ಕಾನಿಪ ರಾಜ್ಯ ಮಟ್ಟದ ಸಮ್ಮೇಳನದ ಯಶಸ್ಸು ವಿಜಯಪುರ ಜನತೆಯ ಶ್ರೇಯಸ್ಸು- ಶಿವಾನಂದ ತಗಡೂರ

ವಿಜಯಪುರ: ಬಸವನಾಡು ವಿಜಯಪುರದಲ್ಲಿ ನಡೆದ 37ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಸಂಪೂರ್ಣ ಯಶಸ್ವಿಯಾಗಿದ್ದು, ಎಲ್ಲರ ಮನದಲ್ಲಿ ಸಮ್ಮೇಳನ ಚೆನ್ನಾಗಿ ನಡೆಯಿತು ಎಂಬ ಛಾಪು ಮೂಡಿಸಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಹೇಳಿದರು.

ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದ ಯಶಸ್ವಿಗೆ ಶ್ರಮಿಸಿದ ಸದಸ್ಯರಿಗೆ, ಹಿರಿಯರಿಗೆ ಹಾಗೂ ಹಿತೈಷಿಗಳಿಗೆ ನಗರದ ಚಾಂದನಿ ಫಂಕ್ಷನ್ ಹಾಲ್ ನಲ್ಲಿ ಕಾನಿಪ ಸಂಘದಿಂದ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪತ್ರಕರ್ತರ ಸಮ್ಮೇಳನದ ಯಶಸ್ವಿಯ ಶ್ರೇಯಸ್ಸು ವಿಜಯಪುರ ಜಿಲ್ಲೆಯ ಜನತೆಗೆ ಹಾಗೂ ಎಲ್ಲ ಪತ್ರಕರ್ತರಿಗೆ ಸಲ್ಲುತ್ತದೆ.  ಸಂಘದ ಪದಾಧಿಕಾರಿಗಳು, ಎಲ್ಲ ಸಮಿತಿಗಳ ಸದಸ್ಯರು ಹಗಲಿರುಳು ಒಗ್ಗೂಡಿ ಕೆಲಸ ಮಾಡಿದರ ಪರಿಣಾಮವಾಗಿ ಸಮ್ಮೇಳನ ಯಶಸ್ವಿಯಾಗಲು ಸಾಧ್ಯವಾಗಿದೆ. ಸಮ್ಮೇಳನದ ಯಶಸ್ವಿಗೆ ಶ್ರಮಿಸಿದ ಹಾಗೂ ಸಹಾಯ ಸಹಕಾರ ನೀಡಿದ ಎಲ್ಲರಿಗೂ ಕೆಯುಡಬ್ಲ್ಯೂಜೆ ವತಿಯಿಂದ ತುಂಬುಹೃದಯದಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ವಿಜಯಪುರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮಾತನಾಡಿದರು

ರಾಜ್ಯದ ನಾನಾ ಕಡೆಗಳಿಂದ 5000ಕ್ಕೂ ಹೆಚ್ಚು ಪತ್ರಕರ್ತರು ಈ ಸಮ್ಮೇಳನದಲ್ಲಿ ಭಾಗವಹಿಸಿ ಈ ಜಿಲ್ಲೆಯ ಜವಾರಿ ಊಟ ಸವಿದು ಸಂತೋಷ ಪಟ್ಟು ಹೋಗಿದ್ದಾರೆ. ರಾಜ್ಯಮಟ್ಟದ ಸಮ್ಮೇಳನ ಅಂದಾಗ ಕೆಲ ಸಣ್ಣ-ಪುಟ್ಟ ನ್ಯೂನ್ಯತೆಗಳಾಗುವುದು ಸಹಜ.  ಒಟ್ಟಾರೆ ಸಮ್ಮೇಳನ ಸರ್ವ ವಿಧದಲ್ಲೂ ಸಂಪೂರ್ಣ ಯಶಸ್ವಿಯಾಗಿದೆ.  ಸಮ್ಮೇಳನದಲ್ಲಿ ಪತ್ರಕರ್ತರು ಎದುರಿಸುವ ಸಮಸ್ಯೆಗಳು, ಪತ್ರಿಕಾ ವಿತರಕರ ಸಮಸ್ಯೆಗಳು ಹಾಗೂ ಮಹಿಳೆಯರ ಸಮಸ್ಯೆಗಳ ಕುರಿತು ಪರಿಣಾಮಕಾರಿ ವಿಷಯ ಮಂಡನೆ ಹಾಗೂ ಚರ್ಚೆ ನಡೆದಿದ್ದು ಗಮನಾರ್ಹವಾಗಿತ್ತು. ಎಂದು ಅವರು ಸಮ್ಮೇಳನದ ಗೋಷ್ಠಿಗಳ ಬಗ್ಗೆ ಅವರು ಮೆಲುಕು ಹಾಕಿದರು.

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಡಾ. ಓಂಕಾರ ಕಾಕಡೆ ಮಾತನಾಡಿ, ಸಮ್ಮೇಳನದ ನಾನಾ ಗೋಷ್ಠಿಗಳಲ್ಲಿ ಮಂಡನೆಯಾದ ವಿಷಯಗಳು ಮಾಧ್ಯಮ ಕ್ಷೇತ್ರದ ಇಂದಿನ ಸಮಸ್ಯೆಗಳಿಗೆ ಕನ್ನಡಿ ಹಿಡಿದಂತಿತ್ತು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಘದ ರಾಜ್ಯ ಉಪಾಧ್ಯಕ್ಷರಾದ ಭವಾನಿಸಿಂಗ್ ಠಾಕೂರ, ಪುಂಡಲೀಕ ಬಾಳೋಜಿ ಮಾತನಾಡಿ, ಇಂಥ ದೊಡ್ಡ ಸಮ್ಮೇಳನ ಮಾಡುವುದು ಏಕವ್ಯಕ್ತಿಯಿಂದ ಸಾಧ್ಯವಿಲ್ಲ. ಎಲ್ಲರ ಸಹಕಾರದಿಂದ ಸಮ್ಮೇಳನ ಸಂಪೂರ್ಣ ಯಶಸ್ವಿಯಾಗಿದೆ. ಇದರ ಶ್ರೇಯಸ್ಸು ಸಮ್ಮೇಳನಕ್ಕಾಗಿ ಹಗಲಿರುಳು ಕೆಲಸ ಮಾಡಿದ ಎಲ್ಲರಿಗೂ ಸಲ್ಲುತ್ತದೆ ಎಂದು ಹೇಳಿದರು.

ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಮಾತನಾಡಿ, ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರ ಅವರ ಸಮರ್ಥ ಮಾರ್ಗದರ್ಶನ, ಎಲ್ಲರ ಸಹಾಯ – ಸಹಕಾರ ಹಾಗೂ ಶ್ರಮದಿಂದ ಸಮ್ಮೇಳನ ಯಶಸ್ವಿಯಾಯಿತು ಎಂದು ಸ್ಮರಿಸಿ ಎಲ್ಲರಿಗೂ ಕೃತಜ್ಞತೆ  ಸಲ್ಲಿಸುವುದಾಗಿ ತಿಳಿಿಸಿದರು.

ಪತ್ರಕರ್ತರಾದ ಟಿ. ಕೆ. ಮಲಗೊಂಡ, ಇರ್ಫಾನ್ ಶೇಖ, ಪ್ರಭು ಮಲ್ಲಿಕಾರ್ಜುನಮಠ, ಅಶೋಕ ಯಡಳ್ಳಿ, ಶರಣು ಸಬರದ ಮುಂತಾದವರು ಸಮ್ಮೇಳನದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಈ ಸಮಾರಂಭದಲ್ಲಿ ಭಾಗವಹಿಸಿದ್ದ ಕಾನಿಪ ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಇದೇ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ದೇವೇಂದ್ರ ಹೆಳವರ ಹಾಗೂ ಸಚೇಂದ್ರ ಲಂಬು ಅವರನ್ನು ಕಾನಿಪ ಸಂಘದಿಂದ ಆತ್ಮೀಯವಾಗಿ ಸನ್ಮಾನಿಸಿ ಶುಭ ಕೋರಲಾಯಿತು.

ಕೆಯುಡಬ್ಲ್ಯೂಜೆ ಕಾರ್ಯದರ್ಶಿ ನಿಂಗಪ್ಪ ಚಾವಡಿ, ಐ. ಎಫ್. ಡಬ್ಲ್ಯೂ. ಜೆ ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ವಿ. ಶಟಗಾರ,
ರಾಜ್ಯ ಕಾರ್ಯಕಾರಿ ಸಮಿತಿ ನಾಮನಿರ್ದೇಶಿತ ಸದಸ್ಯ ಕೆ. ಕೆ. ಕುಲಕರ್ಣಿ, ವಿಶೇಷ ಆಮಂತ್ರಿತೆ ಕೌಶಲ್ಯ ಪನ್ನಾಳಕರ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಉಪಾಧ್ಯಕ್ಷರಾದ ಫಿರೋಜ್ ರೋಜಿಂದಾರ, ಪ್ರಕಾಶ ಬೆಣ್ಣೂರ, ಕಾರ್ಯದರ್ಶಿ ಅವಿನಾಶ ಬಿದರಿ, ಖಜಾಂಚಿ ರಾಹುಲ ಆಪ್ಟೆ ಮುಂತಾದವರು ಉಪಸ್ಥಿತರಿದ್ದರು.

ವಿನಾಯಕ ಗುಡ್ಡೋಡಗಿ ಪ್ರಾರ್ಥನೆ ಹೇಳಿದರು. ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಸ್ವಾಗತಿಸಿದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಿ. ಬಿ. ವಡವಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಉಪಾಧ್ಯಕ್ಷ ಇಂದುಶೇಖರ ಮಣೂರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a Reply

ಹೊಸ ಪೋಸ್ಟ್‌