ವಿಜಯಪುರ: ಬಿಜೆಪಿ ಸರಕಾರ ವಾಮಮಾರ್ಗದಿಂದ ಅಧಿಕಾರಕ್ಕೆ ಬರುವ ಚಾಳಿ ರೂಢಿಸಿಕೊಂಡಿದೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಅದರ ಆಟ ನಡೆಯುವುದಿಲ್ಲ. ಜನ ಕಾಂಗ್ರೆಸ್ ಸರಕಾರವನ್ನು ಖಂಡಿತವಾಗಿ ಅಧಿಕಾರಕ್ಕೆ ತರುತ್ತಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ನಾಗಠಾಣ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕಾಂತಾ ನಾಯಕ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬಿಜೆಪಿ ಸದಾ ಸುಳ್ಳುಗಳನ್ನು ಹೇಳುವ ಮೂಲಕ ಅಧಿಕಾರಕ್ಕೆ ಬಂದು ಜನರನ್ನು ಸಂಕಷ್ಟಕ್ಕೀಡು ಮಾಡುತ್ತಿದೆ. ಆದರೆ ಈ ಬಾರಿ ಬಿಜೆಪಿಯ ಸುಳ್ಳು ಭರವಸೆಗಳನ್ನು ಜನರು ನಂಬುವುದಿಲ್ಲ. ಈಗಾಗಲೇ ಕಳೆದ ಚುನಾವಣೆಯಲ್ಲಿ ಬಿಜೆಪಿ ಮಾತು ಕೊಟ್ಟಿದ್ದ ಭರವಸೆಗಳಲ್ಲಿ ಕನಿಷ್ಠ ಶೇ. 20ರಷ್ಟನ್ನೂ ಈಡೇರಿಸಿಲ್ಲ. ಆದರೆ ಕಾಂಗ್ರೆಸ್ ಕೊಟ್ಟ ಮಾತಿನಂತೆ ಸದಾ ನಡೆದುಕೊಳ್ಳುವ ಮೂಲಕ ಜನರ ವಿಶ್ವಾಸವನ್ನು ಗಳಿಸಿಕೊಂಡಿದೆ ಎಂದು ಹೇಳಿದರು.
ಈ ಬಾರಿ 200 ಯ್ಯೂನಿಟ್ ಉಚಿತ್ ವಿದ್ಯುತ್, ಮನೆಯ ಯಜಮಾನಿಗೆ ಪ್ರತಿ ತಿಂಗಳು ರೂ. 2000 ಹಣ ನೀಡುವುದು ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಯೊಂದು ಕುಟುಂಬಕ್ಕೆ 10 ಕೆಜಿ ಉಚಿತ ಅಕ್ಕಿಯನ್ನು ವಿತರಿಸಲಿರುವ ಗ್ಯಾರಂಟಿ ಘೋಷಣೆಗಳನ್ನು ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ, ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ದರಾಮಯ್ಯ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರ ನೇತೃತ್ವದಲ್ಲಿ ಘೋಷಣೆ ಮಾಡಲಾಗಿದೆ. ಇದರ ಜೊತೆಗೆ ಇನ್ನು ಹತ್ತು ಹಲವಾರು ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಘೋಷಣೆ ಮಾಡಲಿದ್ದು, ಒಮ್ಮೆ ಅಧಿಕಾರಕ್ಕೆ ಬಂದರೆ ಕೊಟ್ಟ ಮಾತುಗಳನ್ನು ಖಚಿತವಾಗಿ ಈಡೇರಿಸುವಂಥ ಕೆಲಸವನ್ನು ಕಾಂಗ್ರೆಸ್ ಪಕ್ಷ ಈ ಹಿಂದೆಯೂ ಮಾಡಿದೆ ಮತ್ತು ಮುಂದೆಯೂ ಮಾಡುತ್ತದೆ ಎಂದು ಕಾಂತಾ ನಾಯಕ ತಿಳಿಸಿದ್ದಾರೆ.