಆಧುನಿಕ ಭಗೀರಥ ಎಂದು ಕರೆಯುತ್ತಾರೆ.  ನನಗೆ ಕರೆದಿಲ್ಲ.  ಆದರೆ, ನನಗೆ ಹೆಮ್ಮೆ ಇದೆ‌.  ನನ್ನ ಮಂತ್ರಿಮಂಡಲದ ಓರ್ವನಿಗೆ ಆಧುನಿಕ ಭಗೀರಥ ಎಂದು ಕರೀತಾರಲ್.  ಇದಕ್ಕಿಂತ ಹೆಮ್ಮೆ ಏನಿದೆ? ಎಂದು ಸಂತಸ ವ್ಯಕ್ತಪಡಿಸಿದರು.

 

ಎಂ. ಬಿ. ಪಾಟೀಲಗೆ ಮತ ಹಾಕಿದರೆ ನನಗೆ ಓಟು ಹಾಕಿದಂತೆ

ಇದೇ ವೇಳೆ, ನಾನು ಈ ಹಿಂದೆ ಎಂ. ಬಿ. ಪಾಟೀಲ ಪರವಾಗಿ ಹಾಗೂ ಅದಕ್ಕಿಂತಲೂ ಮುಂಚೆ ವಿರುದ್ಧವಾಗಿ ಪ್ರಚಾರಕ್ಕೆ ಬಂದಿದ್ದೇನೆ.  ಇನ್ನೊಂದು ಸಾರಿ ತಿಕೋಟಾ ಭಾಗಕ್ಕೆ ಬರ್ತಿನಿ.  ಎಂ‌. ಬಿ. ಪಾಟೀಲ ಜನಪರ ಕಾಳಜಿ ಇರುವ ವ್ಯಕ್ತಿ.  ಕಳೆದ ಬಾರಿ 30 ಸಾವಿರ ಲೀಡ್ ನಿಂದ ಗೆದ್ದಿದ್ದರು.  ಈ ಬಾರಿ ನೀವು 50 ಸಾವಿರ ಲೀಡ್ ಕೊಡಬೇಕು.  ಎಂ. ಬಿ. ಪಾಟೀಲ ಅವರಿಗೆ ಮತ ಹಾಕಿದರೆ ನನಗೆ ಓಟು ನೀಡಿದಂತೆ ಎಂದು ಅವರು ಹೇಳಿದರು.

ಜೆಡಿಎಸ್ ವಿರುದ್ಧ ಟೀಕಾ ಪ್ರಹಾರ

ಇದೇ ವೇಳೆ ಜೆಡಿಎಸ್ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ಜೆಡಿಎಸ್ ಅವಕಾಶವಾದಿಗಳು.  ನಾವು ಗೆದ್ದರೆ ನಮ್ಮ ಜೊತೆ ಬರುತ್ತಾರೆ.  ಬಿಜೆಪಿ ಗೆದ್ದರೆ ಅವರ ಜೊತೆ ಹೋಗ್ತಾರೆ.  ಈ‌ ಚುನಾವಣೆಯಲ್ಲಿ ವಿಜಯಪುರ ಹಾಗೂ ಬಾಗಲಕೋಟೆ ಎರಡೂ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಓಟ್ ಹಾಕಿಸಬೇಕು ಎಂದು ಎಸ್. ಸಿದ್ಧರಾಮಯ್ಯ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ ಖಾನ್, ಎಚ್. ಸಿ. ಮಹಾದೇವಪ್ಪ, ವಿಧಾನ ಪರಿಷತ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ, ಶಾಸಕ ಯಶವಂತರಾಯಗೌಡ ವಿ. ಪಾಟೀಲ, ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿದರು.

 

ಈ ಕಾರ್ಯಕ್ರಮದಲ್ಲಿ ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡುನವರ, ಮುಖಂಡರಾದ ಎಸ್. ವಿ. ಪಾಟೀಲ, ವಿ. ಎಸ್. ಪಾಟೀಲ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

ಡಾ. ಮಹಾಂತೇಶ ಬಿರಾದಾರ ಮತ್ತು ಸಂಗಮೇಶ ಬಬಲೇಶ್ವರ ಕಾರ್ಯಕ್ರಮ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌