ಉತ್ತರ ಕರ್ನಾಟಕ ಶೈಲಿಯ ಸವಿಯೂಟ ಮಾಡಿದ ಸಿದ್ಧರಾಮಯ್ಯ, ಎಂ ಬಿ ಪಾಟೀಲ- ಅಭಿಮಾನಿಗಳಿಂದ ಸಾವಯವ ಬೆಲ್ಲದಿಂದ ತುಲಾಭಾರ, ಒಣದ್ರಾಕ್ಷಿ ಹಾರ ಹಾಕಿ ಗೌರವ

ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆ ಅತಿಥಿ ಸತ್ಕಾರಕ್ಕೆ ಸದಾ ಮುಂದು.  ಬಸವಾದಿ ಶರಣರ ಕಾಯಕಗಳಿಂದ ಪ್ರಭಾವಿತರಾಗಿರುವ ಇಲ್ಲಿನ ಜನ ತಮಗೆ ಉಪಕಾರ ಮಾಡಿರುವವರನ್ನು ಪ್ರೀತಿ ಮತ್ತು ಆದರಗಳಿಂದ ಆತ್ಮೀಯವಾಗಿ ಸನ್ಮಾನಿಸಿ ಗೊರವಿಸುವುದು ಇಲ್ಲಿನ ಮಣ್ಣಿನ ಗುಣಲಕ್ಷಣವಾಗಿದೆ.

ಇದಕ್ಕೆ ಪೂರಕವಾಗಿದ್ದು ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಅವರು ಬಬಲೇಶ್ವರದಲ್ಲಿ ಕೈಗೊಂಡ ಪ್ರಜಾಧ್ವನಿ ಯಾತ್ರೆ.  ಈ ಕಾರ್ಯಕ್ರಮದ ಅಂಗವಾಗಿ ಬಬಲೇಶ್ವರಕ್ಕೆ ಬಂದಿದ್ದ ಸಿದ್ಧಾರಾಮಯ್ಯ ಅವರನ್ನು ವಿಜಯಪುರ ಜಿ. ಪಂ. ಮಾಜಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಮುಖಂಡ ವಿ. ಎಸ್. ಪಾಟೀಲ ಅವರ ತೋಟದ ಮನೆಯಲ್ಲಿ ಉತ್ತರ ಕರ್ನಾಟಕದ ತರಹೇವಾರಿ ಖಾದ್ಯಗಳನ್ನು ಬಡಿಸುವ ಭೋಜನದ ಮೂಲಕ ಗಮನ ಆದರಾತಿಥ್ಯ ನೀಡಲಾಯಿತು.

ವಿಜಯಪುರ ಶೈಲಿಯ ಊಟ ಸವಿದ ಸಿದ್ಧರಾಮಯ್ಯ

ವಿಜಯಪುರ ಜಿಲ್ಲೆಯಲ್ಲಿ ಉತ್ತರ ಕರ್ನಾಟಕ ಶೈಲಿನ ಊಟ ಸವಿದ ಮಾಜಿ ಸಿಎಂ ಸಿದ್ದರಾಮಯ್ಯ, ವಿ. ಎಸ್. ಪಾಟೀಲ ಅವರ ನಿವಾಸದಲ್ಲಿ ಜವಾರಿ ಊಟ ಮಾಡಿದರು.   ಮಾಜಿ ಸಚಿವ ಎಂ. ಬಿ. ಪಾಟೀಲ, ಎಚ್. ಸಿ. ಮಹಾದೇವಪ್ಪ ಮುಂತಾದವರು ಕೂಡ ಸವಿಭೋಜನ ಮಾಡಿದರು.

ಬಿಳಿ ಜೋಳದ ಖಡಕ್ ರೊಟ್ಟಿ, ಸಜ್ಜಿ ರೊಟ್ಟಿ, ಬಿಸಿ ಜೋಳದ ರೊಟ್ಟಿ, ಚಪಾತಿ, ದಪಾಟಿ, ಜೋಳದ ಕಡಬು, ಬದನೆಕಾಯಿ ಎಡಗಾಯಿ ಪಲ್ಯ, ನಾನಾ ಕಾಳುಗಳ ಪಲ್ಯ, ಬೆಣ್ಣಿ, ಕೆಂಪು ಮೆಣಸಿನಕಾಯಿ ಚಟ್ನಿ, ಮೊಸರು, ಮಜ್ಜಿಗೆ, ಶೆಂಗಾ ಹಿಂಡಿ, ಅಗಸಿ ಹಿಂಡಿ ಮಾವಿನಕಾಯಿ ಉಪ್ಪಿನಕಾಯಿ, ರುಚಿಕಟ್ಟಾದ ಮಾದಲಿ, ಸಿಹಿಯಾದ ಶೇಂಗಾ ಹೋಳಿಗೆ, ಪ್ರೂಟ್ ಸಲಾಡ್ ಮೃಷ್ಟಾನ್ನ ಭೋಜನ ಸವಿದ ನಾಯಕರು ಸಂತೃಪ್ತರಾದರು.  ವಿ. ಎಸ್. ಪಾಟೀಲ ಅವರ ಪತ್ನಿ ಮತ್ತು ಪುತ್ರಿ ನಾಯಕರಿಗೆ ಊಟ ಬಡಿಸಿ ಮನೆಗೆ ಬಂದ ಅತಿಥಿಗಳಿಗೆ ಗೌರವಿಸಿದರು.

ಹೆಚ್ಚಾಗಿ ಮಾಂಸಾಹಾರ ಇಷ್ಟ ಪಡುವ ಸಿದ್ದರಾಮಯ್ಯ ಉತ್ತರ ಕರ್ನಾಟಕ ಶೈಲಿಯ ಊಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.  ಅಪ್ಪಟ ಶಾಖಾಹಾರಿ ಊಟಕ್ಕೆ ಮನಸೋತ ಸಿದ್ದರಾಮಯ್ಯ ಊಟದ ಬಳಿಕ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೋಂಡರು.

ಗಮನ ಸೆಳೆದ ಸಾವಯವ ಬೆಲ್ಲದ ತುಲಾಭಾರ

ಎಸ್. ಸಿದ್ಧರಾಮಯ್ಯ 2013ರಲ್ಲಿ ಸಿಎಂ ಆಗಿದ್ದಾಗ ಎಂ. ಬಿ. ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿದ್ದರು.  ಈ ಸಂದರ್ಭದಲ್ಲಿ ಅವರು, ಬರದ ನಾಡು ಎಂದೇ ಹೆಸರಾಗಿದ್ದ ಬಸವನಾಡಿನಲ್ಲಿ ಜಲಕ್ರಾಂತಿ ಮಾಡುವ ಮೂಲಕ ಭೂತಾಯಿ ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದರು.  ಅವರು ಅಂದು ಮಾಡಿದ ನೀರಾವರಿ ಯೋಜನೆಗಳು ಇಂದು ತಮ್ಮ ಬಾಳನ್ನು ಹಸನು ಮಾಡಿದ್ದರಿಂದ ಈ ಭಾಗದಲ್ಲಿ ಅನ್ನದಾತರು ತುಂಬಾ ಸಂತಸದಲ್ಲಿದ್ದಾರೆ.  ಹೀಗಾಗಿ, ತಮ್ಮ ಜೀವನಮಟ್ಟ ಸುಧಾರಣೆಗೆ ಕಾರಣರಾಗಿರುವ ಎಸ್. ಸಿದ್ಧರಾಮಯ್ಯ ಅವರನ್ನು ಈ ರೈತರು ತಮ್ಮ ಹೊಲದಲ್ಲಿ ಬೆಳೆದ ಕಬ್ಬಿನಿಂದ ತಯಾರಿಸಿದ ಸಾವಯವ ಬೆಲ್ಲದಿಂದ ತುಲಾಭಾರ ನಡೆಸುವ ಮೂಲಕ ಕೃತಜ್ಞತೆ ಸಲ್ಲಿಸಿದರು.  ಆಗ ನೆರೆದ ಜನ ಸಂತೋಷದಿಂದ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದು ಜನಮನ ಸೆಳೆಯಿತು.

ಇದೇ ವೇಳೆ, ತಮ್ಮ ಬಾಳು ಹಸನಾಗಿಸಿದ ಆಧುನಿಕ ಭಗೀರಥ ಎಂ. ಬಿ. ಪಾಟೀಲರನ್ನು ಬಬಲೇಶ್ವರ ಮತಕ್ಷೇತ್ರದ ರೈತ ಬಾಂಧವರು ನಾಣ್ಯಗಳಿಂದ ತುಲಾಭಾರ ಮಾಡಿದ್ದೂ ಗಮನ ಸೆಳೆಯಿತು.

ದ್ರಾಕ್ಷಿ ಬೆಳೆಗಾರರೂ ಕೂಡ ವಿಶೇಷವಾಗಿ ಸನ್ಮಾನಿಸುವ ಮೂಲಕ ಗಮನ ಸೆಳೆದರು.  ಈ ಭಾಗದಲ್ಲಿ ನೀರಾವರಿ ಪ್ರದೇಶ ಹೆಚ್ಚಿದ್ದರಿಂದ ದ್ರಾಕ್ಷಿ ಬೆಳೆಗಾರರ ಸಂಖ್ಯೆಯೂ ಹೆಚ್ಚಾಗಿದೆ.  ಅಷ್ಟೇ ಅಲ್ಲ, ಈ ಮುಂಚೆ ದ್ರಾಕ್ಷಿ ಬೆಳೆಯಲು ನೀರು ಖರೀದಿಸಲು ಸಾಕಷ್ಟು ಹಣ ವ್ಯಯಿಸುತ್ತಿದ್ದ ರೈತರು, ಈಗ ಜಲಕ್ರಾಂತಿಯಿಂದಾಗಿ ಬೆಳೆ ರಕ್ಷಣೆಗೆ ಟ್ಯಾಂಕರ್ ನೀರು ಖರೀದಿಗಾಗಿ ಲಕ್ಷಾಂತರ ಹಣ ಖರ್ಚು ಮಾಡುತ್ತಿದ್ದ ರೈತರಿಗೆ ಈಗ ಆ ಬವಣೆ ತಪ್ಪಿದ್ದು, ಹಣದ ಉಳಿತಾಯದ ಜೊತೆಗೆ ಹೆಚ್ಚುವರಿ ಇಳುವರಿ ಸಿಗುತ್ತಿದೆ.  ಇದರಿಂದ ಸಂತೃಪ್ತರಾಗಿರುವ ರೈತರು ತಮ್ಮ ಹೊಲದಲ್ಲಿ ಬೆಳೆದ ದ್ರಾಕ್ಷಿಯಿಂದ ತಯಾರಾದ ಒಣದ್ರಾಕ್ಷಿ ಅಂದರೆ ಮಣೂಕುಗಳಿಂದ ತಯಾರಿಸಲಾದ ಹಾರವನ್ನು ಹಾಕುವ ಸಿದ್ಧರಾಮಯ್ಯ ಮತ್ತು ಎಂ. ಬಿ. ಪಾಟೀಲ ಅವರಿಗೆ ಹಾಕುವ ಮೂಲಕ ಮನಸಾರೆ ಕೃತಜ್ಞತೆ ಸಲ್ಲಿಸಿದರು.  ಇದರ ಜೊತೆಗೆ ಕುರಿಯ ಉಣ್ಣೆಯಿಂದ ತಯಾರಾದ ಕಂಬಳಿಯನ್ನು ನಾಯಕರ ಹೆಗಲ ಮೇಲೆ ಹಾಕುವ ಮೂಲಕ ಚುನಾವಣೆ ಪ್ರಚಾರಕ್ಕೆ ಭರ್ಜರಿಯಾಗಿಯೇ ಬೆಂಬಲ ವ್ಯಕ್ತಪಡಿಸಿದರು.

ಈ ಮುಂಚೆ ಚೀನಾ ವಿರುದ್ಧ ನಡೆದ ಯುದ್ಧದಲ್ಲಿ ಬಸವನಾಡು ವಿಜಯಪುರದ ಜನ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಮತ್ತು ಅಂದಿನ ಸಿಎಂ ಎಸ್. ನಿಜಲಿಂಗಪ್ಪ ಅವರನ್ನು ಚಿನ್ನದಿಂದ ತುಲಾಭಾರ ಮಾಡಿದ್ದರು.  ಈಗ ನೀರಾವರಿ ಮತ್ತು ಅದರಿಂದ ಆಗಿರುವ ಅಭಿವೃದ್ಧಿ ಕಾರ್ಯಗಳಿಂದ ಖುಷ್ ಆಗಿರುವ ಅನ್ನದಾತರು ಈ ಕಾರ್ಯಕ್ರಮದಲ್ಲಿ ತಾವು ಬೆಳೆದ ಬೆಳೆಗಳಿಂದ ತಯಾರಾದ ಉತ್ಪನ್ನಗಳಿಂದ ನಾಯಕರನ್ನು ಸನ್ಮಾನಿಸಿ ಗೌರವಿಸಿದ್ದು, ಈ ಭಾಗದ ಜನರ ಆದರದ ಪ್ರೀತಿಗೆ ಸಾಕ್ಷಿಯಾಗಿತ್ತು.

ಇದೇ ವೇಳೆ, ಸಿದ್ಧರಾಮಯ್ಯ, ಎಂ. ಬಿ. ಪಾಟೀಲ ಹಾಗೂ ಇತರ ನಾಯಕರು ಕಾಂಗ್ರೆಸ್ ಘೋಷಿಸಿರುವ ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಗ್ಯಾರಂಟಿ ಕಾರ್ಡನ್ನು ಸಾಂಕೇತಿಕವಾಗಿ ಕೆಲವು ಮಹಿಳೆಯರಿಗೆ ವಿತರಿಸಿದರು.

 

Leave a Reply

ಹೊಸ ಪೋಸ್ಟ್‌