ವಿಜಯಪುರ: ಪೌರಕಾರ್ಮಿಕರ ಮಕ್ಕಳ ಶಿಕ್ಷಣ, ಕಾರ್ಮಿಕರ ಆರೋಗ್ಯ, ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಕೋಟೆ ಅವರು ಹೇಳಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಮತ್ತು ಅಭಿವೃದ್ದಿ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಾಭಿವೃದ್ದಿ ಕೋಶ ಹಾಗೂ ಸಮಾಜ ಕಲ್ಯಾಣ ಇಲಾಖೆ ವಿಜಯಪುರ ಇವರ ಸಂಯುಕ್ತಾಶ್ರದಲ್ಲಿ ಗುರುವಾರ ಹಮ್ಮಿಕೊಂಡ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಫಾಯಿ ಕರ್ಮಚಾರಿಗಳಿಗೆ ಎಂ. ಎಸ್. ಕಾಯ್ದೆ-2013 ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ, ಡಾ. ಬಾಬು ಜಗಜೀವನರಾಂ, ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಸಫಾಯಿ ಕರ್ಮಚಾರಿಗಳಿರುವ ಪ್ರತಿ ಜಿಲ್ಲೆಗಳಿಗೆ ಭೇಟಿ ನೀಡಿ ಪೌರಕಾರ್ಮಿಕ ಕುಂದು-ಕೊರತೆಗಳನ್ನು ಆಲಿಸಿ, ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಸಫಾಯಿ ಕರ್ಮಚಾರಿಗಳ ಹಿತರಕ್ಷಣೆಗಾಗಿ ಸರ್ಕಾರ ಜಾರಿಗೊಳಿಸಿರುವ ಮ್ಯಾನ್ಯುವಲ್ ಸ್ಕ್ಯಾವೆಂಜರ್ಸ್ (ಮ್ಯಾನ್‌ಹೋಲ್‌ಗೆ ಇಳಿದು ಬರಿಗೈಯಲ್ಲಿ ಸ್ವಚ್ಛ ಮಾಡುವವರು) ನಿಷೇಧಗೊಳಿಸಿದ್ದು, ಪುನರ್‌ವಸತಿ ಕಲ್ಪಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಪೌರಕಾರ್ಮಿಕರು ಉತ್ತಮ ಬದುಕು ರೂಪಿಸಿಕೊಳ್ಳಲು ಆಯೋಗದಿಂದ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಯೋಗದ ವತಿಯಿಂದ ಸಫಾಯಿ ಕರ್ಮಚಾರಿಗಳ ಕುಂದು-ಕೊರತೆಗಳನ್ನು ಪರಿಶೀಲಿಸಿ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು, ಅವರ ಪುನರ್ವಸತಿಗಾಗಿ ಸರ್ಕಾರ ರೂಪಿಸಿರುವ ನೀತಿ-ನಿಯಮಗಳ ಅರಿವು ಮೂಡಿಸಲಾಗುತ್ತಿದೆ, ಪೌರಕಾರ್ಮಿಕರಿಗೆ ನೀಡುವ ಅಗತ್ಯ ಮೂಲಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಲು ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೌರಕಾರ್ಮಿಕರಿದ್ದು, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ವಿಶ್ರಾಂತಿ ಗೃಹವನ್ನು ನಿರ್ಮಿಸಲು ತೀರ್ಮಾನಿಸಲಾಗಿದ್ದು, ಮುಖ್ಯಮಂತ್ರಿ ಆಶಯದಂತೆ ಪ್ರತಿ ಮಹಿಳೆಗೆ ಇಲೆಕ್ಟಾçನಿಕ್ ಸ್ಕೂಟ್ ಒದಗಿಸುವ ಉದ್ದೇಶ ಸಹ ಹೊಂದಲಾಗಿದೆ. ಕಾರ್ಮಿಕರಿಗೆ ಶಿಕ್ಷಣ, ವಸತಿ ಆರೋಗ್ಯಕ್ಕಾಗಿ, ಪೌರಕಾರ್ಮಿಕರ ಹಿತಕ್ಕಾಗಿ ಹಲವು ಯೋಜನೆಗಳನ್ನು ಸರಕಾರ ಜಾರಿಗೊಳಿಸಿದೆ ಎಂದು ಹೇಳಿದರು.
ಲೋರ‍್ಸ್, ಡ್ರೈವರ್, ಕ್ಲಿನರ್ ಅವರನ್ನು ನೇರ ಪಾವತಿಗೆ ಒಳಪಡಿಸಲು ಕ್ರಮ ವಹಿಸಲಾಗುತ್ತಿದೆ. ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಪೌರಕಾರ್ಮಿಕರ ಕಾರ್ಯ ಅನನ್ಯವಾಗಿದ್ದು, ಇವರ ಹಿತ ಕಾಪಾಡುವುದು ಸಹ ನಮ್ಮ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಆಯೋಗದಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಮಾತನಾಡಿ, ಜಿಲ್ಲೆಯಲ್ಲಿ ಮಹಾನಗರ ಪಾಲಿಕೆ ಸ್ಥಳೀಯ ಸಂಸ್ಥೆಗಳಲ್ಲಿ ೧೦೨೨ ಪೌರ ಕಾರ್ಮಿಕರ ಹುದ್ದೆ ಮುಂಜೂರಾಗಿದ್ದು, ಅದರಲ್ಲಿ ೫೦೮ ಜನ ನೇರ ಪಾವತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಒಟ್ಟಾಗಿ ೮೦೧ ಜನ ಪೌರಕಾರ್ಮಿಕರ ಕೆಲಸ ಮಾಡುತ್ತಿದ್ದಾರೆ. ಎಲ್ಲ ಪೌರಕಾರ್ಮಿಕರ ವೇತನವನ್ನು ಸಕಾಲದಲ್ಲಿ ಪಾವತಿ ಮಾಡಲಾಗುತ್ತಿದೆ. ಅದೇ ರೀತಿ ೩೪ ನೌಕರರಿಗೆ ಗ್ರೂಪ ಡಿ ಹುದ್ದೆಯಿಂದ ಸಿ ವೃಂದಕ್ಕೆ ಮುಂಬಡ್ತಿಗೆ ಪರಿಗಣಿಸಲಾಗಿದೆ. ನೇರ ಪಾವತಿಯಡಿ ಕಾರ್ಯ ನಿರ್ವಹಿಸುವ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಕೆಲವೇ ದಿನಗಳಲ್ಲಿ ಖಾಯಂಗೊಳಿಸುವ ಪಟ್ಟಿ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ಗೃಹಭಾಗ್ಯ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ 244 ಮನೆಗಳಿಗೆ ಅನುಮೋದನೆ ನೀಡಿದ್ದು, ೪೪ ಮನೆಗಳು ಪೂರ್ಣಗೊಂಡಿವೆ. ಉಳಿದ ಮನೆ ನಿರ್ಮಾಣದ ಹಂತ ಪ್ರಗತಿಯಲ್ಲಿದೆ. ಮಹಾನಗರ ಪಾಲಿಕೆ ಹಾಗೂ ಬಸವನ ಬಾಗೇವಾಡಿ ಪುರಸಭೆ ಪ್ರಧಾನಮಂತ್ರಿ ಆವಾಸ ಯೋಜನೆಯಡಿ ಮನೆ ನಿರ್ಮಾಗೊಳ್ಳುತ್ತಿದ್ದು, ಸುಮಾರು ೨೪ ನೇರ ಪಾವತಿ ಪೌರಕಾರ್ಮಿಕರಿಗೆ ಮನೆಗಳ ಹಂಚಿಕೆ ಮಾಡಲು ಆಯ್ಕೆ ಮಾಡಲಾಗಿದೆ. ಮನೆ ಮಂಜೂರು ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಜಿಲ್ಲೆಯ ವಸತಿ ಶಾಲೆಗಳಲ್ಲಿ ಪ್ರತಿಶತ ಶೇ. ೫ರಷ್ಟು ಪೌರಕಾರ್ಮಿಕರ ಮಕ್ಕಳಿಗೆ ವಸತಿ ಕಲ್ಪಿಸಲಾಗಿದೆ. ಈ ಕುರಿತು ಸ್ಥಳೀಯ ಸಂಸ್ಥೆ ಅಧಿಕಾರಿಗಳು ಸಹ ಪೌರಕಾರ್ಮಿಕರಲ್ಲಿ ಅರಿವು ಮೂಡಿಸಿ, ಇದರ ಸದುಪಯೋಗ ಪಡೆದುಕೊಳ್ಳಬೇಕು.
ವಿಜಯಪುರದ ನಡೆದಾಡುವ ದೇವರು ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಅಂತಿಮ ಯಾತ್ರೆ, ಅಂತಿಮ ದರ್ಶನ, ಸಂದರ್ಭದಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದ ಸಂದರ್ಭದಲ್ಲಿ ನಗರ ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಅತ್ಯಂತ ಮೆಚ್ಚುವಂತದ್ದಾಗಿದೆ. ರೈತರು, ಸೈನಿಕರಂತೆ ಸ್ವಚ್ಛತೆಯನ್ನು ಕೈಗೊಳ್ಳುವ ಪೌರ ಕಾರ್ಮಿಕರು ಈ ದೇಶ ಕಟ್ಟುವಲ್ಲಿ ಇವರ ಕಾರ್ಯ ಅಮೂಲ್ಯವಾಗಿದೆ. ಪೌರ ಕಾರ್ಮಿಕರಿಗೆ ಪ್ರತಿ ತಿಂಗಳಿಗೊಮ್ಮೆ ಆರೋಗ್ಯ ಚಿಕಿತ್ಸೆ ವ್ಯವಸ್ಥೆಯನ್ನು ಒದಗಿಸಿ ಅವರ ಆರೋಗ್ಯ ರಕ್ಷಣೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಅವರು ಹೇಳಿದರು.
ಎಸ್ಪಿ ಎಚ್. ಡಿ. ಆನಂದಕುಮಾರ ಮಾತನಾಡಿ, ತಮ್ಮ ಆರೋಗ್ಯವನ್ನು ಬದಿಗೊತ್ತಿ ಜನರ ಆರೋಗ್ಯ ಕಾಪಾಡುವುದು ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿ, ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಕಾರ್ಯ ಮಾಡಬೇಕು. ಪೌರಕಾರ್ಮಿಕರು ಸರ್ಕಾರ ಜಾರಿಗೊಳಿಸಿದ ಸುರಕ್ಷತೆಯ ಮಾರ್ಗಸೂಚಿಗಳನ್ನು ಅರಿತುಕೊಂಡು ಪಾಲಿಸುವುದರ ಮೂಲಕ ತಮ್ಮ ಆರೋಗ್ಯ ರಕ್ಷಣೆಗೆ ಮುಂದಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಮೂಲಕ ಉನ್ನತ ಸ್ಥಾನಕ್ಕೆ ಪ್ರೇರೇಪಿಸಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ ರಚನೆಯ ಸಾವಿನೊಂದಿಗೆ ಸಂವಾದ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು. ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರ ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ ನೀಡಲಾಯಿತು. ಸಫಾಯಿ ಕರ್ಮಚಾರಿಗಳ ಎಂ.ಎಸ್.ಕಾಯ್ದೆ ೨೦೧೩ರ ಬಗ್ಗೆ ಅರಿವು ಮೂಡಿಸುವ ನಾಟಕ ಪ್ರದರ್ಶನ ನಡೆಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಮಹಾನಗರ ಪಾಲಿಕೆ ಆಯುಕ್ತರು ವಿಜಯ ಮೆಕ್ಕಳಕಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ ಕನ್ನೋಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ ಡಂಬಳ, ಭೀಮರಾಯ ಜಿಗಜಿಣಗಿ ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ಉಪಸ್ಥಿತರಿದ್ದರು.