ವಿಜಯಪುರ: ಬೆಲೆ ಕುಸಿತದಿಂದ ತೀವ್ರ ಸಂಕಷ್ಟದಲ್ಲಿರುವ ಉಳ್ಳಾಗಡ್ಡಿ ಬೆಳೆಗಾರರಿಗೆ ಸರಕಾರ ಕೂಡಲೇ ಬೆಂಬಲ ಬೆಲೆ ನೀಡದಿದ್ದರೆ, ರೈತರು ಬೀದಿಗಿಳಿದು ಹೋರಾಟ ಮಾಡಲಿದ್ದಾರೆ ಎಂದು ಬಸವನ ಬಾಗೇವಾಡಿ ಶಾಸಕ ಮತ್ತು ವಿಜಯಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಉಳ್ಳಾಗಡ್ಡೆ ಪ್ರಮುಖ ಬೆಳೆಯಾಗಿದ್ದು, ಈ ಈರುಳ್ಳಿ ಬೆಲೆ ಕುಸಿದ ಪರಿಣಾಮ ರೈತರು ಕೈಯಿಂದ ಹಣ ಹಾಕುವ ಪರಿಸ್ಥಿತಿ ಎದುರಾಗಿದೆ. ಉಳ್ಳಾಗಡ್ಡಿಗೆ ಬೆಂಬಲ ಬೆಲೆ ನೀಡದಿದ್ದರೆ, ರಾಜ್ಯಾದ್ಯಂತ ರೈತರು ಸರಕಾರದ ವಿರುದ್ಧ ಪ್ರತಿಭಟನೆ ಮಾಡುವ ಪರಿಸ್ಥಿತಿ ಎದುರಾಗಲಿದೆ. ಈಗಲಾದರೂ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಪ್ರತಿ ಕ್ವಿಂಟಾಲ್ ಈರುಳ್ಳಿಗೆ ರೂ. 2000 ಘೋಷಣೆ ಮಾಡಬೇಕಿದೆ ಎಂದು ಹೇಳಿದರು.
ಒಂದು ಕೆಜಿ ಈರುಳ್ಳಿ ಬೆಳೆ ಕನಿಷ್ಠ ಏಳೆಂಟು ರೂಪಾಯಿ ಖರ್ಚಾಗುತ್ತದೆ. ಆದರೆ, ಅವರಿಗೆ ಕೇವಲ ರೂ. 5 ಮಾತ್ರ ಸಿಗುತ್ತಿದೆ. ಈ ಹಿಂದೆ ಇದೇ ಈರುಳ್ಳಿಗಾಗಿ ಬೆಲೆ ಹೆಚ್ಚಳ ವಿರುದ್ಧ ಹೋರಾಟ ಮಾಡಿದ ಬಿಜೆಪಿಯವರು ಈಗ ಉಳ್ಳಾಗಡ್ಡಿ ರೈತರ ಪರ ತುಟಿ ಪಿಟಿಕ್ ಎನ್ನುತ್ತಿಲ್ಲ. ಕೊಬ್ಬರಿ ರೈತರಿಗೂ ಅನ್ಯಾಯವಾಗಿದೆ. ಯಾಲಕ್ಕೆ ಬೆಳೆಗಾರರೂ ಸಂಕಷ್ಟದಲ್ಲಿದ್ದಾರೆ. ಸಚಿವರಿಗೆ ಈ ಬಗ್ಗೆ ಗಮನವೇ ಇಲ್ಲ. ಈರುಳ್ಳಿ ಬೆಳೆಗೂ ರಾಜ್ಯ ಸರಕಾರ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಅವರು ಆರೋಪಿಸಿದರು.
ಜಿಲ್ಲೆಯ ಈರುಳ್ಳಿ ಬೆಳೆಗಾರರ ಜ್ವಲಂತ ಸಮಸ್ಯೆ ಕುರಿತು ಗಮನ ಹರಿಸಲು ಸರಕಾರದ ಗಮನ ಸೆಳೆಯುತ್ತೇನೆ. ರೈತರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ನಂತರ ಬೆಂಗಳೂರಿಗೆ ರೈತರ ನಿಯೋಗ ತೆಗೆದುಕೊಂಡು ಹೋಗುವ ಬಗ್ಗೆ ಚರ್ಚಿಸುತ್ತೇವೆ. ಈಗಲಾದರೂ ಎಪಿಎಂಸಿ, ತೋಟಗಾರಿಕೆ ಸಚಿವರು ಈ ಕಡೆ ಗಮನ ಹರಿಸಬೇಕು.
ತೊಗರಿ ಬೆಳೆಗಾರರ ಸಮಸ್ಯೆ
ಇದೇ ವೇಳೆ, ತೊಗರಿ ಬೆಳೆಗೆ ಘೋಷಣೆ ಮಾಡಿರುವ ಬೆಂಬಲ ಬೆಲೆ ಮಾರುಕಟ್ಟೆ ಬೆಲೆಗಿಂತಲೂ ಕಡಿಮೆಯಿದೆ. ರೈತರ ಅಭ್ಯುದಯಕ್ಕಾಗಿ ಮೀಸಲಿಟ್ಟಿರುವ ಆವರ್ತ ನಿಧಿ ಉಪಯೋಗವಾಗುತ್ತಿಲ್ಲ. ಯಾವ ರೈತರಿಗೂ ಯಾವುದೇ ಬೆಂಬಲ ಬೆಲೆ ಸಿಗುತ್ತಿಲ್ಲ. ರೂ. 1500 ರಿಂದ ರೂ. 2000 ಕೋ. ಆವರ್ತ ನಿಧಿ ಮೀಸಲಿಡಲಾಗಿದೆ ಎಂದು ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ. ಈಗ ಮತ್ತೆ ರೂ. 3000 ಕೋ. ಗೆ ಹೆಚ್ಚಿಸುತ್ತೇವೆ ಎಂದು ಹೇಳುತ್ತಾರೆ. ಆದರೆ, ಅದು ಕೇವಲ ಕಾಗದದ ಮೇಲೆ ಮಾತ್ರ ಇದೆ. ಕಳೆದ ವರ್ಷದ ಆವರ್ತ ನಿಧಿಯಲ್ಲಿ ಎಷ್ಟು ಖರ್ಚಾಗಿದೆ ಎಂಬುದರ ಮಾಹಿತಿಯೂ ಇಲ್ಲ. ಆದರೆ, ಯಾವ ರೈತರಿಗೂ 10 ಪೈಸೆ ಖರ್ಚಾಗುತ್ತಿಲ್ಲ. ತೊಗರಿ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಪರಿಹಾರ ನೀಡಿಲ್ಲ. ಬೆಲೆಯೂ ಸಿಕ್ಕಿಲ್ಲ. ತೋಟಗಾರಿಕೆ ಇರಲಿ ಅಥವಾ ಕೃಷಿ ಇರಲಿ, ಅವುಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲೇಬೇಕು. ರೈತರ ಗೋಳು ಕೇಳುವವರು ಇಲ್ಲವಾಗಿದೆ. ವಿಜಯಪುರ, ಬಾಗಲಕೋಟೆ ಜಿಲ್ಲೆಯ ಜನತೆಗೆ ಹೆಚ್ಚುವರಿ ನೀರಾವರಿ ಸಿಗಬೇಕಿದ್ದರೂ ಬಿ ಸ್ಕೀಂ ಜಾರಿಯಾಗದೇ ಸಂಪೂರ್ಣ ನೀರು ದೊರೆಯದಿರುವುದು ಸಂಕಷ್ಟ ಹೆಚ್ಚಿಸಿದೆ. ಈರುಳ್ಳಿ ಹಚ್ಚಿದರೂ ಈಗ ನೀರ ಬಾರದ ಪರಿಸ್ಥಿತಿ ಇದೆ. ಬಿತ್ತನೆ ಮಾಡಿ 24 ಗಂಟೆಯೊಳಗೆ ನೀರು ಬಿಡದಿದ್ದರೆ ಈ ಬೆಳೆ ಬೆಳೆಯುವುದಿಲ್ಲ ಎಂದು ಅವರು ಹೇಳಿದರು.
ಈ ಬಗ್ಗೆ ಕೃಷಿ, ತೋಟಗಾರಿಕೆ ಸಚಿವರು ಬಾಯಿ ಬಿಡುತ್ತಿಲ್ಲ. ಪಶು ಸಂಗೋಪನೆ ಸಚಿವಂತೂ ಇದ್ದೂ ಉಪಯೋಗವಿಲ್ಲದಂತಾಗಿದೆ. ಚರ್ಮಗಂಟು ರೋಗ ಬಂದರೂ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಕೂಡ ಕಾಲಹರಣ ಮಾಡಿದ್ದಾರೆ ಎಂದು ಶಾಸಕರು ಆರೋಪಿಸಿದರು.
ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಪ್ರತಿವರ್ಷ ತೋಟಗಾರಿಕೆ, ಕಷಿ, ಎಪಿಎಂಸಿ ಸೇರಿ ರೂ. 30 ರಿಂದ 40 ಸಾವಿರ ಕೋಟಿ ಖರ್ಚು ಮಾಡುತ್ತಿದ್ದರೂ ರೈತರಿಗೆ ಅದರ ಲಾಭ ಸಿಗುತ್ತಿಲ್ಲ. ಇದರಿಂದಾಗಿ ತೋಟಗಾರಿಕೆ ಬೆಳೆ ಬೆಳೆಯುವುದನ್ನು ರೈತರು ಕೈಬಿಡುತ್ತಿದ್ದಾರೆ. ಈ ಬೆಳೆಗಳಿಗೆ ಬರುತ್ತಿರುವ ಮಾರಕ ರೋಗಗಳನ್ನು ತಡೆಯಲು ತೋಟಗಾರಿಕೆ ಮತ್ತು ಕೃಷಿ ವಿಶ್ವವಿದ್ಯಾಲಯಗಳು ರೈತರಿಗೆ ಸಹಾಯ ಮಾಡುತ್ತಿಲ್ಲ. ಕೃಷಿ ಇಲಾಖೆಯನ್ನು ಒಡೆದು ಮಾಡಿ ಮೂರು ವಿಭಾಗಗಳನ್ನಾಗಿ ಮಾಡಿದರೂ ಜನಸಾಮಾನ್ಯರಿಗೆ ಯಾವುದೇ ಲಾಭವಾಗುತ್ತಿಲ್ಲ. ಆಡಳಿತ ಸುಧಾರಣೆ ಆಯೋಗದ ವರದಿಯಂತೆ ಈಗಲಾದರೂ ಎಪಿಎಂಸಿ, ತೋಟಕಾರಿಕೆ ಮತ್ತು ಕೃಷಿ ಇಲಾಖೆಯನ್ನು ವಿಲೀನ ಮಾಡಿ ಕೆಲಸ ಮಾಡಬೇಕು. ಇಲ್ಲದಿದ್ದರೆ, ಈ ಇಲಾಖೆಯನ್ನು ಮುಚ್ಚಿ ಬಿಡುವುದು ಸೂಕ್ತ. ರೂ. 30 ರಿಂದ ರೂ. 40 ಸಾವಿರ ಕೋ. ಹಣ ಖರ್ಚು ಮಾಡಿ ನಾವು ಮಾಡುತ್ತಿರುವ ಸಾಧನೆಯಾದರೂ ಏನು? ನಮ್ಮ ರೈತರು ಯುನಿವರ್ಸಿಟಿಗಳಿಗಿಂತಲೂ ಜಾಣರಿದ್ದಾರೆ. ಯುನಿವರ್ಸಿಟಿಯವರು ಸ್ಲಲ್ಪ ದಡ್ಡರಿರಬಹುದು. ಆದರೆ, ರೈತ ಅವರಿಗಿಂತಲೂ ಮುಂದುವರೆದು ವ್ಯವಸಾಯ ಮಾಡುತ್ತಾನೆ. ಹೀಗಿರುವಾಗ ಕೇವಲ ಇಲಾಖೆಗಳನ್ನು ಇಟ್ಟುಕೊಂಡು ಆ ನೌಕರರಿಗೆ ದುಡ್ಡು ಕೊಡುವುದರಲ್ಲಿ ಅರ್ಥವೇನಿದೆ? ಎಂದು ಪ್ರಶ್ನಿಸಿದ ಅವರು, ಪಶು ಸಂಗೋಪನೆ ಇಲಾಖೆ ಬೇಕಿದ್ದರೆ ಈಗಿನಂತೆಯೇ ಪ್ರತ್ಯೇಕವಾಗಿ ಮುಂದುವರೆಯಲಿ ಎಂದು ಶಿವಾನಂದ ಪಾಟೀಲ ಹೇಳಿದರು.
ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಪಾರಂಪರಿಕವಾಗಿ ಬೆಳೆಯಲಾಗುತ್ತಿದ್ದ ದಾಳಿಂಬೆ ಬೆಳೆಯಲ್ಲಿ ಈಗ ಶೇ. 70ರಷ್ಟು ರೈತರು ಆ ಬೆಳೆಯನ್ನು ಕೈಬಿಟ್ಟಿದ್ದಾರೆ ಎಂದು ಅವರು ಹೇಳಿದರು.
ಬೆಲೆಏರಿಕೆ ವಿಚಾರ
ಬೆಲೆ ಏರಿಕೆ ಜನರಿಗೆ ನಾನಾ ಸಮಸ್ಯೆಗಳನ್ನು ತಂದೊಡ್ಡಿದೆ. ಆಮದು ತೈಲ ಬಳಕೆ ಕಡಿಮೆ ಮಾಡಲು ಸೌರ ಶಕ್ತಿ ಬಳಕೆ, ವಿದ್ಯುಚ್ಛಕ್ತಿ ಬಳಕೆ ಹೆಚ್ಚುತ್ತಿದೆ. ರಷ್ಯಾದಿಂದಲೂ ಅತೀ ಕಡಿಮೆ ಬೆಲೆಯಲ್ಲಿ ತೈಲ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೂ, ಪೆಟ್ರೋಲ್, ಡೀಸೆಲ್ ಬೆಲೆ ನಿಯಂತ್ರಣಕ್ಕೆ ಬರುತ್ತಿಲ್ಲ. ಅಡುಗೆ ಅನಿಲ ಬೆಲೆ ಕೂಡ ಹೆಚ್ಚಾಗುತ್ತಿದೆ ಎಂದು ಶಿವಾನಂದ ಪಾಟೀಲ ಆರೋಪಿಸಿದರು.
ಆ್ಯಂಬ್ಯೂಲನ್ಸ್ ಸಮಸ್ಯೆ
ರೋಗಿಗಳಿಗೆ ಆ್ಯಂಬೂಲನ್ಸ್ ಸರಿಯಾಗಿ ಸಿಗುತ್ತಿಲ್ಲ. ಆ್ಯಂಬೂಲನ್ಸ್ ನಿರ್ವಹಣೆ ಪರಿಸ್ಥಿತಿ ಗಂಭಿರವಾಗಿದೆ. ಈ ವಾಹನಗಳು ಮಾರ್ಗಮಧ್ಯದಲ್ಲಿಯೇ ಕೆಟ್ಟು ನಿಲ್ಲುತ್ತಿರುವುದರಿಂದ ಜೀವಹಾನಿ ಘಟನೆಗಳು ನಡೆಯುತ್ತಿವೆ ಎಂದು ಅವರು ಇದೇ ವೇಳೆ ತಿಳಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನ್ ಸೆಂಟರ್ ದುಸ್ಥಿತಿ
ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಚಿಕಿತ್ಸೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರೋಗಿಗಳು ಅಲ್ಲಿ ಹೆಸರು ನೋಂದಾಯಿಸಿ ಬಹಳ ದಿನವಾದರೂ ತಪಾಸಣೆ ಮಾಡದಿದ್ದರೆ ಹೇಗೆ? ನನಗೆ ಬಂದಿರುವ ಒಂದು ಪ್ರಕರಣದಲ್ಲಿ ರೋಗಿಗೆ ಜನೇವರಿ 10 ರಂದು ಬರಲು ಹೇಳಿದ್ದರು. ಆದರೆ, ಜನೇವರಿ 30 ಕಳೆದರೂ ಎಂಆರ್‌ಐ ಸ್ಕ್ಯಾನಿಂಗ್ ಮಾಡಿರಲಿಲ್ಲ. 20 ದಿನಗಳವರೆಗೆ ಎಂಆರ್‌ಐ ಮಾಡದಿದ್ದರೆ ರೋಗ ಪತ್ತೆ ಹೇಗೆ ಸಾಧ್ಯ? ನನ್ನ ತಿಳಿದಿರುವ ಮಾಹಿತಿಯಂತೆ ಅಲ್ಲಿನ ಸಿಬ್ಬಂದಿ ಖಾಸಗಿ ಆಸ್ಪತ್ರೆಯವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಲ್ಲಿನ ರೋಗಿಗಳಿಗೆ ಮೊದಲು ಎಂಆರ್‌ಐ ಸ್ಕ್ಯಾನಿಂಗ್ ಮಾಡಿಕೊಡುತ್ತಾರೆ. ಆದರೆ, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಕಡೆಗಣಿಸುತ್ತಾರೆ ಎಂಬ ದೂರು ಬಂದಿದೆ. ಈ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಇಲ್ಲಿನ ಉಪವಿಭಾಗಾಧಿಕಾರಿಗಳಿಗೆ ಹೇಳಿದ್ದೆ. ಅವರು ನೀಡದ ವರದಿಯಲ್ಲಿ ಚಿಕಿತ್ಸೆ ವಿಳವಂಬವಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ನಾನು ಬಹಳ ಪ್ರಶ್ನಿಸಿದಾಗ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಎಂಆರ್‌ಐ ಸೆಂಟರ್ ವ್ಯಕ್ತಿಯೊಬ್ಬರು ತಾವೇ ಖುದ್ದಾಗಿ ರೂ. 5000 ಹಣ ನೀಡಿ ಹೊರಗಡೆ ಸ್ಕ್ಯಾನಿಂಗ್ ಮಾಡಿ ಕಳುಹಿಸಿದ್ದಾರೆ. ಇದು ವಿಜಯಪುರದ ಸರಕಾರಿ ಎಂಆರ್‌ಐ ಸೆಂಟರ್ ಇತಿಹಾಸ ಎಂದು ಅವರು ಕಿಡಿ ಕಾರಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಸುಲಿಗೆ ನಡೆಯುತ್ತಿದೆ. ವೈದ್ಯಕೀಯ ಕಾಲೇಜುಗಳಲ್ಲಿಯೂ ಸುಲಿಗೆಯಾಗುತ್ತದೆ. ಸರಕಾರಿ ಆಸ್ಪತ್ರೆಯೊಂದೇ ಈಗ ಸಾರ್ವಜನಿಕರಿಗೆ ಗತಿಯಿತ್ತು. ಈಗ ಅವುಗಳನ್ನೂ ಖಾಸಗೀಕರಣ ಮಾಡಿದರೆ ಈ ರಾಜ್ಯದಲ್ಲಿ ಮುಂದೆ ಏನೂ ನಿರೀಕ್ಷೆ ಮಾಡಲಾಗುವುದಿಲ್ಲ. ಈ ರಾಜ್ಯದಲ್ಲಿ ಸರಕಾರಗಳು ಶಿಕ್ಷಣ ಮತ್ತು ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುತ್ತವೆ ಎಂದು ಜನರಿಗೆ ಭರವಸೆಯಿತ್ತು. ಆದರೆ, ಈಗ ಎರಡೂ ಖಾಸಗೀಕರಣವಾಗುತ್ತಿರುವುದು ಜನರು ಸರಕಾರದಿಂದ ಏನನ್ನು ನಿರೀಕ್ಷೆ ಮಾಡಬೇಕೆಂಬುದು ನನಗೂ ತಿಳಿಯುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಟ್ರಾಮಾ ಸೆಂಟರ್ ಗೆ ಮಂಜೂರಾತಿ ನೀಡಿವೆ. ಅವುಗಳು ನೀಡಿರುವ ಹಣವನ್ನು ಉಪಯೋಗಿಸಿ ಶೇ. 60 ರಷ್ಟು ಕಟ್ಟಡ ಪೂರ್ಣವಾದ ಮೇಲೆ ಸಿಬ್ಬಂದಿ ಕೊಡಬೇಕು ಎಂಬ ನಿಯಮವಿದೆ. ಆದರೆ, ಈ ಕಟ್ಟಡ ಶೇ. 100 ರಷ್ಟು ಕಟ್ಟಡ ಕಾಮಗಾರಿ ಮುಗಿದಿದೆ. ಸೂಪರ ಸ್ಪೆಷಾಲಿಟಿ ಶೇ. 80ರಷ್ಟು ಕಾಮಗಾರಿ ಮುಗಿದೆ. ಅಲ್ಲಿಗೂ ಸಿಬ್ಬಂದಿ ಕೊಟ್ಟಿಲ್ಲ. ಸಿಬ್ಬಂದಿಯೇ ಇಲ್ಲದ ಮೇಲೆ ಆ ಕಟ್ಟಡಗಳನ್ನು ಉದ್ಘಾಟನೆ ಮಾಡಿದರೆ ಏನು ಉಪಯೋಗವಿದೆ? ಎಂದು ಅವರು ಪ್ರಶ್ನಿಸಿದರು.